‘ವಯಸ್ಸಿಗೆ ಹೊಂದುವ ಪಾತ್ರದಲ್ಲಿ ನಟಿಸಿದ ಖುಷಿಯದೆ’ ಎಂದ ಅಂಬರೀಶ್

ಅಂಬರೀಶ್ ಮತ್ತು ಸುದೀಪ್‌ ನಟನೆಯ ‘ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾದ ಚಿತ್ರೀಕರಣ ಮುಗಿದಿದೆ. ಪೋಸ್ಟ್‌ಪ್ರೊಡಕ್ಷನ್‌ ಕೆಲಸಗಳು ಆರಂಭವಾಗಿದ್ದು, ಆಗಸ್ಟ್‌ ತಿಂಗಳ ಕೊನೆಯಲ್ಲಿ ಸಿನಿಮಾ ಬಿಡುಗಡೆ ಮಾಡುವ ಯೋಜನೆ ಚಿತ್ರತಂಡದ್ದು. ಗುರುದತ್ ಗಾಣಿಗ ಚಿತ್ರದ ನಿರ್ದೇಶಕ.

ಪುನೀತ್‌ ರಾಜಕುಮಾರ್ ಅಭಿನಯದ ‘ದೊಡ್ಮನೆ ಹುಡ್ಗ’ ಚಿತ್ರದ ನಂತರ ಅಂಬರೀಶ್‌ ಮತ್ತೆ ತೆರೆ ಮೇಲೆ ಕಾಣಿಸಿಕೊಂಡಿರಲಿಲ್ಲ. ರಾಜಕಾರಣ, ಚುನುವಾಣೆ, ಅನಾರೋಗ್ಯದ ಕಾರಣಗಳಿಂದಾಗಿ ಸಿನಿಮಾದಿಂದ ದೂರವಾಗಿದ್ದರು. ಮೂರು ವರ್ಷಗಳ ನಂತರ ಅವರೀಗ ಎರಡು ಚಿತ್ರಗಳಲ್ಲಿ ಸಕ್ರಿಯರಾಗಿದ್ದಾರೆ. ‘ಕುರುಕ್ಷೇತ್ರ’ ಐತಿಹಾಸಿಕ ಚಿತ್ರದಲ್ಲಿ ಭೀಷ್ಮನ ಪಾತ್ರ ನಿರ್ವಹಿಸಿದ್ದರೆ, ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲೇ ನಟಿಸಿದ್ದಾರೆ. ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್‌ ಪ್ರೊಡಕ್ಷನ್ ಕೆಲಸಗಳು ಆರಂಭವಾಗಿವೆ.

ನಟ ಧನುಷ್ ನಿರ್ಮಾಣದ ‘ಪವರ್ ಪಾಂಡಿ’ ಯಶಸ್ವೀ ತಮಿಳು ಚಿತ್ರದ ರೀಮೇಕ್‌ ‘ಅಂಬಿ ನಿಂಗೆ ವಯಸ್ಸಾಯ್ತೋ’. ವಿಶಿಷ್ಟ ಕಥಾಹಂದರದ ಚಿತ್ರದ ಪ್ರಮುಖ ಪಾತ್ರವನ್ನು ತಮಿಳಿನಲ್ಲಿ ರಾಜ್‌ಕಿರಣ್ ನಿರ್ವಹಿಸಿದ್ದರು. ಈ ಚಿತ್ರದ ರೀಮೇಕ್‌ ಹಕ್ಕು ಕೇಳಲು ಹೋದಾಗ, ಮುಖ್ಯ ಪಾತ್ರದಲ್ಲಿ ಅಂಬರೀಶ್ ನಟಿಸಿದರೆ ಚೆನ್ನಾಗಿರುತ್ತದೆ ಎಂದಿದ್ದರು ನಟ-ನಿರ್ಮಾಪಕ ಧನುಷ್. ಸೂಪರ್‌ಸ್ಟಾರ್ ರಜನೀಕಾಂತ್ ಕೂಡ ಈ ಮಾತನ್ನು ಅನುಮೋದಿಸಿದ್ದರು. ಸ್ನೇಹಿತ ರಜನೀ ಸಲಹೆಯಂತೆ ಅಂಬರೀಶ್ ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರದ ಪಾತ್ರದ ಬಗ್ಗೆ ಅವರಿಗೆ ಖುಷಿಯಿದೆ. “ಇದು ನನ್ನ ವಯಸ್ಸಿಗೆ ಸೂಕ್ತವಾಗಿ ಹೊಂದಿಕೆಯಾಗುವಂತಹ ಪಾತ್ರ. ಒಳ್ಳೆಯ ಕತೆಯ ಸಿನಿಮಾಗಳಲ್ಲಿ ನಟಿಸಿದಾಗ ತೃಪ್ತಿ ಇರುತ್ತದೆ. ಈ ಸಿನಿಮಾ ನನಗೆ ತೃಪ್ತಿ ಕೊಟ್ಟಿದೆ” ಎನ್ನುತ್ತಾರೆ ಅಂಬರೀಶ್‌. ಚಿತ್ರದಲ್ಲಿ ಅವರ ಜೋಡಿಯಾಗಿ ಸುಹಾಸಿನಿ ನಟಿಸಿದ್ದಾರೆ.

ಇದನ್ನೂ ಓದಿ : ಟೀಸರ್‌ | ಟ್ರೆಂಡ್‌ ಆಯ್ತು ನಿಖಿಲ್‌ ಕುಮಾರ್‌ ನಟನೆಯ ‘ಸೀತಾರಾಮ ಕಲ್ಯಾಣ’

ಚಿತ್ರದಲ್ಲಿ ಅಂಬರೀಶ್‌ ಪಾತ್ರದ ಚಿಕ್ಕ ವಯಸ್ಸಿನ ಪಾತ್ರದಲ್ಲಿ ಸುದೀಪ್ ನಟಿಸಿದ್ದಾರೆ. ಅಲ್ಲಿ ಅವರಿಗೆ ಶೃತಿ ಹರಿಹರನ್‌ ಜೋಡಿ. ಈ ಸಿನಿಮಾಗೆ ಅಂಬರೀಶ್ ಅವರನ್ನು ಕರೆತರುವಲ್ಲಿ ಅವರ ಪಾತ್ರ ದೊಡ್ಡದಿದೆ. ಸುದೀಪ್ ಸ್ನೇಹಿತ ಜಾಕ್‌ ಮಂಜು ಚಿತ್ರ ನಿರ್ಮಿಸುತ್ತಿದ್ದರೂ ಪ್ರತೀ ಹಂತದಲ್ಲೂ ಸುದೀಪ್ ಅವರಿಗೆ ಸಲಹೆ, ಸೂಚನೆಗಳೊಂದಿಗೆ ನೆರವಾಗುತ್ತಿದ್ದಾರೆ. ತಮ್ಮೊಂದಿಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಗುರುದತ್‌ ಗಾಣಿಗ ಅವರಿಗೆ ಸುದೀಪ್‌ ಚಿತ್ರದ ನಿರ್ದೇಶನದ ಹೊಣೆ ಹೊರಿಸಿದ್ದಾರೆ. “ಮೂಲ ತಮಿಳು ಚಿತ್ರಕಥೆಯಲ್ಲಿ ಮಾರ್ಪಾಟು ಮಾಡಿಕೊಂಡು ಕನ್ನಡ ಚಿತ್ರ ಮಾಡಿದ್ದೇವೆ. ಟೀಮ್‌ವರ್ಕ್‌ ವರ್ಕ್‌ಔಟ್‌ ಆಗಿದ್ದು, ಒಂದೊಳ್ಳೆ ಸಿನಿಮಾ ತಯಾರಾಗಿದೆ” ಎನ್ನುತ್ತಾರೆ ಸುದೀಪ್‌. ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ಸಂಯೋಜನೆಯಿದೆ. ಆಗಸ್ಟ್‌ ಕೊನೆಗೆ ಇಲ್ಲವೇ ಸೆಪ್ಟೆಂಬರ್ ಮೊದಲ ವಾರದಲ್ಲಿ ಸಿನಿಮಾ ಬಿಡುಗಡೆ ಮಾಡುವ ಯೋಜನೆ ಚಿತ್ರತಂಡಕ್ಕಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More