ಒತ್ತಡಕ್ಕೆ ಮಣಿದು ‘ಅಚ್ಛೇ ದಿನ್‌’ ಹಾಡಿನ ಸಾಹಿತ್ಯ ಬದಲಿಸಿದ ‘ಫನ್ನೇ ಖಾನ್‌’

‘ಫನ್ನೇ ಖಾನ್‌’ ಸಿನಿಮಾದ ‘ಅಚ್ಛೇ ದಿನ್ ಕಬ್‌ ಆಯೇಂಗೆ’ ಹಾಡು ವಿವಾದಕ್ಕೀಡಾಗಿತ್ತು. ರಾಜಕೀಯ ಒತ್ತಡಗಳಿಂದಾಗಿ ಚಿತ್ರದ ನಿರ್ದೇಶಕ ಅತುಲ್ ಮಂಜ್ರೇಕರ್ ಹಾಡಿನ ಸಾಲನ್ನು‌ ‘ಅಚ್ಚೇ ದಿನ್‌ ಅಬ್‌ ಆಯೇ ರೇ’ ಎಂದು ಬದಲಿಸಿದ್ದಾರೆ. ಸಿನಿಮಾ ಈ ವಾರ ತೆರೆಕಾಣುತ್ತಿದೆ.

ಬಹುಶಃ ಇನ್ನು ಮುಂದೆ ಬರುವ ಚಲನಚಿತ್ರಗಳಲ್ಲಿ ಅಚ್ಛೆ ದಿನ್‌, ಆಧಾರ್‌, ಬ್ಲಾಕ್‌ಮನಿ ಮುಂತಾದ ಪದಗಳನ್ನು ಬಳಸುವಾಗ ಬಹಳ ಎಚ್ಚರವಹಿಸಬೇಕಾಗಬಹುದು. ಯಾರನ್ನೂ ಗೇಲಿ ಮಾಡುವ, ಯಾರನ್ನೂ ಟೀಕೆ ಮಾಡುವ ಉದ್ದೇಶವಿಲ್ಲದೆ ಬಳಸಿದರೂ ಸೆನ್ಸಾರ್‌ ಆಗಿ ಬಿಡುವ ಸಾಧ್ಯತೆಗಳಿವೆ. ತಾಜಾ ಉದಾಹರಣೆ ಅನಿಲ್‌ ಕಪೂರ್‌ ಅಭಿನಯದ ‘ಫನ್ನೇ ಖಾನ್‌’ ಚಿತ್ರದ ಹಾಡು.

ಅತುಲ್‌ ಮಂಜ್ರೇಕರ್ ನಿರ್ದೇಶನದ ‘ಫನ್ನೇ ಖಾನ್‌’ ಸಿನಿಮಾದ ‘ಅಚ್ಛೇ ದಿನ್‌ ಕಬ್ ಆಯೇಂಗೆ’ ಹಾಡು ಜುಲೈ ೧೯ರಂದು ಬಿಡುಗಡೆಯಾಗಿತ್ತು. ‘ಅಚ್ಛೆ ದಿನ್‌’ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದ್ದ ಘೋಷಣೆಯಾಗಿದ್ದು, ಇತ್ತೀಚೆಗೆ, ಆಡಳಿತಾರೂಢ ಸರ್ಕಾರವನ್ನು ಮುಜುಗರಕ್ಕೆ ಉಂಟುಮಾಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಹಲವರು ಈ ಹಾಡಿನೊಂದಿಗೆ ಹ್ಯಾಶ್‌ಟ್ಯಾಗ್‌ ಹಾಕಿ ಟ್ವೀಟ್ ಮಾಡಿದ್ದರು. ಇದರಿಂದಾಗಿ ಚಿತ್ರದ ನಿರ್ಮಾಪಕರು, ನಿರ್ದೇಶಕರು ಪ್ರಭಾವಿ ವ್ಯಕ್ತಿಗಳಿಂದ ದೂರು ಕೇಳಬೇಕಾಯ್ತು. ಕೆಲವು ಬೆದರಿಕೆ ಕರೆಗಳನ್ನು ಎದುರಿಸಿದ ನಂತರ ನಿರ್ದೇಶಕರು ಹಾಡಿನ ಸಾಹಿತ್ಯವನ್ನು ‘ಅಚ್ಛೇ ದಿನ್ ಆಯೇ ರೇ’ ಎಂದು ಬದಲಿಸಿದರು. ಮೊನ್ನೆ ಈ ಸಾಲುಗಳ ಹಾಡಿನ ವಿಡಿಯೋ ಕೂಡ ಬಿಡುಗಡೆ ಮಾಡಿದರು.

‘ಅಚ್ಚೇ ದಿನ್ ಕಬ್ ಆಯೇಂಗೆ’ ಹಾಡು

‘ಅಚ್ಛೇ ದಿನ್‌ ಕಬ್ ಆಯೇ ರೇ’ ಹಾಡಿನ ವಿವಾದಕ್ಕೆ ಕಾರಣಗಳೂ ಇವೆ. ಈ ‘ಅಚ್ಛೇ ದಿನ್‌’ ಬಿಜೆಪಿ ಸರ್ಕಾರದ ಘೋಷವಾಕ್ಯ. ಪಕ್ಷ ಈ ಘೋಷವಾಕ್ಯದೊಂದಿಗೆ 2014ರ ಲೋಕಸಭಾ ಚುನಾವಣೆ ಎದುರುಸಿತ್ತು. ಹಾಗಾಗಿ ‘ಅಚ್ಛೇ ದಿನ್‌ ಕಬ್‌ ಆಯೇಂಗೆ’ ಪಕ್ಷದ ಮುಖಂಡರಿಗೆ ಇರುಸುಮುರುಸು ಉಂಟುಮಾಡಿದೆ. ಕೊನೆಗೆ ಪ್ರಭಾವಿಗಳ ಒತ್ತಡಕ್ಕೆ ಮಣಿದು ನಿರ್ದೇಶಕರು ಹಾಡಿನ ಸಾಲು ಬದಲಾಯಿಸಿದ್ದಾರೆ. “ನಮ್ಮ ಹಾಡು ವಿವಾದ ಸೃಷ್ಟಿಸುವ ಬಗ್ಗೆ ಅರಿವಿರಲಿಲ್ಲ. ಇದು ರಾಜಕೀಯ ಬಣ್ಣ ಪಡೆದುಕೊಳ್ಳುವುದು ನಮಗೆ ಬೇಕಿಲ್ಲ. ಹಾಗಾಗಿ ಬೇರೆ ಸಾಹಿತ್ಯದೊಂದಿಗೆ ಮತ್ತೊಂದು ಹಾಡು ಕಟ್‌ ಮಾಡಿ ರಿಲೀಸ್ ಮಾಡಿದ್ದೇವೆ” ಎಂದಿದ್ದಾರೆ ನಿರ್ದೇಶಕ ಅತುಲ್‌.

‘ಅಚ್ಛೇ ದಿನ್‌ ಅಬ್ ಆಯೇ ರೇ’ - ಬದಲಾದ ಸಾಹಿತ್ಯದೊಂದಿಗೆ

‘ಮೇರೆ ಅಚ್ಚೇ ದಿನ್‌ ಕಬ್ ಆಯೇಂಗೆ’ ಹಾಡನ್ನು ಇರ್ಷಾದ್ ಕಮಿಲ್‌ ರಚಿಸಿದ್ದಾರೆ. ಅಮಿತ್ ತ್ರಿವೇದಿ ಸಂಗೀತ ಸಂಯೋಜಿಸಿ ಹಾಡಿದ್ದರು. ಮುಂಬಯಿಯ ಟ್ಯಾಕ್ಸಿ ಡ್ರೈವರ್‌ ಬದುಕು, ಮಗಳನ್ನು ಗಾಯಕಿಯನ್ನಾಗಿ ರೂಪಿಸುವ ಆತನ ಕನಸುಗಳಿರುವ ಕಥಾವಸ್ತು. ತನ್ನ ಕನಸನ್ನು ಕೈಗೂಡಿಸಿಕೊಳ್ಳಲು ಆತ ಹಣವನ್ನು ಕೂಡಿಡುತ್ತಾನೆ. ಈ ಹಿನ್ನೆಲೆಯಲ್ಲಿ ‘ಅಚ್ಛೇ ದಿನ್‌’ ಹಾಡು ಕೇಳಿಸುತ್ತದೆ. “ಇದು ಟ್ಯಾಕ್ಸಿ ಚಾಲಕನೊಬ್ಬನ ಸರಳ ಕತೆಯ ಸಿನಿಮಾ. ಚಿತ್ರಕಥೆಗೆ ಹೊಂದಿಕೆಯಾಗುವಂತೆ ಹಿನ್ನೆಲೆಯಲ್ಲಿ ಈ ಹಾಡು ಬರುತ್ತದೆ. ವಿರೋಧದ ಹಿನ್ನೆಲೆಯಲ್ಲಿ ಹಾಡಿನ ಸಾಲು ಬದಲಿಸಲಾಗಿದ್ದು, ಎರಡೂ ವರ್ಷನ್‌ಗಳು ಚಿತ್ರದಲ್ಲಿರುತ್ತವೆ” ಎನ್ನುತ್ತಾರೆ ನಿರ್ದೇಶಕರು. ‘ಎವರಿಬಡೀಸ್‌ ಫೇಮಸ್‌!’ ಬೆಲ್ಜಿಯಂ ಚಿತ್ರದ ರೀಮೇಕ್‌ ‘ಫನ್ನೇ ಖಾನ್‌’. ಶೀರ್ಷಿಕೆ ಪಾತ್ರದಲ್ಲಿ ಅನಿಲ್‌ ಕಪೂರ್ ನಟಿಸಿದ್ದು, ಐಶ್ವರ್ಯಾ ರೈ ಚಿತ್ರದಲ್ಲಿ ಜನಪ್ರಿಯ ಗಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಜ್‌ಕುಮಾರ್‌ ರಾವ್ ಅವರಿಗೆ ಚಿತ್ರದಲ್ಲಿ ಪ್ರಮುಖ ಪಾತ್ರವಿದೆ.

ಇದನ್ನೂ ಓದಿ : ಜನುಮದಿನ | ದುರಂತ ನಾಯಕಿ ಇಮೇಜಿನ ಸುಂದರ ಹಿಂದಿ ನಟಿ ಮೀನಾಕುಮಾರಿ
ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More