ಜನುಮದಿನ | ದುರಂತ ನಾಯಕಿ ಇಮೇಜಿನ ಸುಂದರ ಹಿಂದಿ ನಟಿ ಮೀನಾಕುಮಾರಿ

ಬಾಲನಟಿಯಾಗಿ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ಮೀನಾಕುಮಾರಿ ಹಿಂದಿ ಚಿತ್ರರಂಗದ ಪ್ರಮುಖ ನಾಯಕನಟಿ. ಇಂದು ನಮ್ಮೊಂದಿಗಿದ್ದಿದ್ದರೆ ಅವರು 85ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದರು. ಮೀನಾ ಕುಮಾರಿ ಕುರಿತ ಲೇಖನ, ಅವರ ಸಿನಿಮಾ ವಿಡಿಯೋ ಹಾಡುಗಳು ಇಲ್ಲಿವೆ

ಮೊಗದ ಮೇಲೆ ಮುಂಗುರುಳು, ಒಡಲಾಳದ ನೋವನ್ನು ಹೊರಹಾಕುವಂಥ ದನಿ.. ದುರಂತ ನಾಯಕಿಯ ಚಿತ್ರಣದ ಇಮೇಜ್‌ಗೆ ಮೀನಾಕುಮಾರಿ ಒಗ್ಗಿಹೋಗಿದ್ದರು. ಹಿಂದಿ ಚಿತ್ರರಂಗದ ‘ಟ್ರ್ಯಾಜಿಡಿ ಕ್ವೀನ್’ ಎನ್ನುವ ಪಟ್ಟವೂ ಅವರ ಹೆಸರಿಗೆ ಅನ್ವರ್ಥವಾಗಿತ್ತು. ಅಂದಿನ ದಿನಗಳ ಅತ್ಯಂತ ಸುಂದರ ನಾಯಕಿಯರಲ್ಲಿ ಮೀನಾ ಕುಮಾರಿ ಅಗ್ರ ಪಂಕ್ತಿಯಲ್ಲಿದ್ದವರು. ಮೀನಾ ಕುಮಾರಿ ಅವರ ನಿಜ ನಾಮಧೇಯ ಮೆಹಜಬೀನ್. ಮುಂಬಯಿಯಲ್ಲಿ 1932, ಆಗಸ್ಟ್‌ 1ರಂದು ಜನಿಸಿದ್ದು. ಗಂಡು ಮಗುವಿನ ನಿರೀಕ್ಷಿಸಿದ್ದ ತಂದೆ ಅಲಿ ಬಕ್ಷ್‌ಗೆ ಮೆಹಜಬೀನ್ ಜನನ ಬೇಸರ ತಂದಿತ್ತು. ಆತ ಪುಟ್ಟ ಹೆಣ್ಣು ಮಗುವನ್ನು ಅನಾಥಾಲಯದಲ್ಲಿ ಬಿಟ್ಟು ಬಂದಿದ್ದರು. ಅದೇನಾಯ್ತೋ, ಕೆಲವೇ ಗಂಟೆಗಳಲ್ಲಿ ಅನಾಥಾಲಯಕ್ಕೆ ಹೋಗಿ ಮೆಹಜಬೀನ್‌ಳನ್ನು ಮತ್ತೆ ಮನೆಗೆ ಎತ್ತಿಕೊಂಡುಬಂದಿದ್ದರು.

ಮೆಹಜಬೀನ್ ತಂದೆ ಅಲಿ ಬಕ್ಷ್ ಪಾರ್ಸಿ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಹಾರ್ಮೋನಿಯಂ ಕಲಾವಿದ. ಉರ್ದು ಕವಿಯೂ ಹೌದು. ‘ಈದ್ ಕಾ ಚಾಂದ್’ ಸೇರಿದಂತೆ ಐದಾರು ಚಿತ್ರಗಳ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ‘ಶಾಹಿ ಲೂಟೇರೆ’ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದರು. ಮೆಹಜಬೀನ್ ತಾಯಿ ಪ್ರಭಾವತಿ ದೇವಿ ಕೂಡ ರಂಗ ಕಲಾವಿದೆ ಮತ್ತು ನೃತ್ಯಗಾರ್ತಿ. ಆಲಿ ಬಕ್ಷ್‌ರ ಎರಡನೇ ಪತ್ನಿ.

ಮೀನಾಕುಮಾರಿ ಕುರಿತ ಕಿರು ಸಾಕ್ಷ್ಯಚಿತ್ರ

ಮೆಹಜಬೀನ್ ಬೆಳ್ಳಿತೆರೆಗೆ ಪರಿಚಯವಾದಾಗ ಆಕೆಗೆ 6 ವರ್ಷ. ಸಿನಿಮಾ ಇಷ್ಟವಿಲ್ಲ ಎಂದು ಅತ್ತಿದ್ದರಂತೆ. ಆದರೆ ತಂದೆಯ ಒತ್ತಾಯದ ಮೇರೆಗೆ ‘ಫರ‌್ಜಂದ್ - ಎ - ವತನ್’ (1939) ಚಿತ್ರದೊಂದಿಗೆ ಬಾಲನಟಿಯಾಗಿ ಸಿನಿಮಾಗೆ ಪರಿಚಯವಾದರು. ಮುಂದೆ ‘ವೀರ್ ಘಟೋತ್ಕಚ್’ (1949), ‘ಶ್ರೀ ಗಣೇಶ ಮಹಿಮಾ’ (1950) ಪೌರಾಣಿಕ ಚಿತ್ರಗಳಲ್ಲಿ ನಟಿಸಿದರೂ, ಆಕೆಯನ್ನು ಪ್ರೇಕ್ಷಕರು ಗುರುತಿಸಲಿಲ್ಲ.

‘ಬೈಜು ಬಾವ್ರಾ’ (1952) ಚಿತ್ರದೊಂದಿಗೆ ಮೀನಾಕುಮಾರಿ ದಿನ ಬೆಳಗಾಗುವುದರೊಳಗೆ ಜನಪ್ರಿಯರಾದರು. ಆ ವೇಳೆಗಾಗಲೇ ಅವರ ಮೆಹಜಬೀನ್ ಜನ್ಮನಾಮ ಬದಲಾಗಿತ್ತು. ಮಧ್ಯ ಭಾರತದ ಹೆಸರಾಂತ ಗಾಯಕ ಬೈಜು ಬಾವ್ರಾ ಜೀವನಕಥೆಯನ್ನು ತೆರೆಗೆ ಅಳವಡಿಸಲಾಗಿತ್ತು. ಈ ಚಿತ್ರದ ನಾಯಕಿ ತಾನು ಪ್ರೀತಿಸುವ ವ್ಯಕ್ತಿಗಾಗಿ ತನ್ನ ಆಸೆ - ಆಕಾಂಕ್ಷೆಗಳನ್ನು ತ್ಯಾಗ ಮಾಡುತ್ತಾಳೆ. ಈ ಪಾತ್ರದಲ್ಲಿ ಅತ್ಯುತ್ತಮ ಅಭಿನಯಿಸಿದ್ದಕ್ಕಾಗಿ ಮೀನಾಕುಮಾರಿಗೆ ಫಿಲ್ಮ್‌ಫೇರ್‌ (1953, ಚೊಚ್ಚಲ ಫಿಲ್ಮ್‌ಫೇರ್‌) ಪುರಸ್ಕಾರ ಸಂದಿತ್ತು. ವಿಜಯ್ ಭಟ್ ನಿರ್ದೇಶನದ ಸಿನಿಮಾ ದೊಡ್ಡ ಯಶಸ್ಸು ಕಂಡಿತು. ಮುಂಬಯಿಯ ಥಿಯೇಟರ್‌ವೊಂದರಲ್ಲಿ ಚಿತ್ರ ನೂರು ವಾರ ಪ್ರದರ್ಶನ ಕಂಡಿತ್ತಂತೆ! ಚಿತ್ರದ ಗೆಲುವಿನೊಂದಿಗೆ ಮೀನಾಕುಮಾರಿ ಸ್ಟಾರ್ ನಟಿಯಾಗಿ ಹೊರಹೊಮ್ಮಿದರು.

ಇದನ್ನೂ ಓದಿ : ಸ್ಮರಣೆ | ಗಾಯಕ ರಫಿ ಅವರ ಕಂಠದಲ್ಲಿ ನೀವು ಕೇಳಲೇಬೇಕಾದ ಹತ್ತು ಹಾಡು

ಮುಂದೆ ಮೀನಾಕುಮಾರಿ, ವೃತ್ತಿ ಜೀವನದಲ್ಲಿ ಹಿಂತಿರುಗಿ ನೋಡಲೇ ಇಲ್ಲ. ‘ಪರಿಣೀತಾ’ (1953), ‘ದಾಯಿರಾ’ (1953), ‘ಏಕ್ ಹೀ ರಾಸ್ತಾ’ (1956), ‘ಶಾರದಾ’ (1957), ‘ದಿಲ್ ಅಪ್ನಾ ಔರ್ ಪ್ರೀತ್ ಪರಾಯಿ’ (1960) ಚಿತ್ರಗಳೊಂದಿಗೆ ಆಕೆಗೆ ‘ಟ್ರ್ಯಾಜಿಡಿ ಹಿರೋಯಿನ್’ ಹಣೆಪಟ್ಟಿ ಅಂಟಿತು. 1962ರಲ್ಲಿ ಮೀನಾಕುಮಾರಿ ಅವರ ಹೆಸರಿನಲ್ಲಿ ವಿಶಿಷ್ಟ ದಾಖಲೆಯೊಂದು ಬರೆಯಲ್ಪಟ್ಟಿತು. ‘ಆರತಿ’, ‘ಮೇ ಚುಪ್ ರಹೂಂಗಿ’ ಮತ್ತು ‘ಸಾಹಿಬ್ ಬೀಬಿ ಔರ್ ಗುಲಾಮ್’ ಮೂರು ಚಿತ್ರಗಳ ಉತ್ತಮ ಅಭಿನಯಕ್ಕಾಗಿ ಅವರ ಹೆಸರು ಫಿಲ್ಮ್‌ಫೇರ್ ಪುರಸ್ಕಾರಕ್ಕೆ ನಾಮನಿರ್ದೇಶನಗೊಂಡಿತ್ತು. ಕೊನೆಗೆ ‘ಸಾಹಿಬ್ ಬೀಬಿ ಔರ್ ಗುಲಾಮ್’ ಚಿತ್ರದ ಅಭಿನಯಕ್ಕೆ ಅವರಿಗೆ ಫಿಲ್ಮ್‌ಫೇರ್‌ ಪುರಸ್ಕಾರ ಸಂದಿತು.

ಮೀನಾಕುಮಾರಿ 1952ರಲ್ಲಿ ನಿರ್ದೇಶಕ ಕಮಲ್ ಅಮ್ರೋಹಿ ಅವರ ಎರಡನೇ ಪತ್ನಿಯಾದರು. ಕಮಲ್ ಆಕೆಗಿಂತ 15 ವರ್ಷಕ್ಕೆ ಹಿರಿಯರು. ಆನಂತರ ‘ದಿಲ್ ಏಕ್ ಮಂದಿರ್’ (1963), ‘ಕಾಜಲ್’ (1965), ‘ಫೂಲ್ ಔರ್ ಪತ್ಥರ್ (1966) ಚಿತ್ರಗಳೊಂದಿಗೆ ಮೀನಾ ಯಶಸ್ಸಿನ ಪಯಣ ಮುಂದುವರೆಯಿತು. 1964ರಲ್ಲಿ ಕಮಲ್‌ರಿಂದ ವಿಚ್ಛೇದನ ಪಡೆದ ನಂತರ ಮೀನಾ ಮದ್ಯದ ವ್ಯಸನಕ್ಕೆ ಬಿದ್ದರು. ಅತಿಯಾದ ಮದ್ಯ ಸೇವನೆಯಿಂದಾಗಿ ಮೀನಾಕುಮಾರಿ ಯಕೃತ್ತು ದುರ್ಬಲವಾಯ್ತು. ಚಿಕಿತ್ಸೆಗೆಂದು ಮೀನಾಕುಮಾರಿ ಅವರನ್ನು ಲಂಡನ್ ಮತ್ತು ಸ್ವಿಟ್ಜರ್‌ಲ್ಯಾಂಡ್‌ಗೆ ಕರೆದೊಯ್ಯಲಾಗಿತ್ತು.

ಮೀನಾಕುಮಾರಿಗೆ ಗೂಗಲ್ ಡೂಡಲ್‌ ಗೌರವ

ಆರೋಗ್ಯ ಸುಧಾರಿಸಿಕೊಂಡು ಭಾರತಕ್ಕೆ ಮರಳಿದ ಮೀನಾಕುಮಾರಿ ಪೋಷಕ ಪಾತ್ರಗಳಲ್ಲಿ ನಟಿಸಿದರು. ‘ಜವಾಬ್’ (1970), ‘ಮೇರೆ ಅಪ್ನೇ’ (1971), ‘ದುಷ್ಮನ್’ (1972) ಅವರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡ ಚಿತ್ರಗಳು. ಹಿಂದೆ ಮೀನಾಕುಮಾರಿ ತಮ್ಮ ಪತಿ ಕಮಲ್ ಅವರೊಡಗೂಡಿ ‘ಪಾಕೀಜಾ’ ಸಿನಿಮಾ ಆರಂಭಿಸಿದ್ದರು. ಅದು ಆಕೆಯ ಮಹತ್ವಾಕಾಂಕ್ಷೆಯ ಚಿತ್ರವೂ ಆಗಿತ್ತು. ದಂಪತಿಯ ವಿಚ್ಛೇದನದ ನಂತರ ಚಿತ್ರವೂ ನನೆಗುದಿಗೆ ಬಿದ್ದಿತ್ತು. ಕೊನೆಗೆ 14 ವರ್ಷಗಳ ನಂತರ 1972, ಫೆಬ್ರವರಿ 4ರಂದು ‘ಪಾಕೀಜಾ’ ತೆರೆಕಂಡಿತು. ಮೊದಲು ಚಿತ್ರವನ್ನು ಫ್ಲಾಪ್‌ ಎಂದು ಘೋಷಿಸಲಾಗಿತ್ತು. ಆದರೆ 1972, ಮಾರ್ಚ್ 31ರಲ್ಲಿ ಮೀನಾಕುಮಾರಿ ನಿಧನರಾದ ನಂತರ ಒಮ್ಮೆಗೇ ‘ಪಾಕೀಜಾ’ ಗೆಲುವಿನ ಹಾದಿ ಹಿಡಿಯಿತು! ಸಾವಿನೊಂದಿಗೆ ಮೀನಾಕುಮಾರಿ ಅವರ ಗೆಲುವಿನ ಕನಸು ಕೂಡ ಕೈಗೂಡಿತ್ತು.

ಮೀನಾ ಕುಮಾರಿ ಜನಪ್ರಿಯ ಸಿನಿಮಾ ವಿಡಿಯೋ ಹಾಡುಗಳು ಇಲ್ಲಿವೆ

ಪಾಕೀಜಾ (೧೯೭೨)

ಸಾಹೇಬ್ ಬೀಬಿ ಔರ್‌ ಗುಲಾಮ್‌ (1962)

ಅಖೇಲಿ ಮತ್ ಜಾವೋ (1963)

ಸಾಹೇಬ್ ಬೀಬಿ ಔರ್‌ ಗುಲಾಮ್‌ (1962)

ಯಹೂದಿ (1958)

ಮಿಸ್ ಮೇರಿ (1957)

ಬಹು ಬೇಗಂ (1967)

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More