ಟ್ರೈಲರ್‌ | ಒಬ್ಬ ನಟ, ಹನ್ನೊಂದು ಪಾತ್ರ; ‘ಆಟೋ ಭಾಸ್ಕರ’ ಸಿನಿಮಾ ವಿಶೇಷ

‘ಆಟೋ ಭಾಸ್ಕರ’ ಚಿತ್ರದಲ್ಲಿ ನಟ ಆದಿತ್ಯ ಭಾರದ್ವಾಜ್‌ ಹನ್ನೊಂದು ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಟ್ರೈಲರ್‌ನಲ್ಲಿ ಅವರ ಏಳು ಪಾತ್ರಗಳು ರಿವೀಲ್ ಆಗಿವೆ. ಮೇಕಿಂಗ್‌ ಮತ್ತು ತಾಂತ್ರಿಕವಾಗಿ ಅಷ್ಟಾಗಿ ಗಮನಸೆಳೆಯದ ಟ್ರೈಲರ್‌, ಪ್ರಯೋಗದ ದೃಷ್ಟಿಯಿಂದ ಮಾತ್ರ ವಿಶೇಷವೆನಿಸುತ್ತದೆ

ರಂಗಭೂಮಿ ಹಿನ್ನೆಲೆಯ ನಟ ಆದಿತ್ಯ ಭಾರದ್ವಾಜ್‌ ತಮ್ಮ ‘ಆಟೋ ಭಾಸ್ಕರ’ ಸಿನಿಮಾ ಬಗ್ಗೆ ಕುತೂಹಲಕಾರಿ ಮಾಹಿತಿ ನೀಡಿದ್ದರು. ಚಿತ್ರದ ಹನ್ನೊಂದು ಪಾತ್ರಗಳಲ್ಲಿ ನಟಿಸುವ ಅವರ ಹೇಳಿಕೆ ಅಚ್ಚರಿ ಮೂಡಿಸಿತ್ತು. ಇದೀಗ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಅವರ ಏಳು ಪಾತ್ರಗಳು ರಿವೀಲ್ ಆಗಿವೆ. ಆಟೋ ಡ್ರೈವರ್ ಬಾಸ್ಕರ್‌, ಮುನ್ನಿ, ಭಾಸ್ಕರನ ಅಪ್ಪ, ಅಂಧ ಯುವಕ, ಹಿರಿಯ ನಾಗರಿಕ, ಲವರ್ ಬಾಯ್‌ ಮತ್ತು ಮಧ್ಯವಯಸ್ಕ ಮಹಿಳೆ ಪಾತ್ರಗಳು ಕಾಣಿಸುತ್ತವೆ. ಮೇಕಿಂಗ್ ಸಾಧಾರಣವಾಗಿದ್ದು, ತಾಂತ್ರಿಕವಾಗಿ ಪೇಲವ ಎನಿಸುತ್ತದೆ. ಆದರೆ, ನಟನೊಬ್ಬ ಹನ್ನೊಂದು ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸ ಪ್ರಯೋಗ. ಈ ನಿಟ್ಟಿನಲ್ಲಿ ಸಿನಿಮಾ ಕುತೂಹಲ ಮೂಡಿಸಿದೆ.

ಇದನ್ನೂ ಓದಿ : ಟೀಸರ್‌ | ಟ್ರೆಂಡ್‌ ಆಯ್ತು ನಿಖಿಲ್‌ ಕುಮಾರ್‌ ನಟನೆಯ ‘ಸೀತಾರಾಮ ಕಲ್ಯಾಣ’

ಭರತ್‌ ಜಗನ್ನಾಥ್ ನಿರ್ದೇಶನದ ಚಿತ್ರವಿದು. ಆಟೋ ಚಾಲಕ ಭಾಸ್ಕರನ ಬದುಕಿನಲ್ಲಿ ನಡೆಯುವ ಒಂದು ದಿನದ ಕತೆ ಸಿನಿಮಾದ ವಸ್ತು. ಶಿವಮೊಗ್ಗದ ಆದಿತ್ಯ ಭಾರದ್ವಾಜ್‌ ಅವರಿಲ್ಲಿ ಪೂರ್ಣಪ್ರಮಾಣದ ನಟನಾಗಿ ಕಾಣಿಸಿಕೊಂಡಿದ್ದಾರೆ. ಮೊದಲು ಮೂರು ಪಾತ್ರಗಳ ಕತೆ ಮಾಡಿಕೊಂಡಿದ್ದರು ನಿರ್ದೇಶಕರು. ಮುಂದೆ ನಟ ಆದಿತ್ಯ ಅವರೊಂದಿಗಿನ ಚರ್ಚೆಯ ನಂತರ ಒಂಬತ್ತು ಪಾತ್ರಗಳಾದವು. ಸ್ತ್ರೀಪಾತ್ರಗಳನ್ನೂ ಆದಿತ್ಯ ಅವರೇ ನಿಭಾಯಿಸಲಿ ಎಂದು ಚಿತ್ರತಂಡದ ಹಲವರು ಸಲಹೆ ಮಾಡಿದ್ದಾರೆ. ಹೀಗೆ, ಆದಿತ್ಯ ಹನ್ನೊಂದು ಪಾತ್ರಗಳಲ್ಲಿ ಕಾಣಿಸಿಕೊಳ್ಳುವಂತಾಯ್ತು. “ಇದು ಉತ್ತಮ ಕಂಟೆಂಟ್ ಇರುವ ಸಿನಿಮಾ. ದುಬಾರಿ ಬಜೆಟ್‌ ಅಪೇಕ್ಷಿಸದೆ ಬುದ್ಧಿವಂತಿಕೆಯಿಂದ ಸಿನಿಮಾ ಮಾಡಿದ್ದೇವೆ. ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತಹ ವಸ್ತು ಇದೆ. ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎನ್ನುವ ನಿರೀಕ್ಷೆ ಇದೆ,” ಎನ್ನುತ್ತಾರೆ ಆದಿತ್ಯ ಭಾರದ್ವಾಜ್‌.

#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
ಸ್ಮಿತಾ ನೆನಪು | ‘ಅನ್ವೇಷಣೆ’ ಗಾಗಿ ತಾನೇ ಹಣ ಹಾಕಿಕೊಂಡು ಬಂದು ನಟಿಸಿದ್ದರು
ಸುದ್ದಿ ವಾಚನದಿಂದ ಸಿನಿಮಾಲೋಕಕ್ಕೆ ಬಂದ ಕೃಷ್ಣಸುಂದರಿ
Editor’s Pick More