ಮನಮಿಡಿಯುವಂತೆ ಮಾಡುವ ಬಾಲಿವುಡ್‌ ಜರ್ನಿ ಸಿನಿಮಾಗಳ ನಡುವೆ ಒಂದು ಪಯಣ

ನಾಳೆ (ಆ.3) ತೆರೆಕಾಣುತ್ತಿರುವ ‘ಕಾರ್ವಾನ್’ ಒಂದು ಜರ್ನಿ ಸಿನಿಮಾ. ಪ್ರಯಾಣದ ಜೊತೆಜೊತೆಗೆ ಸಾಗುವ ಜರ್ನಿ ಸಿನಿಮಾ ಕತೆಗಳು ಜೀವನಪ್ರೀತಿ, ಬದುಕಿನ ಸಾರವನ್ನು ಹೇಳುತ್ತ ಪ್ರೇಕ್ಷಕರ ಒಳಗುಳಿದು ಸದಾ ಕಾಡುತ್ತವೆ. ಅಂತಹ ಉತ್ತಮ ಹಿಂದಿ ಜರ್ನಿ ಸಿನಿಮಾಗಳ ಇಣುಕುನೋಟ ಇಲ್ಲಿದೆ

ಆಕರ್ಷ್‌ ಖುರಾನಾ ನಿರ್ದೇಶನದ ‘ಕಾರ್ವಾನ್’ ಸಿನಿಮಾ ನಾಳೆ (ಆಗಸ್ಟ್‌ 3) ಬಿಡುಗಡೆಯಾಗುತ್ತಿದೆ. ಇರ್ಫಾನ್ ಖಾನ್, ದುಲ್ಕರ್ ಸಲ್ಮಾನ್ ಮತ್ತು ಮಿಥಿಲಾ ಪಾಲ್ಕರ್ ಚಿತ್ರದ ಪ್ರಮುಖ ಕಲಾವಿದರು. ತಂದೆಯ ಆಕಸ್ಮಿಕ ಅಗಲಿಕೆಯ ಹಿನ್ನೆಲೆಯಲ್ಲಿ ಪ್ರಯಾಣ ಹೊರಡುವ ಅವಿನಾಶ್‌ (ದುಲ್ಕರ್ ಸಲ್ಮಾನ್)‌, ಪಯಣದಲ್ಲಿ ಆಕಸ್ಮಿಕವಾಗಿ ಜೊತೆಯಾಗುವ ಅಪರಿಚಿತ ವ್ಯಕ್ತಿಗಳು... ಹೀಗೆ ‘ಕಾರ್ವಾನ್’ ಸಿನಿಮಾ ಸಾಗುತ್ತದೆ. ಈ ಹಿಂದೆ ಬಾಲಿವುಡ್‌ನಲ್ಲಿ ಇಂತಹ ಹಲವು ಅಪರೂಪದ ಜರ್ನೀ ಸಿನಿಮಾಗಳು ತಯಾರಾಗಿವೆ.

ಜಿಂದಗಿ ನಾ ಮಿಲೇಗಿ ದುಬಾರಾ: ಹೃತಿಕ್ ರೋಶನ್, ಫರ್ಹಾನ್ ಅಖ್ತರ್ ಮತ್ತು ಅಭಯ್ ಡಿಯೋಲ್, ಕಲ್ಕಿ ಕೋಚ್ಲಿನ್, ಕತ್ರಿನಾ ಕೈಫ್ ಹೀಗೆ ಬಹುತಾರಾಬಳಗವಿದ್ದ ‘ಜಿಂದಗಿ ನಾ ಮಿಲೇಗಿ ದೋಬಾರಾ’ ಸಿನಿಮಾ ನಿರ್ಬಂಧಗಳಿರದ ಸ್ನೇಹ, ಪ್ರೀತಿ, ಬಾಲ್ಯದ ನೆನಪುಗಳು ಹೆಕ್ಕಿ ಕೊಡುತ್ತದೆ. ಬದುಕಿನ ಪ್ರತಿ ಹಂತಗಳನ್ನು ಆಸ್ವಾದಿಸುವ, ಪಯಣದ ಜೊತೆಗೆ ಬದುಕಿನ ಆಯಾಮಗಳನ್ನು ಪ್ರೇಕ್ಷಕನಿಗೆ ಪರಿಚಯಿಸುವ ಜೋಯಾ ಅಖ್ತರ್ ನಿರೂಪಣೆ ಪ್ರಶಂಸನೀಯ.

ಪಿಕು: ಅಮಿತಾಭ್ ಬಚ್ಚನ್ ,ಇರ್ಫಾನ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ‘ಪಿಕು’ ಚಿತ್ರದ ಪಯಣ ವ್ಯಕ್ತಿಗಳ ನಡುವಿನ ಬಾಂಧವ್ಯವನ್ನು ಹೊತ್ತು ಸಾಗುತ್ತದೆ. ಅನಾರೋಗ್ಯದಿಂದ ಬಳಲುವ ತಂದೆ, ಆತನಿಗೆ ಆಸರೆಯಾಗಿ ನಿಲ್ಲುವ ಮಗಳು ಕೆಲವೊಮ್ಮೆ ಅಸಹಾಯಕಳಾಗುತ್ತಾಳೆ. ಕ್ಯಾಬ್ ಸಂಸ್ಥೆಯೊಂದರ ಮಾಲೀಕನಾಗಿ ಕಾಣಸಿಗುವ ಇರ್ಫಾನ್ ಖಾನ್ ಆಕಸ್ಮಿಕವಾಗಿ ತಂದೆ-ಮಗಳ ಪಯಣದಲ್ಲಿ ಜೊತೆಯಾಗುತ್ತಾನೆ. ನಿರ್ದೇಶಕ ಶೂಜಿತ್ ಸರ್ಕಾರ್ ಸೆನ್ಸಿಬಲ್ ಕಥೆಯೊಂದನ್ನು ಹಾಸ್ಯಮಯವಾಗಿ ಪ್ರೇಕ್ಷಕರ ಮನಮುಟ್ಟುವಂತೆ ನಿರೂಪಿಸಿದ್ದರು.

ಇದನ್ನೂ ಓದಿ : ಮೀನಾಕುಮಾರಿ ಎಂಬ ಸಮ್ಮೋಹಕ ನಟಿಯೊಳಗೆಗೊಬ್ಬಳಿದ್ದಳು ನೊಂದ ಕವಿ

ಕ್ವೀನ್: ಕಂಗನಾ ರನೌತ್, ರಾಜ್‌ಕುಮಾರ್‌ ರಾವ್ ನಟನೆಯ ‘ಕ್ವೀನ್’ ಚಿತ್ರ ಹೆಣ್ಣಿನ ಅಂತರಾಳದ ಧ್ವನಿಯಾಗಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಕಾಲೇಜು ಓದುವ ಹುಡುಗಿ, ಆಕೆಯ ಹಿಂದೆ ಬೀಳುವ ಹುಡುಗ, ಸತಾಯಿಸುತ್ತಲೇ ಕೊನೆಗೆ ಪ್ರೀತಿಯಲಿ ಜಾರುವ ಹುಡುಗಿ, ಕೊನೆಗೊಮ್ಮೆ ಇಬ್ಬರ ಪ್ರೀತಿ ಮದುವೆಗೆ ಸಾಕ್ಷಿಯಾಗುವ ದಿನ ಬಂದಾಗ ಕುಂಟು ನೆಪವನ್ನಿಟ್ಟು ದೂರವಾಗುವ ಇನಿಯ, ನೋವಿನಿಂದ ಹೊರಬರಲು ಪ್ಯಾರಿಸ್‌ನತ್ತ ಹಾರುವ ಯುವತಿ ಕಳೆದು ಹೋಗಿರುವ ತನ್ನತನವನ್ನು ಅಪರಿಚಿತ ಪ್ರಪಂಚದಲ್ಲಿ ಹುಡುಕಿ ನಡೆಯುವಳು. ಹಿಂದೆಂದೂ ಕಾಣದ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಅನುಭವಿಸುವ ಆಕೆ ಅವಲಂಬನೆಯ ಸಂಕೋಲೆಗಳಿಂದ ಮುಕ್ತಳಾಗಿ ಬದುಕನ್ನು ಜೀವಿಸುವ ಪರಿ ಗಮನಾರ್ಹವಾಗಿತ್ತು.

ತಮಾಶಾ: ರಣಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ‘ತಮಾಶಾ’ ಚಿತ್ರ ಮೂಖಮನಸುಗಳ ಹೇಳದೆ ಉಳಿದ ಮಾತುಗಳಿಗೆ ಹಿಡಿದ ಕನ್ನಡಿಯಂತೆ ಪ್ರೇಕ್ಷಕರ ಗಮನ ಸೆಳೆದಿತ್ತು. ಕೋರ್ಸಿಕಾ ದೇಶದ ಪ್ರವಾಸಿ ತಾಣದಲ್ಲಿ ಪರಿಚಿತರಾಗುವ ವೇದ್ ಮತ್ತು ತಾರಾ ಕೆಲ ಷರತ್ತುಗಳ ಮೇಲೆ ಹತ್ತಿರವಾಗುತ್ತಾರೆ. ಅನ್ಯೋನ್ಯತೆಯಿಂದ ಕಾಲ ಕಳೆಯುವ ಇಬ್ಬರು ಕೊನೆಗೊಂದು ದಿನ ಹೇಳದೆ ಕೇಳದೆ ದೂರವಾಗುತ್ತಾರೆ. ಆ ದಿನಗಳ ನೆನಪಿನಲ್ಲೇ ಕಾಲ ಕಳೆಯುವ ಜೋಡಿಗಳು ಮತ್ತೆ ಎದುರಾದಾಗ ವಾಸ್ತವಿಕತೆಯೇ ಬೇರೆಯಾಗಿರುತ್ತದೆ. ತನ್ನೆಲ್ಲ ಕನಸುಗಳನ್ನು ಕಾಲಚಕ್ರದಡಿಯಲಿ ಅಡವಿಟ್ಟು ಬದುಕುವ ವೇದ್ ಕೊನೆಗೊಮ್ಮೆ ತನ್ನಿಷ್ಟದಂತೆ ಬದುಕಲು ಹೊರಡುತ್ತಾನೆ.

ದಿಲ್ ಚಾಹ್ತಾ ಹೈ: ಫರ್ಹನ್‌ ಅಖ್ತರ್ ತಮ್ಮ ನಿರ್ದೇಶನದ ಮೊದಲ ಚಿತ್ರದಲ್ಲೇ ಸ್ನೇಹಿತರ ನಡುವಣ ಸಂಬಂಧವನ್ನು ಸಮಯಕ್ಕನುಸಾರವಾಗಿ ಬದಲಾಗುವ ಜೀವನಶೈಲಿಯನ್ನು ಪಯಣದ ಜೊತೆಜೊತೆಗೆ ಹೆಣೆದಿದ್ದರು. ಅಮೀರ್ ಖಾನ್, ಸೈಫ್ ಅಲಿ ಖಾನ್, ಅಕ್ಷಯ್‌ ಖನ್ನಾ ಮೂವರು ಬಾಲ್ಯದ ಸ್ನೇಹಿತರಾಗಿ ಚಿತ್ರಕ್ಕೆ ಬಣ್ಣ ಹೆಚ್ಚಿದ್ದು ಸಿನಿರಸಿಕರ ಗಮನ ಸೆಳೆದಿತ್ತು.

ಹನಿಮೂನ್ ಟ್ರಾವೆಲ್ಸ್ ಪ್ರೈವೇಟ್ ಲಿಮಿಟೆಡ್: ರಿಮಾ ಕಾಗ್ತಿ ನಿರ್ದೇಶನದ ‘ಹನಿಮೂನ್ ಟ್ರಾವೆಲ್ಸ್ ಪ್ರೈವೇಟ್ ಲಿಮಿಟೆಡ್’ ನಾಲ್ಕು ದಿನಗಳ ಹನಿಮೂನ್ ಪ್ರವಾಸಕ್ಕಾಗಿ ಗೋವಾ ತಲುಪುವ ಆರು ಅಪರಿಚಿತ ಜೋಡಿಗಳ ಕತೆ. ಪರಸ್ಪರಲ್ಲಿ ಹೊಂದಾಣಿಕೆ ಕಾಯ್ದುಕೊಳ್ಳದೆ, ಕೆಲಮೊಮ್ಮೆ ಮುನಿಸಿಕೊಳ್ಳುವುದು, ತಪ್ಪಿನ ಅರಿವಾಗಿ ತಮ್ಮ ಸಂಗಾತಿಗಳ ಮನವೊಲಿಸಲು ಒದ್ದಾಡುವ ಹಾಸ್ಯಮಯ ಕತೆಯಾಗಿ ಆಕರ್ಷಕವಾಗಿ ಮೂಡಿಬಂದಿತ್ತು

ಫೈಂಡಿಗ್ ಫ್ಯಾನಿ: ಬಾಲಿವುಡ್‌ ಚಲನಚಿತ್ರಗಳಲ್ಲಿ ಹಿಂದೆಂದೂ ತೋರಿಸದ ಗೋವಾದ ಸೌಂದರ್ಯವನ್ನು ಈ ಚಿತ್ರದಲ್ಲಿ ತೋರಿಸಿರುವುದು ವಿಶೇಷ. ಚಿತ್ರದ ಹೆಸರೇ (ಫೈಂಡಿಂಗ್ ಫ್ಯಾನಿ) ಸೂಚಿಸುವಂತೆ ಫರ್ನಾಂಡೀಸ್ ಎಂಬ ವರ್ಣಚಿತ್ರಕಾರನನ್ನು ಹುಡುಕಿ ಹೊರಟ ಪಯಣ ಅಪರಿಚಿತರನ್ನು ಸನಿಹಕ್ಕೆ ತಂದು ನಿಲ್ಲಿಸುತ್ತದೆ.

ಹೈವೇ: ಅಲಿಯಾ ಭಟ್ ಹಾಗೂ ರಣದೀಪ್ ಹೂಡಾ ಅಭಿನಯದ ‘ಹೈವೇ’ ಚಿತ್ರ ವಿಮರ್ಶಕರ ಹಾಗೂ ಪ್ರೇಕ್ಷಕರ ಮೆಚ್ಚುಗೆ ಪಡೆದಿತ್ತು. ಆಕಸ್ಮಿಕವಾಗಿ ಅಪಹರಣಕ್ಕೊಳಗಾಗುವ ಯುವತಿ ಪಂಜರದಿಂದ ಹಾರದ ಹಕ್ಕಿಯಂತೆ ನಿಟ್ಟುಸಿರು ಬಿಡುತ್ತಾಳೆ. ತನ್ನ ಮನೆಮಂದಿಗಿಂತ ಅಪಹರಣಕಾರರೊಂದಿಗೆ ಬೆರೆತು ಹೋಗುವ ಯುವತಿ ಬದುಕಿನ ಪ್ರತಿ ಕ್ಷಣವನ್ನು ಅನುಭವಿಸತೊಡಗುತ್ತಾಳೆ. ಪ್ರಯಾಣದ ಕೊನೆಗೆ ತನ್ನ ಕನಸುಗಳನ್ನು ಸಂಧಿಸಿ ತನ್ನೊಂದಿಗೆ ತಾನು ಬದುಕುವುದನ್ನು ರೂಢಿಸಿಕೊಳ್ಳುತ್ತಾಳೆ.

ಯೆಹ್ ಜವಾನಿ ಹೈ ದೀವಾನಿ: ರಣಬೀರ್ ಕಪೂರ್, ದೀಪಿಕಾ ಪಡುಕೋಣೆ, ಆದಿತ್ಯಾ ರಾಯ್ ಕಪೂರ್, ಕಲ್ಕಿ ಕೋಚ್ಲಿನ್ ಮುಖ್ಯಭೂಮಿಕೆಯ ‘ಯೆಹ್ ಜವಾನಿ ಹೈ ದಿವಾನಿ’ ಚಿತ್ರ ಬಾಲಿವುಡ್ ಅಂಗಳದಲ್ಲಿ ದೊಡ್ಡ ಸದ್ದು ಮಾಡಿತ್ತು. ಅಯಾನ್ ಮುಖರ್ಜಿ ಬಾಲ್ಯದ ಸ್ನೇಹಿತರ ಬದುಕಿನ ಪಯಣದ ಕತೆಯನ್ನು ಅಚ್ಚುಕಟ್ಟಾಗಿ ತೆರೆಗೆ ಅಳವಡಿಸಿ ಗೆದ್ದಿದ್ದರು, ಮೂರು ಪಾತ್ರಧಾರಿಗಳು ಬಾಲ್ಯದಿಂದ ಆತ್ಮೀಯರಾಗಿರುತ್ತಾರೆ. ಅವರ ಕನಸುಗಳು ತುಡಿತಗಳು ಬೇರೆಯೇ ಆಗಿರುತ್ತವೆ. ಬರಿ ಓದು ಪುಸ್ತಕಗಳ ನಡುವೆ ತನ್ನ ಸ್ವಾತಂತ್ರ್ಯವನ್ನೇ ಮರೆತು ಹೋದ ನಯನಾ ಚಾರಣದ ನೆಪದಲ್ಲಿ ತನ್ನ ಹಳೆಯ ಸ್ನೇಹಿತರ ಗುಂಪು ಸೇರುತ್ತಾಳೆ. ಪ್ರಯಾಣದುದ್ದಕ್ಕೂ ಅದುವರೆಗೂ ತಾನು ಕಳೆದುಕೊಂಡ ಕ್ಷಣಗಳನ್ನು ಮತ್ತೆ ಜೀವಿಸುತ್ತಾಳೆ. ಕಳೆದು ಹೋದ ತನ್ನನ್ನು ಮತ್ತೆ ತನಗೇ ಪರಿಚಯಿಸಿದ ಕಬೀರ್ ಪ್ರೀತಿಗಾಗಿ ಹಾತೊರೆಯುತ್ತಾಳೆ. ಕಬೀರ್‌ನ ಕನಸುಗಳು ಸ್ನೇಹ, ಪ್ರೀತಿ, ವ್ಯಾಮೋಹದಾಚೆಗೆ ಹಬ್ಬಿಕೊಂಡಿರುತ್ತವೆ. "ಮೈ ಉಡ್ನಾ ಚಾಹ್ತಾ ಹೂ, ಗಿರ್ನಾ ಚಾಹ್ತಾ ಹೂ, ಭಾಗ್ನಾ ಚಾಹ್ತಾ ಹೂ, ಬಸ್ ರುಕ್ನಾ ನಹೀ ಚಾಹ್ತಾ” ಎಂಬ ಆತನ ಮಾತಿನಂತೆ ಆತನ ಬದುಕು ಸಾಗುತ್ತದೆ. ಬಂಧನಗಳ ಸಂಕೋಲೆಗಳ ಗಡಿ ದಾಟಿ ಜಗವ ಸುತ್ತುವ ಆತ ಬದುಕಿನ ಪ್ರತಿ ಕ್ಷಣವನ್ನು ಜೀವಿಸುತ್ತ ಹೆಜ್ಜೆ ಹಾಕುತ್ತಾನೆ. ನಿಲ್ಲಲು ಬಯಸದ ಕಬೀರ್ ಕೊನೆಗೊಮ್ಮೆ ನಯನಾಳ ಪ್ರೀತಿಗೆ ಕಟ್ಟುಬಿದ್ದು ಹೊಸಬದುಕಿನ ಪುಟಗಳಿಗೆ ಮುನ್ನುಡಿ ಬರೆಯ ಹೊರಡುತ್ತಾನೆ.

ಜಬ್ ವಿ ಮೆಟ್: ‘ಜಬ್ ವಿ ಮೆಟ್’ ಕರೀನಾ ಕಪೂರ್ ಮತ್ತು ಶಾಹಿದ್ ಕಪೂರ್ ವೃತ್ತಿ ಜೀವನದಲ್ಲಿ ಬಹುಮುಖ್ಯವಾದ ಚಿತ್ರ. ರೈಲಿನಲ್ಲಿ ಭೇಟಿಯಾಗುವ ಭಿನ್ನ ವ್ಯಕ್ತಿತ್ವದ ಅಪರಿಚಿತರಿಬ್ಬರ ಕತೆ, ಯಾರನ್ನೂ ಮೆಚ್ಚಿಸುವ ಗೋಜಿಗೆ ಬೀಳದೆ ತನ್ನಷ್ಟಕ್ಕೆ ತನ್ನ ಪುಟಾಣಿ ಪ್ರಪಂಚದಲ್ಲಿ ತುಂಟಾಟಗಳನ್ನಾಡುತ್ತ ಬದುಕುವ ಯುವತಿಗೆ ಪರಿಚಯವಾಗುವ ಹುಡುಗ ಇನ್ಯಾವುದೋ ಖಿನ್ನತೆಗೆ ಆಹಾರವಾಗಿರುತ್ತಾನೆ. ಆಕೆಯ ಒಡನಾಟದಿಂದ ಆತನಲ್ಲಾಗುವ ಬದಲಾವಣೆ, ಪ್ರಯಾಣದೊಂದಿಗೆ ಘಟಿಸುವ ಪ್ರೀತಿ ಹೀಗೆ ಸಾಗುವ ಕತೆ ಇಂದಿಗೂ ಮರೆಯಲಾಗದು. ಹೆಚ್ಚಾಗಿ ಪ್ರಯಾಣದ ಜೊತೆಜೊತೆಗೆ ಕತೆ ಹೆಣೆದು ಬದುಕಿನ ಜಂಜಾಟದಲ್ಲಿ ಮುಳುಗಿ ಹೋದ ಜೀವಿಸುವುದೇ ಮರೆತು ಹೋದ ಜನಗಳಿಗೆ ಅವರದ್ದೇ ಬದುಕನ್ನು ಅವರಿಗೆ ಮತ್ತೆ ಮತ್ತೆ ಪರಿಚಯಿಸುವ ನಿರ್ದೇಶಕ ಇಮ್ತಿಯಾಜ್ ಅಲಿಯವರ ನಿರೂಪಣಾ ಸಾಮರ್ಥ್ಯಕ್ಕೆ ತಲೆದೂಗಲೇಬೇಕು.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More