‘ಬದುಕು ಯಾರಿಗೂ ಗ್ಯಾರಂಟಿ ಕೊಡೋಲ್ಲ’ ಎನ್ನುತ್ತಾರೆ ನಟ ಇರ್ಫಾನ್ ಖಾನ್

ಬಾಲಿವುಡ್ ನಟ ಇರ್ಫಾನ್ ಖಾನ್ ಕ್ಯಾನ್ಸರ್‌ ಚಿಕಿತ್ಸೆಗಾಗಿ ಲಂಡನ್‌ನಲ್ಲಿದ್ದಾರೆ. ನಾಳೆ (ಆ.3) ಅವರು ನಟಿಸಿರುವ ‘ಕಾರ್ವಾನ್‌’ ಹಿಂದಿ ಸಿನಿಮಾ ತೆರೆಕಾಣುತ್ತಿದೆ. ಈ ಹಿನ್ನೆಲೆಯಲ್ಲಿ, ಆಂಗ್ಲಪತ್ರಿಕೆಯೊಂದು ನಡೆಸಿರುವ ಸಂದರ್ಶನದಲ್ಲಿ ಅವರು ಬದುಕಿನೆಡೆಗೆ ಬದಲಾದ ತಮ್ಮ ದೃಷ್ಟಿಕೋನದ ಬಗ್ಗೆ ಮಾತನಾಡಿದ್ದಾರೆ

ನಟ ಇರ್ಫಾನ್ ಖಾನ್‌ ನ್ಯೂರೋಎಂಡೋಕ್ರೈನ್ ಟ್ಯೂಮರ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾರ್ಚ್‌ ತಿಂಗಳಿಂದೀಚೆಗೆ ಅವರು ಮಾಧ್ಯಮಗಳ ಸಂಪರ್ಕಕಕ್ಕೆ ಸಿಕ್ಕಿಲ್ಲ. ಈ ಮಧ್ಯೆ, ಅವರು ನಟಿಸಿರುವ ‘ಬ್ಲ್ಯಾಕ್‌ಮೇಲ್‌’ ಹಿಂದಿ ಸಿನಿಮಾ ಮತ್ತು ‘ಪಝಲ್‌’ ಹಾಲಿವುಡ್ ಸಿನಿಮಾ ತೆರೆಕಂಡಿದ್ದವು. ಅವರು ನಟಿಸಿರುವ ಬಹುನಿರೀಕ್ಷಿತ ‘ಕಾರ್ವಾನ್‌’ ಸಿನಿಮಾ ನಾಳೆ ತೆರೆಕಾಣುತ್ತಿದೆ. ಈ ಹಿನ್ನೆಲೆಯಲ್ಲಿ, ಆಂಗ್ಲಪತ್ರಿಕೆಯೊಂದು ನಟನೊಂದಿಗೆ ನಡೆಸಿರುವ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ನೀವೀಗ ಹೇಗಿದ್ದೀರಿ?

ಬದುಕನ್ನು ನಾನು ಬೇರೆ ಬೇರೆ ರೀತಿ ನೋಡುತ್ತ ಬಂದಿದ್ದೆ. ಈಗ, ಒಂದೆಡೆ ಕುಳಿತು ಬದುಕಿನ ಮತ್ತೊಂದು ಮುಖವನ್ನು ನೋಡುವುದು ಒಂದು ರೀತಿ ಸೋಜಿಗವೆನಿಸಿದೆ. ಈ ಜರ್ನಿಯನ್ನು ಎಂಜಾಯ್ ಮಾಡುತ್ತಿದ್ದೇನೆ.

ನಿಮ್ಮ ಆರೋಗ್ಯದ ಬಗ್ಗೆ ಮಾಧ್ಯಮಗಳಲ್ಲಿ ಉಹೋಪೋಹಗಳಿವೆ. ಅವನ್ನೆಲ್ಲ ನಂಬಬೇಡಿ ಎಂದು ನೀವು ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದಿರಿ. ನಿಮ್ಮ ಸದ್ಯದ ಸ್ಥಿತಿಯ ಬಗ್ಗೆ ಅಭಿಮಾನಿಗಳಲ್ಲಿ ಆತಂಕವಿದೆ...

ಬದುಕು ಸದಾ ನಮ್ಮತ್ತ ಸವಾಲುಗಳನ್ನು ಎಸೆಯುತ್ತಿರುತ್ತದೆ. ಅವುಗಳನ್ನು ಎದುರಿಸಲು ನಾವು ಸನ್ನದ್ಧರಾಗಿರಬೇಕು. ಈ ಬಾರಿ ದೈಹಿಕವಾಗಿ, ಮಾನಸಿಕವಾಗಿ, ಅಧ್ಯಾತ್ಮಿಕವಾಗಿ ನಾನು ಕುಗ್ಗಿಹೋಗಿದ್ದೆ. ಮೊದಲು ನಾನು ತುಂಬಾ ಘಾಸಿಗೊಂಡಿದ್ದೆ. ನಂತರ ಬದುಕನ್ನು ಇತರ ದೃಷ್ಟಿಕೋನದಿಂದ ನೋಡುವುದನ್ನು ಕಲಿತೆ. ನಾನು ಮೊದಲಿನ ಸ್ಥಿತಿಗೆ ಮರುಳುತ್ತೇನೋ, ಇಲ್ಲವೋ ಎಂದು ಆತ್ಮೀಯರೂ ಆತಂಕದಿಂದ ಮಾತನಾಡುತ್ತಿದ್ದರು. ಆದರೆ, ನನ್ನ ಕೈಲಿ ಏನೂ ಇರಲಿಲ್ಲ. ಈ ಸಂಕೀರ್ಣ ಸಂದರ್ಭವೇ ನನಗೆ ಬದುಕನ್ನು ಬೇರೆ ದೃಷ್ಟಿಕೋನದಿಂದ ನೋಡುವುದನ್ನು ಕಲಿಸಿದ್ದು. ಪ್ರಕೃತಿಗೆ ಶರಣಾಗಿ ಬದುಕನ್ನು ನಡೆಸುವುದು ಸಕಾರಾತ್ಮಕವಾದ ನಿಲುವು ಎನ್ನುವುದು ನನ್ನ ಅನಿಸಿಕೆ.

ಇದನ್ನೂ ಓದಿ : ಜೀವನದ ಮ್ಯಾಜಿಕ್ ಅನ್ನು ಮೊದಲ ಬಾರಿಗೆ ಪರೀಕ್ಷಿಸುತ್ತಿದ್ದೇನೆ: ಇರ್ಫಾನ್ ಖಾನ್

ಈಗ ನಿಮ್ಮ ದಿನಚರಿ ಹೇಗಿರುತ್ತದೆ? ಸಿನಿಮಾಗಳ ಸ್ಕ್ರಿಪ್ಟ್ ಕೇಳುತ್ತೀರಾ?

ಇಲ್ಲ, ನಾನೀಗ ಸಿನಿಮಾ ಸ್ಕ್ರಿಪ್ಟ್‌ಗಳಿಂದ ದೂರವೇ ಇದ್ದೇನೆ. ಸದ್ಯದ ಸ್ಥಿತಿಯಲ್ಲಿ ನನ್ನ ದಿನಗಳು ನಾನು ಎಣಿಸಿದಂತೆ ಇಲ್ಲ. ಇಂತಹ ಸಂದರ್ಭವನ್ನು ಹೇಗೆ ನಿಭಾಯಿಸುವುದು ಎನ್ನುವುದನ್ನೂ ನಾನು ಕಲಿತಿಲ್ಲ. ಬದುಕನ್ನು ನಾನು ಯೋಜಿಸುತ್ತಿಲ್ಲ. ಅದು ಹೇಗೆ ಬರುತ್ತದೋ ಹಾಗೆ ಸ್ವೀಕರಿಸುತ್ತಿದ್ದೇನೆ. ಈ ಅನುಭವ ಹಿತವಾಗಿದೆ.

‘ಕಾರ್ವಾನ್‌’ ಹಿಂದಿ ಸಿನಿಮಾದ ಟ್ರೈಲರ್‌

ಚಿಕಿತ್ಸೆ ಬಗ್ಗೆ ನೀವು ಏನಾದರೂ ಹೇಳಲು ಅಪೇಕ್ಷಿಸುತ್ತೀರಾ?

ಸದ್ಯ ನನಗೀಗ ನಾಲ್ಕನೇ ಸೈಕಲ್‌ ಕಿಮೋಥೆರಪಿ ನಡೆದಿದೆ. ಆರು ಸೈಕಲ್‌ ಕಿಮೋಥೆರಪಿ ನಂತರ ಸ್ಕ್ಯಾನ್ ಮಾಡುತ್ತಾರೆ. ಮೂರನೇ ಸೈಕಲ್‌ ನಂತರ ನಡೆದ ಸ್ಕ್ಯಾನ್‌ನಲ್ಲಿ ಪಾಸಿಟೀವ್ ಬಂದಿತ್ತು. ಆದರೆ, ಆರನೇ ಸೈಕಲ್‌ ನಂತರದ ಸ್ಕ್ಯಾನ್‌ ನೋಡಬೇಕಿದೆ. ಅಲ್ಲಿಂದ ಮುಂದೆ ಬದುಕು ಏನು ತಿರುವು ಪಡೆದುಕೊಳ್ಳುತ್ತದೆ ಎಂದು ನೋಡಬೇಕು. ಬದುಕು ಯಾರಿಗೂ ಗ್ಯಾರಂಟಿ ಕೊಡುವುದಿಲ್ಲ. ಕೆಲವು ತಿಂಗಳಲ್ಲಿ, ಒಂದೆರೆಡು ವರ್ಷಗಳಲ್ಲಿ ನಾನು ಸಾಯಬಹುದು ಎಂದೆಲ್ಲ ನನ್ನ ತಲೆಗೆ ಬರುತ್ತದೆ. ಒಟ್ಟಾರೆ, ಬದುಕು ಹೇಗೆ ನಡೆಸಿಕೊಳ್ಳುತ್ತದೋ ಹಾಗೆ ಹೋಗುವುದು ಒಳ್ಳೆಯ ನಿಯಮ.

ಈ ಅನುಭವ ನಿಮಗೆ ಹೊಸದೇನನ್ನೋ ಕಲಿಸಿದೆ ಅಲ್ಲವೇ?

ಖಂಡಿತ, ಇದೊಂದು ರೀತಿ ಹೊಸ ಬೆಳಕು; ನಾವು ನಮ್ಮನ್ನು ಮರೆತು ಬದುಕಿನ ಇತರ ಮಜಲನ್ನು ನೋಡುವುದು! ಇಂಥದ್ದೊಂದು ಸಂದರ್ಭಕ್ಕೆ ನಾನು ಧನ್ಯವಾದ ಹೇಳಬಹುದಷ್ಟೆ; ಬೇರೇನೂ ಪದಗಳಿಲ್ಲ, ಬೇರೇನೂ ಬೇಡಿಕೆಗಳಿಲ್ಲ, ಏನೊಂದೂ ಪ್ರಾರ್ಥನೆಗಳೂ ಇಲ್ಲ.

ಇರ್ಫಾನ್‌ ಖಾನ್ ಅಭಿನಯದ ‘ಪಝಲ್‌’ ಇಂಗ್ಲಿಷ್ ಸಿನಿಮಾದ ಟ್ರೈಲರ್‌

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More