ನೆಟ್‌ಫ್ಲಿಕ್ಸ್‌ನಲ್ಲಿ ‘ಬಾಹುಬಲಿ’ ಸರಣಿಗಳ ಪ್ರೀಕ್ವೆಲ್‌ ‘ದಿ ರೈಸ್ ಆಫ್‌ ಶಿವಗಾಮಿ’

ಸ್ಟ್ರೀಮಿಂಗ್‌ ಜಗತ್ತಿನ ದೈತ್ಯ ಕಂಪನಿ ನೆಟ್‌ಫ್ಲಿಕ್ಸ್‌ ‘ದಿ ರೈಸ್ ಆಫ್‌ ಶಿವಗಾಮಿ’ ಸರಣಿಗಳನ್ನು ಫೋಷಿಸಿದೆ. ಬ್ಲಾಕ್‌ಬಸ್ಟರ್‌ ‘ಬಾಹುಬಲಿ’ ಸರಣಿ ಸಿನಿಮಾಗಳ ಪ್ರೀಕ್ವೆಲ್‌ ಇದು. ನಿರ್ದೇಶಕ ರಾಜಮೌಳಿ ಅವರ ಸಲಹೆ, ಸೂಚನೆಗಳೊಂದಿಗೆ ಅವರ ಸದಸ್ಯರು ನೆಟ್‌ಫ್ಲಿಕ್ಸ್‌ ಸರಣಿಗಳನ್ನು ನಿರ್ದೇಶಿಸಲಿದ್ದಾರೆ

ನೆಟ್‌ಫ್ಲಿಕ್ಸ್‌ ಕಳೆದ ತಿಂಗಳಲ್ಲಿ ಭಾರತದ ಮೊದಲ ಒರಿಜಿನಲ್‌ ಸರಣಿ ‘ಸೇಕ್ರೆಡ್ ಗೇಮ್ಸ್‌’ ಬಿಡುಗಡೆ ಮಾಡಿತ್ತು. ಇದೀಗ ‘ದಿ ರೈಸ್ ಆಫ್‌ ಶಿವಗಾಮಿ’ ಸರಣಿ ಘೋಷಿಸಿದೆ. ಅತಿ ಹೆಚ್ಚು ವಹಿವಾಟು ನಡೆಸಿದ ಭಾರತದ ಸಿನಿಮಾಗಳು ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ‘ಬಾಹುಬಲಿ’ ಸರಣಿಗಳ ಪ್ರೀಕ್ವೆಲ್‌ ಇದು. ಈ ಎರಡು ಸಿನಿಮಾಗಳಿಗೆ ಮುನ್ನ ನಡೆಯುವ ಕತೆ ‘ದಿ ರೈಸ್ ಆಫ್‌ ಶಿವಗಾಮಿ’ ಸರಣಿಯಲ್ಲಿರಲಿದೆ. ‘ಬಾಹುಬಲಿ’ ಸರಣಿಗಳನ್ನು ನಿರ್ಮಿಸಿದ ಆರ್ಕಾ ಮೀಡಿಯಾ ವರ್ಕ್ಸ್‌ ಮತ್ತು ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರೊಂದಿಗೆ ನೆಟ್‌ಫ್ಲಿಕ್ಸ್ ಕೈಜೋಡಿಸಿದೆ. ರಾಜ್‌ಮೌಳಿ ಅವರಿಗೆ ಸಹಾಯಕರಾಗಿದ್ದ ದೇವ ಕಟ್ಟಾ ಮತ್ತು ಪ್ರವೀಣ್‌ ಸತಾರು ನೆಟ್‌ಫ್ಲಿಕ್ಸ್ ಸರಣಿಗಳನ್ನು ನಿರ್ದೇಶಿಸಲಿದ್ದಾರೆ.

ಪ್ರೀಕ್ವೆಲ್‌ನಲ್ಲಿ ಮಾಹಿಷ್ಮತಿ ಸಾಮ್ರಾಜ್ಯದ ಶಿವಗಾಮಿಯ ಸಾಹಸಗಾಥೆ ಇರಲಿದೆ. ಸಾಮಾನ್ಯ ಮಹಿಳೆಯಾಗಿದ್ದುಕೊಂಡು ಮಾಹಿಷ್ಮತಿ ಸಾಮ್ರಾಜ್ಯದ ಮಹಾರಾಣಿಯಾಗಿ ಬೆಳೆಯುವ ಶಿವಗಾಮಿಯನ್ನಿಲ್ಲಿ ನೋಡಬಹುದು. ‘ಬಾಹುಬಲಿ’ ಸರಣಿಗಳನ್ನು ಚಿತ್ರಿಸಿದ ಶ್ರೀಮಂತ ಸೆಟ್‌ಗಳಲ್ಲೇ ‘ದಿ ರೈಸ್ ಆಫ್‌ ಶಿವಗಾಮಿ’ ಸರಣಿಗಳು ಚಿತ್ರಣಗೊಳ್ಳಲಿವೆ. ಉತ್ಕೃಷ್ಟ ಮೇಕಿಂಗ್‌, ಆಕರ್ಷಕ ವಿಶ್ಯುಯಲ್ಸ್‌ಗಳೊಂದಿಗೆ ಐತಿಹಾಸಿಕ ಕತೆಯನ್ನು ಸಾದರಪಡಿಸುವ ಯೋಜನೆ ಹೊಂದಿದೆ ನೆಟ್‌ಫ್ಲಿಕ್ಸ್‌.

ಇದನ್ನೂ ಓದಿ : ‘ಬದುಕು ಯಾರಿಗೂ ಗ್ಯಾರಂಟಿ ಕೊಡೋಲ್ಲ’ ಎನ್ನುತ್ತಾರೆ ನಟ ಇರ್ಫಾನ್ ಖಾನ್

“ಲಾರ್ಜರ್ ದೆನ್ ಲೈಫ್‌ ಇಮೇಜಿನ ಸದೃಢ ಪಾತ್ರಗಳೊಂದಿಗೆ ಬಾಹುಬಲಿ ಸರಣಿ ಸಿನಿಮಾಗಳು ಸಿನಿಪ್ರೇಮಿಗಳನ್ನು ರಂಜಿಸಿದ್ದವು. ಪ್ರೀಕ್ವೆಲ್‌ನಲ್ಲೂ ಇದೇ ಮೇಕಿಂಗ್‌ ಗುಣಮಟ್ಟ ಇರಲಿದೆ. ನೆಟ್‌ಫ್ಲಿಕ್ಸ್‌ ಮೂಲಕ ಭಾರತದ ಐತಿಹಾಸಿಕ ವೀರಗಾಥೆಯನ್ನು ಜಗತ್ತಿಗೆ ಹೇಳುವ ಅವಕಾಶ ಸಿಕ್ಕಿದೆ. ಸರಣಿಗಳ ಬಗ್ಗೆ ನಮಗೆಲ್ಲ ತೀವ್ರ ಕುತೂಹಲವಿದೆ,” ಎಂದಿದ್ದಾರೆ ನಿರ್ದೇಶಕ ರಾಜಮೌಳಿ. ‘ಬಾಹುಬಲಿ’ ಸರಣಿಗಳ ಹೊಸ ಟ್ರೈಲರ್ ಟ್ವೀಟ್ ಮಾಡಿರುವ ನೆಟ್‌ಫ್ಲಿಕ್ಸ್‌, “ಜಗತ್ತಿನ ಪ್ರತಿಭಾವಂತ ಚಿತ್ರಕಥೆಗಾರರು, ನಿರ್ದೇಶಕರೊಂದಿಗೆ ಕೆಲಸ ಮಾಡಲು ನಾವು ಉತ್ಸುಕರಾಗಿದ್ದೇವೆ. ಈ ಮೂಲಕ ಜಾಗತಿಕ ಪ್ರೇಕ್ಷಕರಿಗೆ ಹೊಸತನ್ನು ಕೊಡುವುದು ನಮ್ಮ ಉದ್ದೇಶವಾಗಿದೆ,” ಎಂದಿದೆ. ಸರಣಿಗಳಲ್ಲಿ ನಟಿಸಲಿರುವ ಕಲಾವಿದರು ಹಾಗೂ ಇತರ ಮಾಹಿತಿ ಮುಂದಿನ ದಿನಗಳಲ್ಲಿ ಸಿಗಲಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More