ರಂಗಭೂಮಿ ಪ್ರತಿಭೆ ಪ್ರಕಾಶ್‌ ನಟನಾ ಬದುಕಿಗೆ ಬೆಳಕಾದ ‘ಒಂದು ಮೊಟ್ಟೆಯ ಕತೆ’

ರಾಜ್‌ ಬಿ ಶೆಟ್ಟಿ ನಿರ್ದೇಶನದ ‘ಒಂದು ಮೊಟ್ಟೆಯ ಕತೆ’ ತಾಜಾ ಕತೆಯಿಂದಾಗಿ ಗಮನ ಸೆಳೆದಿತ್ತು. ಈ ಚಿತ್ರದೊಂದಿಗೆ ಬೆಳಕಿಗೆ ಬಂದ ಪ್ರಕಾಶ್ ತೂಮಿನಾಡು ಮೂಲತಃ ರಂಗಭೂಮಿ ಕಲಾವಿದ. ಇಂದು ತೆರೆಕಂಡಿರುವ ‘ಕತೆಯೊಂದು ಶುರುವಾಗಿದೆ’ ಚಿತ್ರದಲ್ಲಿ ಅವರೊಂದು ಗಮನಾರ್ಹ ಪಾತ್ರ ನಿರ್ವಹಿಸಿದ್ದಾರೆ

ಕಳೆದ ವರ್ಷ ಗಮನ ಸೆಳೆದ ‘ಒಂದು ಮೊಟ್ಟೆಯ ಕಥೆ’ ಚಿತ್ರದಲ್ಲಿ ‘ಶ್ರೀನಿವಾಸ’ ಹೆಸರಿನ ಪಾತ್ರವೊಂದಿತ್ತು. ಕತೆಗೆ ಪ್ರಮುಖ ತಿರುವು ನೀಡುವ ಈ ಪಾತ್ರದಲ್ಲಿ ಪ್ರಕಾಶ್ ತೂಮಿನಾಡು ನಟಿಸಿದ್ದರು. ರಂಗಭೂಮಿ ಹಿನ್ನೆಲೆಯ ಪ್ರಕಾಶ್ ಅವರ ಉತ್ತಮ ಅಭಿನಯದಿಂದ ಈ ಪಾತ್ರ ಪ್ರೇಕ್ಷಕರ ನೆನಪಿನಲ್ಲುಳಿಯಿತು. ತಮ್ಮ ಮೊದಲ ಕನ್ನಡ ಚಿತ್ರದಲ್ಲೇ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ಅವರೀಗ, ಹಲವು ಸಿನಿಮಾಗಳ ಭಿನ್ನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇಂದು (ಆ.3) ಬಿಡುಗಡೆಯಾಗಿರುವ ‘ಕತೆಯೊಂದು ಶುರುವಾಗಿದೆ’ ಚಿತ್ರದಲ್ಲಿ ಅವರು ರೆಸಾರ್ಟ್‌ವೊಂದರ ಬಾಣಸಿಗನ ಪಾತ್ರದಲ್ಲಿದ್ದಾರೆ.

ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿರುವ ಪ್ರಕಾಶ್, ಇಂದಿಗೂ ಸಿನಿಮಾ ಜೊತೆಗೆ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ. “ಚಿಕ್ಕಂದಿನಲ್ಲೇ ರಂಗಭೂಮಿ ನಂಟು ಬೆಳೆಯಿತು. ಮಂಗಳೂರು ಮೂಲದ ರಂಗತಂಡಗಳಲ್ಲಿ ಗುರುತಿಸಿಕೊಂಡೆ. ನಾಟಕಗಳಲ್ಲಿನ ಪಾತ್ರಗಳು ನನ್ನನ್ನು ಬೆಳ್ಳಿತೆರೆಯತ್ತ ಕರೆತಂದವು. ಒಂದು ಕಾಲಕ್ಕೆ ಸಿನಿಮಾ ನನ್ನ ಕನಸಾಗಿತ್ತು. ಟಿವಿಯಲ್ಲಿ ಒಮ್ಮೆಯಾದರೂ ಕಾಣಿಸಿಕೊಳ್ಳಬೇಕೆಂದು ಹಾತೊರೆಯುತ್ತಿದ್ದೆ. ಅಂದಿನ ಕನಸುಗಳಿಗೆ ಇಂದು ಜೀವಕಳೆ ಬಂದಿದೆ,” ಎನ್ನುತ್ತಾರೆ ಪ್ರಕಾಶ್.

‘ಒಂದು ಮೊಟ್ಟೆಯ ಕತೆ’ ಚಿತ್ರದಲ್ಲಿನ ಪಾತ್ರ ಗಮನಾರ್ಹವಾಗಿತ್ತಾದರೂ ಕಲರ್ಸ್ ಸೂಪರ್ ವಾಹಿನಿಯ ‘ಮಜಾಭಾರತ’ ಕಾರ್ಯಕ್ರಮದೊಂದಿಗೆ ಅವರು ಕಿರುತೆರೆ ವೀಕ್ಷಕರಿಗೆ ಚಿರಪರಿಚಿತರಾದರು. ಅಲ್ಲಿ ಅವರ ತಂಡ ನೀಡಿದ ಪ್ರದರ್ಶನದಿಂದ ವಿದೇಶಗಳಿಂದಲೂ ಪ್ರದರ್ಶನಕ್ಕೆ ಬೇಡಿಕೆ ಬರಲಾರಂಭಿಸಿದವು. ಹೀಗೆ, ತಮ್ಮ ರಂಗತಂಡದೊಂದಿಗೆ ಅವರು ಮೂರ್ನಾಲ್ಕು ದೇಶಗಳಲ್ಲಿ ನಾಟಕ ಪ್ರದರ್ಶನ ನೀಡಿದ್ದಾರೆ. "ಒಂದು ಮೊಟ್ಟೆಯ ಕತೆ’ ನನ್ನ ಬದುಕಿನ ಮಹತ್ತರ ತಿರುವು. ನಿರ್ದೇಶಕ ರಾಜ್ ಬಿ ಶೆಟ್ಟಿ ಪಾತ್ರಗಳ ಹುಡುಕಾಟದಲ್ಲಿದ್ದರು. ಅದಾಗಲೇ ಆ ಪಾತ್ರಕ್ಕೆ 12 ಕಲಾವಿದರು ಆಡಿಶನ್ ನೀಡಿದ್ದರು. 13ನೆಯವನಾಗಿ ಹೋದ ನಾನು, ರಂಗಭೂಮಿಯ ಅನುಭವದಿಂದ ಪಾತ್ರಕ್ಕೆ ಆಯ್ಕೆಯಾದೆ. ನಂತರ ಹಿಂತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ರಿಷಭ್ ಶೆಟ್ಟಿ ನಿರ್ದೇಶನದ ‘ಸ.ಹಿ.ಪ್ರಾ ಶಾಲೆ ಕಾಸರಗೋಡು’, ಶಿವರಾಜ್ ಕುಮಾರ್ ಅಭಿನಯದ ’ಕವಚ’, ’ಲೌಡ್ ಸ್ಪೀಕರ್’ ಮುಂತಾದ ಚಿತ್ರಗಳಲ್ಲಿ ನಟಿಸುವ ಅವಕಾಶಗಳು ಅರಸಿ ಬಂದವು,” ಎನ್ನುತ್ತಾರವರು. ನಿರ್ದೇಶಕ ರಾಜ್ ಬಿ ಶೆಟ್ಟಿ ಅವರ ನೆರವನ್ನು ಅವರು ಬಹುವಾಗಿ ನೆನೆಯುತ್ತಾರೆ. ರಂಗಭೂಮಿ ಪಾತ್ರಗಳಿಗೆ ಒಗ್ಗಿಹೋಗಿದ್ದ ತಮಗೆ ಅವರು ಸಿನಿಮಾ ಭಾಷೆ ಕಲಿಸಿದರು ಎಂದು ಕೃತಜ್ಞತೆ ಅರ್ಪಿಸುತ್ತಾರೆ.

ಇದನ್ನೂ ಓದಿ : ಅಭಿಮಾನಿಗೆ ಬರೆದ ಪತ್ರದಲ್ಲಿರುವ ಅಕ್ಷರಗಳು ನಿಜಕ್ಕೂ ವರನಟ ರಾಜ್‌ ಕೈಬರಹವೇ?

ಕನ್ನಡ ಚಿತ್ರಗಳ ಜೊತೆಜೊತೆಗೆ ಪ್ರಕಾಶ್‌ ಅವರು ತುಳು ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ‘ಒಂದು ಮೊಟ್ಟೆಯ ಕತೆ’ಗೂ ಮೊದಲು ಅವರು ಎರಡು ತುಳು ಚಿತ್ರಗಳಲ್ಲಿ ನಟಿಸಿದ್ದರು. ಈಗ ತುಳು ಚಿತ್ರರಂಗದಲ್ಲಿ ಅವಕಾಶಗಳು ಹೆಚ್ಚಾಗಿವೆ. “ಇತ್ತೀಚಿನ ದಿನಗಳಲ್ಲಿ ಪ್ರಾಯೋಗಾತ್ಮಕ ಚಿತ್ರಗಳ ಉತ್ತಮ ಪಾತ್ರಗಳು ಅರಸಿ ಬರುತ್ತಿವೆ. ಹಲವು ವರ್ಷಗಳ ನಿರಂತರ ಶ್ರಮದಿಂದ ಶುರುವಾದ ನನ್ನ ನಟನಾಯಾನ ಅಡೆತಡೆಗಳಿಲ್ಲದೆ ಸಾಗುತ್ತಿದೆ. ನಾನು ಪಾತ್ರಗಳನ್ನು ಶ್ರದ್ಧೆ, ನಿಷ್ಠೆಯಿಂದ ನಿರ್ವಹಿಸುತ್ತಿದ್ದೇನೆ,” ಎನ್ನುವ ಪ್ರಕಾಶ್ ತೂಮಿನಾಡು, ಮುಂದಿನ ಸಿನಿಮಾ ದಿನಗಳ ಬಗ್ಗೆ ಆಶಾವಾದಿಯಾಗಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More