ಚಿತ್ರ ವಿಮರ್ಶೆ | ಬದುಕಿನ ಸರಳತೆ ಹೇಳುವ ಜೀವನಪ್ರೀತಿಯ ಸಿನಿಮಾ ‘ಕಾರ್ವಾನ್‌’

ಬದುಕಿನಲ್ಲಿ ಏನೋ ಕಳೆದುಕೊಂಡಂತೆ ಜೀವಿಸುವ ಅವಿನಾಶ್, ಮತ್ತೊಂದೆಡೆ ನಿರ್ಲಿಪ್ತವಾಗಿ ಕಾಣಿಸಿದರೂ ಅಪಾರ ಜೀವನಪ್ರೀತಿಯ ಶೌಕತ್‌. ಇವರಿಬ್ಬರ ಮಧ್ಯೆ ತನ್ನನ್ನು ತಾನು ಆತ್ಮವಿಶ್ವಾಸದ ಯುವತಿ ಎಂದು ಕರೆದುಕೊಂಡರೂ ಅಸ್ತಿತ್ವದ ಹುಡುಕಾಟದಲ್ಲಿರುವ ತಾನ್ಯಾ, ಈ ಮೂವರ ಕತೆ ‘ಕಾರ್ವಾನ್’

“ಹೃದಯದ ಮಾತುಗಳೆಲ್ಲವೂ ಕವಿತೆ ಆಗಿರೋಲ್ಲ, ತಕ್ಷಣದ ಸುಖಕ್ಕಾಗಿ ಈ ಯುವಕ-ಯುವತಿಯರು ಕುಡಿತಕ್ಕೆ ಮೊರೆಹೋಗುವುದು ಸೋಜಿಗವೆನಿಸುತ್ತದೆ, ಹಕ್ಕು ಚಲಾಯಿಸುವ ಈ ಜನರಿಗೆ ಸಂಬಂಧ ನಿಭಾಯಿಸಲು ಬರುವುದಿಲ್ಲ…”

-‘ಕಾರ್ವಾನ್‌’ ಚಿತ್ರದ ಶೌಕತ್ (ಇರ್ಫಾನ್ ಖಾನ್‌) ಪಾತ್ರದ ಈ ಮಾತುಗಳು ಕೆಲವು ಬಾರಿ ತಮ್ಮ ಮಾತುಗಳೂ ಹೌದು ಎಂದು ಪ್ರೇಕ್ಷಕರಿಗೆ ಅನಿಸುವುದಿದೆ. ಆಕರ್ಷ್‌ ಖುರಾನಾ ನಿರ್ದೇಶನದ ಈ ಚಿತ್ರವನ್ನು ಸರಳ, ಸುಂದರ ಬಾಲಿವುಡ್‌ ಜರ್ನಿ ಚಿತ್ರಗಳ ಪಟ್ಟಿಗೆ ಸೇರ್ಪಡೆಗೊಳಿಸಬಹುದು. ಜರ್ನಿ ಸಿನಿಮಾ ಬೇಡುವ ವೇಗ ಅಲ್ಲಲ್ಲಿ ಕುಂಠಿತವಾದಾಗ ಇರ್ಫಾನ್ ಮತ್ತು ದುಲ್ಕರ್‌ ತಮ್ಮ ಉತ್ತಮ ನಟನೆಯಿಂದ ಸರಿದೂಗಿಸಿದ್ದಾರೆ.

ಪ್ಯಾಕೇಜ್‌ ಟೂರ್‌ನಲ್ಲಿ ಗಂಗೋತ್ರಿಗೆ ಹೊರಟ ಬಸ್‌ನೊಂದಿಗೆ ಸಿನಿಮಾ ಆರಂಭವಾಗುತ್ತದೆ. ಬಸ್‌ನಲ್ಲಿ ಹಿರಿಯರಿಬ್ಬರು ತಮ್ಮ ಮಕ್ಕಳ ಬಗ್ಗೆ ಮಾತನಾಡಿಕೊಳ್ಳುತ್ತಾರೆ. ಮುಂದಿನ ಸನ್ನಿವೇಶಗಳಲ್ಲಿ ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುವ ಅವಿನಾಶ್‌ (ದುಲ್ಕರ್ ಸಲ್ಮಾನ್‌) ಕಾಣಿಸುತ್ತಾನೆ. ಫೋಟೋಗ್ರಫಿಯಲ್ಲಿ ತೊಡಗಿಸಿಕೊಳ್ಳುವ ತನ್ನ ಉಮೇದನ್ನು ಅಪ್ಪನ ಒತ್ತಾಯಕ್ಕೆ ಬದಿಗಿಟ್ಟು, ಇಷ್ಟವಿಲ್ಲದ ಐಟಿ ಕೆಲಸ ಮಾಡುತ್ತಿದ್ದಾನೆ ಆತ. ಯಾತ್ರೆಯಲ್ಲಿನ ಬಸ್‌ ಅಪಘಾತಕ್ಕೀಡಾಗಿ ತಂದೆ ಅಗಲಿದ ಸುದ್ದಿಯೂ ಆತನನ್ನು ವಿಚಲಿತಗೊಳಿಸದು. ಆದರೆ, ತಂದೆಯ ಅಂತ್ಯಸಂಸ್ಕಾರ ನಡೆಸುವುದು ಕರ್ತವ್ಯ. ಆದರೆ, ಪಾರ್ಸೆಲ್‌ ಕಂಪನಿಯ ಎಡವಟ್ಟಿನಿಂದಾಗಿ ತಂದೆಯ ಮೃತದೇಹದ ಕಾಫಿನ್‌ ಮತ್ತೊಂದೆಡೆ ಸೇರುತ್ತದೆ. ಅಲ್ಲಿಂದ ಶುರುವಾಗುತ್ತದೆ ಜರ್ನಿ.

ಒಂದೆಡೆ, ಬದುಕಿನಲ್ಲಿ ಏನೋ ಕಳೆದುಕೊಂಡಂತೆ ಜೀವಿಸುವ ಅವಿನಾಶ್, ಮತ್ತೊಂದೆಡೆ ನಿರ್ಲಿಪ್ತವಾಗಿ ಕಾಣಿಸಿದರೂ ಅಪಾರ ಜೀವನಪ್ರೀತಿಯ ಶೌಕತ್‌; ಇವರಿಬ್ಬರ ಮಧ್ಯೆ ತನ್ನನ್ನು ತಾನು ಆತ್ಮವಿಶ್ವಾಸದ ಯುವತಿ ಎಂದು ಕರೆದುಕೊಂಡರೂ ಅಸ್ತಿತ್ವದ ಹುಡುಕಾಟದಲ್ಲಿರುವ ತಾನ್ಯಾ ಈ ಮೂವರ ಬದುಕಿನ ಕತೆ ಇದು. ಸಿದ್ಧ ಸೂತ್ರದ ಸಿನಿಮಾಗಳಂತೆ ಇತರ ಅಕರ್ಷಣೆಗಳಿಲ್ಲದ ಜರ್ನಿ ಸಿನಿಮಾಗಳಲ್ಲಿ ಪಾತ್ರಗಳ ಚಿತ್ರಣವೇ ಹೈಲೈಟ್‌. ಆ ಮಟ್ಟಿಗೆ ನಿರ್ದೇಶಕ ಆಕರ್ಷ್‌ ಇಲ್ಲಿ ಗೆದ್ದಿದ್ದಾರೆ. ಪಾತ್ರಗಳ ವ್ಯಕ್ತಿತ್ವಗಳಿಗೆ ಮತ್ತಷ್ಟು ಮೆರುಗು ನೀಡುವುದು ಸಾಧ್ಯವಾಗಿದ್ದಿದ್ದರೆ ಸಿನಿಮಾ ಪ್ರೇಕ್ಷಕರನ್ನು ಮತ್ತಷ್ಟು ಒಳಗೊಳ್ಳುತ್ತಿತ್ತು. ಅನುಭವದ ಕೊರತೆ ಇಲ್ಲಿ ನಿರ್ದೇಶಕರ ಮಿತಿಯಾಗಿರಬಹುದು.

ಇದನ್ನೂ ಓದಿ : ಚಿತ್ರ ವಿಮರ್ಶೆ | ಮುಸ್ಲಿಮರ ದೇಶಭಕ್ತಿ ಪ್ರಶ್ನಿಸುವವರ ಮುಖಕ್ಕೆ ಹಿಡಿದ ಕನ್ನಡಿ ‘ಮುಲ್ಕ್‌’

ಮೊದಲಾರ್ಧದಲ್ಲಿ ನಿಧಾನಗತಿಯಲ್ಲಿರುವ ಸಿನಿಮಾ, ಇಂಟರ್‌ವೆಲ್ ನಂತರ ವೇಗ ಪಡೆದುಕೊಳ್ಳುತ್ತದೆ. ಎಂದಿನಂತೆ ಇರ್ಫಾನ್‌ ಆರಾಮಾಗಿ ಪಾತ್ರ ತೂಗಿಸಿದ್ದಾರೆ. ಅವರಿಗೆಂದೇ ಸೃಷ್ಟಿಸಿರುವ ಪಾತ್ರದಂತಿದ್ದರೂ ಪ್ರೇಕ್ಷಕರಿಗೆ ಏಕತಾನತೆ ಕಾಡದಂತೆ ನೋಡಿಕೊಳ್ಳುತ್ತಾರೆ ಎನ್ನುವುದು ಇರ್ಫಾನ್‌ ಹೆಗ್ಗಳಿಕೆ. ದಕ್ಷಿಣದ ಸ್ಟಾರ್ ನಟ ದುಲ್ಕರ್ ಸಲ್ಮಾನ್‌ಗೆ ಇದು ಚೊಚ್ಚಲ ಬಾಲಿವುಡ್ ಸಿನಿಮಾ. ಪಾತ್ರದ ಹದ ಅರಿತು ಇರ್ಫಾನ್‌ಗೆ ಸಲೀಸಾಗಿ ಸಾಥ್ ನೀಡಿದ್ದಾರೆ ದುಲ್ಕರ್‌. ಸಿನಿಮಾದ ಸರಳತೆಗೆ ತಮ್ಮ ಪಾತ್ರವನ್ನು ಒಗ್ಗಿಸಿಕೊಂಡಿದ್ದಾರೆ. ತಾನ್ಯಾ ಪಾತ್ರವನ್ನು ಕಟ್ಟುವಲ್ಲಿ ನಿರ್ದೇಶಕರಿಗೆ ಕೊಂಚ ಗೊಂದಲವಿರುವಂತಿದೆ. ಈ ಮಿತಿಗಳ ನಡುವೆಯೂ ಮಿಥಿಲಾ ಪಾಲ್ಕರ್, ಪಾತ್ರದ ಅಂದ ಹೆಚ್ಚಿಸುತ್ತಾರೆ. ಚಿತ್ರದಲ್ಲಿ ಇನ್ನೇನೋ ಬೇಕಿತ್ತು ಎಂದು ಅನಿಸಿದರೂ ಒಂದು ಸರಳ, ಸುಂದರ, ಫೀಲ್‌ಗುಡ್‌ ಚಿತ್ರವಾಗಿ ‘ಕಾರ್ವಾನ್‌’ ಇಷ್ಟವಾಗುತ್ತದೆ.

ನಿರ್ದೇಶನ: ಆಕರ್ಷ್‌ ಖುರಾನಾ‌‌ | ನಿರ್ಮಾಣ: ರೋನ್ನಿ ಸ್ಕ್ರ್ಯೂವಾಲಾ, ಪ್ರೀತಿ ರತಿ ಗುಪ್ತಾ‌ | ಸಂಗೀತ: ಪ್ರತೀಕ್ ಖುಹಾದ್‌, ಅನುರಾಗ್‌ ಸೈಕಿಯಾ, ಇಮಾದ್ ಷಾ‌ | ಛಾಯಾಗ್ರಹಣ: ಅವಿನಾಶ್ ಅರುಣ್‌‌ | ತಾರಾಗಣ: ಇರ್ಫಾನ್ ಖಾನ್‌, ದುಲ್ಕರ್ ಸಲ್ಮಾನ್‌, ಮಿಥಿಲಾ ಪಾಲ್ಕರ್‌

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More