ಚಿತ್ರ ವಿಮರ್ಶೆ | ಮುಸ್ಲಿಮರ ದೇಶಭಕ್ತಿ ಪ್ರಶ್ನಿಸುವವರ ಮುಖಕ್ಕೆ ಹಿಡಿದ ಕನ್ನಡಿ ‘ಮುಲ್ಕ್‌’

ಬಿಡುಗಡೆ ಮುನ್ನ ಕೆಲ ಕಾರಣಗಳಿಗೆ ಸುದ್ದಿಯಾಗಿದ್ದ ‘ಮುಲ್ಕ್‌’ ಚಿತ್ರ ತೆರೆ ಕಂಡಿದೆ. ಉಗ್ರವಾದ, ಧರ್ಮ, ದೇಶಭಕ್ತಿಯಂಥ ಸೂಕ್ಷ್ಮ ವಿಷಯಗಳನ್ನು ಹೊಂದಿರುವ ಈ ಚಿತ್ರ, ಭಾರತದಲ್ಲಿರುವ ಅನೇಕರು ತಮ್ಮ ಗುರುತು, ಅಸ್ತಿತ್ವವನ್ನು ಸಾಬೀತು ಮಾಡಬೇಕಿರುವ ಈ ಹೊತ್ತಲ್ಲಿ ಇನ್ನಷ್ಟು ಮಹತ್ವ ಪಡೆದುಕೊಂಡಿದೆ

Terrorism

“The unlawful use of violence and intimidation, especially against civilians, in the pursuit of political aims.”

-ಬಂಧಿಸುವುದಕ್ಕೆ ಅವಕಾಶವಿದ್ದರೂ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿ ಉಗ್ರವಾದಿಯನ್ನು ಗುಂಡಿಕ್ಕಿ ಕೊಲ್ಲುತ್ತಾನೆ; ಅದೇ ಅಧಿಕಾರಿ ವಿಚಾರಣೆಯ ವೇಳೆ ಭಯೋತ್ಪಾದನೆಗೆ ನೀಡುವ ವ್ಯಾಖ್ಯಾನವೇ ಮೇಲಿನದು. ಭಯೋತ್ಪಾದನೆಗೂ ಧರ್ಮಕ್ಕೂ ಸಂಬಂಧವಿಲ್ಲ ಎಂಬುದನ್ನು ಒತ್ತಿ ಹೇಳಲು ಯತ್ನಿಸುವ ಅನುಭವ್‌ ಸಿನ್ಹಾ ನಿರ್ದೇಶನದ 'ಮುಲ್ಕ್‌' ಚಿತ್ರ, ಧರ್ಮ ಮತ್ತು ದೇಶಭಕ್ತಿಯ ನಡುವಿನ ಸಂಕೀರ್ಣ ವಿಷಯವನ್ನು ಅತ್ಯಂತ ಸೂಕ್ಷ್ಮವಾಗಿ ಹಾಗೂ ನೋಡುಗರಿಗೆ ತಟ್ಟುವಂತೆ ಕಟ್ಟಿಕೊಟ್ಟಿದೆ.

ದೇಶದಲ್ಲಿರುವ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಹೋಗಿ ಎಂದು ದೂಷಿಸುವ ಹೊಸ ಕಾಲದ ಬಿಸಿರಕ್ತದ ಹುಡುಗರು, ಧರ್ಮದ ಕನ್ನಡದ ಮೂಲಕ ನೋಡುವ ಮನಸ್ಸುಗಳು, ವಾಟ್ಸ್‌ಆಪ್‌ನಲ್ಲಿ ಹರಿದಾಡುವ ಸುಳ್ಳು ಇತಿಹಾಸವನ್ನು ನಂಬುವ ವಿದ್ಯಾವಂತರು, ಯಾರದೋ ಪ್ರೇರಣೆಗೆ ಬಲಿಯಾಗುವ ವಿವೇಚಾನರಹಿತ ಯುವಕರನ್ನು ಈ ಚಿತ್ರ ತನ್ನ ಚೌಕಟ್ಟಿಗೆ ಎಳೆದುಕೊಂಡು ಒಂದೊಂದಕ್ಕೂ ಉತ್ತರ ಕೊಡುವ ಯತ್ನ ಮಾಡಿದೆ.

ದೇಶ ವಿಭಜನೆಯಾದ ಮೇಲೆ ಮುಸ್ಲಿಮರ ದೇಶಾಭಿಮಾನವನ್ನು ಪ್ರಶ್ನಿಸುತ್ತಲೇ ಬಂದಿದೆ ಈ ದೇಶದ ಬಹುಸಂಖ್ಯಾತ ವರ್ಗ. ಅದು ಕಳೆದ ಕೆಲವು ದಶಕಗಳಲ್ಲಿ ಪಡೆದುಕೊಂಡಿರುವ ತಿರುವು ಹಿಂಸೆಯದ್ದು. ಗಡ್ಡ ಬಿಟ್ಟ ಯಾವುದೇ ಮುಸ್ಲಿಮನನ್ನು ಉಗ್ರವಾದಿಯಂತೆ ನೋಡುವಂತೆ ಮಾಡಿರುವ ಕೋಮುವಾದಿ ರಾಜಕಾರಣ, ಮುಸ್ಲಿಮರೆಂದರೆ ಉಗ್ರವಾದಿಗಳು ಎಂದು ಬಿಂಬಿಸಲೆತ್ನಿಸುವ ಮೂಲಭೂತವಾದಿ ಸಂಘಟನೆಗಳ ನಡುವೆ ಈ ನೆಲವನ್ನು ಒಪ್ಪಿ, ಅಪ್ಪಿ ಬದುಕುತ್ತಿರುವ ನಿಜವಾದ ಮುಸ್ಲಿಮರನ್ನು ಅನುಮಾನಿಸುತ್ತಿರುವುದನ್ನು ಅನುಭವ್‌ ಸಿನ್ಹಾ ಮನೋಜ್ಞವಾಗಿ ಕಟ್ಟಿಕೊಡುತ್ತಾರೆ.

ಮುರಾದ್‌ ಅಲಿ ಮೊಹಮ್ಮದ್‌ (ರಿಶಿ ಕಪೂರ್‌) ವಾರಾಣಸಿಯಲ್ಲಿ ವಕೀಲಿ ವೃತ್ತಿ ಮಾಡಿಕೊಂಡಿದ್ದಾರೆ. ಈತನದ್ದು ತುಂಬು ಕುಟುಂಬ. ಮೊಬೈಲ್‌ ಶಾಪ್‌ ಇಟ್ಟುಕೊಂಡ ತಮ್ಮ, ತಮ್ಮನ ಹೆಂಡತಿ, ಮಗಳು, ಲಂಡನ್‌ನಲ್ಲಿ ವಾಸಿಸುತ್ತಿರುವ ಮಗ (ಪ್ರತೀಕ್‌ ಬಬ್ಬರ್‌), ಆತನ ಹಿಂದೂ ಪತ್ನಿ ಆರತಿ (ತಾಪಸಿ ಪನ್ನು). ಆಸುಪಾಸಿನ ಹಿಂದೂ ಮಿತ್ರರಿಗೆ ರಾಮ್‌ ರಾಮ್‌ ಎಂದೇ ಶುಭ ಹಾರೈಸುತ್ತ ದಶಕಗಳಿಂದ ಬದುಕುತ್ತಿರುವ ಮುರಾದ್‌ ಅಲಿ, ದೇಶ ವಿಭಜನೆಯ ಸಂದರ್ಭದಲ್ಲಿ ಧರ್ಮಕ್ಕಿಂತ ದೇಶ ಮುಖ್ಯವೆಂದು ಭಾರತವನ್ನು ಆಯ್ಕೆ ಮಾಡಿಕೊಂಡು ಉಳಿದಾತ. ತನ್ನ ಹೆಂಡತಿಯೊಂದಿಗೆ ಇಳಿವಯಸ್ಸಿನಲ್ಲೂ ಸರಸದಿಂದ ಜೀವನಪ್ರೀತಿಯಿಂದ ಬದುಕುತ್ತಿರುವ ಈತನಿಗೆ ಏಕಾಏಕಿ ದೇಶಭಕ್ತಿಯನ್ನು ಸಾಬೀತು ಮಾಡುವ ಸಂದರ್ಭ ಎದುರಾಗುತ್ತದೆ.

ತಮ್ಮನ ಮಗ ಹದಿನಾರು ಮಂದಿ ಮುಗ್ಧರ ಸಾವಿಗೆ ಕಾರಣವಾಗುವ ಬಾಂಬ್‌ ದಾಳಿಯಲ್ಲಿ ಭಾಗಿಯಾಗುತ್ತಾನೆ. ಆತನನ್ನು ಬೆನ್ನುಹತ್ತುವ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿ ಜಾವೇದ್‌ (ರಜತ್‌ ಕಪೂರ್‌) ತನ್ನ ಧರ್ಮದವರು ದೇಶದ್ರೋಹ ಮಾಡಿದರೆ ಅವರಿಗೆ ಕ್ರೂರ ಸಾವೇ ಗತಿ ಎಂಬುದನ್ನು ಸಾರಬೇಕೆಂದು ಕೊಂದು ರಸ್ತೆಯಲ್ಲಿ ಹೆಣವನ್ನು ಎಳೆದಾಡಿಸಿ ಟಿವಿಗಳಿಗೆ ಆಹಾರ ಕೊಡುತ್ತಾನೆ.

ಈ ಇಡೀ ಬೆಳವಣಿಗೆಯಿಂದ, ಹಲವು ವರ್ಷಗಳಿಂದ ಮುರಾದ್‌ ಅಲಿ ಮತ್ತು ಅವರ ನೆರೆಯವರೊಂದಿಗೆ ಇದ್ದ ಸೌಹಾರ್ದ ಸಂಬಂಧ ಇದ್ದಕ್ಕಿದ್ದಂತೆ ಕರಗಿ ಮುರಾದ್‌ ಅಲಿ ಭಯೋತ್ಪಾದಕ, ಆತನ ಕುಟುಂಬದ ಸದಸ್ಯರು ಭಯೋತ್ಪಾದಕರು, ಪಾಕಿಸ್ತಾನಕ್ಕೆ ಹೋಗಬೇಕಾದವರೂ ಆಗಿಬಿಡುತ್ತಾರೆ. ಧರ್ಮದ ಕಾರಣಕ್ಕಾಗಿ ಈ ನೆಲಕ್ಕಿರುವ ನಿಷ್ಠೆಯನ್ನು ಪ್ರಶ್ನಿಸುವುದನ್ನು ಸಹಿಸದ ಮುರಾದ್‌ ಅಲಿ ಕೋರ್ಟ್‌ ಕಟಕಟೆಯಲ್ಲಿ ನಿಲ್ಲುತ್ತಾರೆ. ತನ್ನ ಸೊಸೆಯೊಂದಿಗೆ (ತಾಪಸಿ ಪನ್ನು) ವಾದ ಮಂಡಿಸಿ ಗೆಲ್ಲುವಲ್ಲಿ ಯಶಸ್ವಿಯಾಗುತ್ತಾರೆ. ಅನುಭವ್‌ ಸಿನ್ಹಾ ಸುಪ್ತವಾಗಿ, ಜನಜನಿತವಾಗಿರುವ ಹಿಂದೂ-ಮುಸ್ಲಿಮ್‌ ಕೋಮುಸಾಮರಸ್ಯದಲ್ಲಿ ಕಂಡಿರುವ ಬಿರುಕನ್ನು ಈ ಚಿತ್ರದ ಮೂಲಕ ಬಿಚ್ಚಿಟ್ಟಿದ್ದಾರೆ.

ಪ್ರಾಸಿಕ್ಯೂಷನ್‌ ಪರವಾಗಿ ವಾದ ಮಂಡಿಸುವ ಸಂತೋಷ್‌ ಆನಂದ್‌ (ಅಶುತೋಷ್ ರಾಣಾ) ಒಂದು ಶಾಯರಿಯನ್ನು ವ್ಯಂಗ್ಯವಾಗಿ ಹೇಳುತ್ತಾರೆ: “ನಾವಂತೂ ಸ್ನೇಹ ಬೆಳೆಸುವುದಕ್ಕೆ ಸಿದ್ಧವೇ ಇದ್ದೇವೆ, ಆದರೆ ಅವರೇ ಸ್ನೇಹಕ್ಕೆ ಸಿದ್ಧರಿಲ್ಲ.” ಈ ಮೂಲಕವೇ ನಿರ್ದೇಶಕರು ಎರಡು ಧರ್ಮಗಳ ನಡುವೆ 'ಅವರು' ಮತ್ತು 'ನಾವು' ಎಂಬ ಬೇಧವನ್ನು ಎತ್ತಿ ಹಿಡಿಯುತ್ತಾರೆ. ಈ ಜಗಳದಲ್ಲಿ ಏನೂ ತಿಳಿಯದೆ ನಗುವವರೂ, ರಂಜನೆ ಪಡೆಯುವವರು ಇದ್ದಾರೆ ಎಂಬುದನ್ನು ಕೋರ್ಟ್‌ ರೂಮ್‌ ಸೀನಿನ ಮೂಲಕ ಕಟ್ಟಿಕೊಡುತ್ತಾರೆ.

ಕಲಾಪವಾದದಲ್ಲಿ ತಮ್ಮ ವಾದ ಮಂಡಿಸುವುದಕ್ಕೆ ಅವಕಾಶ ಪಡೆದಾಗ ಮುರಾದ್‌ ಅಲಿ, "ಒಸಾಮಾ ಬಿನ್‌ ಲಾಡೆನ್‌ ಗಡ್ಡಕ್ಕೂ, ನನ್ನ ಗಡ್ಡಕ್ಕೂ ವ್ಯತ್ಯಾಸ ಕಂಡುಕೊಳ್ಳಲಾಗದೆ ಇದ್ದರೆ ನನ್ನ ತಪ್ಪೇ?" ಎಂದು ಪ್ರಶ್ನಿಸುವ ಮೂಲಕ ಮುಸ್ಲಿಂ ಧರ್ಮದ ಬಗ್ಗೆ ಸಮಾಜದಲ್ಲಿ ಪ್ರಬಲವಾಗಿ ಬೇರೂರಿರುವ ಪೂರ್ವಗ್ರಹವನ್ನು ಎತ್ತಿಹಿಡಿಯುತ್ತಾರೆ. ಅಂತಿಮವಾಗಿ ನ್ಯಾಯಮೂರ್ತಿಗಳ ತೀರ್ಪು, ಪ್ರತಿಯೊಬ್ಬ ಭಾರತೀಯ ಕೇಳಿ ಮನನ ಮಾಡಿಕೊಳ್ಳಬೇಕಾದ ಮಾತುಗಳಾಗಿ ಕೇಳಿಸುತ್ತವೆ.

"ಎಲ್ಲಿವರೆಗೂ ದೇವಮಂದಿರಗಳಲ್ಲಿ ಭಾಷಣಗಳು, ಸಂಸತ್ತಿನಲ್ಲಿ ಪೂಜೆಗಳು ನಡೆಯುತ್ತವೋ ಅಲ್ಲಿಯವರೆಗೂ ಕೋಮು ಸಾಮರಸ್ಯ ಹಾಳುಮಾಡುವ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಇಂಥ ವಿದ್ಯಮಾನಗಳು ಚುರುಕಾಗಿವೆ ಎಂದರೆ ಕ್ಯಾಲೆಂಡರ್‌ ನೋಡಿ, ಚುನಾವಣೆ ಹತ್ತಿರವಿರಬಹುದು,'' ಎಂದು ಕೋಮುಗಲಭೆಗಳ ಹಿಂದಿನ ಉದ್ದೇಶ ಅರ್ಥ ಮಾಡಿಸುವ ಪ್ರಯತ್ನ ಮಾಡುತ್ತಾರೆ.

ಹಾಗೇ ವಾದಕ್ಕಾಗಿ ಅಬ್ದುಲ್‌ ಕಲಾಂ, ಬಿಸ್ಮಿಲ್ಲಾ ಖಾನ್‌ ಮುಸ್ಲಿಂ ಸಮುದಾಯದ ಮಹಾನ್‌ ವ್ಯಕ್ತಿಗಳು, ಅಪವಾದಗಳು ಎಂದು ಹೇಳಿದ್ದನ್ನು ಖಂಡಿಸಿ, "ಇದನ್ನು ನೀವು ವಾಟ್ಸ್‌ಆಪ್‌ನಲ್ಲಿ ಓದಿದಿರೇನು? ಅದೇ ಸಮಯವನ್ನು ಇತಿಹಾಸ ಓದುವುದಕ್ಕೆ ವಿನಿಯೋಗಿಸಿದ್ದರೆ, ಬಹಳಷ್ಟು ಜನರ ಪರಿಚಯವಾಗುತ್ತಿತ್ತು,” ಕುಟುಕುತ್ತಾರೆ. ಹಾಗೇ, ಹಾದಿ ತಪ್ಪುವ ಮಕ್ಕಳ ಬಗ್ಗೆ ಎಚ್ಚರ ವಹಿಸಬೇಕೆಂದು ಮುರಾದ್‌ ಅಲಿಗೆ ಬುದ್ಧಿ ಹೇಳುವ ಸಂಗತಿಯೂ, ವಿವೇಚನೆಯಿಲ್ಲದೆ ತಪ್ಪು ದಾರಿ ಹಿಡಿಯುವ ಮಕ್ಕಳ ಬಗ್ಗೆ ಎಚ್ಚರ ವಹಿಸುವಂತೆ ಇಡೀ ಸಮುದಾಯಕ್ಕೆ ಬುದ್ಧಿ ಹೇಳಿದಂತೆಯೂ ಇದೆ.

ಸತ್ಯಘಟನೆಗಳನ್ನು ಆಧರಿಸಿ ಕತೆ ಹೆಣೆದಿರುವ ಸಿನ್ಹಾ, ಮುಸ್ಲಿಂ ಸಮುದಾಯ ಇಂಥ ಸ್ಥಿತಿ ಎದುರಿಸಬೇಕಾಗಿ ಬಂದ ಸಂದರ್ಭ, ಇಡೀ ಸಮುದಾಯವನ್ನು ಉಗ್ರವಾದಿಗಳೆಂದು ಕರೆಯುವ ರಾಜಕಾರಣವನ್ನು ಅರ್ಥ ಮಾಡಿಸುವ ಯತ್ನ ಮಾಡಿದ್ದಾರೆ.

ಎರಡು ಹಾಡುಗಳ ಹೊರತಾಗಿ ಮತ್ತಾವುದೇ ಸಿದ್ಧ ಸೂತ್ರಗಳಿಲ್ಲದ ಈ ಚಿತ್ರ ಎರಡು ಗಂಟೆ ಇಪ್ಪತ್ತು ನಿಮಿಷಗಳ ಕಾಲ ನಿರಾಯಾಸವಾಗಿ ನೋಡಿಸಿಕೊಳ್ಳುತ್ತದೆ. ಮೊದಲರ್ಧ ಭಾಗ ಅಬ್ಬರವೇ ಇಲ್ಲದೆ ಮುಗಿದುಹೋಗುತ್ತದೆ. ಎರಡನೆಯ ಅರ್ಧ ಬಿಗಿಯಾದ ನಿರೂಪಣೆಯ ಮೂಲಕ ಪ್ರೇಕ್ಷಕನ್ನು ಗಟ್ಟಿಯಾಗಿ ಕೂರಿಸುತ್ತದೆ.

ಇದನ್ನೂ ಓದಿ : ಚಿತ್ರ ವಿಮರ್ಶೆ | ಬದುಕಿನ ಸರಳತೆ ಹೇಳುವ ಜೀವನಪ್ರೀತಿಯ ಸಿನಿಮಾ ‘ಕಾರ್ವಾನ್‌’

ಸ್ವಾತಂತ್ರ್ಯ ದಿನಾಚರಣೆ ಹತ್ತಿರವಾಗುತ್ತಿದ್ದು, ದೇಶಭಕ್ತಿ ಅಬ್ಬರಿಸುವ ಹೊತ್ತಲ್ಲಿ, ಧರ್ಮಗಳ ಚೌಕಟ್ಟಿಲ್ಲದೇ ಪ್ರತಿಯೊಬ್ಬ ದೇಶವಾಸಿಯೂ ಭಾರತೀಯನೇ ಎಂಬುದನ್ನು 'ಮುಲ್ಕ್‌' ಚಿತ್ರ ಸಾರುತ್ತದೆ. ಗಡಿರೇಖೆಗಳಿಗಿಂತ ಅಲ್ಲಿ ಬದುಕುವ, ಜನ, ಸಂಸ್ಕೃತಿ, ಅವರ ನಂಬಿಕೆ, ಸಹಬಾಳ್ವೆಗಳು ದೊಡ್ಡದು ಎಂಬುದನ್ನು 'ಮುಲ್ಕ್‌' ಪ್ರತಿಧ್ವನಿಸಲೆತ್ನಿಸುತ್ತದೆ.

ರಿಶಿ ಕಪೂರ್‌ ಮತ್ತು ತಾಪಸಿ ಪನ್ನು ತಮ್ಮ ನಟನೆಯ ಮೂಲಕ ಆವರಿಸಿಕೊಳ್ಳುತ್ತಾರೆ. ಪಿಂಕ್‌ ಚಿತ್ರದಲ್ಲಿ ಕೋರ್ಟ್‌ ರೂಮಿನಲ್ಲಿ ಕಟಕಟೆಯಲ್ಲಿ ನಿಂತಿದ್ದ ತಾಪಸಿ, ಈ ಚಿತ್ರದಲ್ಲಿ ವಕೀಲರಾಗಿ ಪ್ರೇಕ್ಷಕರ ಮನ ಗೆಲ್ಲುತ್ತಾರೆ. ರಿಶಿ ಕಪೂರ್‌ ಅವರ ಅದ್ಭುತ ಅಭಿನಯ ಮನಸ್ಸಿನಲ್ಲಿ ಅಚ್ಚೊತ್ತುತ್ತದೆ. ನೀನಾ ಗುಪ್ತಾ, ಪ್ರತೀಕ್‌ ಬಬ್ಬರ್‌, ಮನೋಜ್‌ ಪಾಹ್ವಾ, ಅಶಿಶ್‌ ವಿದ್ಯಾರ್ಥಿ, ಜಡ್ಜ್‌ ಪಾತ್ರದ ಕುಮುದ್‌ ಮಿಶ್ರಾ ಅಭಿನಯ ಚಿತ್ರವನ್ನು ಜೀವಂತವಾಗಿಸುತ್ತವೆ.

ನಿರ್ದೇಶನ: ಅಭಿನವ್‌ ಸಿನ್ಹಾ‌‌ | ನಿರ್ಮಾಣ: ಅನುಭವ್‌ ಸಿನ್ಹಾ-ದೀಪಕ್ ಮುಕುಟ್ | ಸಂಗೀತ: ಪ್ರಸಾದ್ ಸಾಶ್ಟೆ, ಅನುರಾಗ್ ಸೈಕಿಯಾ, ಮಂಗೇಶ್‌ ಧಾಕಡೆ | ಛಾಯಾಗ್ರಹಣ: ಈವನ್ ಮುಲ್ಲಿಗನ್ | ತಾರಾಗಣ: ರಿಶಿ ಕಪೂರ್, ತಾಪಸಿ ಪನ್ನು, ರಜತ್ ಕಪೂರ್‌, ನೀನಾ ಗುಪ್ತಾ, ಅಶುತೋಷ್ ರಾಣಾ, ಮನೋಜ್‌ ಪಾಹ್ವಾ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More