ಅಭಿಮಾನಿಗೆ ಬರೆದ ಪತ್ರದಲ್ಲಿರುವ ಅಕ್ಷರಗಳು ನಿಜಕ್ಕೂ ವರನಟ ರಾಜ್‌ ಕೈಬರಹವೇ?

ಅಭಿಮಾನಿಯೊಬ್ಬರಿಗೆ ನಟ ರಾಜಕುಮಾರ್ ಬರೆದದ್ದು ಎನ್ನುವ ಒಕ್ಕಣೆಯೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಪತ್ರವೊಂದು ಓಡಾಡುತ್ತಿದೆ. ಚಿತ್ರರಂಗದ ಪ್ರಮುಖರೇ ಪತ್ರ ಟ್ವೀಟ್‌ ಮಾಡಿದ್ದಾರೆ. ಆದರೆ, ಈ ಕುರಿತ ಸತ್ಯಾಂಶವನ್ನು ಹಿರಿಯ ಪತ್ರಕರ್ತ ರುಕ್ಕೋಜಿ ಬಹಿರಂಗಪಡಿಸಿದ್ದಾರೆ

“ಒಲವಿನ ಸೋದರಿ ಬಿ ಸಿ ಗಾಯತ್ರಿಯವರಿಗೆ, ನಮಸ್ಕಾರ - ತುಂಬು ಅಭಿಮಾನದಿಂದ ತಾವು ನನಗೆ 25/1/81ರಲ್ಲಿ ಬರೆದ ಪತ್ರ ತಲುಪಿದೆ. ವಂದನೆಗಳು..”

-ಹೀಗೆ ಶುರುವಾಗುವ ಪತ್ರದ ಕೊನೆಯಲ್ಲಿ ವರನಟ ರಾಜ್‌ ಸಹಿ ಇದೆ. ಅಭಿಮಾನಿಗಳನ್ನು ‘ಅಭಿಮಾನಿ ದೇವರು’ ಎಂದೇ ಕರೆಯುತ್ತಿದ್ದ ರಾಜ್‌ ಅವರನ್ನು ಅತ್ಯಂತ ಆತ್ಮೀಯತೆಯಿಂದ, ಪ್ರೀತಿಯಿಂದ ಕಾಣುತ್ತಿದ್ದರು. ಈ ಪತ್ರದ ಒಕ್ಕಣೆಯೂ ಇದಕ್ಕೆ ಸಾಕ್ಷ್ಯ ನುಡಿಯುತ್ತದೆ. ಈ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚಲಾವಣೆಯಲ್ಲಿದೆ. ಚಿತ್ರರಂಗದ ಪ್ರಮುಖರು ಪತ್ರವನ್ನು ಟ್ವೀಟ್ ಮಾಡಿ, ರಾಜ್ ಕುರಿತು ಅಭಿಮಾನ ವ್ಯಕ್ತಪಡಿಸಿದ್ದಾರೆ. ಪತ್ರದಲ್ಲಿರುವ ಮುದ್ದಾದ ಬರಹ ರಾಜ್‌ ಅವರದ್ದು ಎಂದು ಬರೆದಿದ್ದಾರೆ. ಆದರೆ, ನಿಜಕ್ಕೂ ಪತ್ರದಲ್ಲಿರುವ ಅಕ್ಷರಗಳು ರಾಜ್‌ ಕೈಬರಹವೇ?

ಸಾಮಾಜಿಕ ಜಾಲತಾಣಗಳಲ್ಲಿ ಚಲಾವಣೆಯಲ್ಲಿ ಇರುವ ಪತ್ರ

ಆದರೆ, “ಇದು ರಾಜ್‌ ಕೈಬರಹವಲ್ಲ,” ಎನ್ನುತ್ತಾರೆ ಹಿರಿಯ ಪತ್ರಕರ್ತ ರುಕ್ಕೋಜಿ. ಎರಡು ಬೃಹತ್‌ ಸಂಪುಟಗಳಲ್ಲಿ ಬಂದಿರುವ 'ಡಾ.ರಾಜಕುಮಾರ್‌ ಸಮಗ್ರ ಚರಿತ್ರೆ' ಕೃತಿಯ ಲೇಖಕರು ರುಕ್ಕೋಜಿ. ಅವರ ಕೃತಿಯಲ್ಲಿ ರಾಜ್ ಪತ್ರಗಳು, ಕೈಬರಹ ಮುದ್ರಿತವಾಗಿವೆ. "ಆಗ ರಾಜ್‌ ಅವರ ಮದರಾಸಿನ ವಿಳಾಸಕ್ಕೆ ಅಭಿಮಾನಿಗಳಿಂದ ನಿತ್ಯ ಹಲವಾರು ಪತ್ರಗಳು ಬರುತ್ತಿದ್ದವು. ಬೆಳಗಿನ ವ್ಯಾಯಾಮ ಮುಗಿಸಿದ ನಂತರ ರಾಜ್‌ಗೆ ಈ ಪತ್ರಗಳನ್ನು ಓದುವುದೊಂದು ದಿನಚರಿಯಾಗಿತ್ತು. ಪ್ರತಿ ಪತ್ರಗಳಿಗೆ ಉತ್ತರಿಸಲು ಅವರಿಗೆ ಸಮಯ ಇರುತ್ತಿರಲಿಲ್ಲ. ಆಗ ಅವರಿಗೆ ವರದಪ್ಪ (ರಾಜ್‌ ಸಹೋದರ), ಚಿತ್ರಸಾಹಿತಿ ಚಿ ಉದಯಶಂಕರ್‌, ನಿರ್ದೇಶಕ ಚಿ ದತ್ತರಾಜ್‌ ನೆರವಾಗುತ್ತಿದ್ದರು. ಅಭಿಮಾನಿಗಳ ಪತ್ರಗಳಿಗೆ ಇವರುಗಳು ಪ್ರತಿಕ್ರಿಯಿಸುತ್ತಿದ್ದರು. ರಾಜ್‌ ಈ ಬರಹವನ್ನೊಮ್ಮೆ ಗಮನಿಸಿ ಸಹಿ ಹಾಕುತ್ತಿದ್ದರು. ಪತ್ರ ಮತ್ತು ರಾಜ್‌ರ ಒಂದು ಫೋಟೋ ಅಭಿಮಾನಿಗಳನ್ನು ತಲುಪುತ್ತಿತ್ತು. ಇಲ್ಲಿರೋದು ಚಿ ಉದಯಶಂಕರ್‌ ಅವರ ಅಕ್ಷರಗಳು. ಕೊನೆಯಲ್ಲಿ ರಾಜ್ ಸಹಿ ಹಾಕಿದ್ದಾರೆ," ಎಂದು ಸ್ಪಷ್ಟೀಕರಣ ನೀಡುತ್ತಾರೆ ರುಕ್ಕೋಜಿ.

ವರನಟ ರಾಜಕುಮಾರ್ ಕೈಬರಹ

ರಾಜ್‌ ಪತ್ರದ ಬಗ್ಗೆ ಸ್ಪಷ್ಟೀಕರಣ ನೀಡುವ ರುಕ್ಕೋಜಿಯವರು, ರಾಜ್ ಕೈಬರಹದ ಪತ್ರವೊಂದನ್ನು ಅನುಮೋದಿಸುತ್ತಾರೆ. “ಚಿತ್ರೀಕರಣ ನಿಮಿತ್ತ ಸದಾ ಹೊರಗಿರುತ್ತಿದ್ದ ರಾಜಕುಮಾರ್‌ ಅವರು ತಮ್ಮ ಕುಟುಂಬದ ಸದಸ್ಯರು, ಆತ್ಮೀಯರು, ಸ್ನೇಹಿತರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದರು. ನೆನಪು ಅತಿಯಾಗಿ ಕಾಡಿದಾಗ ಅವರೇ ಖುದ್ದಾಗಿ ಪತ್ರ ಬರೆಯುತ್ತಿದ್ದರು. ಹಾಗೆ ಅಪರೂಪಕ್ಕೊಮ್ಮೆ ಪತ್ರ ಬರೆದರೂ, ತುಂಬಾ ಆತ್ಮೀಯವಾಗಿ ಬರೆಯುತ್ತಿದ್ದರು. ಅದಕ್ಕೆ ಅವರ ಹಲವಾರು ಪತ್ರಗಳು ಸಾಕ್ಷಿಯಾಗಿವೆ,” ಎನ್ನುತ್ತಾರವರು.

ರಾಜ್ ಪತ್ರದ ಕುರಿತು ನಟ ಜಗ್ಗೇಶ್ ಟ್ವೀಟ್
ಇದನ್ನೂ ಓದಿ : ಟೀಸರ್‌ | ಟ್ರೆಂಡ್‌ ಆಯ್ತು ನಿಖಿಲ್‌ ಕುಮಾರ್‌ ನಟನೆಯ ‘ಸೀತಾರಾಮ ಕಲ್ಯಾಣ’

ಆಗೆಲ್ಲ ಕಲಾವಿದರು ಹಾಗೂ ಅಭಿಮಾನಿಗಳ ಮಧ್ಯೆ ಸೇತುವಾಗಿದ್ದುದೇ ಪತ್ರಗಳು. ಜನಪ್ರಿಯ ತಾರೆ ರಾಜ್‌ ಅವರಿಗೆ ಅಭಿಮಾನಿಗಳಿಂದ ಪ್ರತಿನಿತ್ಯ ಹಲವಾರು ಪತ್ರಗಳು ಬರುತ್ತಿದ್ದವು. ಈ ಪತ್ರಗಳನ್ನು ಪ್ರೀತಿಯಿಂದ ಓದುತ್ತಿದ್ದ ರಾಜ್‌, ತಮ್ಮ ಪ್ರತಿಕ್ರಿಯೆ ಅಭಿಮಾನಿಗಳಿಗೆ ತಲುಪುವಲ್ಲಿ ಆಸ್ಥೆ ವಹಿಸುತ್ತಿದ್ದರು. ಚಿತ್ರೀಕರಣದ ಅತಿಯಾದ ಒತ್ತಡದಿಂದ ತಾವೇ ಖುದ್ದಾಗಿ ಪ್ರತಿಕ್ರಿಯಿಸಲು ಹೆಚ್ಚಿನ ಬಾರಿ ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಅಗ ರಾಜ್‌ ಅಭಿಪ್ರಾಯಗಳಿಗೆ ವರದಪ್ಪ, ಚಿ ಉದಯಶಂಕರ್‌, ಚಿ ದತ್ತರಾಜ್‌ ಅಕ್ಷರ ರೂಪ ನೀಡುತ್ತಿದ್ದರು. ಪತ್ರವನ್ನೊಮ್ಮೆ ಓದಿ ರಾಜ್‌ ಕೊನೆಯಲ್ಲಿ ತಮ್ಮ ಹಸ್ತಾಕ್ಷರ ಹಾಕುತ್ತಿದ್ದರು. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚಾಲ್ತಿಯಲ್ಲಿರುವ ಪತ್ರವೂ ಅಂಥದ್ದೇ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More