ನಿರ್ದೇಶಕನ ಬಂಧನ; ವಿವಾದದಲ್ಲಿ ‘ದಿ ಆಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌’

ಬಹುನಿರೀಕ್ಷಿತ ರಾಜಕೀಯ ಚಿತ್ರ ‘ದಿ ಆಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌’ ಘೋಷಣೆಯಾದ ಮೊದಲ ದಿನದಿಂದಲೂ ಸುದ್ದಿಯಲ್ಲಿದೆ. ಸಂಜಯ್‌ ಬರುವ ಬರೆದ ಇದೇ ಹೆಸರಿನ ಪುಸ್ತಕ ಆಧರಿಸಿದ ಈ ಚಿತ್ರವನ್ನು ತೆರೆಗೆ ತರಲು ಇಚ್ಛಿಸಿದ್ದ ನಿರ್ದೇಶಕ ವಿಜಯ್‌ ಗುಟ್ಟೆ ಬಂಧನದಿಂದ ಚಿತ್ರಕ್ಕೆ ರಾಜಕೀಯ ಬಣ್ಣ ಬಂದಿದೆ

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರಿಗೆ ಮಾಧ್ಯಮ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದ ಸಂಜಯ್‌ ಬರುವ ಅವರು ೨೦೧೪ರಲ್ಲಿ ಹೊರತಂದ ಪುಸ್ತಕ 'ದಿ ಆಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌.' ಈ ಕೃತಿ ಹೊರಬಂದಾಗ ಮನಮೋಹನ್‌ ಸಿಂಗ್‌ ಇನ್ನೂ ಅಧಿಕಾರದಲ್ಲಿದ್ದರು.

ಬಿಜೆಪಿ ಈ ಕೃತಿಯನ್ನು ಆಧರಿಸಿ ೨೦೧೪ರ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಮನಮೋಹನ್‌ ಸಿಂಗ್‌ ಅವರ ಮೇಲೆ ದಾಳಿ ನಡೆಸಿತ್ತು. ಬರುವ ಅವರ ಕೃತಿ ರಾಜಕೀಯ ಚರ್ಚೆಗೆ ಕಾರಣವಾದದ್ದನ್ನು ಗಮನಿಸಿದ ಯುವ ಉತ್ಸಾಹಿ ವಿಜಯ್‌ ಗುಟ್ಟೆ, ೨೦೧೭ರ ಅಂತ್ಯದಲ್ಲಿ ತೆರೆಗೆ ತರುವುದಾಗಿ ಘೋಷಣೆ ಮಾಡಿಯೇಬಿಟ್ಟರು.

ವಿಜಯ್‌ ಗುಟ್ಟೆ, ‘ಬದ್ಮಾಶಿಯಾ’, ‘ಎಮೋಷನಲ್‌ ಅತ್ಯಾಚಾರ್’ ಚಿತ್ರಗಳ ನಿರ್ಮಾಪಕರು. 'ದಿ ಆಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌' ಮೂಲಕ ನಿರ್ದೇಶಕರಾಗಲು ಸಿದ್ಧರಾಗಿದ್ದರು. ಈ ವರ್ಷದ ಏಪ್ರಿಲ್‌ ತಿಂಗಳಲ್ಲಿ ಫೋಟೋ ಶೂಟ್‌ ಆರಂಭಿಸಿದ್ದ ವಿಜಯ್‌, ಮನಮೋಹನ್‌ ಸಿಂಗ್‌ ಸೇರಿದಂತೆ ಯುಪಿಎನಲ್ಲಿ ಪ್ರಮುಖ ವ್ಯಕ್ತಿಗಳನ್ನು ಹೋಲುವ ಪಾತ್ರಧಾರಿಗಳನ್ನು ಹುಡುಕಿ ಸಾಮಾಜಿಕ ಮಾಧ್ಯಮಗಳ ಮೂಲಕ ಗಮನ ಸೆಳೆದಿದ್ದರು.

ಕಳೆದ ತಿಂಗಳು ಬಿಡುಗಡೆಯಾಗಿತ್ತು ಚಿತ್ರದ ಟೀಸರ್‌

ಈಗ ಗುಟ್ಟೆ ಅವರು ಅನ್ಯಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಸರಕು ಮತ್ತು ಸೇವಾ ತೆರಿಗೆಯಲ್ಲಿ ೩೪ ಕೋಟಿ ರು. ವಂಚನೆ ಮಾಡಿದ ಆರೋಪದ ಮೇಲೆ ಆಗಸ್ಟ್‌ ೧೪ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದಾರೆ. ೧೩೨ (೧) (ಸಿ) ಅಡಿ ಪ್ರಕರಣ ದಾಖಲಾಗಿದ್ದು, ಗುಟ್ಟೆ ಅವರ ವಿಆರ್‌ಜಿ ಡಿಜಿಟಲ್‌ ಕಾರ್ಪ್‌ ಪ್ರೈವೇಟ್‌ ಲಿಮಿಟೆಡ್‌ ೧೪೯ ನಕಲಿ ರಸೀದಿಗಳ ಮೂಲಕ ಹಣವನ್ನು ಸಂಗ್ರಹಿಸಿದೆ ಎಂಬ ಆರೋಪ ಬಂಧನಕ್ಕೆ ಕಾರಣವಾಗಿದೆ. ಆದರೆ, ಈ ಬಂಧನಕ್ಕೆ ತೆರಿಗೆ ವಂಚನೆಯೇ ಕಾರಣವೋ ಅಥವಾ ರಾಜಕೀಯ ಪ್ರೇರಣೆ ಇದೆಯೋ ಎಂಬುದು ಈ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಈ ಚಿತ್ರ ಸೆಟ್ಟೇರುವುದಕ್ಕೆ ಸಿದ್ಧವಾಗಿದ್ದಾಗ, ಆಗ ಸೆನ್ಸಾರ್‌ ಬೋರ್ಡ್‌ ಮುಖ್ಯಸ್ಥರಾಗಿದ್ದ ಪೆಹಲಾಜ್‌ ನಿಹಲಾನಿ, ಮನಮೋಹನ್‌ ಸಿಂಗ್‌ ಮತ್ತು ರಾಹುಲ್‌ ಗಾಂಧಿ ಅವರಿಂದ ಎನ್‌ಒಸಿ ತರಲು ನಿರ್ದೇಶಕರಿಗೆ ಸೂಚಿಸಿದ್ದರು. ಮನಮೋಹನ್‌ ಸಿಂಗ್‌ ಪಾತ್ರಕ್ಕೆ ಬಿಜೆಪಿಯ ಹಿರಿಯ ಸದಸ್ಯ ಅನುಪಮ್‌ ಖೇರ್‌ ಆಯ್ಕೆಯಾದಾಗ ಮತ್ತೊಂದು ಸುತ್ತಿನ ವಿವಾದ, ಚರ್ಚೆಗಳು ನಡೆದಿದ್ದವು.

‘ದಿ ಆಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌’ ಚಿತ್ರದ ತಾರಾ ಬಳಗ

ಕಾಂಗ್ರೆಸ್‌ ಟೀಕಿಸುವ ಕೃತಿ ಎಂಬ ಕಾರಣಕ್ಕೆ ಅನುಪಮ್‌ ಖೇರ್‌ ಚಿತ್ರದಲ್ಲಿ ನಟಿಸಲು ಒಪ್ಪಿದರೇ ಎಂದು ಅನೇಕರು ಖೇರ್‌ ಅವರ ಕಾಲೆಳೆದಿದ್ದರು. ವಿಜಯ್‌ ಗುಟ್ಟೆ ಬಂಧನದ ಹಿನ್ನೆಲೆಯಲ್ಲಿ ಎನ್‌ಸಿಪಿ ಅನುಪಮ್‌ ಖೇರ್‌ ಅವರ ಮೇಲೆ ದಾಳಿ ಆರಂಭಿಸಿದ್ದು, ವಿವಾದಕ್ಕೆ ಇನ್ನೊಂದು ಆಯಾಮವನ್ನು ನೀಡಿದೆ.

ಇದನ್ನೂ ಓದಿ : ಚಿತ್ರ ವಿಮರ್ಶೆ | ಮುಸ್ಲಿಮರ ದೇಶಭಕ್ತಿ ಪ್ರಶ್ನಿಸುವವರ ಮುಖಕ್ಕೆ ಹಿಡಿದ ಕನ್ನಡಿ ‘ಮುಲ್ಕ್‌’

ಶನಿವಾರ ಹೇಳಿಕೆ ನೀಡಿರುವ ಎನ್‌ಸಿಪಿ, "ಹಗರಣದ ಹಣದಿಂದ ಸಿದ್ಧವಾಗುತ್ತಿರುವ ಚಿತ್ರದಲ್ಲಿ ಅನುಪಮ್‌ ಖೇರ್‌ ಮುಂತಾದವರ ಕಲಾವಿದರಿಗೆ ಸಂಭಾವನೆಯನ್ನು ಅದೇ ಹಣದಿಂದ ನೀಡಲಾಗುತ್ತಿದೆ. ಎಲ್ಲ ವಿಷಯಗಳ ಮೇಲೂ ನೈತಿಕತೆ ಪಾಠ ಮಾಡುವ ಅನುಪಮ್‌ ಖೇರ್‌ ಅವರಿಗೂ ಇದೇ ಹಗರಣದ ಹಣ ನೀಡಲಾಗುತ್ತಿದೆ ಎಂಬ ಮೇಲೆ ಸಂಪೂರ್ಣ ತನಿಖೆಯಾಗಬೇಕು,'' ಎಂದು ಹೇಳಿಕೆ ನೀಡಿದೆ.

ಈ ಚಿತ್ರದ ಕೇಂದ್ರಬಿಂದು, ಮುಖ್ಯಪಾತ್ರಧಾರಿಯಾದ ಅನುಪಮ್‌ ಖೇರ್‌ ಈ ಬಗ್ಗೆ ಇದುವರೆಗೂ ಯಾವುದೇ ಹೇಳಿಕೆ ನೀಡಿಲ್ಲ. ಆದರೆ, ಈ ಚಿತ್ರದಿಂದ ಅನುಪಮ್‌ ಖೇರ್‌ ಹೊರನಡೆಯುವರೇ ಎಂಬ ಪ್ರಶ್ನೆಯನ್ನಂತೂ ಟ್ವೀಟಿಗರು ಎಸೆಯುತ್ತಲೇ ಇದ್ದಾರೆ. ‘ಆಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌’ ಚಿತ್ರಕ್ಕೆ ಆಕ್ಸಿಡೆಂಟ್‌ ಆಗಿದೆ ಎಂಬ ತಮಾಷೆ ಚಾಲ್ತಿಯಲ್ಲಿದೆ.

ಬಹುತೇಕ ಎಲ್ಲ ಪಾತ್ರಗಳ ಆಯ್ಕೆ ಮುಗಿಸಿ ನಿರ್ದೇಶಿಸಿದ್ದ ವಿಜಯ್‌, ಈ ವರ್ಷಾಂತ್ಯಕ್ಕೆ ಚಿತ್ರವನ್ನು ತೆರೆಗೆ ತರುವ ಉತ್ಸಾಹದಲ್ಲಿದ್ದರು. ಆದರೆ, ಈಗ ಅವರೇ ಬಂಧನಕ್ಕೆ ಒಳಗಾಗಿರುವುದು ಹಲವು ಆಯಾಮದ ಚರ್ಚೆಗಳಿಗೆ ಕಾರಣವಾಗಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More