ಜನುಮದಿನ | ಕಿಶೋರ್‌ ಕುಮಾರ್‌ರಿಂದ ಕನ್ನಡದ ‘ಆಡೂ ಆಟ ಆಡೂ’ ಹಾಡಿಸಿದ್ಹೇಗೆ?

ಖ್ಯಾತ ಗಾಯಕ ಕಿಶೋರ್ ಕುಮಾರ್‌ ಜನ್ಮದಿನವಿಂದು (ಆ.4). ನಟ, ನಿರ್ಮಾಪಕ ದ್ವಾರಕೀಶ್‌ ತಮ್ಮ ‘ಕುಳ್ಳ ಏಜೆಂಟ್‌ 000’ ಚಿತ್ರಕ್ಕೆ ಕಿಶೋರ್‌ ಅವರಿಂದ ಹಾಡಿಸಿದ್ದರು. ಕಿಶೋರ್ ಜನ್ಮದಿನದ ಈ ಸಂದರ್ಭದಲ್ಲಿ ದ್ವಾರಕೀಶ್‌, ‘ಆಡೂ ಆಟ ಆಡೂ’ ಹಾಡು ರೂಪುಗೊಂಡ ಬಗೆಯನ್ನು ನೆನೆದಿದ್ದಾರೆ

ಎಪ್ಪತ್ತರ ದಶಕದ ಹಿಂದಿ ಚಿತ್ರರಂಗದಲ್ಲಿ ಗಾಯಕನಾಗಿ ಕಿಶೋರ್ ಕುಮಾರ್‌ ದೊಡ್ಡ ಹೆಸರು ಮಾಡಿದ್ದರು. ಆತ ಉತ್ತಮ ನಟ ಕೂಡ ಹೌದು. ನಮ್ಮ ಚಿತ್ರಗಳಲ್ಲಿ ಏನಾದರೂ ಹೊಸತನ ಇರಬೇಕೆಂದು ನಾನು ಯಾವಾಗಲೂ ಬಯಸುತ್ತಿದ್ದೆ. ನಾನು ನಿರ್ಮಿಸಿ, ನಟಿಸುತ್ತಿದ್ದ ‘ಕುಳ್ಳ ಏಜೆಂಟ್ 000’ (1972) ಚಿತ್ರಕ್ಕೆ ಕಿಶೋರ್‌ರಿಂದ ಏಕೆ ಹಾಡಿಸಬಾರದು ಎನ್ನುವ ಆಲೋಚನೆ ಬಂತು. ಚಿತ್ರದ ನಿರ್ದೇಶಕ ಕೆಎಸ್‌ಎಲ್‌ ಸ್ವಾಮಿ ಮತ್ತು ಸಂಗೀತ ಸಂಯೋಜಕರಾದ ರಾಜನ್‌-ನಾಗೇಂದ್ರ ಅವರಲ್ಲಿ ಈ ಕುರಿತು ಚರ್ಚಿಸಿದೆ. ಅವರಿಂದಲೂ ಬೆಂಬಲ ಸಿಕ್ಕಿತು.

ಪರಿಚಯದವರೊಬ್ಬರ ಮೂಲಕ ಕಿಶೋರ್ ಕುಮಾರ್‌ ಅವರ ಕಾರಿನ ಡ್ರೈವರ್‌ ಮತ್ತು ಪಿಎ ಅಬ್ದುಲ್ಲಾ ಅವರ ಸಂಪರ್ಕ ಗಿಟ್ಟಿಸಿದೆ. ಅಬ್ದುಲ್ಲಾ ಮೂಲಕ ಕಿಶೋರ್‌ ಕುಮಾರ್‌ ಸಂಪರ್ಕ ಸಿಕ್ಕಿತು. ಅದೊಂದು ದಿನ ಸಂಗೀತ ಸಂಯೋಜಕರಾದ ರಾಜನ್‌-ನಾಗೇಂದ್ರ ಅವರೊಂದಿಗೆ ಮುಂಬೈನಲ್ಲಿ ಕಿಶೋರ್‌ ಅವರನ್ನು ಭೇಟಿ ಮಾಡಿ ಹಾಡಿನ ಬಗ್ಗೆ ಪ್ರಸ್ತಾಪ ಮಾಡಿದೆ. “ಕನ್ನಡ ನನಗೆ ಗೊತ್ತಿರದ ಭಾಷೆ. ಹೇಗೆ ಹಾಡೋದು?” ಎಂದು ಕಿಶೋರ್‌ ಅನುಮಾನಿಸಿದರು. ಒಂದಷ್ಟು ಹೊತ್ತಿನ ಮಾತುಕತೆಯ ನಂತರ, “ಆಗಲಿ, ಪ್ರಯತ್ನಿಸೋಣ,” ಎಂದು ಗ್ರೀನ್ ಸಿಗ್ನಲ್ ಕೊಟ್ಟರು.

ಇದನ್ನೂ ಓದಿ : ಸ್ಮರಣೆ | ಗಾಯಕ ರಫಿ ಅವರ ಕಂಠದಲ್ಲಿ ನೀವು ಕೇಳಲೇಬೇಕಾದ ಹತ್ತು ಹಾಡು

ಬೆಂಗಳೂರಿಗೆ ಮರಳಿದ ನಂತರ ರಾಜನ್‌-ನಾಗೇಂದ್ರ ಗಾಯಕ ಕಿಶೋರ್ ಕುಮಾರ್‌ಗೆ ಹೊಂದಿಕೆಯಾಗುವಂತೆ ಟ್ಯೂನ್‌ ಮಾಡಿದರು. ಚಿ ಉದಯಶಂಕರ್‌ ಅವರಿಂದ ಈ ಟ್ಯೂನ್‌ಗೆ ಹಾಡು ಬರೆಸಿದೆ. ಕಿಶೋರ್‌ ಡೇಟ್ಸ್‌ ಪಡೆದು ರಾಜನ್‌-ನಾಗೇಂದ್ರ ಅವರೊಂದಿಗೆ ರೆಕಾರ್ಡಿಂಗ್‌ಗೆ ಮುಂಬೈಗೆ ಹೋದೆವು. ಸಹಾಯಕರೊಬ್ಬರ ನೆರವಿನಿಂದ ಕಿಶೋರ್ ಕನ್ನಡದ ಹಾಡನ್ನು ಹಿಂದಿಯಲ್ಲಿ ಬರೆದುಕೊಂಡರು. ಸಂಗೀತ ನಿರ್ದೇಶಕರ ಸಲಹೆ, ಸೂಚನೆಗಳಂತೆ ಹಾಡಿನ ರಿಹರ್ಸಲ್ ನಡೆಸಿದ ನಂತರ ಸೊಗಸಾಗಿ ಹಾಡಿದರು. ‌ಆಗ ಒಂದು ಹಾಡಿಗೆ ಗಾಯಕರಿಗೆ ಒಂದು ಸಾವಿರ ಸಂಭಾವನೆ ಇತ್ತು. ಕಿಶೋರ್ ಕುಮಾರ್‌ಗೆ ಏಳು ಸಾವಿರ ಕೊಟ್ಟಿದ್ದೆ. ಹೀಗೆ, ಮುಂಬೈನ ಮೂರು ಭೇಟಿಯಲ್ಲಿ ‘ಆಡೂ ಆಟ ಆಡೂ’ ಸಿದ್ಧವಾಯ್ತು. ಕಿಶೋರ್ ಕನ್ನಡಕ್ಕೆ ಹಾಡಿದ್ದು ಇದೊಂದೇ ಹಾಡು.

ಕಿಶೋರ್‌ ಕುಮಾರ್‌ ಜನಪ್ರಿಯ ಹಿಂದಿ ಸಿನಿಮಾ ವಿಡಿಯೋ ಹಾಡುಗಳು

ಜವಾನಿ ದೀವಾನಿ (1972)

ಮೆಹಬೂಬ (1976)

ಪರಾಯಾ ಧನ್‌ (1971)

ಫನ್‌ತೂಶ್‌ (1956)

ಆರಾಧನಾ (1969)

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More