‘ಮಿಷನ್‌ ಇಂಪಾಸಿಬಲ್’‌ ವಿವಾದ; ಸಚಿವಾಲಯದ ಮಧ್ಯಪ್ರವೇಶಕ್ಕೆ ಒತ್ತಡ

ಜಮ್ಮು ಮತ್ತು ಕಾಶ್ಮೀರ ಭೂಪಟದ ಚಿತ್ರಣ ಸರಿ ಇಲ್ಲ ಎನ್ನುವ ಕಾರಣಕ್ಕೆ ‘ಮಿಷನ್ ಇಂಪಾಸಿಬಲ್ - ಫಾಲ್‌ಔಟ್‌’ ಸಿನಿಮಾ ವಿವಾದಕ್ಕೆ ಸಿಲುಕಿತ್ತು. ಭಾರತದ ಅವತರಣಿಕೆಯಲ್ಲಿ ಮಾತ್ರವಲ್ಲ, ಇದು ಜಾಗತಿಕವಾಗಿಯೂ ಸೆನ್ಸಾರ್ ಆಗಬೇಕೆಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಹೇಳುತ್ತಿದೆ

ಜುಲೈ 27ರಂದು ತೆರೆಕಂಡ ‘ಮಿಷನ್ ಇಂಪಾಸಿಬಲ್‌-ಫಾಲ್‌ಔಟ್‌’ ಇಂಗ್ಲಿಷ್ ಸಿನಿಮಾ ಜಗತ್ತಿನ ಎಲ್ಲೆಡೆ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಚಿತ್ರದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಚಿತ್ರಣವಿದೆ ಎನ್ನುವುದು ವಿಶೇಷ. ಭಾರತದಲ್ಲಿ ಪ್ರದರ್ಶನಗೊಳ್ಳುವ ಮುನ್ನ ಸಿಬಿಎಫ್‌ಸಿ ಈ ಸಿನಿಮಾ ವೀಕ್ಷಿಸಿತ್ತು. ಜಮ್ಮು ಮತ್ತು ಕಾಶ್ಮೀರ ಭೂಪಟದ ಅಸಮರ್ಪಕ ಚಿತ್ರಣವಿದೆ ಎಂದು ಮಂಡಳಿ ಅಧಿಕಾರಿಗಳು ಹೇಳಿದ್ದರು. ಇದೂ ಸೇರಿದಂತೆ ಒಟ್ಟು ನಾಲ್ಕು ಕಟ್‌ಗಳನ್ನು ಸಿಬಿಎಫ್‌ಸಿ ಸೂಚಿಸಿತ್ತು. ಈ ಸೂಚನೆಗಳ ಪಾಲನೆಯೊಂದಿಗೆ ‘ಮಿಷನ್ ಇಂಪಾಸಿಬಲ್‌’ ಭಾರತದಲ್ಲಿ ಬಿಡುಗಡೆಯಾಗಿತ್ತು.

ಇದೀಗ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಈ ವಿಷಯದಲ್ಲಿ ವಿದೇಶಾಂಗ ಸಚಿವಾಲಯದ ಮಧ್ಯಪ್ರವೇಶಕ್ಕೆ ಒತ್ತಾಯಿಸಿದೆ. “ಚಿತ್ರದಲ್ಲಿ ಜಮ್ಮು ಮತ್ತು ಕಾಶ್ಮೀರ ಭೂಪಟದ ಅಸಮರ್ಪಕ ಚಿತ್ರಣವಿದೆ. ಗಡಿರೇಖೆಗಳನ್ನು ತಪ್ಪಾಗಿ ತೋರಿಸಿದ್ದು, ಇದು ಪ್ರೇಕ್ಷಕರಲ್ಲಿ ಗೊಂದಲ ಮೂಡಿಸುವ ಸಾಧ್ಯತೆಗಳಿವೆ. ಭಾರತದ ಅವತರಣಿಕೆಯಲ್ಲೇನೋ ಈ ದೃಶ್ಯಕ್ಕೆ ಕತ್ತರಿ ಪ್ರಯೋಗವಾಗಿದೆ. ಆದರೆ, ಜಾಗತಿಕವಾಗಿ ಪ್ರದರ್ಶನಗೊಳ್ಳುತ್ತಿರುವ ಅವತರಣಿಯಲ್ಲಿ ತಪ್ಪು ಸರಿಯಾಗಿಲ್ಲ. ಈ ದೃಶ್ಯಕ್ಕೆ ಸೆನ್ಸಾರ್‌ ಆಗಬೇಕಿದೆ. ಕೂಡಲೇ ವಿದೇಶಾಂಗ ಸಚಿವಾಲಯ ಮಧ್ಯಪ್ರವೇಶಿಸಬೇಕು,” ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಪತ್ರದಲ್ಲಿ ಉಲ್ಲೇಖಿಸಿದೆ.

ಹಾಗೆ ನೋಡಿದರೆ, ಕಾಶ್ಮೀರದ ಪ್ರಸ್ತಾಪವಿದ್ದರೂ ಚಿತ್ರದ ಈ ನಿರ್ದಿಷ್ಟ ಸನ್ನಿವೇಶಗಳನ್ನು ಚಿತ್ರಿಸಿರುವುದು ನ್ಯೂಜಿಲ್ಯಾಂಡ್‌ನಲ್ಲಿ. “ಕಾರಣಾಂತರಗಳಿಂದ ನಾವು ಕಾಶ್ಮೀರದಲ್ಲಿ ಚಿತ್ರಿಸುವ ಯೋಜನೆ ಕೈಬಿಟ್ಟೆವು. ನ್ಯೂಜಿಲ್ಯಾಂಡ್‌ನಲ್ಲಿ ಚಿತ್ರಿಸಿದರೂ ಭಾರತದ ಫ್ಲೇವರ್ ಬೇಕೆಂದು ಜಮ್ಮು ಮತ್ತು ಕಾಶ್ಮೀರದ ಪ್ರಸ್ತಾಪ ಮಾಡಿದ್ದೇವೆ,” ಎನ್ನುತ್ತಾರೆ ಚಿತ್ರದ ನಿರ್ದೇಶಕ ಕ್ರಿಸ್ಟೋಫರ್‌ ಮ್ಯಾಕ್‌ಕ್ವರಿ. ‘ಮಿಷನ್ ಇಂಪಾಸಿಬಲ್‌’ ಸರಣಿಯ 6ನೇ ಸಿನಿಮಾ ‘ಮಿಷನ್ ಇಂಪಾಸಿಬಲ್ -ಫಾಲ್‌ಔಟ್‌.’ ಭಾರತದಲ್ಲಿ ಉತ್ತಮ ಓಪನಿಂಗ್ ಪಡೆದುಕೊಂಡ ಸಿನಿಮಾ, ಉತ್ತಮವಾಗಿ ಪ್ರದರ್ಶನಗೊಳ್ಳುತ್ತಿದೆ. ಇದೀಗ, ಸೆನ್ಸಾರ್‌ಗೆ ಸಂಬಂಧಿಸಿದ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಪತ್ರಕ್ಕೆ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಇದನ್ನೂ ಓದಿ : ಚಿತ್ರ ವಿಮರ್ಶೆ | ಬದುಕಿನ ಸರಳತೆ ಹೇಳುವ ಜೀವನಪ್ರೀತಿಯ ಸಿನಿಮಾ ‘ಕಾರ್ವಾನ್‌’

ಸಿಬಿಎಫ್‌ಸಿ ಸೂಚನೆ: ಸಿಬಿಎಫ್‌ಸಿ ಕಮಿಟಿ ಜುಲೈ 13ರಂದು ‘ಮಿಷನ್ ಇಂಪಾಸಿಬಲ್‌-ಫಾಲ್‌ಔಟ್‌’ ಸಿನಿಮಾ ವೀಕ್ಷಿಸಿತ್ತು. ಜಮ್ಮು ಮತ್ತು ಕಾಶ್ಮೀರ ಭೂಪಟದ ತಪ್ಪು ಚಿತ್ರಣದ ದೃಶ್ಯ ಕತ್ತರಿಸುವುದು ಸೇರಿದಂತೆ ಒಟ್ಟು ನಾಲ್ಕು ಬದಲಾವಣೆಗೆ ಸೂಚನೆ ನೀಡಿತ್ತು. ‘ಇಂಡಿಯನ್‌ ಕಂಟ್ರೋಲ್ಡ್‌ ಕಾಶ್ಮೀರ್‌’ ಎನ್ನುವ ಸಾಲುಗಳಿಗೆ ಬದಲಿಗೆ ‘ಇಂಡಿಯನ್‌ ಸ್ಟೇಟ್‌ ಆಫ್‌ ಜಮ್ಮು ಅಂಡ್ ಕಾಶ್ಮೀರ್‌’ ಬಳಕೆ ಮಾಡುವಂತೆ ಅಧಿಕಾರಿಗಳು ಸೂಚಿಸಿದ್ದರು. ಜೊತೆಗೆ, ‘ಯಾವುದೇ ದೇಶ, ವ್ಯಕ್ತಿ, ಧರ್ಮ, ಸಮುದಾಯ, ಸಂಸ್ಥೆ, ರಾಷ್ಟ್ರೀಯತೆಗೆ ಧಕ್ಕೆ ಉಂಟುಮಾಡುವ ಉದ್ದೇಶವಿಲ್ಲ’ ಎನ್ನುವ ಡಿಕ್ಲೈಮರ್ ಹಾಕುವಂತೆ ಸಿಬಿಎಫ್‌ಸಿ ಹೇಳಿತ್ತು. ಭಾರತದಲ್ಲಿ ಬಿಡುಗಡೆಯಾಗಿರುವ ಅವತರಣಿಕೆಯಲ್ಲಿ ಈ ಬದಲಾವಣೆಗಳಾಗಿವೆ. ಇದೀಗ ಮಾಹಿತಿ ಮತ್ತು ಪ್ರಸಾರ ಇಲಾಖೆ ಜಾಗತಿಕವಾಗಿಯೂ ಈ ಸನ್ನಿವೇಶಗಳಿಗೆ ಸೆನ್ಸಾರ್ ಆಗಬೇಕೆಂದಿದೆ. ಈ ವಿಚಾರದಲ್ಲಿ ವಿದೇಶಾಂಗ ಸಚಿವಾಲಯ ಮಧ್ಯೆ ಪ್ರವೇಶಕ್ಕೆ ಒತ್ತಾಯಿಸಿದ್ದು, ಅಲ್ಲಿಂದ ಯಾವ ಪತ್ರಿಕ್ರಿಯೆ ಸಿಗುತ್ತದೆಯೋ ಕಾದುನೋಡಬೇಕಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More