ಜನಪ್ರಿಯ ಕ್ವಾಂಟಿಕೋ ಸರಣಿಗೆ ನಟಿ ಪ್ರಿಯಾಂಕಾ ಚೋಪ್ರಾ ಭಾವುಕ ವಿದಾಯ

ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾಗೆ ಜಗತ್ತಿನಾದ್ಯಂತ ಜನಪ್ರಿಯತೆ ತಂದುಕೊಟ್ಟ ‘ಕ್ವಾಂಟಿಕೋ’ ಪೊಲಿಟಿಕಲ್ ಥ್ರಿಲ್ಲರ್ ಸರಣಿ ಮುಕ್ತಾಯವಾಗಿದೆ. ಸರಣಿಯ ಮೂರನೇ ಸೀಸನ್‌ನ ಕೊನೆಯ ಸಂಚಿಕೆ ಮೂಡಿಬರುತ್ತಿದ್ದಂತೆ ನಟಿ ಪ್ರಿಯಾಂಕಾ ಟ್ವಿಟರ್‌ನಲ್ಲಿ ತಮ್ಮ ವಿದಾಯದ ಸಂದೇಶ ಬರೆದಿದ್ದಾರೆ

ಅಮೆರಿಕದ ‘ಕ್ವಾಂಟಿಕೋ’ ಟಿವಿ ಸರಣಿ ಪಾಶ್ಚಿಮಾತ್ಯ ದೇಶಗಳಲ್ಲಿ ಬಾಲಿವುಡ್‌ ನಟಿ ಪ್ರಿಯಾಂಕಾಗೆ ದೊಡ್ಡ ಜನಪ್ರಿಯತೆ ತಂದುಕೊಟ್ಟಿತು. ಈ ಸರಣಿಯ ಮೂರನೇ ಸೀಸನ್‌ನ ಕೊನೆಯ ಸಂಚಿಕೆ ಪ್ರಸಾರವಾಗಿದೆ. ತಮ್ಮನ್ನು ಜಗತ್ತಿಗೆ ಪರಿಚಯಿಸಿದ ಸರಣಿಗೆ ನಟಿ ಪ್ರಿಯಾಂಕಾ ಭಾವುಕ ವಿದಾಯ ಹೇಳಿದ್ದಾರೆ. ಸರಣಿಯಲ್ಲಿ ಅವರು ಎಫ್‌ಬಿಐ ಏಜೆಂಟ್‌ ಅಲೆಕ್ಸ್ ಪ್ಯಾರಿಶ್‌ ಪಾತ್ರ ನಿರ್ವಹಿಸಿದ್ದರು. ತಮ್ಮ ಟ್ವೀಟ್‌ಗಳಲ್ಲಿ ಅವರು ಇಡೀ ತಂಡಕ್ಕೆ ಕೃತಜ್ಞತೆ ಸಲ್ಲಿಸಿದ್ದು, ಅಲ್ಲಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ತಮ್ಮ ಟ್ವೀಟ್‌ನಲ್ಲಿ, “ಸೀಸನ್ ಮುಗಿಯುತ್ತಿದ್ದು, ಅಲೆಕ್ಸ್ ಪ್ಯಾರಿಶ್‌ಗೆ ನಾನು ಗುಡ್‌ಬೈ ಹೇಳುತ್ತಿದ್ದೇನೆ. ಈ ಸವಾಲಿನ ಪಾತ್ರ ನನಗೆ ಉತ್ತಮ ಅನುಭವ ನೀಡಿದೆ. ಈ ಪಾತ್ರ ನಿರ್ವಹಣೆಯ ನಂತರ ನಟಿಯಾಗಿ ನಾನು ಮತ್ತಷ್ಟು ಬೆಳೆದಿದ್ದೇನೆ. ಪಾತ್ರವನ್ನು ಮೆಚ್ಚಿದ ಎಲ್ಲರಿಗೂ ಧನ್ಯವಾದ. ಈ ಸಂದರ್ಭದಲ್ಲಿ ನಾನು ಇಡೀ ತಂಡಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಪ್ರತಿಯೊಬ್ಬರೊಂದಿಗೆ ಕೆಲಸ ಮಾಡಿದ ಅನುಭವ ಮುದ ನೀಡಿದ್ದು, ಮತ್ತೆ ಈ ತಂಡದಲ್ಲಿ ಕೆಲಸ ಮಾಡುವ ಅವಕಾಶಕ್ಕಾಗಿ ಎದುರು ನೋಡುತ್ತೇನೆ,” ಎಂದಿದ್ದಾರೆ.

ಸರಣಿ ಟ್ವೀಟ್‌ಗಳಲ್ಲಿ ನಟಿ ಪ್ರಿಯಾಂಕಾ ‘ಕ್ವಾಂಟಿಕೋ’ ಸರಣಿ ತಂತ್ರಜ್ಞರು ಹಾಗೂ ಕಲಾವಿದರೊಂದಿಗೆ ತಾವಿರುವ ಫೋಟೋಗಳನ್ನು ಶೇರ್‌ ಮಾಡಿದ್ದಾರೆ. ‘ಕ್ವಾಂಟಿಕೋ’ ಸರಣಿಯ ಮೊದಲ ಸೀಸನ್‌ ಶುರುವಾಗಿದ್ದು 2015ರ ಸೆಪ್ಟೆಂಬರ್‌ನಲ್ಲಿ. ಸರಣಿಯಲ್ಲಿ ಉತ್ತಮ ನಟನೆಗೆ ಪ್ರಿಯಾಂಕಾ, ಪೀಪಲ್ಸ್‌ ಚಾಯ್ಸ್‌ ಪ್ರಶಸ್ತಿ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಿಯಾಂಕಾ ಅಭಿಮಾನಿಗಳು ಹಾಲಿವುಡ್ ಸಿನಿಮಾ ‘ಕೌಬಾಯ್‌ ನಿಂಜಾ ವೈಕಿಂಗ್‌’ನಲ್ಲಿ ತಮ್ಮ ನೆಚ್ಚಿನ ನಟಿಯನ್ನು ನೋಡಬಹುದು. ಹಾಲಿವುಡ್ ಚಿತ್ರದೊಂದಿಗೆ ಅವರು ‘ದಿ ಸ್ಕೈ ಈಸ್ ಪಿಂಕ್‌’ ಹಿಂದಿ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಫರ್ಹನ್ ಅಖ್ತರ್‌ ಈ ಸಿನಿಮಾದ ಹೀರೋ.

ಇದನ್ನೂ ಓದಿ : ಚಿತ್ರ ವಿಮರ್ಶೆ | ಬದುಕಿನ ಸರಳತೆ ಹೇಳುವ ಜೀವನಪ್ರೀತಿಯ ಸಿನಿಮಾ ‘ಕಾರ್ವಾನ್‌’
ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More