ಬಾಲಿವುಡ್‌ನ ಸೀಮಿತ ಅವಕಾಶಗಳ ನಡುವೆಯೂ ‘ಪಾಪ್ ಫೆಮಿನಿಸಂ’ ಮೆರೆದ ನಟಿಯರು

ಬಾಲಿವುಡ್‌ನಲ್ಲಿ ಮಹಿಳಾ ಪ್ರಧಾನ ಪಾತ್ರಗಳೇ ಕಡಿಮೆ. ಹೀಗಾಗಿ ನಟಿಯರು ‘ಪಾಪ್ ಫೆಮಿನಿಸಂ’ ಪ್ರಕಟಿಸಿ ಅವಕಾಶಗಳನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಈ ನಡುವೆಯೂ, ವಿಭಿನ್ನವಾಗಿ ನಿಂತ ಕೆಲವು ನಟಿಯರು ಹೊಸ ತಲೆಮಾರಿನ ಸ್ತ್ರೀವಾದದ ಪ್ರತಿನಿಧಿಗಳಾಗಿ ಗುರುತಿಸಿಕೊಂಡಿದ್ದಾರೆ

ಭಾರತೀಯ ಮನರಂಜನಾ ಉದ್ಯಮದಲ್ಲಿರುವ ಮಹಿಳಾಮಣಿಗಳು ಸಾಮಾನ್ಯವಾಗಿ ಸ್ತ್ರೀಯರಿಗೆ ಸಂಬಂಧಿಸಿದಂತೆ ಉದ್ಯಮದಲ್ಲಿರುವ ಕೊರತೆಗಳು, ನಟಿಯರಿಗೆ ಸಾಕಷ್ಟು ಅವಕಾಶ ಸಿಗದೆ ಇರುವಂತಹ ವಿಚಾರಗಳ ಬಗ್ಗೆ ಮಾತನಾಡುವುದೇ ಕಡಿಮೆ. ಹೀಗಾಗಿ, ಭಾರತದ ಮಟ್ಟಿಗೆ ‘ಪಾಪ್ ಫೆಮಿನಿಸಂ’ ಎನ್ನುವುದು ಬಹಳ ದೂರವೇ ಇತ್ತು. ಆದರೆ, ಇತ್ತೀಚೆಗೆ ಕಂಗನಾ ರನಾವತ್, ತಾಪ್ಸಿ ಪನ್ನು, ಸ್ವರ ಭಾಸ್ಕರ್ ಮೊದಲಾದವರು ‘ಪಾಪ್ ಫೆಮಿನಿಸಂ’ ಪ್ರತಿನಿಧಿಗಳಾಗುತ್ತಿದ್ದಾರೆ. ಹಾಗಿದ್ದಲ್ಲಿ, ಭಾರತೀಯ ಮನರಂಜನಾ ಉದ್ಯಮದ ಮಹಿಳೆಯರ ಮಟ್ಟಿಗೆ ಸ್ತ್ರೀವಾದ ಎಂದರೇನು ಎನ್ನುವ ಬಗ್ಗೆ ಹುಡುಕಲು ಹೊರಟರೆ ಕೆಲವು ವಿಶಿಷ್ಟ ವಿಚಾರಗಳು ತಿಳಿಯುತ್ತವೆ.

‘ಪಾಪ್ ಫೆಮಿನಿಸಂ’ ಎನ್ನುವ ಶಬ್ದ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ. ಶೈಕ್ಷಣಿಕವಾಗಿ ಮತ್ತು ಸಾಹಿತ್ಯಿಕವಾಗಿ ಇರುವ ಸ್ತ್ರೀವಾದದ ಕಲ್ಪನೆಗೆ ಭಿನ್ನವಾಗಿ ಆಧುನಿಕ ಮಹಿಳೆಯರು ಪ್ರತಿನಿಧಿಸುವ ಸ್ತ್ರೀವಾದವನ್ನು ‘ಪಾಪ್ ಫೆಮಿನಿಸಂ’ ಎಂದು ಕರೆಯಲಾಗುತ್ತದೆ. ಮುಖ್ಯವಾಗಿ, ಮನರಂಜನಾ ಉದ್ಯಮದ ಮಹಿಳೆಯರು ಸ್ತ್ರೀವಾದವನ್ನು ವಿವರಿಸುವುದು ಮತ್ತು ವ್ಯಾಖ್ಯಾನಿಸುವ ರೀತಿಯೇ ಪಾಪ್ ಫೆಮಿನಿಸಂ. ಇದು ಸ್ತ್ರೀವಾದದ ಜನಪ್ರಿಯ ರೂಪ.

ಒಬ್ಬ ಮಹಿಳೆ ಸ್ತ್ರೀವಾದಿ ಎನ್ನುತ್ತಲೇ ‘ಪುರುಷ ದ್ವೇಷಿ’ ಎನ್ನುವ ಪದವೂ ತಂತಾನೇ ಆಕೆಗೆ ಅಂಟಿಕೊಳ್ಳುತ್ತದೆ. ಬಾಲಿವುಡ್‌ನ ಸ್ತ್ರೀವಾದಿ ನಟಿಯರೂ ಇದಕ್ಕೆ ಹೊರತಲ್ಲ. ಕಂಗನಾ ರನೌತ್, ಸ್ವರ ಭಾಸ್ಕರ್‌ರಂತಹ ನಟಿಯರು ಬಾಲಿವುಡ್‌ನಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದಾಗ ಅವರನ್ನು ‘ನಕಲಿ ಸ್ತ್ರೀವಾದಿಗಳು’ ಮತ್ತು ‘ಪುರುಷ ದ್ವೇಷಿಗಳು’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿಯೇ ಕೆಲವು ನಿರ್ದೇಶಕರು ಜರಿದಿದ್ದರು. ಸ್ವರ ಭಾಸ್ಕರ್ ಮೇಲೆ ‘ಅರ್ಬನ್ ನಕ್ಸಲ್‌’ (ನಗರದ ನಕ್ಸಲೀಯರು) ಎನ್ನುವ ಆರೋಪವೂ ಕೇಳಿಬಂತು. ಹೀಗೆ ದಿಟ್ಟವಾಗಿ ಪುರುಷ ಪ್ರಧಾನ ಜಗತ್ತಿನಲ್ಲಿ ಮಹಿಳೆ ತನ್ನ ಧ್ವನಿಯನ್ನು ಮುಂದಿಡುತ್ತಿರುವುದೇ ಸ್ತ್ರೀವಾದದ ಆಧುನಿಕ ರೂಪ.

ತಾಪ್ಸಿ ಪನ್ನು ಬಾಲಿವುಡ್‌ನಲ್ಲಿ ‘ಪಿಂಕ್‌’ ಸಿನಿಮಾದ ನಂತರ ಸ್ತ್ರೀವಾದಿ ನಟಿ ಎಂದು ಗುರುತಿಸಿಕೊಂಡವರು. ಸ್ತ್ರೀವಾದಿ ‘ಪಿಂಕ್’ ಸಿನಿಮಾದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ತಾಪ್ಸಿ, ‘ಪಾಪ್ ಫೆಮಿನಿಸಂ’ ಪ್ರತಿನಿಧಿಯಾಗಿ ಗೋಚರಿಸಿದ್ದರು. “ಮಹಿಳೆ ಲೈಂಗಿಕ ವಿಚಾರದಲ್ಲಿ ‘ಬೇಡ’ ಎಂದು ಹೇಳಿದರೆ ಅದು ‘ಬೇಡ’ ಎಂದೇ ಪರಿಗಣಿಸಬೇಕು,” ಎಂಬ ಒಂದು ವಾಕ್ಯದ ಸ್ತ್ರೀವಾದವೇ ‘ಪಿಂಕ್‌’ ಸಿನಿಮಾದ ಜೀವಾಳ. ಇದೇ ಕಾರಣದಿಂದಾಗಿ, ನಂತರ ಬಿಡುಗಡೆಯಾಗಿದ್ದ ತಾಪ್ಸಿ ಅವರ ಮತ್ತೊಂದು ಸಿನಿಮಾ ‘ಜುಡುವಾ ೨’ನಲ್ಲಿ ನಾಯಕ ಪ್ರಧಾನ ಪಾತ್ರದಲ್ಲಿ ಮಹಿಳೆಯನ್ನು ಹೆಚ್ಚು ಗೌರವಯುತವಾಗಿ ಕಾಣದೆ ಇರುವ ಬಗ್ಗೆ ತಾಪ್ಸಿ ಮತ್ತೆ ಸ್ತ್ರೀವಾದದ ಇನ್ನೊಂದು ಮಗ್ಗಲನ್ನು ಮಾಧ್ಯಮಕ್ಕೆ ಬಿಡಿಸಿಡಬೇಕಾಗಿ ಬಂದಿತ್ತು. “ಕತೆಗೆ ಸೂಕ್ತವೆನಿಸುವ ರೀತಿಯಲ್ಲಿ ಮಹಿಳೆಯರನ್ನು ಕಡಿಮೆ ತೂಕದಲ್ಲಿ ತೋರಿಸುವುದು ತಪ್ಪಲ್ಲ,” ಎನ್ನುವುದು ತಾಪ್ಸಿ ವಿಶ್ಲೇಷಣೆ. “ಮಹಿಳೆಯ ಒಪ್ಪಿಗೆ ಪಡೆಯದೆ ಆಕೆಯ ಜೊತೆ ಲೈಂಗಿಕವಾಗಿ ವ್ಯವಹರಿಸುವುದು ಕತೆಗೆ ಅಗತ್ಯವಾಗಿದ್ದರೆ ತೆರೆ ಮೇಲೆ ಅದನ್ನು ತೋರಿಸಬಹುದು. ಆದರೆ, ಅದನ್ನೇ ವೈಭವೀಕರಿಸಿ ತೋರಿಸುವುದು ತಪ್ಪಾಗುತ್ತದೆ. ಸ್ತ್ರೀವಾದಿ ಎಂದುಕೊಂಡು ತೆರೆ ಮೇಲೆ ಕಾಣುವ ಎಲ್ಲವನ್ನೂ ವಿರೋಧಿಸಲು ಸಾಧ್ಯವಿಲ್ಲ,” ಎನ್ನುತ್ತಾರೆ ತಾಪ್ಸಿ.

ಹಾಲಿವುಡ್‌ನಲ್ಲಿ ಜನಪ್ರಿಯರಾಗಿರುವ ಮತ್ತೊಬ್ಬ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಪತ್ರಿಕೆಯೊಂದರ ಪ್ರಶ್ನೆಗೆ ಉತ್ತರವಾಗಿ, “ಸ್ತ್ರೀವಾದ ಎಂದಾಕ್ಷಣ ನಾವು ಪುರುಷರನ್ನು ಕೀಳಾಗಿ ಕಾಣುತ್ತೇವೆ ಅಥವಾ ದ್ವೇಷಿಸುತ್ತೇವೆ ಎಂದಲ್ಲ. ನೀವು ನಮ್ಮ ಜೊತೆ ನಿಲ್ಲಬೇಕು ಎಂದು ಬಯಸುತ್ತೇವೆ,” ಎಂದು ಹೇಳಿದ್ದರು. ಬಾಲಿವುಡ್‌ನಲ್ಲಿ ನಾಯಕ ಪ್ರಧಾನ ಸಿನಿಮಾಗಳೇ ಹೆಚ್ಚಿದ್ದಾಗ ಪ್ರಿಯಾಂಕಾ ಚೋಪ್ರಾ ‘ಮೇರಿ ಕೋಮ್‌’ನಂತಹ ಸಿನಿಮಾಗಳಿಂದ ತಮ್ಮ ಸ್ಥಾನವನ್ನು ಅರಸಿದವರು. ಭಾರತೀಯ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಪಾತ್ರವಿಲ್ಲ ಎಂದು ಅರಿವಾದಾಗ ಹಾಲಿವುಡ್‌ನಲ್ಲಿ ‘ಕ್ವಾಂಟಿಕೋ’ ಎನ್ನುವ ಟಿವಿ ಧಾರಾವಾಹಿಯ ‘ಅಲೆಕ್ಸ್‌ ಪ್ಯಾರಿಶ್’ ಪ್ರಧಾನ ಪಾತ್ರದಲ್ಲಿ ನಟಿಸಿ ವಿಶ್ವದ ಗಮನ ಸೆಳೆದರು. ಪ್ರಿಯಾಂಕಾ ಚೋಪ್ರಾ ಕೇವಲ ಮಾತುಗಳಲ್ಲಿ ಮಾತ್ರ ಸ್ತ್ರೀವಾದದ ಬಗ್ಗೆ ಉಪದೇಶ ಮಾಡುವುದಿಲ್ಲ. ತಮ್ಮ ಪ್ರೊಡಕ್ಷನ್ ಸಂಸ್ಥೆಯನ್ನು ಆರಂಭಿಸಿದಾಗ, ಸಂಸ್ಥೆಯ ಮಹಿಳಾ ಸಿಬ್ಬಂದಿಗೆ ಹಲವು ಹೆಚ್ಚುವರಿ ಸೌಲಭ್ಯಗಳನ್ನೂ ಅವರು ಕಲ್ಪಿಸಿಕೊಟ್ಟಿದ್ದಾರೆ. “ಮಹಿಳೆ ಸದಾ ಆತ್ಮವಿಶ್ವಾಸದಿಂದ ಸಮಾಜವನ್ನು ಎದುರಿಸಬೇಕು. ಮಹಿಳೆಯನ್ನು ಪ್ರತಿಭೆ ಮತ್ತು ಸಾಮರ್ಥ್ಯದಿಂದ ಅಳೆಯಬೇಕು,” ಎನ್ನುವುದು ಪ್ರಿಯಾಂಕಾ ಅಭಿಪ್ರಾಯ.

ಬಾಲಿವುಡ್‌ನಲ್ಲಿ ‘ಪಾಪ್ ಫೆಮಿನಿಸಂ’ ಅಥವಾ ಮನರಂಜನಾ ಉದ್ಯಮದ ಸ್ತ್ರೀವಾದದ ನಾಯಕಿಯಂತೆ ಇರುವವರು ಕಂಗನಾ ರನೌತ್. ಫಿಲ್ಟರ್‌ಗಳನ್ನು ಬಳಸದೆ ತನಗೆ ಅನಿಸಿದ್ದನ್ನು ನೇರವಾಗಿ ಮುಂದಿಡುವ ನಟಿ ಕಂಗನಾ. ಬಹಳಷ್ಟು ವಿಚಾರಗಳಲ್ಲಿ ಕಂಗನಾ ಸ್ತ್ರೀವಾದಿಯಾಗಿ ಕಂಡರೂ, ಎಲ್ಲೋ ಒಂದು ಕಡೆ ಕಂಗನಾ ತಮ್ಮ ಮೂಗಿನ ನೇರಕ್ಕೆ ಮಾತನಾಡುವ ವ್ಯಕ್ತಿಯಾಗಿ ಕಾಣುತ್ತಾರೆಯೇ ವಿನಾ, ಇತರ ಮಹಿಳೆಯರ ಬಗ್ಗೆ ಕಾಳಜಿ ಇರುವ ಅಥವಾ ಸ್ತ್ರೀಯರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವ ವ್ಯಕ್ತಿಯಾಗಿ ಕಾಣಿಸುವುದಿಲ್ಲ. ಕಂಗನಾರ ಸ್ತ್ರೀವಾದ ಮತ್ತು ಹೇಳಿಕೆಗಳು ಸ್ವತಃ ಅವರ ಅನುಭವ ಮತ್ತು ಅವರ ಚಿಂತನೆಗಳ ಸುತ್ತ ಇರುತ್ತದೆಯೇ ವಿನಾ ಮಹಿಳಾ ಸಮುದಾಯಕ್ಕೆ ಅನ್ವಯವಾಗುವಂತೆ ಅವರು ಹೇಳಿಕೆ ನೀಡಿರುವುದು ಕಡಿಮೆ ಎನ್ನುವ ವಿಶ್ಲೇಷಣೆಯೇ ಅವರ ಬಗ್ಗೆ ಹೆಚ್ಚು ಕೇಳಿಬಂದಿದೆ. ಆದರೆ, ಕಂಗನಾ ಬಾಲಿವುಡ್‌ನಲ್ಲಿ ನಿಭಾಯಿಸಿರುವ ಕೆಲವು ಮಹಿಳಾ ಪ್ರಧಾನ ಪಾತ್ರಗಳು ಮುಖ್ಯವಾಹಿನಿ ಮಾಧ್ಯಮ ಆಕೆಯನ್ನು ಸ್ತ್ರೀವಾದಿಯಾಗಿ ನೋಡುವಂತೆ ಮಾಡಿದೆ ಎನ್ನಬಹುದು.

ದೀಪಿಕಾ ಪಡುಕೋಣೆ ‘ಮೈ ಚಾಯ್ಸ್‌’ ಎನ್ನುವ ವಿಡಿಯೋದಲ್ಲಿ, “ಮಹಿಳೆಯರ ದೇಹ ಮತ್ತು ಮನಸ್ಸು ಅವರ ಆಯ್ಕೆಯೇ ವಿನಾ ಮತ್ತೊಬ್ಬರ ಸೊತ್ತಲ್ಲ,” ಎನ್ನುವ ಸಂದೇಶವನ್ನು ಸಾರಿದಾಗ ಭಾರತೀಯ ಸ್ತ್ರೀವಾದಿಗಳಿಗೆ ಆದರ್ಶಪ್ರಾಯರೆನಿಸಿದ್ದರು. ಕೆಲವು ಸಂಪ್ರದಾಯಶರಣ ಸ್ತ್ರೀವಾದಿಗಳು, “ಇಂತಹ ಸ್ತ್ರೀವಾದ ನಮಗೆ ಬೇಡ,” ಎಂದು ಮೂಗು ಮುರಿದದ್ದೂ ಇದೆ. ದೀಪಿಕಾ ತಮ್ಮ ವೃತ್ತಿಜೀವನದುದ್ದಕ್ಕೂ ಮಹಿಳಾ ಪ್ರಧಾನ ಪಾತ್ರಗಳಲ್ಲೇ ಹೆಚ್ಚಾಗಿ ನಟಿಸಿದ್ದಾರೆ. ನಟನೆಗೆ ಅವಕಾಶವಿಲ್ಲದ ಪಾತ್ರಗಳಲ್ಲಿ ಅವರು ಕಂಡದ್ದು ಅತಿ ಕಡಿಮೆ. ಆದರೆ, ‘ಪದ್ಮಾವತ್‌’ ಸಿನಿಮಾದಲ್ಲಿ ಸ್ತ್ರೀಯರನ್ನು ಅತಿ ಕೀಳಾಗಿ ನೋಡಲಾಗಿದೆ ಎನ್ನುವ ಸ್ವರ ಭಾಸ್ಕರ್ ಅಭಿಪ್ರಾಯಕ್ಕೆ ದೀಪಿಕಾ ಪ್ರತಿಕ್ರಿಯಿಸಿರಲಿಲ್ಲ. ಈ ಸಂದರ್ಭದಲ್ಲಿಯೇ ಸ್ವರ ಅವರು ನಕಲಿ ಸ್ತ್ರೀವಾದಿ ಎನ್ನುವ ಹಣೆಪಟ್ಟಿ ಕಟ್ಟಿಕೊಂಡಿದ್ದು. ‘ಪದ್ಮಾವತ್’ ಸಿನಿಮಾದಲ್ಲಿ ಮಹಿಳೆಯರನ್ನು ‘ಲೈಂಗಿಕವಾಗಿ ಭೋಗಿಸುವ ವಸ್ತು’ ಎನ್ನುವಂತೆ ತೋರಿಸಿರುವ ಬಗ್ಗೆ ದೇಶಾದ್ಯಂತ ಬಹಳಷ್ಟು ಚರ್ಚೆಗಳಾಗಿದ್ದವು.

ಇದನ್ನೂ ಓದಿ : ಅಗ್ನಿವೇಶ್ ಮೇಲಿನ ದಾಳಿ ಕುರಿತ ಟ್ವೀಟ್ ತಿರುಚಿದವರಿಗೆ ಸ್ವರ ಭಾಸ್ಕರ್ ಹೇಳಿದ್ದೇನು?

ಸೋನಂ ಕಪೂರ್ ಅವರು ಮಹಿಳಾ ಪ್ರಧಾನ ಪಾತ್ರಗಳಲ್ಲಿ ಹೆಚ್ಚಾಗಿ ನಟಿಸುವ ಮತ್ತೊಬ್ಬ ಬಾಲಿವುಡ್ ನಟಿ. “ನಾನು ಸಂಪೂರ್ಣ ಸ್ತ್ರೀವಾದಿ,” ಎಂದು ಹೇಳುವ ಸೋನಂ ಕಪೂರ್ ಅವರ ಮಟ್ಟಿಗೆ, “ಮಹಿಳೆ ದಿಟ್ಟವಾಗಿ ತನ್ನ ಅಭಿಪ್ರಾಯವನ್ನು ಸಮರ್ಥಿಸಿಕೊಂಡು, ತನಗೆ ಸರಿಕಂಡಂತೆ ಬದುಕುವುದೇ ಸ್ತ್ರೀವಾದ.”

ಮಹಿಳಾ ಪ್ರಧಾನ ಮತ್ತು ನಟನೆಗೆ ಹೆಚ್ಚು ಅವಕಾಶ ಇರುವ ಪಾತ್ರಗಳಲ್ಲಿ ನಟಿಸುವ ಮತ್ತೊಬ್ಬ ಬಾಲಿವುಡ್ ನಟಿ ರಾಧಿಕಾ ಆಪ್ಟೆ. ಸ್ವತಃ ಕಟು ಸ್ತ್ರೀವಾದಿ ಎಂದು ಹೇಳಿಕೊಳ್ಳುವ ರಾಧಿಕಾ ಅವರ ಪ್ರಕಾರ, ಯಾರಿಗೂ ಸ್ತ್ರೀವಾದವನ್ನು ಕಲಿಸಲು ಸಾಧ್ಯವಿಲ್ಲ. ಮಹಿಳೆಯ ನಡವಳಿಕೆಯಲ್ಲಿ ಸ್ತ್ರೀವಾದ ಗೋಚರಿಸುತ್ತದೆ. “ಸ್ತ್ರೀವಾದ ಎಂದರೆ ಸಮಾನ ಹಕ್ಕುಗಳು, ಮಾನವೀಯತೆ ಮತ್ತು ನಾವು ಯಾರು ಎನ್ನುವುದನ್ನು ಪ್ರತಿನಿಧಿಸುತ್ತದೆ. ಸಮಾನ ಹಕ್ಕುಗಳಿಂದ ಸಮಾಜಕ್ಕೆ ಮಹಿಳೆ ಕೊಡುಗೆಯನ್ನು ಕೊಡಬಹುದು. ಸಮಾನತೆಯಿಂದ ಸ್ವತಃ ಒಂದು ವರ್ಚಸ್ಸನ್ನು ಬೆಳೆಸಿಕೊಳ್ಳಬೇಕು. ಪ್ರತಿ ಕಾರ್ಯದಲ್ಲೂ, ಆಡುವ ಪ್ರತಿ ಮಾತಿನಲ್ಲೂ ನಮ್ಮ ಸ್ವಂತ ಅಭಿಪ್ರಾಯ ಕಾಣಬೇಕು. ಪ್ರತಿಯೊಂದು ವಿಚಾರದಲ್ಲೂ ಮತ್ತೊಬ್ಬರ ಪ್ರಭಾವ ಇದ್ದೇ ಇರುತ್ತದೆ. ಹೀಗಾಗಿ ಸ್ವಂತ ಅಭಿಪ್ರಾಯ ನಮ್ಮೊಳಗಿನಿಂದಲೇ ಬರಬೇಕು. ಮಹಿಳೆ ಹೀಗೆ ಸ್ವಂತ ಅಭಿಪ್ರಾಯ ಹೊಂದಿರುವುದೇ ಸ್ತ್ರೀವಾದ,” ಎಂದು ಇತ್ತೀಚೆಗೆ ರಾಧಿಕಾ ಮಾಧ್ಯಮಗಳಿಗೆ ತಮ್ಮ ಸ್ತ್ರೀವಾದದ ಕಲ್ಪನೆಯನ್ನು ವಿವರಿಸಿದ್ದರು.

ಭಾರತೀಯ ಸಿನಿಮಾಗಳು ಮಹಿಳಾ ಪ್ರಧಾನವಾಗಿದ್ದು ಅತಿ ಕಡಿಮೆ. ಮುಖ್ಯವಾಗಿ, ಹಿಂದಿ ಸಿನಿಮಾಗಳು ಸದಾ ನಾಯಕ ಪ್ರಧಾನವಾಗಿಯೇ ಇರುತ್ತವೆ. ಇಂತಹ ಸಂದರ್ಭದಲ್ಲಿ ನಟಿಯರು ತಮ್ಮ ‘ಪಾಪ್ ಫೆಮಿನಿಸಂ’ ಅಭಿಪ್ರಾಯಗಳನ್ನು ಹತ್ತಿಕ್ಕಿಯೇ ನಟನೆಯ ಅವಕಾಶಗಳನ್ನು ಪಡೆದುಕೊಂಡು ಮುಂದೆ ಸಾಗುವ ಅನಿವಾರ್ಯತೆ ಇದೆ. ಆದರೆ, ಇಂತಹ ಅನಿವಾರ್ಯ ಸ್ಥಿತಿಯಲ್ಲಿಯೂ ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾ ಅವರಂಥವರು ವಿಶ್ವದ ಗಮನ ಸೆಳೆಯುತ್ತಾರೆ. ಕಂಗನಾ, ತಾಪ್ಸಿ, ಸ್ವರ, ರಾಧಿಕಾ ಮೊದಲಾದವರು ಸೀಮಿತ ಅವಕಾಶಗಳಲ್ಲೇ ತಮ್ಮ ಸ್ವಂತ ಇಮೇಜ್‌ ರೂಪಿಸಿಕೊಂಡಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More