ತಮಿಳು ಚಿತ್ರಸಾಹಿತ್ಯವನ್ನು ಪುರಾಣದಿಂದ ಜನಸಾಮಾನ್ಯರತ್ತ ಕರೆತಂದ ಕರುಣಾನಿಧಿ

ಏಕತಾನತೆಯ ಕಥಾವಸ್ತುಗಳಿಗೆ ಒಗ್ಗಿದ್ದ ಪ್ರೇಕ್ಷಕರಿಗೆ ಕರುಣಾನಿಧಿ ರಚನೆಯ ಚಿತ್ರಕತೆ, ಸಂಭಾಷಣೆ ಇಷ್ಟವಾಯ್ತು. ಅವರ ಚುರುಕು ಸಂಭಾಷಣೆಗಳು ಜನಸಾಮಾನ್ಯರನ್ನು ಆಕರ್ಷಿಸಿದವು. ರಂಗಭೂಮಿ ಹಿನ್ನೆಲೆಯ ಕರುಣಾನಿಧಿ, ತಮ್ಮ ಬರವಣಿಗೆಯಲ್ಲಿ ದ್ರಾವಿಡ ನೆಲದ ಸತ್ವವನ್ನೆಲ್ಲೂ ಬಿಟ್ಟುಕೊಡಲಿಲ್ಲ

“ಐವತ್ತರ ದಶಕದಲ್ಲಿ ತಮಿಳು ಸಿನಿಮಾ ಪ್ರೇಕ್ಷಕರು ಸಂಸ್ಕೃತ ಪ್ರಭಾವದ ಉದ್ದನೆಯ ಸಂಭಾಷಣೆಗಳಿಗೆ ಒಗ್ಗಿಹೋಗಿದ್ದರು. ಬಹುತೇಕ ಚಿತ್ರಗಳು ಭಕ್ತಿ ಪ್ರಧಾನ, ಪೌರಾಣಿಕ ಕತೆಗಳನ್ನೇ ಹೊಂದಿರುತ್ತಿದ್ದವು. ಈ ಅವಧಿಯಲ್ಲಿ ಕರುಣಾನಿಧಿ ತಮಿಳು ಚಿತ್ರಸಾಹಿತ್ಯಕ್ಕೆ ಹೊಸತನ ತಂದರು. ಚಿಕ್ಕ, ಹರಿತ ಮತ್ತು ಸಾಮಾನ್ಯರಿಗೂ ತಕ್ಷಣಕ್ಕೆ ಅರ್ಥವಾಗುವಂಥ ಸಂಭಾಷಣೆ ಬರೆದರು. ಅಲ್ಲೊಂದು ಮಾದರಿಯೇ ಸೃಷ್ಟಿಯಾಯ್ತು,” ಎನ್ನುವುದು ತಮಿಳು ಸಿನಿಮಾ ವಿಮರ್ಶಕರ ಅಭಿಪ್ರಾಯ. ಈ ಹೇಳಿಕೆ ಹಿನ್ನೆಲೆಯಲ್ಲಿ ನೋಡಿದರೆ, ತಮಿಳು ಚಿತ್ರರಂಗಕ್ಕೆ ಕರುಣಾನಿಧಿ ಅವರ ಕೊಡುಗೆಯ ಮಹತ್ವವೇನು ಎನ್ನುವುದು ಅರಿವಾಗುತ್ತದೆ.

ತಮಿಳು ಚಿತ್ರರಂಗದಲ್ಲಿ ಆ ವೇಳೆಗೆ ಇದೊಂದು ತಾಜಾ ಬೆಳವಣಿಗೆ. ಧರ್ಮ, ದೇವರ ಸುತ್ತ ಸುತ್ತುತ್ತಿದ್ದ ಕತೆಗಳಿಂದ ಪ್ರೇಕ್ಷಕರಿಗೂ ಬೇಸರವಾಗಿತ್ತು. ಕರುಣಾನಿಧಿ ರಚನೆಯ ಸ್ಕ್ರಿಪ್ಟ್‌ಗಳು ಜನಸಾಮಾನ್ಯರ ಬದುಕಿಗೆ ಹತ್ತಿರವಾಗಿದ್ದವು. ಭಾಷೆಯ ಮೇಲಿನ ಹಿಡಿತ, ರಂಗಭೂಮಿ ಹಿನ್ನೆಲೆಯ ಕರುಣಾನಿಧಿ ರಿಯಾಲಿಸ್ಟಿಕ್‌ ಚಿತ್ರಕತೆಗಳೊಂದಿಗೆ ಸಾಮಾನ್ಯರ ನಾಡಿಮಿಡಿತಕ್ಕೆ ಕನ್ನಡಿ ಹಿಡಿದರು. ಉದ್ದನೆಯ ಮಾತುಗಳಿಗೆ ಕತ್ತರಿ ಹಾಕಿದ ಅವರು ತಮ್ಮದೇ ಒಂದು ಸಂಭಾಷಣಾ ಶೈಲಿ ರೂಢಿಸಿಕೊಂಡರು. ದ್ರಾವಿಡ ಸೊಗಡಿನ ಮಾತುಗಳಲ್ಲಿ ರಾಜಕೀಯ ಸಂದೇಶವೂ ಇರುತ್ತಿತ್ತು. ಈ ಶೈಲಿ ಅವರಿಗೆ ದೊಡ್ಡ ಜನಪ್ರಿಯತೆ ತಂದುಕೊಟ್ಟಿತು. ಈ ಕ್ರಿಯಾಶೀಲತೆಯೇ ಮುಂದೆ ಅವರ ರಾಜಕೀಯ ಪ್ರವೇಶಕ್ಕೂ ಭೂಮಿಕೆಯಾಯ್ತು ಎನ್ನುವುದು ವಿಶೇಷ.

ಕರುಣಾನಿಧಿ ಚಿತ್ರಕತೆ ರಚನೆಯ ಸಿನಿಮಾಗಳ ವಿಡಿಯೋ ಗುಚ್ಛ

ತಮಿಳು ಸಿನಿಮಾ ಸಾಹಿತ್ಯದಲ್ಲಿ ಬದಲಾವಣೆ ತರಲು ಕರುಣಾನಿಧಿಗೆ ಸಾಧ್ಯವಾಗಿದ್ದು ಅವರ ದಟ್ಟ ರಂಗಭೂಮಿ ಹಿನ್ನೆಲೆಯಿಂದಾಗಿ. ಹರೆಯದಲ್ಲೇ ಕತೆ, ಕವಿತೆ, ನಾಟಕಗಳೆಡೆ ಆಸಕ್ತರಾಗಿದ್ದರು. ‘ಕಲೆಗಾಗಿ ಕಲೆ’ ಎನ್ನುವ ಮೀಮಾಂಸೆಯನ್ನು ಒಪ್ಪದ ಅವರು ‘ತತ್ವವಿಲ್ಲದ ಸಾಹಿತ್ಯ ಛಾವಣಿಯಿಲ್ಲದ ಮನೆ’ ಎಂದು ಪ್ರತಿಪಾದಿಸಿದವರು. ಸಾಹಿತ್ಯ ಜನರ ಬದುಕನ್ನು ಹಸನುಗೊಳಿಸಬೇಕು ಎನ್ನುವ ಆಶಯ ಅವರದು. ಈ ಹಿನ್ನೆಲೆಯಲ್ಲಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡ ಅವರು 25 ನಾಟಕ, 150ಕ್ಕೂ ಹೆಚ್ಚು ಸಣ್ಣಕತೆ ಹಾಗೂ ನೂರಾರು ಕವಿತೆಗಳನ್ನು ರಚಿಸಿದ್ದಾರೆ. ಮುಂದೆ ಸಿನಿಮಾಗೆ ಚಿತ್ರಕತೆ ರಚಿಸುವಲ್ಲಿಯೂ ಅವರು ಇದೇ ನೀತಿ ಅನುಸರಿಸಿದರು.

ರಾಜಕೀಯ ಪ್ರವೇಶದ ನಂತರ ಡಿಎಂಕೆ ಪಕ್ಷದ ಪ್ರಚಾರಕ್ಕಾಗಿ ‘ತೋಕು ಮೆಡೈ’ ನಾಟಕ ರಚಿಸಿದ್ದರು. ಅವರ ರಚನೆಯ ‘ಪರಬ್ರಹ್ಮಂ’ ನಾಟಕದಲ್ಲಿ ಶಿವಾಜಿ ಗಣೇಶನ್‌ ಮುಖ್ಯಪಾತ್ರದಲ್ಲಿ ನಟಿಸಿದ್ದರು. ‘ಮಣಿ ಮೊಹುದಮ್‌’ ನಾಟಕದಲ್ಲಿ ಎಸ್‌ ಎಸ್ ರಾಜೇಂದ್ರನ್ ನಟಿಸಿದರೆ, ‘ದಿ ಪೇಪರ್‌ ಫ್ಲವರ್‌’ನಲ್ಲಿ ಸ್ವತಃ ಅವರೇ ಬಣ್ಣ ಹಚ್ಚಿದ್ದರು. ಅವರು ರಚಿಸಿದ ‘ಮಂದ್ರಿ ಕುಮಾರಿ’, ‘ಪರಾಶಕ್ತಿ’ ನಾಟಕಗಳು ಚಲನಚಿತ್ರಗಳಾಗಿಯೂ ಯಶಸ್ವಿಯಾದವು. ‘ಫ್ರೈಡೇ’, ‘ಮನ್‌ಮೋಹನ್‌’, ‘ಮಲೈಕಳ್ಳನ್’‌, ‘ಪೂಮಾಲೈ’ ಕರುಣಾ ರಚನೆಯ ಇತರ ಪ್ರಮುಖ ನಾಟಕಗಳು. ತೆಳುಹಾಸ್ಯದೊಂದಿಗೆ ಚಿಂತನೆಯ ಒರೆಗೆ ಹಚ್ಚುವುದು ಕರುಣಾನಿಧಿ ಬರವಣಿಗೆಯ ಶೈಲಿ.

ಕರುಣಾನಿಧಿ ಚಿತ್ರಕತೆ ರಚನೆಯ, ಎಂಜಿಆರ್‌ ಅಭಿನಯದ ‘ಮಂಥಿರಿ ಕುಮಾರಿ’ (1950) ಚಿತ್ರದ ಹಾಡಿನ ದೃಶ್ಯ

ಕರುಣಾನಿಧಿ ಚಿತ್ರಕತೆ ರಚನೆಯ ಮೊದಲ ಸಿನಿಮಾ ‘ರಾಜಕುಮಾರಿ’ (1947). ಮರುವರ್ಷ ಅವರು ಚಿತ್ರಕತೆ ರಚಿಸಿದ್ದ ‘ಅಭಿಮನ್ಯು’ ಉದ್ಯಮದ ಗಮನ ಸೆಳೆಯಿತು. ಕರುಣಾನಿಧಿಯ ದೈತ್ಯ ಪ್ರತಿಭೆಯನ್ನು ಪರಿಚಯಿಸಿದ್ದು ‘ಪರಾಶಕ್ತಿ’ (1952). ಈ ಸಿನಿಮಾ ಅವರನ್ನು ಸ್ಟಾರ್ ಚಿತ್ರಸಾಹಿತಿಯನ್ನಾಗಿಸಿತು. ಅಲ್ಲದೆ, ತಮಿಳು ಚಿತ್ರರಂಗದ ದಂತೆಕತೆ ಎನಿಸಿಕೊಂಡ ಶಿವಾಜಿ ಗಣೇಶನ್‌ ಅವರ ವೃತ್ತಿಬದುಕಿಗೆ ಪ್ರಮುಖ ತಿರುವು ನೀಡಿತು. ಈ ಚಿತ್ರದಲ್ಲಿ ತೀಕ್ಷ್ಣ ಸಂಭಾಷಣೆಗಳೊಂದಿಗೆ ಕರುಣಾನಿಧಿ, ಕಟ್ಟಾ ಸಂಪ್ರದಾಯಸ್ಥರಿಗೆ ಚುರುಕು ಮುಟ್ಟಿಸಿದ್ದರು. ಇದೇ ವರ್ಷ ತೆರೆಕಂಡ ‘ಮನೋಹರ’ ಸಿನಿಮಾದಲ್ಲಿ ಅವರು ಹಾಸ್ಯ, ವಿಡಂಬನಾ ಶೈಲಿ ಸಂಭಾಷಣೆ ಬರೆದು ಗಮನ ಸೆಳೆದರು. ಈ ಎರಡೂ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸು ಕಂಡವು.

ಮುಂದೆ ರಾಜಕೀಯ ಪ್ರವೇಶಿಸಿದ ನಂತರ ರಾಜಕಾರಣದ ಜೊತೆಜೊತೆಗೆ ಅವರ ಚಿತ್ರಕತೆ ರಚನೆಯೂ ನಡೆದಿತ್ತು. ಮೊದಲ ಕಂತಿನಲ್ಲಿ ಅವರು ಕೊನೆಯದಾಗಿ ಚಿತ್ರಕತೆ ಮತ್ತು ಸಂಭಾಷಣೆ ರಚಿಸಿದ್ದು ‘ಪುತಿಯಾ ಪರಾಶಕ್ತಿ’ (1996) ಚಿತ್ರಕ್ಕೆ. ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ನೆಲಕಚ್ಚಿತು. ಆದರೆ, ಚಿತ್ರ ತೆರೆಕಂಡ ಕೆಲವು ತಿಂಗಳಿಗೆ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಕರುಣಾನಿಧಿ ಮತ್ತೆ ಚಿತ್ರಕತೆಗಾರನಾಗಿ ಸೆಕೆಂಡ್‌ ಇನಿಂಗ್ಸ್‌ ಆರಂಭಿಸಿದ್ದು ‘ಕಲೈನರಿನ್ ಕಣ್ಣಮ್ಮ’ (2005) ಚಿತ್ರದೊಂದಿಗೆ. ‘ಪನ್ನಾರ್ ಶಂಕರ್‌’ (2011) ಅವರು ಚಿತ್ರಕತೆ ರಚಿಸಿದ ಕೊನೆಯ ಸಿನಿಮಾ. 2005-2011ರ ಅವಧಿಯಲ್ಲಿ ಏಳು ಸಿನಿಮಾಗಳಿಗೆ ಕರುಣಾನಿಧಿ ಚಿತ್ರಕತೆ ರಚಿಸಿದ್ದಾರೆ. ಪ್ರಸ್ತುತ ಅವರ ಮೊಮ್ಮಗ ಉದಯನಿಧಿ (ಸ್ಟಾಲಿನ್ ಪುತ್ರ) ತಮಿಳು ಚಿತ್ರರಂಗದಲ್ಲಿ ನಾಯಕನಟನಾಗಿ ಗುರುತಿಸಿಕೊಂಡಿದ್ದಾರೆ. ತಾತನ ಸಿನಿಮಾ ನಂಟು ಉದಯನಿಧಿ ಅವರೊಂದಿಗೆ ಮುಂದುವರಿದಿದೆ.

ದ್ರಾವಿಡ ನೆಲದ ಸೊಗಡನ್ನು ಬಿಟ್ಟುಕೊಡದೆ ಹೊಸ ತಲೆಮಾರಿಗೂ ಅವರು ಬರೆದು ಯಶಸ್ವಿಯಾದರು. ಶಿವಾಜಿ ಗಣೇಶನ್‌‌, ಎಂಜಿಆರ್‌ ಸೇರಿದಂತೆ ಹತ್ತಾರು ನಟ-ನಟಿಯರ ವೃತ್ತಿಬದುಕಿಗೆ ಅವರ ಚಿತ್ರಕತೆಗಳು ತಿರುವು ನೀಡಿವೆ. ಐವತ್ತಕ್ಕೂ ಹೆಚ್ಚು ಸಿನಿಮಾಗಳಿಗೆ ಕರುಣಾನಿಧಿ ಚಿತ್ರಕತೆ, ಸಂಭಾಷಣೆ ರಚಿಸಿದ್ದಾರೆ. “ತಮಿಳು ಚಿತ್ರರಂಗದ ಚಿತ್ರ ಸಾಹಿತ್ಯಕ್ಕೆ ಪ್ರಮುಖ ತಿರುವು ನೀಡಿದವರು ಕರುಣಾನಿಧಿ. ಅಗಾಧ ಓದು, ವೈಚಾರಿಕತೆ, ರಂಗಭೂಮಿ ಹಿನ್ನೆಲೆಯಿಂದಾಗಿ ಕರುಣಾನಿದಿ ಅವರಿಂದ ಇಂತಹ ಮಹತ್ವದ ಕೊಡುಗೆ ಸಾಧ್ಯವಾಗಿದೆ,” ಎಂದು ತಮಿಳು ಸಿನಿಮಾ ವಿಶ್ಲೇ‍ಷಕರು ಅಭಿಪ್ರಾಯಪಡುತ್ತಾರೆ.

ಇದನ್ನೂ ಓದಿ : ಕರುಣಾನಿಧಿ ನಿರ್ಗಮನ: ಬದಲಾಗಲಿದೆಯೇ ದ್ರಾವಿಡ ಚಳವಳಿಯ ರಾಜಕೀಯ ವ್ಯಾಕರಣ?

ಕರುಣಾನಿಧಿ ಚಿತ್ರಕತೆ ರಚನೆಯ ಕೊನೆಯ ಸಿನಿಮಾ ‘ಪೊನ್ನಾರ್ ಶಂಕರ್‌’ (2011)

ಇರುವರ್‌: ಮಣಿರತ್ನಂ ನಿರ್ಮಿಸಿ, ನಿರ್ದೇಶಿಸಿದ್ದ ‘ಇರುವರ್‌’ ತಮಿಳು ಸಿನಿಮಾದಲ್ಲಿ ಕರುಣಾನಿಧಿ ಚಿತ್ರಣವಿತ್ತು. ತಮಿಳುನಾಡು ರಾಜಕೀಯ ಮತ್ತು ಸಿನಿಮಾರಂಗವನ್ನು ಪ್ರಭಾವಿಸಿದ ಎಂಜಿಆರ್ ಮತ್ತು ಕರುಣಾನಿಧಿ ಅವರ ಪಾತ್ರಗಳನ್ನು ಮಣಿರತ್ನಂ ತೆರೆಮೇಲೆ ತಂದಿದ್ದರು. ಒಂದೆಡೆ, ಇವರಿಬ್ಬರ ಸಿನಿಮಾ ಬದುಕಿನ ಕುರಿತು ಹೇಳುವ ಸಿನಿಮಾ, ಮತ್ತೊಂದಡೆ ತಮಿಳುನಾಡಿನ ರಾಜಕೀಯ ಮತ್ತು ಸಿನಿಮಾ ನಂಟನ್ನು ಬಿಚ್ಚಿಟ್ಟಿತ್ತು. ಮೋಹನ್‌ ಲಾಲ್ ಅವರು ಎಂಜಿಆರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಕರುಣಾನಿಧಿ ಅವರನ್ನು ಹೋಲುವ ಪಾತ್ರವನ್ನು ಪ್ರಕಾಶ್ ರೈ ನಿರ್ವಹಿಸಿದ್ದರು. ಜಯಲಲಿತಾರನ್ನು ಹೋಲುವ ಪಾತ್ರದಲ್ಲಿ ಐಶ್ವರ್ಯಾ ರೈ ನಟಿಸಿದ್ದರು.

ಚಿತ್ರೀಕರಣಕ್ಕೆ ಮುನ್ನವೇ ಸಿನಿಮಾ ವಿವಾದಕ್ಕೆ ಈಡಾಗಿತ್ತು. ಇದೊಂದು ರಾಜಕೀಯ ಚಿತ್ರವಾಗಿದ್ದು, ನಿರ್ದಿಷ್ಟ ವ್ಯಕ್ತಿಗಳ ಬದುಕಿನ ಚಿತ್ರಣಕ್ಕೆ ಆಸ್ಪದವಿರುವುದಿಲ್ಲ ಎಂದಿದ್ದರು ಮಣಿರತ್ನಂ. ಆದರೆ, ಚಿತ್ರದಲ್ಲಿ ಎಂಜಿಆರ್‌, ಕರುಣಾನಿಧಿ, ಐಶ್ವರ್ಯಾ ರೈ ಸೇರಿ ಹಲವಾರು ನೈಜ ಪಾತ್ರಗಳು ತೆರೆಯ ಮೇಲೆ ಅನಾವರಣಗೊಂಡಿದ್ದವು. ಚಿತ್ರದಲ್ಲಿ ಆನಂದನ್‌ (ಮೋಹನ್‌ಲಾಲ್‌) ಮತ್ತು ತಮಿಳ್‌ಸೆಲ್ವನ್‌ (ಪ್ರಕಾಶ್‌ ರೈ) ಪಾತ್ರಗಳೊಂದಿಗೆ ಎಂಜಿಆರ್‌ ಮತ್ತು ಕರುಣಾನಿಧಿ ಬದುಕಿಗೆ ಮಣಿರತ್ನಂ ಕನ್ನಡಿ ಹಿಡಿದಿದ್ದರು. ಇಬ್ಬರ ಸ್ನೇಹ, ರಾಜಕೀಯ ಪ್ರವೇಶ, ತಾತ್ವಿಕ ಭಿನ್ನಾಭಿಪ್ರಾಯಗಳು, ಇಬ್ಬರ ಮಧ್ಯೆ ತಲೆದೋರುವ ವೈಮನಸ್ಸು ಸೇರಿದಂತೆ ಸೂಕ್ಷ್ಮ ಸಂಗತಿಗಳು ಚಿತ್ರದಲ್ಲಿ ಅನಾವರಣಗೊಂಡಿದ್ದವು. ರೇವತಿ, ಗೌತಮಿ, ತಬು, ನಾಜರ್‌, ಕಾಕ ರಾಧಾಕೃಷ್ಣನ್‌, ಮೇಜರ್ ಸುಂದರ್‌ ರಾಜನ್‌, ದಿಲ್ಲಿ ಗಣೇಶ್‌ ಮತ್ತಿತರರು ಚಿತ್ರದಲ್ಲಿ ನಟಿಸಿದ್ದರು. ಬಾಕ್ಸ್ ಆಫೀಸ್‌ನಲ್ಲಿ ಚಿತ್ರಕ್ಕೆ ದೊಡ್ಡ ಗೆಲುವು ಸಿಗಲಿಲ್ಲ. ಆದರೆ, ಸಿನಿಮಾ ವಿಶ್ಲೇಷಕರ ಅಪಾರ ಮೆಚ್ಚುಗೆಗೆ ಪಾತ್ರವಾಯ್ತು. ಎ ಆರ್ ರೆಹಮಾನ್ ಸಂಗೀತ ಸಂಯೋಜನೆಯ ಸಿನಿಮಾ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿತು. ಈ ಹೊತ್ತಿಗೂ ಇದೊಂದು ಭಾರತದ ಅತ್ಯುತ್ತಮ ರಾಜಕೀಯ ಚಿತ್ರವಾಗಿ ಕಾಣಿಸುತ್ತದೆ.

೨೦೧೦ರಲ್ಲಿ ಚೆನ್ನೈನಲ್ಲಿ ಆಯೋಜಿಸಲಾದ ೯ನೇ ವಿಶ್ವ ತಮಿಳು ಸಮಾವೇಶಕ್ಕಾಗಿ ನಿರ್ಮಿಸಿದ 'ಸೆಮ್ಮುಳಿಯಾನಾ ತಮಿಳ್‌ ಮೊಳಿಯಾಂ' ಗೀತೆಯನ್ನು ಬರೆದಿದ್ದು ಕರುಣಾನಿಧಿ. ಗೌತಮ್‌ ಮೆನನ್‌ ನಿರ್ದೇಶನ ಹಾಗೂ ಎ ಆರ್‌ ರೆಹಮಾನ್‌ ಸಂಗೀತ ನಿರ್ದೇಶನದಲ್ಲಿ ಸಿದ್ಧವಾದ ಈ ವಿಡಿಯೋ ಗೀತೆಯಲ್ಲಿ ಖ್ಯಾತನಾಮರು ಕಾಣಿಸಿಕೊಂಡಿದ್ದರು. ಸುಶೀಲ, ಯುವನ್‌ ಶಂಕರ್‌ ರಾಜಾ, ಹರಿಹರನ್‌ ಸೇರಿದಂತೆ ಪ್ರಸಿದ್ಧ ಗಾಯಕರು ಹಾಡಿದ್ದರು.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More