‘ನಾಯಗನ್’‌ ಚಿತ್ರಕ್ಕೆ ‘ಒನ್ಸ್ ಅಪಾನ್ ಎ ಟೈಂ ಇನ್ ಅಮೆರಿಕ’ ಪ್ರೇರಣೆ ಎಂದ ಕಮಲ್

ನಟ, ನಿರ್ದೇಶಕ ಕಮಲ್ ಹಾಸನ್ ತಮ್ಮನ್ನು ಪ್ರಭಾವಿಸಿದ ಅಂತಾರಾಷ್ಟ್ರೀಯ ತಂತ್ರಜ್ಞರು, ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. ಅವರ ‘ವಿಶ್ವರೂಪಂ 2’ ಸಿನಿಮಾ ಈ ವಾರ ತೆರೆಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ನಡೆದ ಸಂದರ್ಶನವೊಂದರಲ್ಲಿ ಅವರು ತಮ್ಮ ನೆಚ್ಚಿನ ತಂತ್ರಜ್ಞರನ್ನು ಸ್ಮರಿಸಿದ್ದಾರೆ

ಭಾರತೀಯ ಸಿನಿಮಾ ತಂತ್ರಜ್ಞರನ್ನು ಪ್ರಭಾವಿಸಿದ ಪ್ರಮುಖರಲ್ಲಿ ಕಮಲ್ ಹಾಸನ್ ಒಬ್ಬರು. ಆರು ದಶಕಗಳ ಸಿನಿಮಾ ಬದುಕಿನಲ್ಲಿ ತಾವು ಹಲವು ಅಂತಾರಾಷ್ಟ್ರೀಯ ತಂತ್ರಜ್ಞರ ಪ್ರಭಾವಕ್ಕೆ ಸಿಲುಕಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಟಿವಿ ವಾಹಿನಿಯೊಂದರ ಸಂದರ್ಶನದಲ್ಲಿ ಅವರು ತಮ್ಮನ್ನು ಪ್ರಭಾವಿಸಿದ, ತಮ್ಮ ಸಿನಿಮಾಗಳಿಗೆ ಪ್ರೇರಣೆಯಾದ ಹಾಲಿವುಡ್ ಚಿತ್ರಗಳನ್ನು ಪ್ರಸ್ತಾಪಿಸಿದ್ದಾರೆ. “ಬ್ಟಿಟಿಷ್‌ ಮತ್ತು ಅಮೆರಿಕನ್‌ ನಿರ್ದೇಶಕರ ಪೈಕಿ ನನ್ನ ಮೇಲೆ ಮರ್ಲಿನ್‌ ಬ್ರ್ಯಾಂಡೋ ಅವರ ಅಪಾರ ಪ್ರಭಾವವಿದೆ. ಆಧುನಿಕ ಸಿನಿಮಾ ಜಗತ್ತಿನ ತಂತ್ರಜ್ಞರಾದ ಅಲೆನ್ ಪಾರ್ಕರ್‌, ಸ್ಟ್ಯಾನ್ಲೇ ಕ್ಯೂಬ್ರಿಕ್‌ ಅವರನ್ನು ಹೆಚ್ಚು ಇಷ್ಟಪಡುತ್ತೇನೆ,” ಎನ್ನುತ್ತಾರವರು.

ಪೋಲೆಂಡ್‌‌ ಚಿತ್ರನಿರ್ದೇಶಕ ಕ್ರಿಜ್ಟಾಫ್‌ ಕಿಸ್ಲೋಸ್ಕಿ ಅವರ ದೊಡ್ಡ ಅಭಿಮಾನಿ ಕಮಲ್‌. ಕಿಸ್ಲೋಸ್ಕಿ ಸಿನಿಮಾರಂಗದ ಮಾಸ್ಟರ್ ಎನ್ನುತ್ತಾರವರು. “ಇಂಗ್ಮರ್ ಬರ್ಗ್‌ಮನ್‌ ನಂತರ ಕಿಸ್ಲೋಸ್ಕಿ ಅವರನ್ನು ನಾನು ಲೆಜೆಂಡ್ ಎಂದು ಪರಿಗಣಿಸುತ್ತೇನೆ. ಅವರ ‘ಕ್ಯಾಮೆರಾ ಬಫ್’‌ ಸಿನಿಮಾ ನನ್ನ ಮೇಲೆ ತೀವ್ರ ಪ್ರಭಾವ ಬೀರಿದೆ,” ಎನ್ನುವ ಕಮಲ್‌, ಅಲನ್ ಪಾರ್ಕರ್‌ ನಿರ್ದೇಶನದ ‘ದಿ ವಾಲ್‌’ ಚಿತ್ರವನ್ನು ವಿಶೇಷವಾಗಿ ಪ್ರಸ್ತಾಪಿಸುತ್ತಾರೆ. “ಪಾರ್ಕರ್ ನಿರ್ದೇಶನದ ‘ದಿ ವಾಲ್‌’ ನನ್ನನ್ನು ತುಂಬಾ ಕಾಡಿದ ಸಿನಿಮಾ. ರಿಡ್ಲೇ ಸ್ಕಾಟ್‌ ಚೊಚ್ಚಲ ನಿರ್ದೇಶನದ ‘ದಿ ಡ್ಯೂಯೆಲಿಸ್ಟ್‌’ ಕೂಡ ನನ್ನನ್ನು ತುಂಬಾ ಪ್ರಭಾವಿಸಿತು. ಮೊದಲ ಸಿನಿಮಾದಲ್ಲೇ ಅವರಲ್ಲಿನ ಪ್ರತಿಭಾವಂತ ನಿರ್ದೇಶಕನ ಪರಿಚಯವಾಯ್ತು,” ಎಂದಿದ್ದಾರೆ ಕಮಲ್‌.

‘ಒನ್ಸ್ ಅಪಾನ್ ಎ ಟೈಂ ಇನ್ ಅಮೆರಿಕ’ ಟ್ರೈಲರ್

ತಮ್ಮ ಗ್ಯಾಂಗ್‌ಸ್ಟರ್‌ ಸಿನಿಮಾ ‘ನಾಯಗನ್‌’ಗೆ ಸ್ಫೂರ್ತಿಯಾದ ಹಾಲಿವುಡ್‌ ಚಿತ್ರದ ಬಗ್ಗೆ ಕಮಲ್ ಪ್ರೀತಿಯಿಂದ ಮಾತನಾಡಿದ್ದಾರೆ. “ಸೆರ್ಗಿಯೋ ಲಿಯೋನ್‌ ಅವರ ‘ಒನ್ಸ್ ಅಪಾನ್‌ ಎ ಟೈಂ ಇನ್ ಅಮೆರಿಕ’ ನನ್ನ ಅತ್ಯಂತ ಮೆಚ್ಚಿನ ಸಿನಿಮಾ. ಈ ಚಿತ್ರದ ಪ್ರೇರಣೆಯಿಂದಲೇ ನಾವು ‘ನಾಯಗನ್‌’ ಸಿನಿಮಾ ಮಾಡಿದ್ದು. ಈ ಚಿತ್ರದೊಂದಿಗೆ ಲಿಯೋನ್ ಟ್ರೆಂಡ್ ಸೆಟ್ ಮಾಡಿದರು. ಚಿತ್ರದಲ್ಲಿನ ಎನ್ನಿಯೋ ಮೊರಿಕೋನ್‌ ಸಂಗೀತ ನಾಲ್ಕು ತಲೆಮಾರುಗಳನ್ನು ಪ್ರಭಾವಿಸುವಂತಿದೆ. ಒಂದೊಂದೇ ಪಾತ್ರವನ್ನು ನೀವು ಗಮನಿಸುತ್ತ ಹೋದಾಗ, ಸಿನಿಮಾ ಆವರಿಸಿಕೊಳ್ಳುತ್ತ ಹೋಗುತ್ತದೆ,” ಎಂದು ಕಮಲ್ ತಮ್ಮ ನೆಚ್ಚಿನ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ : ಕಾಜೋಲ್ ಜನ್ಮದಿನದಂದು ‘ಹೆಲಿಕಾಪ್ಟರ್‌ ಈಲಾ’ ಟ್ರೈಲರ್ ಬಿಡುಗಡೆ

ಈ ವಾರ (ಆ.10) ಕಮಲ ಹಾಸನ್‌ ನಿರ್ಮಿಸಿ, ನಿರ್ದೇಶಿಸಿ ನಟಿಸಿರುವ ‘ವಿಶ್ವರೂಪಂ2’ ತಮಿಳು ಸಿನಿಮಾ ತೆರೆಕಾಣುತ್ತಿದೆ. 2014ರಲ್ಲಿ ತೆರೆಕಂಡಿದ್ದ ‘ವಿಶ್ವರೂಪಂ’ ಸಿನಿಮಾದ ಸರಣಿ ಇದು. ವಿವಾದಗಳೊಂದಿಗೆ ತೆರೆಕಂಡ ‘ವಿಶ್ವರೂಪಂ’ಗೆ ನಿಷೇಧದ ಭೀತಿಯೂ ಎದುರಾಗಿತ್ತು. ನಂತರ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸು ಕಂಡ ಸಿನಿಮಾ, ಎರಡು ರಾಷ್ಟ್ರಪ್ರಶಸ್ತಿಗಳನ್ನು ಪಡೆದಿತ್ತು. ‘ವಿಶ್ವರೂಪಂ2’ನಲ್ಲಿ ಕಮಲ್‌ RAW ಏಜೆಂಟ್‌ ಪಾತ್ರದಲ್ಲಿ ನಟಿಸಿದ್ದು, ರಾಹುಲ್ ಬೋಸ್ ಉಗ್ರಗಾಮಿಯಾಗಿ ಕಾಣಿಸಿಕೊಂಡಿದ್ದಾರೆ. ‘ವಿಶ್ವರೂಪಂ’ ಕ್ಲೈಮ್ಯಾಕ್ಸ್‌ನೊಂದಿಗೆ ಈ ಸಿನಿಮಾ ಆರಂಭವಾಗುತ್ತದೆ. ಪೂಜಾ ಕುಮಾರ್‌, ಆಂಡ್ರೆ ಜೆರೆಮಿ, ಶೇಖರ್ ಕಪೂರ್, ವಹೀದಾ ರೆಹಮಾನ್‌ ಮತ್ತಿತರರು ಚಿತ್ರದಲ್ಲಿ ನಟಿಸಿದ್ದಾರೆ.

ನಾಯಗನ್‌

ವಿಶ್ವರೂಪಂ 2

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More