ಟ್ರೈಲರ್ | ಸಲ್ಮಾನ್‌ ಖಾನ್ ನಿರ್ಮಾಣದ ‌ಆಯುಶ್- ವರೀನಾ ‘ಲವ್‌ರಾತ್ರಿ’

ಸಲ್ಮಾನ್ ಖಾನ್‌ ತಮ್ಮ ತಂಗಿಯ ಪತಿ ಆಯುಶ್‌ಗಾಗಿ ನಿರ್ಮಿಸುತ್ತಿರುವ ‘ಲವ್ ರಾತ್ರಿ’ ಹಿಂದಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಆಯುಶ್‌ ಮತ್ತು ವರೀನಾ ಹುಸೇನ್‌ ಜೋಡಿಯ ಟ್ರೈಲರ್ ಹಾಡು, ನೃತ್ಯಗಳೊಂದಿಗೆ‌ ರೊಮ್ಯಾಂಟಿಕ್‌-ಡ್ರಾಮಾ ಎನ್ನುವ ಸೂಚನೆ ನೀಡುತ್ತದೆ

ತಿಂಗಳುಗಳ ಹಿಂದೆ ಬಿಡುಗಡೆಯಾಗಿದ್ದ ‘ಲವ್ ರಾತ್ರಿ’ ಟೀಸರ್ ಸಿನಿಪ್ರಿಯರಿಗೆ‌ ಅಷ್ಟೇನೂ ಇಷ್ಟವಾಗಿರಲಿಲ್ಲ. ಇದೀಗ ಟ್ರೈಲರ್ ಬಂದಿದೆ. ಬಾಲಿವುಡ್‌ನ ಮಾಮೂಲಿ ಫಾರ್ಮುಲಾದ ಲವ್ ಸಿನಿಮಾಗಳಂತೆ ಭಾಸವಾಗುತ್ತದಾದರೂ ಮೇಕಿಂಗ್‌ ಆಕರ್ಷಕವಾಗಿದೆ. ಆಯುಶ್ ಶರ್ಮಾ ಮತ್ತು ವರೀನಾ ಹುಸೇನ್‌ ಜೋಡಿ ತಾಜಾತನದ ಫೀಲ್ ನೀಡುತ್ತದೆ. ಟ್ರೈಲರ್‌ನ ಪ್ರತಿ ದೃಶ್ಯವೂ ಬಣ್ಣದಿಂದ ತುಂಬಿದ್ದು, ಪ್ರೇಮಿಗಳನ್ನು ವಿರೋಧಿಸುವ ಅಪ್ಪ, ಬೆಸೆಯುವ ಅಪ್ಪ ಇದ್ದಾರೆ. ತನ್ನೂರು ಬರೋಡಾಗೆ ಬರುವ ಸುಂದರಿಯೊಬ್ಬಳನ್ನು ಪ್ರೀತಿಸುವ ಸುಶ್ರುತ, ಯುವತಿಯ ಹೃದಯ ಗೆಲ್ಲುವಂತೆ ಪುತ್ರನಿಗೆ ಅಪ್ಪನ ಬೆಂಬಲ, ಒಂಬತ್ತು ದಿನಗಳ ನವರಾತ್ರಿಯ ಕತೆ ಚಿತ್ರದಲ್ಲಿದೆ.

ಟೀಸರ್‌ನಲ್ಲಿ ಆಯುಶ್ ಶರ್ಮಾ ಮತ್ತು ವರೀನಾ ಹುಸೇನ್‌ ಗೊಂಬೆಗಳಂತೆ ಕಾಣಿಸಿಕೊಂಡಿದ್ದರು. ಟ್ರೈಲರ್‌ನಲ್ಲೂ ಇದು ಮುಂದುವರಿದಿದೆ. ನಟನೆಯ ಬಗ್ಗೆ ಇಬ್ಬರೂ ಅಷ್ಟೇನೂ ತಲೆಕೆಡಿಸಿಕೊಂಡಂತಿಲ್ಲ. ನಿರ್ದೇಶಕರು ಇವರಿಂದ ಅಭಿನಯ ಹೊರತೆಗೆಯಲು ಸಾಕಷ್ಟು ಶ್ರಮಪಟ್ಟಿದ್ದಾರೆ ಎನ್ನುವುದು ನಾಲ್ಕಾರು ದೃಶ್ಯಗಳನ್ನು ನೋಡಿದಾಕ್ಷಣವೇ ಅರಿವಾಗುತ್ತದೆ. ಕಂಠಪಾಠ ಮಾಡಿ ಒಪ್ಪಿಸುವಂತೆ ಸಂಭಾಷಣೆ ಹೇಳಿರುವ ಇಬ್ಬರ ನಟನೆಯಲ್ಲೂ ಕೃತಕತೆ ಇಣುಕುತ್ತದೆ. ಆದರೆ, ನೃತ್ಯದ ದೃಶ್ಯಗಳಲ್ಲಿ ಚೆನ್ನಾಗಿ ಸ್ಕೋರ್ ಮಾಡುತ್ತಾರೆ. ಟ್ರೈಲರ್‌ನ ಕೊನೆಯಲ್ಲಿ ಸಲ್ಮಾನ್‌ರ ಇಬ್ಬರು ಕಿರಿಯ ಸಹೋದರರಾದ ಅರ್ಬಾಜ್‌ ಮತ್ತು ಸೊಹೈಲ್ ಕಾಣಿಸುತ್ತಾರೆ. ಇವರು ಹಾಸ್ಯದ ಸನ್ನಿವೇಶಗಳಿಗೆ ಬಳಕೆಯಾದಂತಿದೆ.

ಇದನ್ನೂ ಓದಿ : ಗೆಳತಿಯರಿಗೆ ಆಸ್ಪತ್ರೆಯಿಂದಲೇ ಭಾವುಕ ಸಂದೇಶ ಬರೆದ ಸೋನಾಲಿ ಬೇಂದ್ರೆ

“ಸುಶ್ರುತ ಮತ್ತು ಮನೀಶಾ ಅವರ ಸಮಕಾಲೀನ ಪ್ರೀತಿಯ ಚಿತ್ರಣ ಇಲ್ಲಿದೆ. ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ನಡೆಯುವ ಪ್ರೇಮಕತೆ ಇದು,” ಎನ್ನುತ್ತಾರೆ ಚಿತ್ರದ ನಿರ್ದೇಶಕ ಅಭಿರಾಜ್‌ ಮಿನಾವಾಲಾ. ಅನ್ಶುಮಾನ್‌ ಝಾ, ರೋನಿತ್ ರಾಯ್‌, ರಾಮ್ ಕಪೂರ್‌, ಪ್ರಚಿ ಶಾ, ಪ್ರತೀಕ್‌ ಗಾಂಧಿ ಚಿತ್ರದ ಇತರ ಪಾತ್ರಗಳಲ್ಲಿದ್ದಾರೆ. ಸಲ್ಮಾನ್‌, ಅರ್ಬಾಜ್‌ ಮತ್ತು ಸೊಹೈಲ್ ಅತಿಥಿ ಪಾತ್ರಗಳಲ್ಲಿ ಬಂದುಹೋಗಲಿದ್ದಾರೆ. ಚಿತ್ರವೊಂದಕ್ಕೆ ಮೂರ್ನಾಲ್ಕು ಸಂಗೀತ ಸಂಯೋಜಕರು ಜೊತೆಗೂಡಿ ಕೆಲಸ ಮಾಡುವ ಪರಿಪಾಠ ಇಲ್ಲಿಯೂ ಮುಂದುವರಿದಿದೆ. ತನಿಶ್ಕ್‌ ಬಾಗ್ಚಿ, ಡಿಜೆ ಚೇತಾಸ್ ಮತ್ತು ಲಿಜೋ ಜಾರ್ಜ್‌ ಸಂಗೀತ ಸಂಯೋಜಿಸಿದ್ದಾರೆ. ಇದೇ ವರ್ಷ ಅಕ್ಟೋಬರ್ 5ರಂದು ಸಿನಿಮಾ ತೆರೆಕಾಣಲಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More