ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪಿಸುವಂತೆ ಸಿಎಂ ಎಚ್‌ಡಿಕೆಗೆ ಸಿದ್ದರಾಮಯ್ಯ ಪತ್ರ

ರಾಮನಗರ ಸಮೀಪ ಚಿತ್ರನಗರಿ ನಿರ್ಮಿಸುವುದಾಗಿ ಮುಖ್ಯಮಂತ್ರಿ ಎಚ್‌ಡಿಕೆ ಹೇಳಿದ್ದರು. ಇದೀಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೈಸೂರಿನಲ್ಲೇ ಚಿತ್ರನಗರಿಯಾಗಲಿ ಎಂದು ಪತ್ರ ಬರೆದಿದ್ದಾರೆ. ಇದು ಜಟಾಪಟಿಗೆ ತಿರುಗಿ ಯೋಜನೆ ನನೆಗುದಿಗೆ ಬೀಳದಿರಲಿ ಎಂಬ ಆತಂಕವೂ ವ್ಯಕ್ತವಾಗಿದೆ

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ರಾಮನಗರದಲ್ಲಿ ಚಿತ್ರನಗರಿ ಮತ್ತು ಚಲನಚಿತ್ರ ವಿಶ್ವವಿದ್ಯಾಲಯ ಮಾಡುವ ಯೋಜನೆ ಘೋಷಿಸಿದ್ದರು. ಬಜೆಟ್‌ನಲ್ಲಿ ಪ್ರಾಥಮಿಕ ಹಂತದ ಹಣವೆಂದು 90 ಕೋಟಿ ರುಪಾಯಿ ಮೀಸಲಿಟ್ಟಿದ್ದೂ ಆಗಿದೆ. ಇತ್ತೀಚೆಗೆ, ಪುತ್ರ ನಿಖಿಲ್‌ಗಾಗಿ ಅವರು ನಿರ್ಮಿಸುತ್ತಿರುವ ‘ಸೀತಾರಾಮ ಕಲ್ಯಾಣ’ ಚಿತ್ರದ ಸುದ್ದಿಗೋಷ್ಠಿಯಲ್ಲೂ ತಮ್ಮ ಕಲ್ಪನೆಯ ಚಿತ್ರನಗರಿ ಕುರಿತಂತೆ ಮಾತನಾಡಿದ್ದರು. ಪ್ರಸ್ತುತ ರಾಜಕೀಯ ಬೆಳವಣಿಗೆಗಳು ಚಿತ್ರನಗರಿ ಯೋಜನೆಗೆ ಹಿನ್ನೆಡೆಯಾಗುವ ಸೂಚನೆ ನೀಡಿವೆ. ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷರೂ ಆದ ಸಿದ್ದರಾಮಯ್ಯ ಈ ಕುರಿತಂತೆ ಮುಖ್ಯಮಂತ್ರಿಗಳಿಗೊಂದು ಪತ್ರ ಬರೆದಿದ್ದಾರೆ. “ಐತಿಹಾಸಿಕ ನಗರ ಮೈಸೂರಿನಲ್ಲೇ ಚಿತ್ರನಗರಿ ಸ್ಥಾಪನೆಯಾಗಲಿ,” ಎನ್ನುವುದು ಅವರ ಪತ್ರದ ಒತ್ತಾಯ.

ಜುಲೈ 31ರಂದು ಸಿದ್ದರಾಮಯ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದ ಒಕ್ಕಣೆ ಹೀಗಿದೆ: “ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪನೆಯಾಗಬೇಕೆನ್ನುವುದು ಕನ್ನಡ ಚಿತ್ರರಂಗದ ಬಹುವರ್ಷಗಳ ಕನಸು ಮತ್ತು ಬೇಡಿಕೆ. ಮೈಸೂರು ಹಾಗೂ ಸುತ್ತಮುತ್ತಲಿನ ಪ್ರಕೃತಿಯ ಸೊಬಗು ಹಾಗೂ ಪಾರಂಪರಿಕ ಕಟ್ಟಡಗಳು ಚಿತ್ರೀಕರಣಕ್ಕೆ ಅನುಕೂಲವಾಗಿವೆ. ಈ ಎಲ್ಲ ಅಂಶಗಳನ್ನು ಮನಗಂಡು ಹಿಂದಿನ ಕಾಂಗ್ರೆಸ್‌ ಸರ್ಕಾರ ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪಿಸುವ ನಿರ್ಣಯ ಕೈಗೊಂಡು ನೂರು ಎಕರೆ ಜಮೀನು ಮಂಜೂರು ಮಾಡಿತ್ತು. ಜೊತೆಗೆ ಬಜೆಟ್‌ನಲ್ಲಿಯೂ ಈ ಬಗ್ಗೆ ಅಧಿಕೃತವಾಗಿ ಘೋಷಿಸಲಾಗಿತ್ತು. ಆದರೆ, ಚಿತ್ರನಗರಿಯನ್ನು ರಾಮನಗರಕ್ಕೆ ಸ್ಥಳಾಂತರ ಮಾಡುವುದಾಗಿ ತಾವು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದೀರಿ. ತಮ್ಮ ಈ ನಿರ್ಧಾರವನ್ನು ಮರುಪರಿಶೀಲಿಸಬೇಕು ಹಾಗೂ ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು.”

ಚಿತ್ರನಗರಿಗೆ ಸಂಬಂಧಿಸಿದ ಸಿದ್ದರಾಮಯ್ಯ ಪತ್ರ ಗಾಂಧಿನಗರದಲ್ಲಿ ಸಂಚಲನ ಸೃಷ್ಟಿಸಿದೆ. ಇಲ್ಲಿವರೆಗೆ ಸುಮ್ಮನಿದ್ದ ಸಿದ್ದರಾಮಯ್ಯನವರು ಈಗ ಏಕಾಏಕಿ ಪತ್ರ ಬರೆದಿರುವುದರ ಹಿಂದೆ ಯಾರ ಚಿತಾವಣೆ ಇದೆ ಎನ್ನುವ ಬಗೆಗೂ ಚರ್ಚೆ ನಡೆದಿದೆ. ಹಿಂದೆ ಮೈಸೂರಿನಲ್ಲಿ ಚಿತ್ರನಗರಿಯಾಗಲಿ ಎಂದು ಒತ್ತಾಯ ಮಾಡಿದ ಚಿತ್ರರಂಗದ ಕೆಲವು ಪ್ರಮುಖರೇ ಸಿದ್ದರಾಮಯ್ಯನವರ ಮೇಲೆ ಒತ್ತಡ ತಂದಿದ್ದಾರೆ ಎಂದೂ ಹೇಳಲಾಗುತ್ತಿದೆ. ಮತ್ತೊಂದೆಡೆ, ಇದು ಸಿದ್ದರಾಮಯ್ಯನವರಿಗೆ ಪ್ರತಿಷ್ಠೆಯ ವಿಷಯವಾಗಿರಲಿಕ್ಕೂ ಸಾಕು. ತಮ್ಮ ಕ್ಷೇತ್ರ ಮೈಸೂರಿನಲ್ಲಿ ಚಿತ್ರನಗರಿಯಾಗಬೇಕು, ಹಿಂದಿನ ತಮ್ಮ ನಿರ್ಣಯಕ್ಕೆ ಬೆಲೆ ಸಿಗಬೇಕೆನ್ನುವುದು ಅವರ ಆಶಯವೂ ಆಗಿರಬಹುದು. ಒಟ್ಟಿನಲ್ಲಿ ಚಿತ್ರನಗರಿಗೆ ಸಂಬಂಧಿಸಿದಂತೆ ಸಿದ್ದರಾಮಯ್ಯನವರ ಪತ್ರ ಮಹತ್ವ ಪಡೆದಿದೆ.

ಇದನ್ನೂ ಓದಿ : ವಿಡಿಯೋ | ಚಿತ್ರನಗರಿ ಕುರಿತ ತಮ್ಮ ಕಲ್ಪನೆ ಭಿನ್ನ ಎಂದ ಸಿಎಂ ಕುಮಾರಸ್ವಾಮಿ

ಕಳೆದ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೈಸೂರು ಹೊರವಲಯದ ಹಿಮ್ಮಾವಿನಲ್ಲಿ ಚಿತ್ರನಗರಿಗೆಂದು 116 ಎಕರೆ ಮಂಜೂರು ಮಾಡಿದ್ದರು. ಅಲ್ಲಿ ಜಾಗದ ಸಮೀಕ್ಷೆ ಸೇರಿದಂತೆ ಪ್ರಾಥಮಿಕ ಕೆಲಸ-ಕಾರ್ಯಗಳೂ ಆರಂಭವಾಗಿದ್ದವು. ಆದರೆ, ಸಿನಿಮಾ ಕೇಂದ್ರ ಬೆಂಗಳೂರಿನಿಂದ ನೂರೈವತ್ತು ಕಿಲೋಮೀಟರ್ ದೂರದ ಮೈಸೂರಿನಲ್ಲಿ ಚಿತ್ರನಗರಿ ರೂಪುಗೊಳ್ಳುವ ಯೋಜನೆಯ ಬಗ್ಗೆ ಚಿತ್ರರಂಗದವರಲ್ಲೇ ಒಮ್ಮತವಿರಲಿಲ್ಲ. ರಾಮನಗರಕ್ಕೆ ಚಿತ್ರನಗರಿ ಸ್ಥಳಾಂತರಿಸಿದ ಪ್ರಸ್ತಾಪವನ್ನು ಚಿತ್ರರಂಗದ ಬಹುತೇಕರು ಸ್ವಾಗತಿಸಿದ್ದರು. ಬಜೆಟ್‌ನಲ್ಲಿ ಹಣ ಘೋಷಣೆಯಾದಾಗ ಚಿತ್ರರಂಗದ ಕನಸು ಕೈಗೂಡುವ ಸಾಧ್ಯತೆಗಳ ಬಗ್ಗೆ ಎಲ್ಲರೂ ಮಾತನಾಡಿದ್ದರು.

ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅರಂಭದಲ್ಲಿ ಚಿತ್ರನಿರ್ಮಾಣ, ವಿತರಣೆಯಲ್ಲಿ ತೊಡಗಿಸಿಕೊಂಡಿದ್ದವರು. ಸಿನಿಮಾರಂಗದ ಬಗ್ಗೆ ಆಸಕ್ತಿ ಇರುವ ಅವರ ಆಡಳಿತದಲ್ಲಿ ಚಿತ್ರನಗರಿ ಯೋಜನೆ ಕೈಗೂಡುತ್ತದೆ ಎಂದು ಗಾಂಧಿನಗರದಲ್ಲಿ ಮಾತನಾಡಿಕೊಂಡಿದ್ದರು. ಆದರೆ ಈಗ ಚಿತ್ರನಗರಿ ಯೋಜನೆ ರಾಜಕೀಯ ಮೇಲಾಟ ಮತ್ತು ಪ್ರತಿಷ್ಠೆಯ ವಿಚಾರಕ್ಕೆ ಬಲಿಯಾಗುವ ಸೂಚನೆಗಳು ದಟ್ಟವಾಗಿ ಕಾಣಿಸುತ್ತಿವೆ. “ಚಿತ್ರನಗರಿ ರಾಮನಗರಕ್ಕೆ ಸ್ಥಳಾಂತರಗೊಂಡಿದ್ದು ಸರಿಯಾಗಿದೆ. ಸಿನಿಮಾ ಕೇಂದ್ರ ಬೆಂಗಳೂರಿನಿಂದ ಮೈಸೂರು ಬಹುದೂರ. ಕಲಾವಿದರು, ತಂತ್ರಜ್ಞರ ಓಡಾಟಕ್ಕೆ ಅನನುಕೂಲವಾಗುತ್ತಿತ್ತು. ರಾಮನಗರ ಸೂಕ್ತ ಜಾಗ. ಈಗ ರಾಜಕಾರಣಿಗಳ ಪ್ರತಿಷ್ಠೆಗೆ ದೊಡ್ಡ ಯೋಜನೆ ನನೆಗುದಿಗೆ ಬೀಳದಿದ್ದರೆ ಅಷ್ಟೇ ಸಾಕು,” ಎನ್ನುತ್ತಾರೆ ಕನ್ನಡ ಚಿತ್ರರಂಗದ ಹಿರಿಯ ಛಾಯಾಗ್ರಾಹಕ ಬಿ ಎಸ್ ಬಸವರಾಜ್‌.

ನಾಲ್ಕೂವರೆ ದಶಕದ ಕನಸು: ಚಿತ್ರನಗರಿ ನಿರ್ಮಿಸಬೇಕೆನ್ನುವ ಕನಸು ರೂಪುಗೊಂಡು ನಾಲ್ಕೂವರೆ ದಶಕಗಳೇ ಆಗಿವೆ. ಬೆಂಗಳೂರಿನ ಹೊರವಲಯದ ಹೆಸರುಘಟ್ಟದಲ್ಲಿ ಚಿತ್ರನಗರಿಗೆಂದು 1972ರಲ್ಲೇ 360 ಎಕರೆ ಪ್ರದೇಶ ಮಂಜೂರಾಗಿತ್ತು. ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಜಾಗ ನೀಡಿದ್ದರು. ಬಂಡವಾಳ ಹೂಡಿಕೆದಾರರ ಕೊರತೆ, ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲದ್ದು ಹಾಗೂ ಇನ್ನಿತರ ತಾಂತ್ರಿಕ ಕಾರಣಗಳಿಂದಾಗಿ ಯೋಜನೆ ನನೆಗುದಿಗೆ ಬಿತ್ತು. ಕಳೆದ ಸರ್ಕಾರದಲ್ಲಿ ಸಿದ್ದರಾಮಯ್ಯ ಮೈಸೂರಿನಲ್ಲಿ ಚಿತ್ರನಗರಿ ಮಾಡುವುದಾಗಿ ಘೋಷಿಸಿ ಜಾಗ ನಿಗದಿಪಡಿಸಿದ್ದರು. ಇದಕ್ಕೆ ಚಿತ್ರರಂಗದಲ್ಲೇ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಮುಂದೆ ಎಚ್‌ ಡಿ ಕುಮಾರಸ್ವಾಮಿ ರಾಮನಗರಕ್ಕೆ ಚಿತ್ರನಗರಿಯನ್ನು ಶಿಫ್ಟ್ ಮಾಡಿದ ಪ್ರಸ್ತಾಪಕ್ಕೆ ಸ್ವಾಗತ ಸಿಕ್ಕಿತ್ತು. ಇದೀಗ ಸಿದ್ದರಾಮಯ್ಯನವರ ಪತ್ರದಿಂದ ಯೋಜನೆ ಮೇಲಾಗುವ ಪರಿಣಾಮಗಳೇನು ಎಂದು ನೋಡಬೇಕಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More