ಬಾಲಿವುಡ್‌ ಸಿನಿಮಾಗಳಲ್ಲಿ ಮಿಂಚಿದ ಅಸಾಂಪ್ರದಾಯಿಕ ಜೋಡಿಗಳು

ಮೊನ್ನೆ ತೆರೆಕಂಡ ‘ಫನ್ನೇ ಖಾನ್‌’ನಲ್ಲಿ ಐಶ್ವರ್ಯಾ ರೈ ಮತ್ತು ರಾಜ್‌ಕುಮಾರ್‌ ರಾವ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಐಶ್ವರ್ಯಾಗಿಂತ ಚಿಕ್ಕವರು ರಾಜ್‌ಕುಮಾರ್‌. ಗ್ಲಾಮರ್‌, ಇಮೇಜ್‌, ವಯಸ್ಸಿನ ಅಂತರ ಮೀರಿ ಇಂತಹ ಹತ್ತಾರು ಜೋಡಿಗಳು ತೆರೆ ಮೇಲೆ ಯಶಸ್ವಿಯಾಗಿವೆ

ಕಳೆದ ವಾರ ತೆರೆಕಂಡ ‘ಫನ್ನೇ ಖಾನ್‌’ ಹಿಂದಿ ಸಿನಿಮಾಗೆ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾ ಚಿತ್ರೀಕರಣದಲ್ಲಿದ್ದಾಗ ಹಲವು ವರ್ಷಗಳ ನಂತರ ಅನಿಲ್‌ ಕಪೂರ್ ಮತ್ತು ಐಶ್ವರ್ಯಾ ರೈ ಒಟ್ಟಾಗಿ ನಟಿಸುತ್ತಿದ್ದಾರೆ ಎಂದು ನಿರ್ದೇಶಕರು ಹೇಳಿದ್ದರು. ಇದು ಅಭಿಮಾನಿಗಳಲ್ಲೂ ನಿರೀಕ್ಷೆ ಹುಟ್ಟಿಸಿತ್ತು. ಇವರಿಬ್ಬರೂ ತೆರೆ ಮೇಲೆ ಜೋಡಿಯಲ್ಲ ಎನ್ನುವುದು ಟೀಸರ್ ಬಿಡುಗಡೆ ನಂತರವೇ ತಿಳಿದದ್ದು. ಚಿತ್ರದಲ್ಲಿ ಐಶ್ವರ್ಯಾ ರೈ ಜೋಡಿಯಾಗಿ ರಾಜ್‌ಕುಮಾರ್ ರಾವ್ ಕಾಣಿಸಿಕೊಂಡಿದ್ದಾರೆ. ಇಬ್ಬರ ನಡುವೆ ವಯಸ್ಸಿನ ಅಂತರವಿದ್ದರೂ, ಸ್ಕ್ರೀನ್ ಮೇಲೆ ಇಬ್ಬರ ಕೆಮಿಸ್ಟ್ರಿ ವರ್ಕ್‌ ಆಗಿದೆ ಎಂದು ವಿಶ್ಲೇಷಕರು ಷರಾ ಬರೆದಿದ್ದರು. ಐಶ್ವರ್ಯಾ ಇಮೇಜು ಕೂಡ ಇಲ್ಲಿ ಮಾಸಿಲ್ಲ. ಬಾಲಿವುಡ್‌ನಲ್ಲಿ ಹಿಂದೆಯೂ ಇಂತಹ ಹಲವು ಪ್ರಯೋಗಗಳಾಗಿವೆ.

ವೇಕ್ ಅಪ್ ಸಿದ್: ಜವಾಬ್ದಾರಿಗಳನ್ನು ಮರೆತು ಬದುಕುವ ಶ್ರೀಮಂತ ಕುಟುಂಬದ ಯುವಕನಿಗೆ ಪರಿಚಯವಾಗುವ ಯುವತಿ, ಆಕೆಯಿಂದ ಆತನ ಬದುಕಿನಲ್ಲಾಗುವ ಬದಲಾವಣೆಗಳ ಸುತ್ತ ಹೆಣೆದ ಕತೆಯೇ 'ವೇಕ್ ಅಪ್ ಸಿದ್.’ ಡಿ-ಗ್ಲಾಮ್‌ ಪಾತ್ರಗಳನ್ನು ನಿರ್ವಹಿಸುವ ಮೂಲಕ ಖ್ಯಾತರಾದ 'ಕೊಂಕಣ ಸೇನ್ ಶರ್ಮಾ' ಮತ್ತು ರಣಬೀರ್ ಕಪೂರ್ ಜೋಡಿ ಇಲ್ಲಿತ್ತು. ಬಾಲಿವುಡ್‌ನ ಲವ್‌ಸ್ಟೋರಿ ಫಾರ್ಮ್ಯುಲಾಗೆ ವ್ಯತಿರಿಕ್ತವಾದ ಜೋಡಿಯಿದು. ಆದರೇನಂತೆ ತೆರೆ ಮೇಲೆ ಈ ಜೋಡಿ ಮೋಡಿ ಮಾಡಿತ್ತು.

ಕಿ & ಕಾ: ಎಲ್ಲರಂತೆ ತಿಂಗಳ ಸಂಬಳಕ್ಕೆ ಅಣಿಯಾಗದೆ ಗೃಹಿಣಿಯಂತೆ ಸಂಬಂಧಗಳನ್ನು ನಿಭಾಯಿಸುತ್ತ ಬದುಕಲಿಚ್ಛಿಸುವಾತನ ಪ್ರೀತಿ, ವೈವಾಹಿಕ ಬದುಕಿನ ಕತೆ-ವ್ಯಥೆ ಎಲ್ಲವನ್ನೂ ಕಟ್ಟಿಕೊಡುವ ವಿಭಿನ್ನ ಕಥಾವಸ್ತು. ಕರೀನಾ ಕಪೂರ್ ಮತ್ತು ಅರ್ಜುನ್ ಕಪೂರ್ ಅಭಿನಯದ ‘ಕಿ & ಕಾ’ ಚಿತ್ರ ಪ್ರೇಕ್ಷಕರ ಗಮನ ಸೆಳೆದಿತ್ತು. ವಾಸ್ತವದಲ್ಲಿ ಕರೀನಾ ಹಾಗೂ ಅರ್ಜುನ್ ಕಪೂರ್ ನಡುವೆ ವಯಸ್ಸಿನ ಅಂತರವಿದ್ದರೂ ತೆರೆಯ ಮೇಲೆ ಈ ಜೋಡಿಯ ನಟನೆ ಸೊಗಸಾಗಿ ಮೂಡಿಬಂದಿತ್ತು.

ಚೀನಿ ಕಮ್: 64ರ ಹರೆಯದ ಬುದ್ಧದೇವ್ ಹಾಗೂ 34ರ ಯುವತಿ ನಿನಾ ವರ್ಮಾ ಇಬ್ಬರ ಪ್ರೇಮ್ ಕಹಾನಿ ‘ಚೀನಿ ಕಮ್.’ ವಯಸ್ಸು ದೇಹಕ್ಕೇ ಹೊರತು ಮಧುರ ಭಾವನೆಗಳಿಗಲ್ಲ, ಪರಿಶುದ್ಧ ಪ್ರೀತಿಗೆ ಯಾವ ಮಿತಿಗಳೂ ಇರುವುದಿಲ್ಲ ಎನ್ನುವುದನ್ನು ನಿರೂಪಿಸುವ ಈ ಚಿತ್ರದಲ್ಲಿನ ಅಮಿತಾಬ್ ಬಚ್ಚನ್ ಮತ್ತು ತಬು ಜೋಡಿಯ ಹೊಂದಾಣಿಕೆಯ ಅಭಿನಯ ಪ್ರೇಕ್ಷಕರ ಗಮನ ಸೆಳೆದಿತ್ತು.

ರಾಝಿ: ದೇಶದ ಒಳಿತಿಗಾಗಿ ಪಾಕಿಸ್ತಾನದ ಫೌಜಿ ಕುಟುಂಬವೊಂದರ ಸೊಸೆಯಾಗಿ ಹೋಗುವ, ಆ ಮೂಲಕ ಅಲ್ಲಿನ ಚಲನವಲನಗಳನ್ನು ಸ್ವದೇಶಕ್ಕೆ ರವಾನಿಸುವ ಗೂಢಾಚಾರಿಣಿಯ ಪಾತ್ರದಲ್ಲಿ ಅಲಿಯಾ ಭಟ್ ಅಮೋಘವಾಗಿ ಅಭಿನಯಿಸಿದ್ದರು. ಚಿತ್ರದಲ್ಲಿ ಅಲಿಯಾ ಗಂಡನ ಪಾತ್ರದಲ್ಲಿ ನಟಿಸಿದ್ದ ವಿಕ್ಕಿ ಕೌಶಲ್ ನಟನೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಬಬ್ಲಿ ಅಲಿಯಾ ಜೋಡಿಯಾಗಿ ವಿಕ್ಕಿ ಅವರನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸಬಹುದು ಎನ್ನುವ ಗೊಂದಲದಲ್ಲಿದ್ದರು ನಿರ್ದೇಶಕಿ ಮೇಘನಾ ಗುಲ್ಜಾರ್‌. ಉತ್ತಮ ಕತೆ, ನಿರೂಪಣೆಯಿಂದಾಗಿ ಈ ಜೋಡಿ ಯಶಸ್ವಿಯಾಯ್ತು.

ಏ ದಿಲ್ ಹೈ ಮುಶ್ಕಿಲ್: ಐಶ್ವರ್ಯಾ ರೈ, ರಣಬೀರ್ ಕಪೂರ್, ಅನುಷ್ಕಾ ಶರ್ಮಾ ನಟನೆಯ ‘ಏ ದಿಲ್ ಹೈ ಮುಶ್ಕಿಲ್’ ಚಿತ್ರ ಭಾವನೆಗಳ ಸುತ್ತ ಕಾವ್ಯಮಯವಾಗಿ ಗಿರಕಿ ಹೊಡೆಯುತ್ತ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಭರ್ಜರಿ ಯಶಸ್ಸು ಕಂಡಿತ್ತು. ರಣಬೀರ್ ಮತ್ತು ಐಶ್ವರ್ಯಾ ನಡುವೆ ಇರುವ ವಯಸ್ಸಿನ ಅಂತರದ ಹೊರತಾಗಿ, ಐಶ್ವರ್ಯಾ ತಮ್ಮ ಪಾತ್ರದ ಇತಿಮಿತಿಗಳನ್ನರಿತು ನಟಿಸಿದ್ದು ಗಮನಾರ್ಹವಾಗಿತ್ತು.

ತುಮ್ಹಾರಿ ಸುಲು: ಚಿತ್ರದಲ್ಲಿ ಮಧ್ಯಮವರ್ಗದ ಮನೆಯದೊಂದರ ಗೃಹಿಣಿಯ ಪಾತ್ರದಲ್ಲಿ ಕಾಣಸಿಕೊಂಡಿದ್ದಾರೆ ವಿದ್ಯಾ ಬಾಲನ್. ತನ್ನ ಮಿತಿಯಾಚೆಗೆ ಬೆಳೆದು ನಿಲ್ಲುವ ಬಯಕೆಗಳ ಸಾಕಾರಕ್ಕಾಗಿ ಆಕೆ ಪಡುವ ಪಾಡು ಚಿತ್ರದ ಕಥಾವಸ್ತು. ಹೀಗೆ ‘ತುಮ್ಹಾರಿ ಸುಲು’ ಚಿತ್ರದಲ್ಲಿನ ವಿದ್ಯಾಬಾಲನ್ ನಟನೆ ಜನಮನ ಗೆದ್ದಿತ್ತು. ಚಿತ್ರದ 'ಬನ್ ಜಾ ರಾಣಿ' ಹಾಡಿನಲ್ಲಿ ಮಾನವ್ ಕೌಲ್ ಹಾಗೂ ವಿದ್ಯಾ ಬಾಲನ್‌ರ ಅದ್ಭುತ ಕೆಮಿಸ್ಟ್ರಿ, ವಯಸ್ಸಿನ ಅಂತರವನ್ನೂ ಮೀರುವಲ್ಲಿ ಯಶಸ್ವಿಯಾಗಿತ್ತು.

ಇದನ್ನೂ ಓದಿ : ಟ್ರೈಲರ್‌ | ಎಮ್ಮಾ ಸ್ಟೋನ್, ಜೋನಾಹ್‌ ಹಿಲ್‌ ನೆಟ್‌ಫ್ಲಿಕ್ಸ್‌ ಸರಣಿ ‘ಮ್ಯಾನಿಯಾಕ್‌’‌

ವೀರೆ ಡಿ ವೆಡ್ಡಿಂಗ್: ನಟಿಯರಾದ ಕರೀನಾ ಕಪೂರ್, ಸೋನಂ ಕಪೂರ್, ಸ್ವರ ಭಾಸ್ಕರ್, ಶಿಖಾ ತಲ್ಸಾನಿಯಾ ಚಿತ್ರದಲ್ಲಿ ಆತ್ಮೀಯ ಗೆಳತಿಯರಾಗಿ ಕಾಣಿಸಿಕೊಂಡಿದ್ದಾರೆ. ನಾಲ್ವರು ಗೆಳತಿಯರ ವೈಯಕ್ತಿಕ ಬದುಕು, ಮದುವೆ ಬಗೆಗಿನ ಅವರ ನಿಲುವು ಹೇಳುವ ಮಹಿಳಾ ಪ್ರಧಾನ ಕತೆಯ ಚಿತ್ರದಲ್ಲಿ ಕರೀನಾ ಜೊತೆಗೆ ಸುಮಿತ್ ವ್ಯಾಸ್ ನಟಿಸಿದ್ದರು. ಕರೀನಾ ಗ್ಲಾಮರ್ ಇಮೇಜಿಗೆ ಸುಮಿತ್‌ ಹೊಂದಿಕೆಯಾಗುವ ನಟನಲ್ಲ. ಆದರೂ ಇದನ್ನು ಮೀರಿ ಕರೀನಾ-ಸುಮಿತ್ ಜೋಡಿ ಪಾತ್ರಕ್ಕೆ ನ್ಯಾಯ ಒದಗಿಸುವಲ್ಲಿ ಯಶಸ್ವಿಯಾಗಿತ್ತು.

ಪಿಕು: ಅಮಿತಾಬ್ ಬಚ್ಚನ್, ಇರ್ಫಾನ್ ಖಾನ್, ದೀಪಿಕಾ ಪಡಕೋಣೆ ನಟನೆಯ ‘ಪಿಕು’ ಚಿತ್ರ ಸುಂದರ ಜರ್ನಿ ಸಿನಿಮಾವಾಗಿ ಮೂಡಿಬಂದಿತ್ತು. ಮೂವರು ಉತ್ತಮ ಅಭಿನಯದೊಂದಿಗೆ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಕ್ಯಾಬ್ ಸಂಸ್ಥೆಯೊಂದರ ಮಾಲೀಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಇರ್ಫಾನ್ ಖಾನ್ ಮತ್ತು ದೀಪಿಕಾರ ರೀಲ್ ರೋಮ್ಯಾನ್ಸ್ ರಿಯಾಲಿಟಿಯ ವಯಸ್ಸಿನ ಗೋಜನ್ನೂ ತಳ್ಳಿಹಾಕುವಂತಿತ್ತು.

ಹೈವೇ: ಆಕಸ್ಮಿಕವಾಗಿ ಅಪಹರಣಕ್ಕೊಳಗಾಗುವ ಮುಗ್ಧ ಯುವತಿ ಕಟ್ಟುಪಾಡುಗಳ ಗಡಿಯಾಚೆಗಿನ ಸ್ವಾತಂತ್ರ್ಯ ಸೀಮೆಯನ್ನು ಮುಕ್ತವಾಗಿ ನೋಡತೊಡಗುವ ಕಥಾನಕ. ಅಲಿಯಾ ಭಟ್ ಮನೋಜ್ಞ ಅಭಿನಯ ಪ್ರಶಂಸನೀಯವಾಗಿತ್ತು. ಚಿತ್ರದಲ್ಲಿ ರಣದೀಪ್ ಹೂಡಾ ಅವರು ಅಲಿಯಾಗೆ ಸಾಥ್ ನೀಡಿದ್ದರು. ವಯಸ್ಸಿನ ಅಂತರ ಇತ್ತಾದರೂ ಪಾತ್ರ ನಿರ್ವಹಣೆಯಲ್ಲಿ ಆ ಅಂತರವನ್ನು ಸರಿದೂಗಿಸಿದ್ದರು.

ಪ್ಯಾರ್ ಕೆ ಸೈಡ್ ಎಫೆಕ್ಟ್ಸ್: ಮಲ್ಲಿಕಾ ಶರಾವತ್ ಮತ್ತು ರಾಹುಲ್ ಬೋಸ್ ನಟನೆಯ ‘ಪ್ಯಾರ್ ಕೆ ಸೈಡ್ ಎಫೆಕ್ಟ್ಸ್’ ಚಿತ್ರ ಹಾಸ್ಯಮಯ ಪ್ರಣಯದ ಕತೆಯಾಗಿ ತಿಳಿಹಾಸ್ಯದ ಮೂಲಕ ಆಧುನಿಕ ಸಂಬಂಧಗಳಲ್ಲಿನ ಜಟಿಲತೆಯನ್ನು ಹೊತ್ತು ಸಾಗುತ್ತದೆ. ರೀಲ್ ಬದುಕಿನ ಪ್ರಣಯ ಪಕ್ಷಿಗಳಾದ ಮಲ್ಲಿಕಾ ಹಾಗೂ ರಾಹುಲ್ ಜೋಡಿಗೆ ರಿಯಲ್‌ ಬದುಕಿನಲ್ಲಿ ಹತ್ತು ವರ್ಷ ವಯಸ್ಸಿನ ಅಂತರವಿತ್ತು.

ಜುಬೇದಾ: ಶ್ಯಾಮ್ ಬೆನಗಲ್ ನಿರ್ದೇಶನದ ರಾಷ್ಟ್ರ ಪ್ರಶಸ್ತಿ ವಿಜೇತ ‘ಜುಬೇದಾ’ ಚಿತ್ರ, ಸಂಬಂಧಗಳ ನೆರಳಲ್ಲಿ ನಿರ್ಬಂಧನೆಗಳ ಕುರಿತು ಹೆಣೆದ ಕತೆ. ಮನೋಜ್ ಬಾಜಪಾಯ್‌ ಮತ್ತು ಕರಿಶ್ಮಾ ಕಪೂರ್ ನಟನೆ ಅತ್ಯದ್ಭುತವಾಗಿ ಮೂಡಿಬಂದಿತ್ತು. ಇಬ್ಬರ ನಡುವೆ ಇದ್ದ ವಯಸ್ಸಿನ ತಡೆಗೋಡೆಯನ್ನು ಮೀರಿ ಪಾತ್ರಗಳು ಗೆದ್ದಿದ್ದವು.

ಉಡ್ತಾ ಪಂಜಾಬ್: ಶಾಹಿದ್ ಕಪೂರ್, ದಿಲ್ಜಿತ್ ದೊಸಾಂಜ್‌, ಕರೀನಾ ಕಪೂರ್, ಅಲಿಯಾ ಭಟ್ ಮುಖ್ಯಭೂಮಿಕೆಯ ‘ಉಡ್ತಾ ಪಂಜಾಬ್’ ಚಿತ್ರ ವಿವಾದದಿಂದಲೂ ಸುದ್ದಿಯಾಗಿತ್ತು. ಚಿತ್ರದಲ್ಲಿ ಕರೀನಾ ವೈದ್ಯೆಯಾಗಿ ಕಾಣಿಸಿಕೊಂಡರೆ, ದಿಲ್‌ಜಿತ್‌ ಪೋಲಿಸ್ ಪಾತ್ರ ನಿರ್ವಹಿಸಿದ್ದರು. ಮಾದಕ ವ್ಯಸನಕ್ಕೆ ತುತ್ತಾದ ತನ್ನ ಸಹೊದರನನ್ನು ಆ ವ್ಯಸನದಿಂದ ಹೊರತರಲು ಕರೀನಾರ ಮೊರೆಹೋಗುವ ದಿಲ್ಜಿತ್, ದಿನಕಳೆದಂತೆ ಇಬ್ಬರ ಪರಿಚಯ ಪ್ರೀತಿಗೆ ತಿರುಗುತ್ತದೆ. ಕತೆಗೆ ಆಪ್ತವಾಗಿದ್ದ ಈ ಅಸಾಂಪ್ರದಾಯಿಕ ಜೋಡಿ ಪ್ರೇಕ್ಷಕರನ್ನು ಗೆದ್ದಿತು.

ದೇಡ್‌ ಇಷ್ಕಿಯಾ: ನಾಸಿರುದ್ದೀನ್ ಶಾ, ಮಾಧುರಿ ದಿಕ್ಷಿತ್, ಹಿಮಾ ಖುರೇಷಿ, ಅರ್ಷದ್ ವಾರ್ಸಿ ನಟನೆಯ ‘ದೇಡ್‌ ಇಷ್ಕಿಯಾ’ ಚಿತ್ರ ಕಾವ್ಯಮಯ ಪ್ರೇಮಕತೆಯಾಗಿ ಸಿನಿರಸಿಕರ ಗಮನ ಸೆಳೆದಿತ್ತು. ಚಿತ್ರದಲ್ಲಿ ನಾಸಿರುದ್ದೀನ್‌ ಶಾ ಮತ್ತು ಮಾಧುರಿ ಜೋಡಿಯ ನಟನೆ ವಯಸ್ಸಿನ ಅಂತರ ಮೀರಿ ಅತ್ಯದ್ಭುತವಾಗಿ ಮೂಡಿಬಂದಿತ್ತು.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More