ಟ್ರೈಲರ್‌ | ಎಮ್ಮಾ ಸ್ಟೋನ್, ಜೋನಾಹ್‌ ಹಿಲ್‌ ನೆಟ್‌ಫ್ಲಿಕ್ಸ್‌ ಸರಣಿ ‘ಮ್ಯಾನಿಯಾಕ್‌’‌

ಹಾಲಿವುಡ್‌ ತಾರೆಯರಾದ ಎಮ್ಮಾ ಸ್ಟೋನ್‌ ಮತ್ತು ಜೋನಾಹ್‌ ಹಿಲ್ ನಟಿಸಿರುವ ‘ಮ್ಯಾನಿಯಾಕ್‌’ ಸರಣಿಯ ಟ್ರೈಲರ್ ಬಿಡುಗಡೆಯಾಗಿದೆ. ನಟಿ ಎಮ್ಮಾ ಈ ಸರಣಿಯ ಕಥಾವಸ್ತುವನ್ನು ‘ಮಲ್ಟಿ ರಿಯಾಲಿಟಿ ಬ್ರೈನ್ ಮ್ಯಾಜಿಕ್‌’ ಎನ್ನುತ್ತಾರೆ. ಇದೇ ಸೆಪ್ಟೆಂಬರ್‌ 21ರಿಂದ ಸರಣಿ ಮೂಡಿಬರಲಿದೆ

ಎಮ್ಮಾ ಸ್ಟೋನ್‌ ಮತ್ತು ಜೋನಾಹ್‌ ಹಿಲ್‌ ಮುಖ್ಯಪಾತ್ರಗಳಲ್ಲಿ ನಟಿಸಿರುವ ಹೊಸ ನೆಟ್‌ಫ್ಲಿಕ್ಸ್‌ ಸರಣಿ ‘ಮ್ಯಾನಿಯಾಕ್‌’ ಟ್ರೈಲರ್ ಸುದ್ದಿಯಾಗಿದೆ. ಫಾರ್ಮಸಿಟಿಕಲ್ ಕ್ಷೇತ್ರದ ಒಳಹೊರಗುಗಳನ್ನು ಹಿಡಿದಿಡುವ ಸರ್ರಿಯಲಿಸ್ಟಿಕ್‌ ಕಥಾನಕವಿದು. ಇತ್ತೀಚೆಗೆ ಬಿಡುಗಡೆಯಾಗಿದ್ದ ಟೀಸರ್ ಕುತೂಹಲಕಾರಿಯಾಗಿತ್ತು. ಇದೀಗ ಟ್ರೈಲರ್ ಕಥಾಹಂದರದ ಬಗ್ಗೆ ಚರ್ಚೆಗೀಡುಮಾಡಿದೆ. ವ್ಯಕ್ತಿಯ ಮನಸಿನ ಸೂತ್ರಗಳನ್ನು ಅರ್ಥಮಾಡಿಕೊಳ್ಳುವ, ಬದಲಿಸುವ ವಿಜ್ಞಾನಿಯ ಪಾತ್ರದಲ್ಲಿ ಜಸ್ಟಿನ್‌ ಥೆರೋಕ್ಸ್‌ ಕಾಣಿಸಿಕೊಂಡಿದ್ದಾರೆ. ಇದು ಥೆರಪಿ ಅಲ್ಲ, ವಿಜ್ಞಾನ ಎನ್ನುವುದು ಈ ಪಾತ್ರದ ಪ್ರತಿಪಾದನೆ.

ವಿಜ್ಞಾನದೊಂದಿಗೆ ಮುಖಾಮುಖಿಯಾಗುವ ಚಿತ್ರಕತೆಯಲ್ಲಿ ಕ್ಲಿಷ್ಟ ತಾಂತ್ರಿಕ ಮಾಹಿತಿಗಳಿವೆ. ಅನ್ನೇ ಲ್ಯಾಂಡ್ಸ್‌ಬರ್ಗ್‌ ಪಾತ್ರದಲ್ಲಿ ನಟಿಸಿರುವ ಎಮ್ಮಾ ಸ್ಟೋನ್‌ ಇದನ್ನು, “ಮಲ್ಟಿ ರಿಯಾಲಿಟಿ ಬ್ರೈನ್ ಮ್ಯಾಜಿಕ್‌,” ಎನ್ನುತ್ತಾರೆ. ನೈಜ ಬದುಕನ್ನು ನೋಡುವ ಮನಸ್ಸು ಇದಕ್ಕೆ ಪರ್ಯಾಯವಾಗಿ ಮತ್ತೊಂದು ಅಸ್ತಿತ್ವವನ್ನು ಆಲೋಚಿಸುತ್ತದೆ. ಪ್ರಯೋಗಗಳಿಂದಾಗಿ ವ್ಯಕ್ತಿಯೊಬ್ಬ ತಾನು ಅಂದುಕೊಂಡಂತೆ ನಡೆಯದ ಘಟನೆ ಬೇರೆಯದ್ದೇ ತಿರುವು ಪಡೆದುಕೊಳ್ಳುತ್ತದೆ. ಇದರಿಂದ ವ್ಯಕ್ತಿಗಳ ಮಧ್ಯೆ ನಡೆಯಬಹುದಾದ ಸಂಘರ್ಷಗಳು ಸರಣಿಯಲ್ಲಿ ರೋಚಕವಾಗಿ ಕಾಣಿಸಲಿವೆ.

ಇದನ್ನೂ ಓದಿ : ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪಿಸುವಂತೆ ಸಿಎಂ ಎಚ್‌ಡಿಕೆಗೆ ಸಿದ್ದರಾಮಯ್ಯ ಪತ್ರ

‘ಮ್ಯಾನಿಯಾಕ್‌’ನಲ್ಲಿ ಮನುಷ್ಯರ ಮನಸಿನ ವ್ಯವಹಾರಗಳ ಚಿತ್ರಣ ಸಿಗಲಿದ್ದು, ಇದೊಂದು ಭಿನ್ನ ಸರಣಿಯಾಗಲಿದೆ ಎನ್ನಲಾಗಿದೆ. ತನ್ನ ತಾಯಿ, ಸಹೋದರಿಯೊಂದಿಗೆ ಸಂಬಂಧ ಕಡಿದುಕೊಂಡ ಅನ್ನೇ ಲ್ಯಾಂಡ್ಸ್‌ಬರ್ಗ್‌ (ಎಮ್ಮಾ ಸ್ಟೋನ್‌) ಸರಣಿಯ ಕೇಂದ್ರಬಿಂದು. ನಟ ಜೋನಾಹ್‌ ಹಿಲ್‌ ಇಲ್ಲಿ ಸ್ಕಿಝೋಫ್ರೀನಿಯಾದಿಂದ ಬಳಲುವ ಒವೇನ್‌ ಮಿಲ್‌ಗ್ರಿಮ್‌ ಪಾತ್ರದಲ್ಲಿ ನಟಿಸಿದ್ದಾರೆ. ಸೆಪ್ಟೆಂಬರ್‌ 21ರಿಂದ ಸರಣಿ ಶುರುವಾಗಲಿದೆ.

#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
ಸ್ಮಿತಾ ನೆನಪು | ‘ಅನ್ವೇಷಣೆ’ ಗಾಗಿ ತಾನೇ ಹಣ ಹಾಕಿಕೊಂಡು ಬಂದು ನಟಿಸಿದ್ದರು
ಸುದ್ದಿ ವಾಚನದಿಂದ ಸಿನಿಮಾಲೋಕಕ್ಕೆ ಬಂದ ಕೃಷ್ಣಸುಂದರಿ
Editor’s Pick More