ಪ್ರಸ್ತುತ ಬಾಲಿವುಡ್‌ ಸಿನಿಮಾ ಸಂಗೀತದ ಬಗ್ಗೆ ಎ ಆರ್ ರೆಹಮಾನ್ ಅಸಮಾಧಾನ

ಸಂಗೀತದೊಂದಿಗೆ ಸಿನಿಮಾ ಸನ್ನಿವೇಶಗಳನ್ನು ಕಟ್ಟುವಲ್ಲಿ ತಂತ್ರಜ್ಞರು ವಿಫಲರಾಗುತ್ತಿದ್ದಾರೆ ಎನ್ನುತ್ತಾರೆ ಎ ಆರ್‌ ರೆಹಮಾನ್‌. ಭಾರತದ ಸಂಗೀತ ಪ್ರಕಾರಗಳನ್ನು ಪರಿಚಯಿಸಲಿರುವ ಅವರ ನೂತನ ವೆಬ್‌ ಸರಣಿ ‘ಹಾರ್ಮನಿ ವಿಥ್‌ ಎ ಅರ್ ರೆಹಮಾನ್‌’ ಆಗಸ್ಟ್‌ 15ರಿಂದ ಮೂಡಿಬರಲಿದೆ.

”ಇಲ್ಲಿನ ಸಂಗೀತ ಪ್ರಕಾರಗಳಲ್ಲಿ ಭಾರತೀಯ ಸಂಪ್ರದಾಯ ಆಳವಾಗಿ ಬೇರೂರಿದೆ. ಜೊತೆಗೆ ಆಧ್ಯಾತ್ಮಿಕ ಸಂಪರ್ಕವನ್ನೂ ಹೊಂದಿದೆ. ಆದರೆ ಇತ್ತೀಚಿನ ದಿನಗಳ ಸಿನಿಮಾಗಳಲ್ಲಿ ಕಥೆಯನ್ನು ಸಂಗೀತದೊಂದಿಗೆ ಸಂಯೋಜಿಸುವ ಕೆಲಸವಾಗುತ್ತಿಲ್ಲ. ಸಂಗೀತದೊಂದಿಗೆ ಚಿತ್ರದ ಸನ್ನಿವೇಶಗಳನ್ನು ಕಟ್ಟುವಲ್ಲಿ ಸಿನಿತಂತ್ರಜ್ಞರು, ಸಂಗೀತ ಸಂಯೋಜಕರು ವಿಫಲರಾಗುತ್ತಿದ್ದಾರೆ” ಎಂದು ಸಂಗೀತ ಸಂಯೋಜಕ ಎ ಆರ್‌ ರೆಹಮಾನ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತೀಯ ಸಂಗೀತ ಪರಂಪರೆಯ ಕುರಿತು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರಿಗೆ ಪ್ರಸ್ತುತ ಸಿನಿಮಾ ಸಂಗೀತದ ಬಗ್ಗೆ ಅಸಮಾಧಾನವಿದೆ.

ಸಿನಿಮಾ ಸಂಗೀತ ಸಂಯೋಜನೆಯಲ್ಲಿ ಅಪರೂಪದ ವಾದ್ಯಗಳನ್ನು ಬಳಕೆ ಮಾಡಿದವರು ರೆಹಮಾನ್‌. ಈ ಮೂಲಕ ಹಿನ್ನೆಲೆಯಲ್ಲಿಯೇ ಉಳಿದು ಹೋದ ಸಂಗೀತ ಸಂಪ್ರದಾಯವನ್ನು ಜನರಿಗೆ ಪರಿಚಯಿಸಿದ ಹೆಗ್ಗಳಿಕೆಯೂ ಅವರಿಗೆ ಸಲ್ಲಬೇಕು. ಆಸ್ಕರ್ ಪುರಸ್ಕೃತ ಸಂಗೀತ ಸಂಯೋಜಕ ರೆಹಮಾನ್,‌ “ಭಾರತೀಯ ಸಂಗೀತ ಪರಂಪರೆ ಇನ್ನೂ ಸತ್ತಿಲ್ಲ. ನಮ್ಮ ಸಂಗೀತಕ್ಕೆ ಸಾಯುವ ಜೀವವನ್ನು ಬದುಕಿಸುವ ಚೈತನ್ಯವಿದೆ” ಎಂದು ಅಭಿಮಾನಪೂರ್ವಕವಾಗಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : ವಿಡಿಯೋ ಸಾಂಗ್‌ | ಅಕ್ಷಯ್ ಮತ್ತು ಮೌನಿ ರಾಯ್‌ ಜೋಡಿಯ‌ ‘ಮೊನೊಬಿನಾ’ 

ಇದೀಗ ಎ ಆರ್ ರೆಹಮಾನ್‌ ಹೊಸದೊಂದು ಪ್ರಯೋಗಕ್ಕೆ ಸಜ್ಜಾಗಿದ್ದಾರೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಆಗಸ್ಟ್ 15ರಿಂದ ಅವರ ‘ಹಾರ್ಮೊನಿ ವಿಥ್‌ ಎ ಆರ್ ರೆಹಮಾನ್’ ವೆಬ್ ಸರಣಿ ಮೂಡಿಬರಲಿದೆ. ಭಾರತದ ಹಲವೆಡೆ ಸಂಚರಿಸಿ ಅಳಿವಿನಂಚಿನಲ್ಲಿರುವ ಹಾಗೂ ಆಯಾ ಪ್ರದೇಶಗಳಿಗೆ ಸೀಮಿತವಾಗಿರುವ ಅಪರೂಪದ ವಾದ್ಯಗಳನ್ನು ಮತ್ತು ವಿಭಿನ್ನ ಸಂಗೀತ ಪ್ರಕಾರಗಳನ್ನು ಜಗತ್ತಿಗೆ ಪರಿಚಯಿಸಲು ಅವರು ಸಜ್ಜಾಗಿದ್ದಾರೆ. ರೆಹಮಾನ್‌ ಅಭಿಮಾನಿಗಳು ಈ ವೆಬ್‌ ಸರಣಿಗಾಗಿ ಎದುರು ನೋಡುತ್ತಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More