ವಿಡಿಯೋ ಸಾಂಗ್‌ | ಅಕ್ಷಯ್ ಮತ್ತು ಮೌನಿ ರಾಯ್‌ ಜೋಡಿಯ‌ ‘ಮೊನೊಬಿನಾ’ 

ಅಕ್ಷಯ್ ಕುಮಾರ್ ಮತ್ತು ಮೌನಿ ರಾಯ್‌ ಜೋಡಿಯ ‘ಮೊನೊಬಿನಾ’ ಹಾಡಿನಲ್ಲಿ ಪಾಶ್ಚಿಮಾತ್ಯ ಸಂಗೀತ, ನೃತ್ಯದ ಸೊಬಗಿದೆ. ತಾನಿಶ್ಕ್ ಬಾಗ್ಚಿ ಸಂಗೀತ ಸಂಯೋಜನೆಯ ಹಾಡಿಗೆ ಯುವಗಾಯಕರು ದನಿಯಾಗಿದ್ದಾರೆ. ದೇಶಭಕ್ತಿ ಕತೆಯ ಸಿನಿಮಾ ಅಗಸ್ಟ್‌ 15ರಂದು ತೆರೆಕಾಣುತ್ತಿದೆ

ರೀಮಾ ಕಾಗ್ಟಿ ನಿರ್ದೇಶನದ ‘ಗೋಲ್ಡ್‌’ ಹಿಂದಿ ಸಿನಿಮಾ ಆಗಸ್ಟ್‌ 15ರಂದು ತೆರೆಕಾಣಲಿದ್ದು, ಚಿತ್ರತಂಡ ಇದೀಗ ‘ಮೊನೊಬಿನಾ’ ವಿಡಿಯೋ ಹಾಡು ಬಿಡುಗಡೆ ಮಾಡಿದೆ. ಯುವಗಾಯಕರಾದ ಯಾಸರ್‌ ದೇಸಾಯಿ, ಸಶಾ ತಿರುಪತಿ, ಮೊನಾಲಿ ಠಾಕೂರ್‌, ಫರ್ಹದ್‌ ಭಿವಾಂಡಿವಾಲಾ ಹಾಡಿರುವ ಹಾಡಿನಲ್ಲಿ ಪಾಶ್ಚಿಮಾತ್ಯ ನೃತ್ಯ, ಸಂಗೀತವಿದ್ದು, ಹಳೆಯ ಕಾಲಕ್ಕೆ ಕೊಂಡೊಯ್ಯುತ್ತದೆ. ತಪನ್‌ ದಾಸ್‌ (ಅಕ್ಷಯ್ ಕುಮಾರ್‌‌) ತನ್ನ ಬೆಂಗಾಳಿ ಪತ್ನಿ ಮೊನೊಬಿನಾಗೆ (ಮೌನಿ ರಾಯ್‌) ಪ್ರೀತಿ ನಿವೇದಿಸಿಕೊಳ್ಳುವ ಹಾಡಿದು. ತಾನಿಶ್ಕ್‌ ಬಾಗ್ಚಿ ಸಂಯೋಜನೆಯ ಪಾರ್ಟಿ ಸಾಂಗ್‌ ಮತ್ತೊಮ್ಮೆ ಆಲಿಸುವಂತಿದೆ. ತಮ್ಮ ಟ್ವಿಟರ್‌ನಲ್ಲಿ ಹಾಡನ್ನು ಶೇರ್‌ ಮಾಡಿರುವ ಅಕ್ಷಯ್‌, “ಕ್ರೇಜಿ ಸಾಹಿತ್ಯ, ಕುಣಿಯಬೇಕೆನಿಸುವ ಸಂಗೀತದಿಂದಾಗಿ ಹಾಡು ಪರಿಪೂರ್ಣವೆನಿಸುತ್ತದೆ” ಎಂದು ಬರೆದುಕೊಂಡಿದ್ದಾರೆ.

ಈ ಹಿಂದೆ ಚಿತ್ರದ ‘ನೀನೋ ನೆ ಬಾಂಧಿ’, ‘ಛಡ್‌ ಗಯೀ ಹೈ’, ‘ಘರ್ ಲಾಯೇಂಗೆ ಗೋಲ್ಡ್‌’ ಹಾಡುಗಳು ಮತ್ತು ಚಿತ್ರೀಕರಣದಲ್ಲಿನ ವಿಡಿಯೋಗಳನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಈ ವಿಡಿಯೋಗಳು ಚಿತ್ರದ ಕತೆ ಮತ್ತು ಮೇಕಿಂಗ್‌ಗೆ ಸಂಬಂಧಿಸಿದಂತೆ ಸಿನಿಪ್ರಿಯರ ಕುತೂಹಲ ಕೆರಳಿಸಿವೆ. ಅಕ್ಷಯ್ ಅಭಿಮಾನಿಗಳು ಚಿತ್ರವನ್ನು ಎದುರು ನೋಡುತ್ತಿದ್ದಾರೆ. ದೇಶಭಕ್ತಿಯ ಚಿತ್ರವನ್ನು ಅಗಸ್ಟ್‌ 15ರ ಸ್ವಾತಂತ್ರ್ಯ ದಿನದಂದು ಬಿಡುಗಡೆ ಮಾಡುವುದೆಂದು ನಿರ್ಮಾಪಕರು ಆರಂಭದಲ್ಲೇ ಯೋಜಿಸಿದ್ದರು. ಅದೇ ದಿನ ಜಾನ್ ಅಬ್ರಹಾಂ ಅಭಿನಯದ ‘ಸತ್ಯಮೇಯ ಜಯತೆ’ ಚಿತ್ರವೂ ತೆರೆಕಾಣುತ್ತಿದೆ.

ಇದನ್ನೂ ಓದಿ : ಟ್ರೈಲರ್‌| ಬಾಲಿವುಡ್‌ ಲವ್‌ಸ್ಟೋರಿಗಳಿಗೆ ತಿರುವು ಕೊಡಲಿದೆಯೇ ‘ಲೈಲಾ ಮಜ್ನೂ’?

ಭಾರತೀಯ ಹಾಕಿ ತಂಡದ 1948ರ ಐತಿಹಾಸಿಕ ಒಲಂಪಿಕ್ಸ್‌ ಗೆಲುವಿನ ಹಿನ್ನೆಲೆಯಲ್ಲಿ ನಿರ್ದೇಶಕಿ ರೀಮಾ ಕಾಗ್ಟಿ ಸಿನಿಮಾ ನಿರೂಪಿಸಿದ್ದಾರೆ. ಅಕ್ಷಯ್‌ ಕುಮಾರ್‌ ಸ್ವತಂತ್ರ್ಯ ಭಾರತಕ್ಕೆ ಸ್ವರ್ಣ ಪದಕ ಗೆದ್ದು ಕೊಡುವ ಹಾಕಿ ಕೋಚ್‌ ತಪನ್‌ ದಾಸ್‌ ಪಾತ್ರದಲ್ಲಿದ್ದಾರೆ. ಇಂಗ್ಲೆಂಡ್ ಮತ್ತು ಭಾರತದಲ್ಲಿ ಸಿನಿಮಾ ಚಿತ್ರೀಕರಣಗೊಂಡಿದೆ. “ಇದು ಬಯೋಪಿಕ್ ಅಲ್ಲ. 1933ರಿಂದ 1948ರ ಅವಧಿಯ ಭಾರತದಲ್ಲಿನ ಹಾಕಿ ಕ್ರೀಡೆಯ ಸ್ಥಿತಿಗತಿಗಳನ್ನು ಚಿತ್ರಿಸಲಾಗಿದೆ. ಯಾವುದೇ ಹಾಕಿ ಆಟಗಾರನ ಬದುಕು, ಸಾಧನೆ ಆಧರಿಸಿದ ಚಿತ್ರವಲ್ಲ” ಎಂದಿದ್ದಾರೆ ನಿರ್ಮಾಪಕ ರಿತೇಶ್‌ ಸಿದ್ವಾನಿ. ಕುನಾಲ್ ಕಪೂರ್‌, ವಿನೀತ್ ಕುಮಾರ್ ಸಿಂಗ್‌, ಅಮಿತ್ ಸಾದ್‌, ಸನ್ನಿ ಕೌಶಾಲ್‌ ಚಿತ್ರದ ಇತರೆ ತಾರಾಬಳಗದಲ್ಲಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More