ಕನ್ನಡ ವೆಬ್ ಸರಣಿ ಮಾರುಕಟ್ಟೆಗೆ ತಿರುವು ನೀಡಲಿದೆಯೇ ‘ರೋಮಿಯೋ’?

ಇಂಗ್ಲಿಷ್‌, ಹಿಂದಿ ವೆಬ್‌ ಸರಣಿಗಳು ಟೀವಿ ವೀಕ್ಷಕರಿಗೆ ಹೊಸ ಅನುಭವ ನೀಡುತ್ತಿವೆ. ಇದೀಗ ‘ಹೇಟ್‌ ಯೂ ರೋಮಿಯೋ?’ ದೊಡ್ಡ ಪ್ರಮಾಣದಲ್ಲಿ ತಯಾರಾಗುತ್ತಿದ್ದು, ಇದು ಕನ್ನಡ ವೆಬ್ ಸರಣಿ ಮಾರುಕಟ್ಟೆ ಗುರುತಿಸುವುದೇ ಎಂದು ನೋಡಬೇಕು. ಅರವಿಂದ್ ಅಯ್ಯರ್ ಮುಖ್ಯಪಾತ್ರದಲ್ಲಿದ್ದಾರೆ.

ಕೆಲವು ತಿಂಗಳು ಹಿಂದೆ ಅಮೇಜಾನ್ ಪ್ರೈಂ ವಿಡಿಯೋದಲ್ಲಿ ತೆಲುಗು ವೆಬ್‌ ಸರಣಿ ‘ಗ್ಯಾಂಗ್‌ಸ್ಟಾರ್ಸ್‌’ ಬಿಡುಗಡೆಯಾಗಿತ್ತು. ನಟ ಜಗಪತಿ ಬಾಬು ಸೇರಿದಂತೆ ಸಿನಿಮಾ ನಟ-ನಟಿಯರು ಸರಣಿಯಲ್ಲಿ ಅಭಿನಯಿಸಿದ್ದರು. ಹನ್ನೆರೆಡು ಸಂಚಿಕೆಯ ಕ್ರೈಂ-ಡ್ರಾಮಾ ಮಾದರಿಯ ಸರಣಿಗೆ ನಿರೀಕ್ಷಿಸಿದ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಆದರೆ ಇದು ತೆಲುಗು ವೆಬ್ ಸರಣಿಗಿರಬಹುದಾದ ಮಾರುಕಟ್ಟೆಯನ್ನು ಪರಿಚಯಿಸಿತು. ಅಲ್ಲೀಗ ದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆಗಳು ವೆಬ್‌ ಸರಣಿ ನಿರ್ಮಾಣಕ್ಕಿಳಿದಿವೆ. ಕನ್ನಡದಲ್ಲೂ ವೆಬ್‌ ಸರಣಿಗಳು ತಯಾರಾಗಿದ್ದರೂ ಅವುಗಳಿಗೆ ಜಾಗತಿಕ ಮಾರುಕಟ್ಟೆ ದಕ್ಕಿರಲಿಲ್ಲ. ಇದೀಗ ‘ಹೇಟ್‌ ಯೂ ರೋಮಿಯೋ’ ದೊಡ್ಡ ಕ್ಯಾನ್ವಾಸ್‌ನಲ್ಲಿ ತಯಾರಾಗುತ್ತಿದೆ. ಇದು ಕನ್ನಡ ವೆಬ್‌ ಸರಣಿಗಿರುವ ಮಾರುಕಟ್ಟೆ ಅವಕಾಶ, ಮಿತಿಗಳನ್ನು ಪರಿಚಯಿಸಲಿದೆ. ಕನ್ನಡದಲ್ಲಿ ತಯಾರಾಗಲಿರುವ ಸರಣಿಯಲ್ಲಿ ಇಂಗ್ಲಿಷ್ ಸಬ್‌ಟೈಟಲ್‌ಗಳಿರುತ್ತವೆ.

ಕೆಲವು ತಿಂಗಳ ಹಿಂದೆ ಬಿ ಎಂ ಗಿರಿರಾಜ್‌ ‘ರಕ್ತಚಂದನ’ ವೆಬ್‌ ಸರಣಿ ಘೋಷಿಸಿದ್ದರು. ಅವರೀಗ ನಲವತ್ತು ನಿಮಿಷಗಳ ಆರು ಸಂಚಿಕೆಗಳಷ್ಟು ಕಂಟೆಂಟ್ ಚಿತ್ರಿಸಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಎಲ್ಲವೂ ಸಿದ್ಧವಾದ ನಂತರ ಸ್ಟ್ರೀಮಿಂಗ್ ಸರ್ವೀಸ್‌ ಪ್ರೊವೈಡರ್‌ಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಪ್ರಸ್ತುತ ‘ಹೇಟ್‌ ಯೂ ರೋಮಿಯೋ’ ವೆಬ್‌ ಸರಣಿ ಸುದ್ದಿಯಾಗಿದೆ. ನಟ ಶಿವರಾಜಕುಮಾರ್ ಪುತ್ರಿ ನಿವೇದಿತ ನೇತೃತ್ವದ ಮುತ್ತು ಸಿನಿ ಸರ್ವೀಸಸ್‌ ಮತ್ತು ಸಖತ್ ಸ್ಟುಡಿಯೋ ಸಹನಿರ್ಮಾಣದಲ್ಲಿ ಇದು ತಯಾರಾಗಲಿದೆ. ಸಖತ್ ಸ್ಟುಡಿಯೋ ಈ ಹಿಂದೆ ‘ಡಾ ಪಾಲ್‌’ ಮತ್ತು ‘ಲೂಸ್ ಕನೆಕ್ಷನ್‌’ ಎರಡು ವೆಬ್‌ ಸರಣಿಗಳನ್ನು ತಯಾರಿಸಿತ್ತು. ಇವು ಸಖತ್ ಸ್ಟುಡಿಯೋದ ಯೂಟ್ಯೂಬ್‌ ಚಾನಲ್‌ನಲ್ಲಿ ಪ್ರಸಾರವಾಗಿದ್ದವು. ಈ ಬಾರಿ ಸಖತ್ ಸ್ಟುಡಿಯೋಗೆ ಮುತ್ತು ಸಿನಿ ಸರ್ವೀಸಸ್‌ ಜೊತೆಯಾಗಿದೆ. ಕನ್ನಡದ ಕಂಟೆಂಟ್‌ ಅನ್ನು ಜಾಗತಿಕ ಮಾರುಕಟ್ಟೆಗೆ ರೀಚ್‌ ಮಾಡಿಸುವುದು ಇವರ ಯೋಜನೆ.

“ಹೇಟ್‌ ಯೂ ರೋಮಿಯೋ’ ಸರಣಿಯನ್ನು ದೊಡ್ಡ ಕ್ಯಾನ್ವಾಸ್‌ನಲ್ಲಿ ನಿರ್ಮಿಸುತ್ತಿದ್ದೇವೆ. ವಿಯಟ್ನಾಮ್‌ನಲ್ಲಿ ಬಹುಪಾಲು ಚಿತ್ರೀಕರಣ ನಡೆಸಲಿದ್ದು, ಗುಣಮಟ್ಟದಲ್ಲಿ ರಾಜಿಯಾಗುತ್ತಿಲ್ಲ. ಈ ಸರಣಿಯೊಂದಿಗೆ ನಮಗೆ ಸ್ಟ್ರೀಮಿಂಗ್‌ ಕ್ಷೇತ್ರದಲ್ಲಿ ಕನ್ನಡದ ಮಾರುಕಟ್ಟೆಯ ಅಂದಾಜು ಸಿಗಲಿದೆ” ಎನ್ನುತ್ತಾರೆ ಸಖತ್ ಸ್ಟುಡಿಯೋದ ಕಿರಣ್‌. ‘ಲೂಸ್‌ ಕನೆಕ್ಷನ್‌’ ನಿರ್ದೇಶಿಸಿದ್ದ ಹಸೀನ್ ಖಾನ್ ಮತ್ತು ಇಶಾಮ್ ಖಾನ್‌ ‘ಹೇಟ್‌ ಯೂ ರೋಮಿಯೋ’ ನಿರ್ದೇಶಿಸಲಿದ್ದಾರೆ. ಈ ಹಾಸ್ಯಪ್ರಧಾನ ಸರಣಿಯ ಮುಖ್ಯಪಾತ್ರದಲ್ಲಿ ಅರವಿಂದ್ ಅಯ್ಯರ್ ಕಾಣಿಸಿಕೊಳ್ಳುತ್ತಿದ್ದಾರೆ. ಇಂಜಿನಿಯರಿಂಗ್ ಓದಿಕೊಂಡು ಲಂಡನ್‌ನಲ್ಲಿ ಕೆಲಸ ಮಾಡುತ್ತಿದ್ದ ಅರವಿಂದ್ ಅಲ್ಲಿ ಕೆಲಸದ ಜೊತೆ ಅಭಿನಯ ತರಬೇತಿಯನ್ನೂ ಪಡೆದುಕೊಂಡಿದ್ದರು. ‘ಭೀಮಸೇನ ನಳಮಹರಾಜ’ ಚಿತ್ರದೊಂದಿಗೆ ಹೀರೋ ಆಗಿರುವ ಅವಿನಾಶ್‌ ಹೊಸ ಅವಕಾಶದ ಬಗ್ಗೆ ಉತ್ಸುಕರಾಗಿದ್ದಾರೆ. “ಸ್ಟ್ರೀಮಿಂಗ್‌ ಭವಿಷ್ಯದ ಮೀಡಿಯಾ. ಜಾಗತಿಕವಾಗಿ ಜನರನ್ನು ತಲುಪುವ ಪ್ರಭಾವಶಾಲಿ ವೆಬ್‌ ಸರಣಿಯ ಅವಕಾಶ ಅದೃಷ್ಟವೇ ಸರಿ” ಎನ್ನುತ್ತಾರೆ.

ಇದನ್ನೂ ಓದಿ : ವಿಡಿಯೋ ಸಾಕ್ಷ್ಯಚಿತ್ರ | ಕನ್ನಡ ಚಿತ್ರರಂಗದ ಪ್ರಭಾವಿ ಚಿತ್ರಕರ್ಮಿ ಎಂ ಭಕ್ತವತ್ಸಲ

ದಕ್ಷಿಣ ಭಾರತದಲ್ಲೇ ಇಲ್ಲಿಯವರೆಗಿನ ಅತಿ ದೊಡ್ಡ ಬಜೆಟ್‌ನ ಸರಣಿ ಇದಾಗಲಿದೆ ಎಂದು ನಿರ್ಮಾಪಕರು ಹೇಳುತ್ತಿದ್ದಾರೆ. ಮೊದಲ ಸೀಸನ್‌ನಲ್ಲಿ ಮೂವತ್ತು ನಿಮಿಷದ ಏಳು ಸಂಚಿಕೆಗಳನ್ನು ತಯಾರಿಸಲಾಗುತ್ತಿದೆ. ಸದ್ಯ ಮುಖ್ಯಪಾತ್ರಧಾರಿ ಅರವಿಂದ್ ಅಯ್ಯರ್ ಹೆಸರನ್ನಷ್ಟೇ ಘೋಷಿಸಿದ್ದು, ಮುಂದಿನ ದಿನಗಳಲ್ಲಿ ಇತರೆ ಮಾಹಿತಿ ನೀಡಲಿದ್ದಾರೆ. ಇನ್ನು ಕನ್ನಡ ನಟಿ ಸಂಗೀತಾ ಭಟ್‌ ಅವರೂ ವೆಬ್‌ ಸರಣಿ ನಿರ್ಮಾಣದತ್ತ ಆಸಕ್ತರಾಗಿದ್ದಾರೆ. ಸಮಾನಾಸಕ್ತರ ‘ಸ್ಕ್ರಾಬಲ್‌ ಪ್ರೊಡಕ್ಷನ್ಸ್‌’ನಿಂದ ಸರಣಿ ನಿರ್ಮಿಸುವುದು ಅವರ ಮುಂದಿನ ಯೋಜನೆ. ಈ ತಂಡದಲ್ಲಿ ಕಲಾವಿದರು ಮತ್ತು ತಂತ್ರಜ್ಞರಿದ್ದಾರೆ. ಇದಕ್ಕೆ ತಯಾರಿ ಎನ್ನುವಂತೆ ಆರಂಭದಲ್ಲಿ ಅವರು ಮೂರು ಕಿರುಚಿತ್ರಗಳನ್ನು ನಿರ್ಮಿಸಲಿದ್ದಾರೆ. “ಸದ್ಯ ಕಾನ್ವರ್ಸೇಷನ್‌ ಶೀರ್ಷಿಕೆಯ ಒಂದು ಕಿರುಚಿತ್ರ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ತಂಡದಿಂದ ವೆಬ್‌ ಸರಣಿ ಮಾಡುವ ಯೋಜನೆಯಿದೆ. ಸಿನಿಮಾದಲ್ಲಿ ಸಾಧ್ಯವಾಗದ ಪ್ರಯೋಗಗಳು ವೆಬ್‌ ಸರಣಿಯಲ್ಲಿ ಸಾಧ್ಯ” ಎನ್ನುತ್ತಾರೆ ಸಂಗೀತಾ.

ಪ್ರಯೋಗಶೀಲ ಸಿನಿಮಾಗಳಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ಬಿ ಎಂ ಗಿರಿರಾಜ್‌ ‘ರಕ್ತಚಂದನ’ ಸರಣಿಯ ಪೋಸ್ಟ್‌ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತರಾಗಿದ್ದಾರೆ. ಇದೊಂದು ಕ್ರೈಂ-ಥ್ರಿಲ್ಲರ್ ಪ್ರಕಾರದ ಸರಣಿ. “ಉತ್ತಮ ಗುಣಮಟ್ಟದಲ್ಲಿ ಚಿತ್ರಿಸಿದ್ದೇವೆ. ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆದಿವೆ. ಕಂಟೆಂಟ್‌ ಸಿದ್ಧವಾದ ನಂತರ ಮಾರುಕಟ್ಟೆ ಬಗ್ಗೆ ಗಮನ ಹರಿಸಬೇಕಿದೆ” ಎನ್ನುವ ಗಿರಿರಾಜ್‌ ಜಾಗತಿಕ ಮಾರುಕಟ್ಟೆ ತಲುಪುವ ವಿಶ್ವಾಸದಲ್ಲಿದ್ದಾರೆ. ಪ್ರಭಾವಿ ಸ್ಟ್ರೀಮಿಂಗ್ ಸರ್ವೀಸ್‌ ಪ್ರೊವೈಡರ್ಸ್‌ ತಲುಪಲು ಮಧ್ಯವರ್ತಿಗಳನ್ನು ಅವಲಂಬಿಸಬೇಕಿದೆ ಎನ್ನುವುದು ಸದ್ಯದ ಅವರ ಅನುಭವದ ಮಾತು. ಮುಂದಿನ ದಿನಗಳಲ್ಲಿ ಹಿಂದಿಯಂತೆ ದಕ್ಷಿಣದ ಪ್ರಾದೇಷಿಕ ಭಾಷೆಗಳಲ್ಲೂ ವೆಬ್‌ ಸರಣಿಗೆ ಕಂಟೆಂಟ್‌ ತಯಾರಾಗಲಿದೆ ಎಂದು ಅವರು ವಿಶ್ವಾಸದಿಂದ ಹೇಳುತ್ತಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More