ಟ್ರೈಲರ್‌ | ಅಭಿಷೇಕ್‌, ತಾಪ್ಸಿ, ವಿಕ್ಕಿ ತ್ರಿಕೋನ ಪ್ರೇಮಕತೆ ‘ಮನ್ಮರ್ಝಿಯಾ’

ಅನುರಾಗ್ ಕಶ್ಯಪ್ ನಿರ್ದೇಶನದ ‘ಮನ್ಮರ್ಝಿಯಾ’ ಸಿನಿಮಾ ಟ್ರೈಲರ್ ಬಿಡುಗಡೆಯಾಗಿದೆ. ಅಭಿಷೇಕ್ ಬಚ್ಚನ್‌, ವಿಕ್ಕಿ ಕೌಶಾಲ್ ಮತ್ತು ತಾಪ್ಸಿ ಪನ್ನು ನಟನೆಯ ತ್ರಿಕೋನ ಪ್ರೇಮಕತೆ ಇದು. ಟ್ರೈಲರ್‌ ಆಕರ್ಷಕವಾಗಿದ್ದು, ಸಿನಿಮಾದ ಬಿಡುಗಡೆ ದಿನಾಂಕ ಸೆಪ್ಟೆಂಬರ್‌ 14 ಎಂದು ಘೋಷಿಸಲಾಗಿದೆ

‘ನಿಮ್ಮ ಹೃದಯ ಹೇಳಿದಂತೆ ಕೇಳಿ’ - ಇದು ತಮ್ಮ ಸಿನಿಮಾ ‘ಮನ್ಮರ್ಝಿಯಾ’ ಟ್ಯಾಗ್‌ಲೈನ್ ಎನ್ನುತ್ತಾರೆ ನಿರ್ದೇಶಕ ಅನುರಾಗ್ ಕಶ್ಯಪ್‌. ಪ್ರಸ್ತುತ ದಿನಗಳ ಯುವಪೀಳಿಗೆಯ ಪ್ರೀತಿ, ಸಂಬಂಧಗಳಲ್ಲಿನ ಗೊಂದಲಗಳನ್ನು ಅವರಿಲ್ಲಿ ಹೇಳುತ್ತಿದ್ದಾರಂತೆ. ಅಭಿಷೇಕ್ ಬಚ್ಚನ್, ತಾಪ್ಸಿ ಪನ್ನು ಮತ್ತು ವಿಕ್ಕಿ ಕೌಶಾಲ್ ಅಭಿನಯದ ತ್ರಿಕೋನ ಪ್ರೇಮಕತೆಯ ಟ್ರೈಲರ್ ಬಿಡುಗಡೆಯಾಗಿದ್ದು, ಅನುರಾಗ್‌ ಕಶ್ಯಪ್ ಶೈಲಿ ದಟ್ಟವಾಗಿ ಕಾಣಿಸುತ್ತದೆ. ಬೋಲ್ಡ್‌ ಮತ್ತು ಇಂಟೆನ್ಸ್ ಲವ್‌ಸ್ಟೋರಿಯೊಂದಿಗೆ ಅಭಿಷೇಕ್ ಬಚ್ಚನ್ ಎರಡು ವರ್ಷಗಳ ನಂತರ (ಅವರ ಕೊನೆಯ ಸಿನಿಮಾ ‘ಹೌಸ್‌ಫುಲ್‌3’) ತೆರೆಗೆ ಮರಳುತ್ತಿದ್ದಾರೆ.

"ಪ್ರೀತಿ ಎಂದೂ ಗೊಂದಲ ಮೂಡಿಸದು, ಪ್ರೇಮಿಗಳು ಗೊಂದಲಕ್ಕೀಡಾಗುತ್ತಾರೆ,” ಎನ್ನುವುದು ‘ಮನ್ಮರ್ಝಿಯಾ’ ಚಿತ್ರದ ಟ್ಯಾಗ್‌ಲೈನ್‌. ಆತ (ವಿಕ್ಕಿ) ಮತ್ತು ಆಕೆ (ತಾಪ್ಸಿ) ಪ್ರೀತಿಯಲ್ಲಿ ಬೀಳುತ್ತಾರೆ, ಆತನ ಕಮಿಟ್‌ಮೆಂಟ್‌ ಫೋಬಿಯಾದಿಂದ ಈ ಸಂಬಂಧ ಹದಗೆಡುತ್ತದೆ. ಇವರ ಮಧ್ಯೆ ಮತ್ತೊಬ್ಬ ಯುವಕನ (ಅಭಿಷೇಕ್‌) ಪ್ರವೇಶವಾಗುತ್ತದೆ. ಈತ ಪೋಷಕರು ಯುವತಿಗಾಗಿ ಆಯ್ಕೆ ಮಾಡಿದ ವರ. ಪ್ರಸ್ತುತ ಬಾಲಿವುಡ್‌ನ ಸೆನ್ಸೇಷನ್‌ ನಟ ವಿಕ್ಕಿ ಕೌಶಾಲ್‌ ಮತ್ತು ತಾಪ್ಸಿ ಪನ್ನು ಪ್ರೇಮಪ್ರಸಂಗಗಳೊಂದಿಗೆ ಟ್ರೈಲರ್ ಆರಂಭವಾಗುತ್ತದೆ. ಭಿನ್ನ ಪಾತ್ರಗಳಲ್ಲಿ ಮಿಂಚಿರುವ ವಿಕ್ಕಿ, ಇಲ್ಲಿ ಮತ್ತೊಮ್ಮೆ ಪ್ರೇಕ್ಷಕರನ್ನು ಗೆಲ್ಲುವ ಸೂಚನೆ ನೀಡುತ್ತಾರೆ.

ಇದನ್ನೂ ಓದಿ : ‘ದಿ ಸ್ಕೈ ಈಸ್ ಪಿಂಕ್‌’ಗೆ ಚಾಲನೆ; ಫೋಟೋ ಟ್ವೀಟ್‌ ಮಾಡಿದ ಪ್ರಿಯಾಂಕಾ

ಮೊನ್ನೆಯಷ್ಟೇ ತೆರೆಕಂಡ ‘ಮುಲ್ಕ್‌’ ಹಿಂದಿ ಚಿತ್ರದಲ್ಲಿ ವಕೀಲೆಯಾಗಿದ್ದ ತಾಪ್ಸಿ ಇಲ್ಲಿ ‘ಹ್ಯಾಪಿ ಗೋ ಲಕ್ಕೀ’ ಯುವತಿ. ನಟ ಅಭಿಷೇಕ್ ಬಚ್ಚನ್‌ ಸಿಖ್ ಯುವಕ ರಿಷಿ ತಲ್ವಾರ್ ಪಾತ್ರದಲ್ಲಿದ್ದಾರೆ. ಪತ್ನಿಯನ್ನು ಪ್ರೀತಿಸುವ, ಆಕೆಯಿಂದ ವಂಚಿತನಾಗುವ ‘ಅಲ್ವಿದಾ ನಾ ಕೆಹನಾ’ ಸಿನಿಮಾದ ಪಾತ್ರವನ್ನೇ ಇಲ್ಲಿಯ ಪಾತ್ರವೂ ಹೋಲುತ್ತದೆ. ಆನಂದ್ ಎಲ್ ರಾಯ್‌ ನಿರ್ಮಾಣ ಮತ್ತು ಅನುರಾಗ್ ಕಶ್ಯಪ್‌ ನಿರ್ದೇಶನದ ಸಿನಿಮಾ ಪ್ರಸ್ತುತ ದಿನಗಳ ಯುವಕ-ಯುವತಿಯರ ಪ್ರೀತಿಯಲ್ಲಿನ ಗೊಂದಲಗಳನ್ನು ಹೇಳುವಂತಿದೆ. ಹಿನ್ನೆಲೆ ಸಂಗೀತ ಆಕರ್ಷಕವಾಗಿದ್ದು, ಮಧುರ ಹಾಡುಗಳು ರೂಪುಗೊಂಡಿರುವ ಸಾಧ್ಯತೆಗಳಿವೆ. ಟ್ರೈಲರ್‌ ಅನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿರುವ ತಾಪ್ಸಿ, “ಪ್ರೀತಿಯ ಹುಚ್ಚು ಜಗತ್ತಿಗೆ ಸ್ವಾಗತ,” ಎಂದಿದ್ದಾರೆ. ನಟ ವಿಕ್ಕಿ ಕೌಶಾಲ್‌, “ವಿಕ್ಕಿ ಮನಸ್ಸಿನ ಏಕೈಕ ಕನಸು ರೂಮಿ. ವಿಕ್ಕಿ ಮತ್ತು ರೂಮಿ ಇಬ್ಬರನ್ನೂ ಭೇಟಿ ಮಾಡಿ,” ಎನ್ನುವ ಸಂದೇಶ ಬರೆದಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More