‘ಸೀತಾರಾಮ ಕಲ್ಯಾಣ’ ರೀಮೇಕಲ್ಲ ಎಂದು ಸ್ಪಷ್ಟಪಡಿಸಿದ ನಿರ್ಮಾಪಕ ಎಚ್‌ಡಿಕೆ

ಪುತ್ರ ನಿಖಿಲ್ ಅಭಿನಯದ ‘ಸೀತಾರಾಮ ಕಲ್ಯಾಣ’ ಸಿನಿಮಾ ರೀಮೇಕಲ್ಲ ಎಂದು ಚಿತ್ರದ ನಿರ್ಮಾಪಕರೂ ಆದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಇದು ಅಪ್ಪಟ ಸ್ವಮೇಕ್ ಚಿತ್ರವಾಗಿದ್ದು, ಉತ್ತಮ ಕೌಟುಂಬಿಕ ಕತೆಯಾಗಿ ಪ್ರೇಕ್ಷಕರನ್ನು ರಂಜಿಸಲಿದೆ ಎಂದಿದ್ದಾರೆ ಎಚ್‌ಡಿಕೆ

ಇತ್ತೀಚೆಗಷ್ಟೇ ‘ಸೀತಾರಾಮ ಕಲ್ಯಾಣ’ ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಟೀಸರ್‌ನಲ್ಲಿನ ಕೆಲವು ದೃಶ್ಯಗಳು ತೆಲುಗು ಚಿತ್ರವೊಂದನ್ನು ಹೋಲುತ್ತಿದ್ದು, ಇದು ರಿಮೇಕ್‌ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆದಿದ್ದವು. ಅಲ್ಲು ಅರ್ಜುನ್‌ ಅಭಿನಯದ ‘ಸರೈನೋಡು’ ತೆಲುಗು ಚಿತ್ರದ ದೃಶ್ಯಗಳು ಟೀಸರ್‌ನಲ್ಲಿವೆ ಎಂದಿದ್ದರು ಕೆಲವರು. ಚಿತ್ರದ ನಿರ್ಮಾಪಕರೂ ಆಗಿರುವ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಇದು ಸ್ವಮೇಕ್ ಎಂದು ಪುನರುಚ್ಛರಿಸಿದ್ದಾರೆ. “ಟೀಸರ್‌ ಬಿಡುಗಡೆಯ ನಂತರ ಸೃಷ್ಟಿಯಾಗಿರುವ ರಿಮೇಕ್ ಊಹಾಪೋಹಗಳಿಗೆ ಆಧಾರವಿಲ್ಲ. ಇದು ಅಪ್ಪಟ ಸ್ವಮೇಕ್ ಸಿನಿಮಾ. ದೃಶ್ಯಗಳಲ್ಲಿ ಹೋಲಿಕೆ ಇದ್ದರೆ ಕಾಕತಾಳೀಯವಷ್ಟೆ. ಉತ್ತಮ ಮನರಂಜನೆಯ ಕೌಟುಂಬಿಕ ಚಿತ್ರವನ್ನು ಕನ್ನಡಿಗರಿಗೆ ಅರ್ಪಿಸಲಿದ್ದೇವೆ,” ಎಂದಿದ್ದಾರೆ ಎಚ್‌ಡಿಕೆ.

‘ಸೀತಾರಾಮ ಕಲ್ಯಾಣ’ ಚಿತ್ರಕ್ಕೀಗ ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆದಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಇದಕ್ಕಾಗಿ ಸೆಟ್ ಹಾಕಿದ್ದು, ಕಳೆದೊಂದು ವಾರದಿಂದ ಚಿತ್ರೀಕರಣ ನಡೆದಿದೆ. ಚಿತ್ರದಲ್ಲಿ ನಟಿಸುತ್ತಿರುವ ದೊಡ್ಡ ತಾರಾಬಳಗ ಕ್ಲೈಮ್ಯಾಕ್ಸ್‌ ಚಿತ್ರೀಕರಣದಲ್ಲಿ ಪಾಲ್ಗೊಂಡಿದೆ. ಚಿತ್ರದ ಕಲಾವಿದರೆಲ್ಲರನ್ನೂ ಪರಿಚಯಿಸುವ ಉದ್ದೇಶದಿಂದ ಆಯೋಜನೆಗೊಂಡಿದ್ದ ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕರು ಮಾತ್ರವಲ್ಲದೆ ಹೀರೋ ನಿಖಿಲ್‌, ನಿರ್ದೇಶಕ ಹರ್ಷ ಕೂಡ ತಮ್ಮ ಚಿತ್ರ ಸ್ವಮೇಕ್ ಎಂದು ಸಾರಿ ಹೇಳಿದರು. “ತೆಲುಗು ಚಿತ್ರದ ಆಕ್ಷನ್ ದೃಶ್ಯಗಳ ಪ್ರೇರಣೆ ಇರಬಹುದಾದರೂ ನಮ್ಮ ಸಿನಿಮಾ ಖಂಡಿತ ರೀಮೇಕಲ್ಲ. ನಾಲ್ಕೈದು ತಿಂಗಳುಗಳ ಕಾಲ ಚಿತ್ರಕತೆ ಮಾಡಿದ್ದೇವೆ,” ಎನ್ನುವುದು ಹರ್ಷರ ಹೇಳಿಕೆ.

ಇದನ್ನೂ ಓದಿ : ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪಿಸುವಂತೆ ಸಿಎಂ ಎಚ್‌ಡಿಕೆಗೆ ಸಿದ್ದರಾಮಯ್ಯ ಪತ್ರ

ಚಿತ್ರದಲ್ಲಿ ಹೀರೋ ನಿಖಿಲ್‌ ಅವರ ತಂದೆಯಾಗಿ ತಮಿಳು ನಟ ಶರತ್‌ ಕುಮಾರ್ ಅಭಿನಯಿಸುತ್ತಿದ್ದಾರೆ. ಇತರ ಪ್ರಮುಖ ಪಾತ್ರಗಳಲ್ಲಿ ಕನ್ನಡದ ಹಿರಿಯ ನಟಿ ಗಿರಿಜಾ ಲೋಕೇಶ್‌, ರವಿಶಂಕರ್, ಮಧುಬಾಲಾ ಸೇರಿದಂತೆ ಹಲವರಿದ್ದಾರೆ. ಕಳೆದೊಂದು ವಾರದಿಂದ ಕ್ಲೈಮ್ಯಾಕ್ಸ್‌ ಚಿತ್ರೀಕರಣ ನಡೆದಿದ್ದು, ಇನ್ನೂ ಇಪ್ಪತ್ತು ದಿನ ಚಿತ್ರೀಕರಣ ಮುಂದುವರಿಯಲಿದೆ. ಶೀಘ್ರ ಚಿತ್ರೀಕರಣ ಮುಗಿಸಿ ದಸರಾ ಹಬ್ಬಕ್ಕೆ ಸಿನಿಮಾ ಬಿಡುಗಡೆಗೊಳಿಸುವುದು ನಿರ್ಮಾಪಕರ ಯೋಜನೆ. ನಿಖಿಲ್‌ ಕುಮಾರ್‌ಗೆ ಜೋಡಿಯಾಗಿ ರಚಿತಾ ರಾಮ್‌ ಅಭಿನಯಿಸುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸುತ್ತಿದ್ದು, ಸ್ವಾಮಿ ಛಾಯಾಗ್ರಹಣ ಮಾಡಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More