ಚಿತ್ರತಂಡದಿಂದ ಹೊರನಡೆದ ನಟಿ ಜಯಶ್ರೀ ರಾಮಯ್ಯ; ಕಾಸ್ಟಿಂಗ್ ಕೌಚ್‌ ಆರೋಪ

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಕಾಸ್ಟಿಂಗ್ ಕೌಚ್ ಪ್ರಕರಣ ಸದ್ದು ಮಾಡುತ್ತಿದೆ. ’ಬಿಗ್‌ಬಾಸ್’ ರಿಯಾಲಿಟಿ ಶೋ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಈ ಕುರಿತು ಆರೋಪಿಸಿದ್ದು, ಚಿತ್ರದ ನಿರ್ದೇಶಕರು, ನಿರ್ಮಾಪಕರ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ

ಇತ್ತೀಚೆಗೆ ಬಾಲಿವುಡ್‌ ಹಾಗೂ ದಕ್ಷಿಣ ಭಾರತದ ಚಿತ್ರರಂಗಗಳ ನಟಿಯರು ಕಾಸ್ಟಿಂಗ್ ಕೌಚ್‌ ಬಗ್ಗೆ ಆಗಿಂದಾಗ್ಗೆ ಮಾತನಾಡುತ್ತಿದ್ದಾರೆ. ತೆಲುಗು ನಟಿ ಶ್ರೀರೆಡ್ಡಿ ಅವರಂತೂ ಕಳೆದೆರೆಡು ತಿಂಗಳಿನಿಂದ ನಿರಂತರವಾಗಿ ಈ ಬಗ್ಗೆ ದೂರುತ್ತಿದ್ದು, ಕೆಲವು ಸಾಕ್ಷ್ಯಗಳನ್ನೂ ಒದಗಿಸಿದ್ದರು. ಇದೀಗ ಸ್ಯಾಂಡಲ್‌ವುಡ್ ನಟಿ ಜಯಶ್ರೀ ರಾಮಯ್ಯ ತಾವು ಕಾಸ್ಟಿಂಗ್ ಕೌಚ್‌ ಎದುರಿಸಿದ್ದಾಗಿ ಆರೋಪಿಸಿದ್ದಾರೆ. ನಿರ್ದೇಶಕರು, ನಿರ್ಮಾಪಕರ ನಡವಳಿಕೆಗಳನ್ನು ದೂರಿರುವ ಅವರು, ಕರ್ನಾಟಕ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿದ್ದಾರೆ.

ಮಂಜು ಹೆದ್ದೂರ್‌ ನಿರ್ದೇಶನದ ‘ನಟನಟಿಯರು ಬೇಕಾಗಿದ್ದಾರೆ’ ಚಿತ್ರದ ನಾಯಕಿಯಾಗಿ ಜಯಶ್ರೀ ರಾಮಯ್ಯ ಆಯ್ಕೆಯಾಗಿದ್ದರು. ಸ್ಕ್ರೀನ್ ಟೆಸ್ಟ್‌ ಎಂದು ಎರಡು ದಿನ ಚಿತ್ರೀಕರಣದಲ್ಲೂ ಪಾಲ್ಗೊಂಡಿದ್ದರು. ಈ ಬಗ್ಗೆ ಮಾತನಾಡಿದ ಜಯಶ್ರೀ, “ಚಿತ್ರದ ನಟಿಯಾಗಿ ಆಯ್ಕೆಯಾಗಿದ್ದ ನನ್ನ ಸ್ಕ್ರೀನ್ ಟೆಸ್ಟ್‌ ಕೂಡ ನಡೆದಿತ್ತು. ಇದಾಗಿ ಒಂದೆರೆಡು ದಿನಗಳ ನಂತರ ಚಿತ್ರದ ನಿರ್ದೇಶಕರು, ನಿರ್ಮಾಪಕರು ರಾತ್ರಿ ಹತ್ತೂವರೆ ಹೊತ್ತಿಗೆ ನನಗೆ ಕರೆ ಮಾಡಿ ಪರ್ಫಾರ್ಮೆನ್ಸ್ ವಿಡಿಯೋ ಕಳುಹಿಸಲು ಹೇಳಿದರು. ಮಾತು ಮುಂದುವರಿಸಿ ಡ್ರಿಂಕ್ಸ್‌ಗೆ ಹೋಗೋಣ, ಲಾಂಗ್ ಡ್ರೈವ್‌ಗೆ ನೀವು ಬರಬಹುದೇ? ಎಂದೆಲ್ಲ ಪ್ರಶ್ನಿಸಿದರು. ನಾನು ಕೋಪಗೊಂಡು ಫೋನ್‌ ಕಟ್‌ ಮಾಡಿದೆ,” ಎನ್ನುತ್ತಾರೆ.

ಇದನ್ನೂ ಓದಿ : ಮಾಡೆಲಿಂಗ್‌, ಜಾಹೀರಾತು ಜಗತ್ತಿನಿಂದ ಬೆಳ್ಳಿತೆರೆಗೆ ಬಂದ ಜಯಶ್ರೀ ರಾಮಯ್ಯ

ಮರುದಿನ ಚಿತ್ರದ ನಾಯಕಿಯನ್ನಾಗಿ ಬೇರೆ ನಟಿಯನ್ನು ಆಯ್ಕೆ ಮಾಡಿರುವ ಮಾಹಿತಿ ಜಯಶ್ರೀ ಅವರಿಗೆ ಸಿಕ್ಕಿದೆ. ತಮ್ಮ ಪಾತ್ರಕ್ಕೆ ಏಕಾಏಕಿ ಬೇರೆ ನಟಿಯನ್ನು ಆಯ್ಕೆ ಮಾಡಿಕೊಂಡಿರುವ ಕ್ರಮವನ್ನು ಜಯಶ್ರೀ ಪ್ರಶ್ನಿಸಿದ್ದಾರೆ. “ಚಿತ್ರದ ನಾಯಕಿಯನ್ನಾಗಿ ನನ್ನನ್ನು ಅಂತಿಮಗೊಳಿಸಿದ್ದರು. ಸ್ಕ್ರೀನ್‌ ಟೆಸ್ಟ್ ಕೂಡ ನಡೆದಿತ್ತು. ಹೀಗಿರುವಾಗ ಅವರು ನನಗೆ ಏನೊಂದೂ ಹೇಳದೆ ಬೇರೆ ನಟಿಯನ್ನು ನನ್ನ ಜಾಗಕ್ಕೆ ಕರೆತಂದಿದ್ದಾರೆ. ಅವರ ಬೇಡಿಕೆಗಳಿಗೆ ಸ್ಪಂದಿಸದ ಕಾರಣ ಹೀಗೆ ಮಾಡಿದ್ದಾರೆ. ಇದು ಕಾಸ್ಟಿಂಗ್ ಕೌಚ್‌ ಅಲ್ಲದೆ ಮತ್ತೇನು?” ಎಂದು ಪ್ರಶ್ನಿಸಿರುವ ಅವರು, ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ, “ಕಾಸ್ಟಿಂಗ್ ಕೌಚ್‌ ಕೆಟ್ಟ ನಡಾವಳಿ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ನಟಿ ಜಯಶ್ರೀ ರಾಮಯ್ಯ ಅವರ ದೂರು ಪತ್ರ ಮಂಡಳಿಗೆ ಬಂದಿದೆ. ಚಿತ್ರದ ನಿರ್ದೇಶಕರು ಮತ್ತು ನಿರ್ಮಾಪಕರನ್ನು ಕರೆಸಿ ಮಾತನಾಡಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ,” ಎಂದಿದ್ದಾರೆ.

#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
ಸ್ಮಿತಾ ನೆನಪು | ‘ಅನ್ವೇಷಣೆ’ ಗಾಗಿ ತಾನೇ ಹಣ ಹಾಕಿಕೊಂಡು ಬಂದು ನಟಿಸಿದ್ದರು
ಸುದ್ದಿ ವಾಚನದಿಂದ ಸಿನಿಮಾಲೋಕಕ್ಕೆ ಬಂದ ಕೃಷ್ಣಸುಂದರಿ
Editor’s Pick More