ಟ್ರೈಲರ್‌ | ಟ್ರಂಪ್‌ ಕುರಿತ ಮೂರ್‌ ಡಾಕ್ಯುಮೆಂಟರಿ ‘ಫ್ಯಾರನ್‌ಹೀಟ್‌ 11/9’

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕುರಿತ ಮೈಖೆಲ್ ಮೂರ್ ಸಾಕ್ಷ್ಯಚಿತ್ರ ‘ಫ್ಯಾರನ್‌ಹೀಟ್‌ 11/9’ ಟ್ರೈಲರ್ ಬಿಡುಗಡೆಯಾಗಿದೆ. ಟ್ರಂಪ್ ಆಡಳಿತ, ಅಮೆರಿಕನ್ನರ ಪರ-ವಿರೋಧದ ನಿಲುವುಗಳ ಸಾಕ್ಷ್ಯಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದು, ಸೆಪ್ಟೆಂಬರ್‌ 21ರಂದು ಬಿಡುಗಡೆಯಾಗಲಿದೆ

ನಿರ್ದೇಶಕ, ರಾಜಕೀಯ ವಿಶ್ಲೇಷಕ, ಲೇಖಕ ಮೈಖೆಲ್ ಮೂರ್‌ ನಿರ್ದೇಶನದ ‘ಫ್ಯಾರನ್‌ಹೀಟ್‌ 11/9’ ಸಾಕ್ಷ್ಯಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಆಸ್ಕರ್ ಪುರಸ್ಕೃತ ನಿರ್ದೇಶಕ ಮೈಖೆಲ್, ತಮ್ಮ ಸಾಕ್ಷ್ಯಚಿತ್ರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಇಲ್ಲಿಯವರೆಗಿನ ಆಡಳಿತ, ಅಮೇರಿಕನ್ನರ ಮೇಲೆ ಟ್ರಂಪ್ ಆಡಳಿತದ ಪ್ರಭಾವದ ಕುರಿತು ಚಿತ್ರಿಸಿದ್ದಾರೆ. ಎರಡು ನಿಮಿಷಗಳ ಟ್ರೈಲರ್‌ನಲ್ಲಿ ಮೈಖೆಲ್ ಭಿನ್ನ ಅಭಿಪ್ರಾಯಗಳನ್ನು ಹೊಂದಿರುವ ಜನರೊಂದಿಗೆ ಮಾತನಾಡಿದ್ದಾರೆ. ಶೀರ್ಷಿಕೆಯೇ ವಿಶೇಷವಾಗಿದ್ದು, ಸಾಕ್ಷ್ಯಚಿತ್ರದ ಕುರಿತು ಅಮೆರಿಕನ್ನರಲ್ಲಿ ಕುತೂಹಲ ಮೂಡಿಸಿದೆ.

ಮೈಖೆಲ್ ಈ ಹಿಂದೆ ಜಾರ್ಜ್ ಡಬ್ಲ್ಯೂ ಬುಷ್‌ ಕುರಿತು ನಿರ್ದೇಶಿಸಿದ್ದ ಸಾಕ್ಷ್ಯಚಿತ್ರ ಜನಮೆಚ್ಚುಗೆಗೆ ಪಾತ್ರವಾಗಿತ್ತು. ಈ ಸಾಕ್ಷ್ಯಚಿತ್ರಕ್ಕಾಗಿ ಅವರು ಪಾಲ್ಮ್ ಡಿ’ಓರ್‌ ಪ್ರಶಸ್ತಿ ಪಡೆದಿದ್ದರು. ‘ಫ್ಯಾರನ್‌ಹೀಟ್‌ 11/9’ ಟ್ರೈಲರ್‌ನಲ್ಲಿ ಅಮೆರಿಕದ ನಾಗರಿಕರು ತಮ್ಮ ಅಧ್ಯಕ್ಷರನ್ನು ಪ್ರಶ್ನಿಸುವ ದೃಶ್ಯಗಳಿವೆ. ಮತ್ತೊಂದೆಡೆ, ಟ್ರಂಪ್‌ರನ್ನು ಬೆಂಬಲಿಸುವ ರೋಜರ್‌ ಸ್ಟೋನ್‌ರಂಥವರೂ ಇಲ್ಲಿದ್ದಾರೆ. ಸಾಕ್ಷ್ಯಚಿತ್ರದ ಮೊದಲ ಭಾಗದಲ್ಲಿ ಮೈಖೆಲ್ ಅವರು ಪಾರ್ಕ್‌ಲ್ಯಾಂಡ್‌ ವಿದ್ಯಾರ್ಥಿ ಮತ್ತು ಚಳವಳಿಗಾರ ಡೇವಿಡ್‌ ಹಾಗ್‌ ಮತ್ತು ಡೆಮಾಕ್ರಟಿಕ್ ಪಕ್ಷದ ಪ್ರಭಾವಿ ಮುಖಂಡ ಅಲೆಕ್ಸಾಂಡ್ರಿಯಾ ಒಕಾಸಿಯೋ ಅವರೊಂದಿಗೆ ಮಾತನಾಡುವ ದೃಶ್ಯಗಳಿವೆ.

ಇದನ್ನೂ ಓದಿ : ಪಾಕ್‌ನಲ್ಲಿ ಮರುಕಳಿಸಿದ ಕಲಾವಿದರ ಮೇಲಿನ ದಾಳಿ; ಗಾಯಕಿ ರೇಶ್ಮಾ ಖಾನ್‌ ಹತ್ಯೆ

‘ಫ್ಯಾರನ್‌ಹೀಟ್‌ 11/9’ ಟೊರಾಂಟೋ ಅಂತಾರಾಷ್ಟ್ರೀಯ ಚಿತ್ರೋತ್ಸವದ ಪ್ರೀಮಿಯರ್‌ನಲ್ಲಿ ಪ್ರದರ್ಶನಗೊಳ್ಳುತ್ತಿದೆ. ಟ್ರೈಲರ್‌ ಶೇರ್ ಮಾಡಿ ಟ್ವೀಟ್ ಮಾಡಿರುವ ಮೈಖೆಲ್, “ನಮ್ಮ ಸಾಕ್ಷ್ಯಚಿತ್ರ ಟೊರಾಂಟೋ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಸೆಪ್ಟೆಂಬರ್‌ 6ರಂದು ಪ್ರದರ್ಶನಗೊಳ್ಳುತ್ತಿದೆ. ಧನ್ಯವಾದ ಕೆನಡಾ! ಎರಡನೇ ಬಾರಿ ನಮಗೆ ಇಂಥದ್ದೊಂದು ಅವಕಾಶ ಸಿಕ್ಕಿದೆ. ಇದು ವಿಶೇಷ ಗೌರವ,” ಎಂದಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, “ಡೊನಾಲ್ಡ್‌ ಟ್ರಂಪ್ ಎವಿಲ್ ಜೀನಿಯಸ್‌. ವೈಟ್‌ ಹೌಸ್‌ ಬಿಡುವ ಉದ್ದೇಶವೇ ಅವರಿಗಿದ್ದಂತಿಲ್ಲ. ಇತರ ದೇಶದ ಅಧ್ಯಕ್ಷನೊಬ್ಬ ಆತನ ಕೊನೆಗಾಲದವರೆಗೂ ಆಳ್ವಿಕೆ ನಡೆಸುತ್ತಾನೆ ಎನ್ನುವ ಸುದ್ದಿ ಕಿವಿಗೆ ಬಿದ್ದರೆ, ಈ ಸುದ್ದಿ ಟ್ರಂಪ್‌ಗೆ ಹಿತವಾಗಿ ಕೇಳಿಸುತ್ತದೆ. ತಮ್ಮ ಇರಾದೆ ಅರಿತು ನಡೆಯುವ ಪ್ರಾಮಾಣಿಕ ಪಕ್ಷ, ಬೆಂಬಲಿಗರು ಅವರೊಂದಿಗಿದ್ದಾರೆ,” ಎಂದಿದ್ದಾರೆ. ಅಮೆರಿಕದ ಸದ್ಯದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ‘ಫ್ಯಾರನ್‌ಹೀಟ್‌ 11/9’ ಗಮನಾರ್ಹ ಪ್ರಯೋಗವಾಗಿದ್ದು, ಸೆಪ್ಟೆಂಬರ್‌ 21ರಂದು ಸಾಕ್ಷ್ಯಚಿತ್ರ ಬಿಡುಗಡೆಯಾಗಲಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More