ಹಿತಾ ಮನದ ಮಾತು | ಏಳುಬೀಳುಗಳ ನಡುವೆ ಶುರುವಾದ ಸಿನಿಪಯಣ ತಾಳ್ಮೆ ಕಲಿಸಿದೆ

ಕಲಾವಿದರಾದ ಸಿಹಿಕಹಿ ಚಂದ್ರು ಮತ್ತು ಸಿಹಿಕಹಿ ಗೀತಾ ದಂಪತಿಯ ಪುತ್ರಿ ಹಿತಾ ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಗಮನ ಸೆಳೆಯುತ್ತಿದ್ದಾರೆ. ಅಭಿನಯ ಕಲಿತು, ರಂಗಭೂಮಿ ಪರಿಚಯಿಸಿಕೊಂಡು ಚಿತ್ರರಂಗ ಪ್ರವೇಶಿಸಿರುವ ಹಿತಾಗೆ ಉತ್ತಮ ಕಲಾವಿದೆಯಾಗಿ ರೂಪುಗೊಳ್ಳುವ ಉಮೇದು ಇದೆ

‘1/4 ಕೇಜಿ ಪ್ರೀತಿ’ ಚಿತ್ರದ ಮೂಲಕ ಚಂದನವನದಲ್ಲಿ ಗುರುತಿಸಿಕೊಂಡವರು ಹಿತಾ ಚಂದ್ರಶೇಖರ್. ಸಿಹಿಕಹಿ ಚಂದ್ರು ಮತ್ತು ಸಿಹಿಕಹಿ ಗೀತಾ ದಂಪತಿಯ ಪುತ್ರಿ. ಯೋಗಿ ಅಭಿನಯದ ‘ದುನಿಯಾ 2’ ಚಿತ್ರದ ಉತ್ತಮ ನಟನೆಯಿಂದ ವಿಶ್ಲೇಷಕರನ್ನೂ ಮೆಚ್ಚಿಸಿದರು. ಕಿರುಚಿತ್ರಗಳು ಮತ್ತು ಸಿನಿಮಾಗಳ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿರುವ ಹಿತಾ, ಬಿಡುಗಡೆಗೆ ಸಿದ್ಧವಾಗಿರುವ ತಮ್ಮ ‘ಒಂಥರಾ ಬಣ್ಣಗಳು’ ಚಿತ್ರ ಹಾಗೂ ಇನ್ನಿತರ ಸಂಗತಿಗಳ ಬಗ್ಗೆ ಮಾತನಾಡಿದ್ದಾರೆ.

‘ಒಂಥರಾ ಬಣ್ಣಗಳು’ ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿದೆ?

ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಹಿತಾ. ನನ್ನ ನಿಜ ಜೀವನದ ಹೆಸರನ್ನೇ ಹೊತ್ತು ಸಾಗುವ ಪಾತ್ರವದು. ಯಾವ ಹಿನ್ನೆಲೆಯೂ ಇರದ ಅನಾಥೆಯೊಬ್ಬಳು ಪುರುಷ ಪ್ರಧಾನ ಸಮಾಜದಲ್ಲಿ ಬದುಕು ಕಟ್ಟಿಕೊಳ್ಳಲು ಒದ್ದಾಡುವ, ತನ್ನ ಮುಗ್ಧತೆಯನ್ನು ಮರೆಮಾಚಿ ಒರಟುಒರಟಾಗಿ ಬದುಕುವ ಗಟ್ಟಿಗಿತ್ತಿಯ ಪಾತ್ರ. ನಾನು ನಟಿಸಿದ ಪಾತ್ರಕ್ಕೆ ನನ್ನ ಹೆಸರೇ ಇಟ್ಟಿರುವುದು ಹೆಚ್ಚು ಖುಷಿ ಕೊಟ್ಟಿದೆ.

‘ದುನಿಯಾ 2’ ಸಿನಿಮಾದ ವಿಡಿಯೋ ಸಾಂಗ್‌

ಕಲಾವಿದರ ಕುಟುಂಬದ ಕುಡಿಯೆಂಬ ಕಾರಣಕ್ಕೆ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವುದು ಸರಳವಾಯಿತೇ?

ಹಲವರಿಗೆ ಈ ಮಾತು ಸಹಜ ಸತ್ಯದಂತೆ ಕಾಣುತ್ತದೆ. ಆದರೆ, ವಾಸ್ತವವೇ ಬೇರೆಯಾಗಿರುತ್ತದೆ. ಸೆಲೆಬ್ರಿಟಿಗಳ ಮಕ್ಕಳಾದ ಮಾತ್ರಕ್ಕೆ ಚಿತ್ರರಂಗ ಮತ್ತು ಕಲಾವಿದರೊಂದಿಗೆ ಒಡನಾಡುವ ಸಾಧ್ಯತೆಗಳಿರುತ್ತದೆಯೇ ಹೊರತು ಅದಕ್ಕಿಂತ ಹೆಚ್ಚಿನ ಯಾವ ಲಾಭಗಳೂ ಇರುವುದಿಲ್ಲ. ಅಪ್ಪ-ಅಮ್ಮನ ಸಹಾಯದಿಂದ ಒಂದಷ್ಟು ಸಂಪರ್ಕ ಪಡೆಯಬಹುದು; ಆದರೆ, ಅದು ಎಂದಿಗೂ ಅಂತಿಮವಲ್ಲ. ನಮ್ಮ ಅಳಿವು, ಉಳಿವನ್ನು ನಿರ್ಧರಿಸುವುದು ನಮ್ಮ ಪ್ರಾಮಾಣಿಕ ಪ್ರಯತ್ನಗಳು ಮತ್ತು ಆ ಪ್ರಯತ್ನ ಮೆಚ್ಚಿ ಬೆನ್ನುತಟ್ಟುವ ಪ್ರೇಕ್ಷಕ ಪ್ರಭುಗಳು.

ವೃತ್ತಿಬದುಕಿನ ಆರಂಭದ ದಿನಗಳು ಹೇಗಿದ್ದವು?

ನನ್ನ ಕಾಲೇಜು ದಿನಗಳ ಕನಸು ಬೇರೆಯದ್ದೇ ಆಗಿತ್ತು. ಚಾಕೊಲೆಟ್ ಕಂಪನಿಯಲ್ಲಿ ಕೆಲಸ ಮಾಡಬೇಕೆಂದು ನಿರ್ಧರಿಸಿ ಕೆಲಸಕ್ಕೆ ಸೇರಿದ್ದೆ. ಮೂರ್ನಾಲ್ಕು ತಿಂಗಳಲ್ಲೇ ಅಲ್ಲಿನ ವಾತಾವರಣ ನನ್ನ ನಿಲುವುಗಳನ್ನು ಬದಲಾಯಿಸಿತು. ನನ್ನ ಮನದ ಮಾತು ಸಿನಿಮಾ ಆಗಿತ್ತಾದರೂ ಹುಚ್ಚು ಕನಸುಗಳ ಬೆನ್ನಟ್ಟಿ ದಾರಿ ತಪ್ಪಿದ್ದೇನೆನ್ನುವ ಭಾವ ಮೂಡಿತು. ತಡ ಮಾಡದೆ ಅಪ್ಪನ ಸಲಹೆಯಂತೆ ಮುಂಬೈನಲ್ಲಿ ನಟನೆಯ ತರಬೇತಿ ಪಡೆದೆ. ನಾಟಕಗಳಲ್ಲಿ ತೊಡಗಿಸಿಕೊಳ್ಳುತ್ತಲೇ ಸಿನಿಮಾ ಆಡಿಶನ್‌ಗಳಲ್ಲಿ ಭಾಗಿಯಾದೆ. ಸಿನಿಮಾ ಅವಕಾಶ ದೊರಕದಿದ್ದಾಗ ಜಾಹಿರಾತುಗಳಲ್ಲಿ ಕೆಲಸ ಮಾಡಿದೆ. ಕ್ರಮೇಣ ಸಿನಿಮಾ ಅವಕಾಶಗಳು ತೆರೆದುಕೊಂಡವು. ವಿಪರ್ಯಾಸ ಎಂದರೆ, ನಾನು ನಾಯಕಿಯಾಗಿ ನಟಿಸಿದ ಮೊದಲೆರೆಡು ಸಿನಿಮಾಗಳು ಅರ್ಧಕ್ಕೆ ನಿಂತುಹೋದವು. ಇಂತಹ ಅನಿರೀಕ್ಷಿತ ಬೆಳವಣಿಗೆಯಿಂದ ಕುಗ್ಗಿಹೋದೆ. ಆ ಸಂದರ್ಭಗಳಲ್ಲಿ ನನ್ನ ತಂದೆ, ತಾಯಿ ಜೊತೆಗೆ ನಿಂತು ಹುರುದುಂಬಿಸಿದರು. ‘ಸ್ನೇಕ್ ನಾಗ’ ಚಿತ್ರದಲ್ಲಿನ ನಟನೆಯನ್ನು ಗಮನಿಸಿದ್ದ ನಟ ಯೋಗಿ, ತಮ್ಮ ‘ದುನಿಯಾ 2’ ಚಿತ್ರಕ್ಕೆ ನನ್ನನ್ನು ನಾಯಕಿಯಾಗಿ ಆಯ್ಕೆ ಮಾಡಿದರು. ಹೀಗೆ, ಏಳುಬೀಳುಗಳ ನಡುವೆ ಶುರುವಾದ ಸಿನಿಪಯಣ ತಾಳ್ಮೆಯನ್ನು ಕಲಿಸಿದೆ.

‘ಕನಸ ಕಂಡೆ’ ವಿಡಿಯೋ ಹಾಡಿನಲ್ಲಿ ಹಿತಾ

‘ಡ್ಯಾನ್ಸಿಂಗ್‌ ಸ್ಟಾರ್’ ಶೋ ಅನುಭವ ಹೇಗಿತ್ತು?

‘1/4 ಕೇಜಿ ಪ್ರೀತಿ’ ಚಿತ್ರದಲ್ಲಿ ನಟಿಸುತ್ತಿರುವಾಗಲೇ ‘ಡ್ಯಾನ್ಸಿಂಗ್ ಸ್ಟಾರ್’ನಲ್ಲಿ ಭಾಗವಹಿಸಲು ಕರೆ ಬಂದಿತು. ಸಿನಿಮಾ ಚಿತ್ರೀಕರಣದ ಜೊತೆಯಲ್ಲಿ ‘ಡ್ಯಾನ್ಸಿಂಗ್ ಸ್ಟಾರ್’ನಲ್ಲೂ ಭಾಗಿಯಾದೆ. ಬೆಳಗಿನಿಂದ ಸಂಜೆವರೆಗೂ ಡ್ಯಾನ್ಸ್ ಪ್ರ್ಯಾಕ್ಟೀಸ್ ನಡೆಯುತ್ತಿತ್ತು. ನಂತರ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದೆ. ಅಂದಿನ ಕಠಿಣ ಪರಿಶ್ರಮ ನನ್ನ ಬದುಕನ್ನು ಬೇರೊಂದು ಹಂತಕ್ಕೆ ಕರೆದೊಯ್ದು ನಿಲ್ಲಿಸಿತು. ಅಲ್ಲಿವರೆಗೂ ನನ್ನ ಬಳಿ ತಂದೆ-ತಾಯಿಗಳ ಕುರಿತು ಕೇಳುತ್ತಿದ್ದವರು, ‘ಡ್ಯಾನ್ಸಿಂಗ್ ಸ್ಟಾರ್’ ನಂತರ ನನ್ನ ತಂದೆ-ತಾಯಿಗಳಲ್ಲಿ ನನ್ನ ಕುರಿತು ವಿಚಾರಿಸುವಂತಾಯಿತು ಎಂಬುದು ಹೆಮ್ಮೆಯ ಸಂಗತಿ.

ಇದನ್ನೂ ಓದಿ : ಚಿತ್ರತಂಡದಿಂದ ಹೊರನಡೆದ ನಟಿ ಜಯಶ್ರೀ ರಾಮಯ್ಯ; ಕಾಸ್ಟಿಂಗ್ ಕೌಚ್‌ ಆರೋಪ

ಬದುಕಿನಲ್ಲಿ ನಿಮ್ಮ ಕಲಾವಿದ ತಂದೆ-ತಾಯಿ ಪಾತ್ರ...

ಸೋಲು, ಗೆಲುವಿನ ಹೊರತಾಗಿಯೂ ನನ್ನ ಬದುಕಿನ ಪ್ರತಿ ಹಂತದಲ್ಲಿ ಮಾರ್ಗದರ್ಶಕರಾಗಿ ಜೊತೆಯಾಗಿ ನಿಲ್ಲುತ್ತಾರೆ. ಅವರ ಬಗ್ಗೆ ನನಗೆ ಅಪಾರ ಹೆಮ್ಮೆ ಇದೆ. ಜೀವಮಾನದ ಪರಿಶ್ರಮದಿಂದ ಅವರಿಬ್ಬರೂ ಗಳಿಸಿರುವ ಪ್ರೀತಿ, ಅಭಿಮಾನಕ್ಕೆ ಧಕ್ಕೆಯಾಗದಂತೆ ಬದುಕುವುದೇ ಮಗಳಾಗಿ ನಾನು ಅವರಿಗೆ ನೀಡುವ ಬಹುದೊಡ್ಡ ಕೊಡುಗೆ ಎಂದು ಭಾವಿಸುತ್ತೇನೆ.

ನಿಮ್ಮ ಮೊದಲ ಕ್ರಶ್...

ಶಾಲಾ ದಿನಗಳಲ್ಲಿ ನನ್ನ ಸಹಪಾಠಿಯೊಬ್ಬ ಇದ್ದ. ನೋಡಲು ಮುದ್ದುಮುದ್ದಾಗಿದ್ದ ಅವನು ದಿನವೂ ತರಹೇವಾರಿ ಊಟದ ಬುತ್ತಿ ಹೊತ್ತು ಬರುತ್ತಿದ್ದ. ಅವನ ಮೇಲೆ ಒಂಥರದ ಆಕರ್ಷಣೆ ಇತ್ತು. ಖುಷಿಯ ವಿಷಯವೆಂದರೆ, ಇವತ್ತಿಗೂ ನನ್ನ ಆತ್ಮೀಯ ಸ್ನೇಹಿತರ ಗುಂಪಿನಲ್ಲಿ ಆತನೂ ಇದ್ದಾನೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More