ಟ್ರೈಲರ್‌ | ವಿದ್ಯುತ್‌ ಕಳ್ಳತನ ಸಮಸ್ಯೆ ಕುರಿತ ‘ಬತ್ತಿ ಗುಲ್‌ ಮೀಟರ್‌ ಚಾಲೂ’

ಸಾಮಾಜಿಕ ಕಾಳಜಿಯ ಅಪರೂಪದ ಕಥಾವಸ್ತುವಿನ ಹಿಂದಿ ಚಿತ್ರಗಳ ಪಟ್ಟಿಗೆ ಹೊಸ ಸೇರ್ಪಡೆ ‘ಬತ್ತಿ ಗುಲ್‌ ಮೀಟರ್‌ ಚಾಲೂ.’ ವಿದ್ಯುತ್‌ ಕಳ್ಳತನದ ಬಗ್ಗೆ ಚರ್ಚಿಸುವ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಶ್ರೀ ನಾರಾಯಣ್‌ ಸಿಂಗ್ ನಿರ್ದೇಶನದ ಸಿನಿಮಾ ಸೆಪ್ಟೆಂಬರ್‌ 21ಕ್ಕೆ ತೆರೆಗೆ ಬರಲಿದೆ

ಶಾಹಿದ್ ಕಪೂರ್‌ ಮತ್ತು ಶ್ರದ್ಧಾ ಕಪೂರ್ ಅಭಿನಯದ ‘ಬತ್ತಿ ಗುಲ್ ಮೀಟರ್ ಚಾಲೂ’ ಹಿಂದಿ ಸಿನಿಮಾ ಟ್ರೈಲರ್ ಬಿಡುಗಡೆಯಾಗಿದೆ. ಶ್ರೀ ನಾರಾಯಣ್ ಸಿಂಗ್‌ ನಿರ್ದೇಶನದ ಈ ಸಿನಿಮಾ, ವಿದ್ಯುತ್ ಕಳ್ಳತನದ ಸಮಸ್ಯೆ ಕುರಿತು ಹೇಳುತ್ತದೆ. ಭಾರತದಲ್ಲಿನ ವಿದ್ಯುತ್ ಸಮಸ್ಯೆಗಳ ಕುರಿತು ಈ ಹಿಂದೆ ‘ಕಟಿಯಾಬಾಜ್’ ಸಾಕ್ಷ್ಯಚಿತ್ರ ತೆರೆಕಂಡಿತ್ತು. ಆದರೆ, ವಿದ್ಯುತ್ ಕಳ್ಳತನದ ಸಮಸ್ಯೆ ಕುರಿತು ಮುಕ್ತವಾಗಿ ಮಾತನಾಡುವ ಚಿತ್ರಗಳು ಬಂದಿರಲಿಲ್ಲ. ಇಂಥದ್ದೊಂದು ಸಮಸ್ಯೆಯನ್ನೇ ಕೇಂದ್ರಬಿಂದುವನ್ನಾಗಿರಿಸಿಕೊಂಡ ಸಿನಿಮಾ ‘ಬತ್ತಿ ಗುಲ್ ಮೀಟರ್ ಚಾಲೂ.’ ವಿದ್ಯುತ್‌ ಸಮಸ್ಯೆ ಕಥಾವಸ್ತುವಿನ ಹಿನ್ನೆಲೆಯಲ್ಲಿ ನಿರ್ದೇಶಕ ನಾರಾಯಣ್ ಸಿಂಗ್‌ ಇಲ್ಲಿ ಸ್ನೇಹ, ಪ್ರೀತಿಯ ಕತೆಗಳನ್ನೂ ಹೇಳುತ್ತಾರೆ.

ಈ ಹಿಂದೆ ಬಾಲಿವುಡ್‌ನಲ್ಲಿ ಸದ್ದು ಮಾಡಿದ್ದ ನೈಜ ಘಟನೆಯನ್ನು ಆಧರಿಸಿದ ‘ಟಾಯ್ಲೆಟ್ ಏಕ್ ಪ್ರೇಮ್ ಕಥಾ’ ಚಿತ್ರಕ್ಕೆ ಕತೆ ಬರೆದಿದ್ದ ಸಿದ್ದಾರ್ಥ್ ಸಿಂಗ್ ಹಾಗೂ ಗರಿಮಾ ವಹಾರ್ ಜೋಡಿ ಇಲ್ಲಿಯೂ ಚಿತ್ರಕತೆ ಹೆಣೆದಿದ್ದಾರೆ. ಮೂರು ನಿಮಿಷಗಳ ಟ್ರೆಲರ್‌ನ ಮೊದಲಾರ್ಧದಲ್ಲಿ ಕಾಣುವ ಸ್ನೇಹ, ಪ್ರೀತಿ ಹಾಗೂ ವಿದ್ಯುತ್ ಸಮಸ್ಯೆ ಬಗೆಗಿನ ದೃಶ್ಯಗಳು ವೀಕ್ಷಕರಲ್ಲಿ ಗೊಂದಲವನ್ನುಂಟು ಮಾಡುತ್ತವೆ. ದ್ವಿತಿಯಾರ್ಧದಲ್ಲಿ ಚಿತ್ರದ ಕಥಾವಸ್ತುವಿನ ಬಗೆಗೆ ಮನವರಿಕೆಯಾಗುತ್ತದೆ. ವ್ಯಾಪಾರದಲ್ಲಿನ ನಷ್ಟದ ಜೊತೆಗೆ ಒಂದೂವರೆ ಲಕ್ಷ ರುಪಾಯಿ ವಿದ್ಯುತ್ ಬಿಲ್ ಒತ್ತಡಗಳಿಂದ ನಾಯಕನ ಜೀವದ ಗೆಳೆಯ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಮೊದಮೊದಲು ಜವಾಬ್ದಾರಿಗಳಿಂದ ಜಾರಿಕೊಳ್ಳುವ ಚಿತ್ರದ ನಾಯಕ (ಶಾಹಿದ್) ಗೆಳೆಯನ ಸಾವಿನಿಂದ ಬದಲಾಗಿ ನ್ಯಾಯ ದೊರಕಿಸಲು ಒದ್ದಾಡುತ್ತಾನೆ.

ಇದನ್ನೂ ಓದಿ : ವೆಬ್‌ ಸರಣಿಯಲ್ಲಿ ಇಂದಿರಾ ಗಾಂಧಿ ಪಾತ್ರ ನಿರ್ವಹಿಸಲಿರುವ ವಿದ್ಯಾ ಬಾಲನ್

“ನಾನೀಗ ಸಾಮಾಜಿಕ ಕಳಕಳಿಯ ಚಿತ್ರಗಳಲ್ಲಿ ನಟಿಸಲು ಅಪೇಕ್ಷಿಸುತ್ತೇನೆ. ಈ ಹಿಂದೆ ನಾನು ನಟಿಸಿದ್ದ ‘ಹೈದರ್‌’ ಚಿತ್ರದಲ್ಲಿ ಮಾನವ ಹಕ್ಕುಗಳ ಬಗ್ಗೆ ಚರ್ಚಿಸಲಾಗಿತ್ತು. ‘ಉಡ್ತಾ ಪಂಜಾಬ್‌’ನಲ್ಲಿ ನಿರ್ದೇಶಕರು ಡ್ರಗ್‌ ಮಾಫಿಯಾ ಮೇಲೆ ಬೆಳಕು ಚೆಲ್ಲಿದ್ದರು. ಈಗ ವಿದ್ಯುತ್‌ ಸಮಸ್ಯೆ ಕುರಿತ ಸಿನಿಮಾದಲ್ಲಿ ನಟಿಸಿದ್ದೇನೆ. ಜನರಿಗೆ ಅರಿವು ಮೂಡಿಸುವ ಇಂತಹ ಕಥಾವಸ್ತುಗಳು ತೃಪ್ತಿ ನಿಡುತ್ತವೆ,” ಎನ್ನುತ್ತಾರೆ ನಟ ಶಾಹಿದ್ ಕಪೂರ್. ಬಹುಭಾಷಾ ನಟಿ ಯಾಮಿ ಗೌತಮಿ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸೆಪ್ಟೆಂಬರ್‌ 21ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ.

#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
ಸ್ಮಿತಾ ನೆನಪು | ‘ಅನ್ವೇಷಣೆ’ ಗಾಗಿ ತಾನೇ ಹಣ ಹಾಕಿಕೊಂಡು ಬಂದು ನಟಿಸಿದ್ದರು
ಸುದ್ದಿ ವಾಚನದಿಂದ ಸಿನಿಮಾಲೋಕಕ್ಕೆ ಬಂದ ಕೃಷ್ಣಸುಂದರಿ
Editor’s Pick More