ವಿಡಿಯೋ | ಟಿಕೆಆರ್‌ ಕ್ರಿಕೆಟ್‌ ಟೀಮ್‌ಗೆ ಬ್ರಾವೋ ಗಾಯನ, ಶಾರುಖ್‌ ಡಾನ್ಸ್

ವೆಸ್ಟ್‌ ಇಂಡೀಸ್‌ ಕ್ರಿಕೆಟಿಗ ಡೇನ್ ಬ್ರಾವೋ ತಮ್ಮ ಟಿಕೆಆರ್‌ ಕ್ರಿಕೆಟ್‌ ತಂಡಕ್ಕಾಗಿ ಗೀತೆ ಬರೆದು ಹಾಡಿದ್ದಾರೆ. ತಮ್ಮ ಒಡೆತನದ ಈ ಕೆರಬಿಯನ್‌ ತಂಡದ ಹಾಡಿಗೆ ಬಾಲಿವುಡ್ ಹೀರೋ ಶಾರುಖ್ ನರ್ತಿಸಿದ್ದು, ಹಾಡು ಬಿಡುಗಡೆಯಾಗಿದೆ. ಬ್ರಾವೋ, ಶಾರುಖ್ ಟ್ವಿಟರ್‌ನಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ

ವೆಸ್ಟ್‌ ಇಂಡೀಸ್ ಕ್ರಿಕೆಟ್‌ನ ಆಲ್‌ರೌಂಡರ್‌ ಡೇನ್‌ ಬ್ರೇವೋ ಈ ಬಾರಿ ಹಿನ್ನೆಲೆ ಗಾಯಕನಾಗಿ ‌ಸುದ್ದಿಯಾಗಿದ್ದಾರೆ. ಬಾಲಿವುಡ್‌ ಹೀರೋ ಶಾರುಖ್ ಖಾನ್‌ ಒಡೆತನದ ಕೆರಬಿಯನ್‌ ಪ್ರೀಮಿಯರ್ ಲೀಗ್‌ನ ಟ್ರಿನ್ಬಾಗೊ ನೈಟ್‌ ರೈಡರ್ಸ್‌ ತಂಡದ ಹಾಡಿಗೆ ದನಿಯಾಗಿದ್ದಾರೆ ಬ್ರೇವೋ. ‘ವಿ ಈಸ್ ದಿ ಚಾಂಪಿಯನ್ಸ್‌’ ಹಾಡಿಗೆ ಶಾರುಖ್‌ ಡಾನ್ಸ್ ಮಾಡಿರುವುದು ವಿಶೇಷ. ಈ ಮೊದಲು ಡೇನ್‌ ಬ್ರಾವೋ ಬರೆದು ಹಾಡಿದ್ದ ‘ಚಾಂಪಿಯನ್‌’ ವಿಡಿಯೋ ಆಲ್ಬಂ ಕ್ಲಿಕ್ಕಾಗಿತ್ತು. ಇದೀಗ ಬ್ರೇವೋ ಮತ್ತೊಮ್ಮೆ ತಮ್ಮಲ್ಲಿನ ಗಾಯನ ಪ್ರತಿಭೆಯನ್ನು ಪ್ರಚುರಪಡಿಸಿದ್ದಾರೆ.

ಟ್ವಿಟರ್‌ನಲ್ಲಿ ವಿಡಿಯೋ ಶೇರ್‌ ಮಾಡಿರುವ ಡೇನ್‌, “ಇಂದು ಟಿಕೆಆರ್‌ ತಂಡದ ಸಿಪಿಎಲ್‌ 2018ರ ಆಂಥೆಮ್ ಬಿಡುಗಡೆಯಾಗಿದೆ. ಗೆಳೆಯ ಜೊಜೊ ಜೊತೆಗೂಡಿ ನಾನು ರಚಿಸಿರುವ ಗೀತೆ ಇದು. ಹಾಡಿಗೆ ನರ್ತಿಸಿರುವ ಬಾಲಿವುಡ್‌ ಸ್ಟಾರ್‌ ಮತ್ತು ಟಿಕೆಆರ್‌ ಮಾಲೀಕ ಶಾರುಖ್‌ ಖಾನ್‌ಗೆ ನಾನು ಕೃತಜ್ಞನಾಗಿದ್ದೇನೆ. ಟಿಕೆಆರ್‌ಗೆ ಹಾಡುವ ನನ್ನ ಕನಸು ಕೈಗೂಡಿದ್ದು, ಯೋಜನೆಯಲ್ಲಿ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ. ನನ್ನ ಅಭಿಮಾನಿಗಳೆಲ್ಲರಿಗೂ ಇದು ಪ್ರೀತಿಯ ಕಾಣಿಕೆ,” ಎಂದಿದ್ದಾರೆ.

ಇದನ್ನೂ ಓದಿ : ವೆಬ್‌ ಸರಣಿಯಲ್ಲಿ ಇಂದಿರಾ ಗಾಂಧಿ ಪಾತ್ರ ನಿರ್ವಹಿಸಲಿರುವ ವಿದ್ಯಾ ಬಾಲನ್

‌ನಟ ಶಾರುಖ್‌ ಖಾನ್‌ ತಮ್ಮ ಟ್ವಿಟರ್‌ ಅಕೌಂಟ್‌ನಲ್ಲಿ ವಿಡಿಯೋ ಶೇರ್ ಮಾಡಿ, “ನನ್ನ ಸ್ನೇಹಿತ, ಟಿಕೆಆರ್ ಕ್ರಿಕೆಟ್ ತಂಡದ ನಾಯಕ ಬ್ರೇವೋ ಹಾಡಿಗೆ ಮರುಳಾಗಿದ್ದೇನೆ. ಈ ಹಾಡಿನಂತೆಯೇ ಟಿಕೆಆರ್ ಆಟಗಾರರೂ ಕ್ರಿಕೆಟ್ ಆಡಲಿದ್ದಾರೆ,” ಎಂದು ಬರೆದಿದ್ದಾರೆ. ಕೆರಬಿಯನ್ ಪ್ರೀಮಿಯರ್ ಲೀಗ್‌ ಆಗಸ್ಟ್‌ 8ರಿಂದ ಆರಂಭವಾಗಿದ್ದು, ಸೆಪ್ಟೆಂಬರ್‌ 16ರವರೆಗೆ ನಡೆಯಲಿದೆ. ಇನ್ನು, ಶಾರುಖ್ ಸದ್ಯ ‘ಜೀರೋ’ ಸಿನಿಮಾದಲ್ಲಿ ಬಿಝಿಯಾಗಿದ್ದಾರೆ. ಆನಂದ್ ಎಲ್ ರಾಯ್‌ ನಿರ್ದೇಶನದ ಚಿತ್ರದಲ್ಲಿ ಶಾರುಖ್, ಕುಬ್ಜ ಯುವಕ ‘ಬುವಾ ಸಿಂಗ್‌’ ಪಾತ್ರದಲ್ಲಿದ್ದಾರೆ. ಕತ್ರಿಕಾ ಕೈಫ್‌, ಅನುಷ್ಕಾ ಶರ್ಮಾ ಚಿತ್ರದ ನಾಯಕಿಯರು. ಇದೇ ವರ್ಷ ಡಿಸೆಂಬರ್‌ 21ರಂದು ಈ ಸಿನಿಮಾ ತೆರೆಕಾಣಲಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More