‘ಗೋಲ್ಡ್’‌ ತೆರೆಗೆ; ಅಕ್ಷಯ್ ಅಭಿನಯದ ದೇಶಭಕ್ತಿ ಸಿನಿಮಾಗಳೆಡೆ ಒಂದು ನೋಟ

ಅಕ್ಷಯ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಗೋಲ್ಡ್‌’ ನಾಳೆ (ಆ.15) ಬಿಡುಗಡೆಯಾಗುತ್ತಿದೆ. ಸ್ವಾತಂತ್ರ್ಯಪೂರ್ವ ಭಾರತೀಯ ಹಾಕಿ ಕುರಿತ ರಾಷ್ಟ್ರಪ್ರೇಮದ ಚಿತ್ರವಿದು. ಈ ಹಿಂದೆಯೂ, ಅಕ್ಷಯ್ ದೇಶಭಕ್ತಿ ಚಿತ್ರಗಳಲ್ಲಿ ಅಭಿನಯಿಸಿದ್ದರು. ಅಂಥ ಮೂರು ಸಿನಿಮಾ ಕುರಿತ ಚಿತ್ರಣ ಇಲ್ಲಿದೆ

ಸ್ವಾತಂತ್ರ್ಯೋತ್ಸವದಂದು ‘ಗೋಲ್ಡ್’ ಸಿನಿಮಾ ತೆರೆಕಾಣುತ್ತಿದೆ. ಸ್ವತಂತ್ರ ಭಾರತಕ್ಕೆ ಸ್ವರ್ಣ ಪದಕ ಗೆದ್ದುಕೊಡುವ ಹಾಕಿ ಕೋಚ್‌ ತಪಮ್‌ ದಾಸ್‌ ಪಾತ್ರದಲ್ಲಿದ್ದಾರೆ ಅಕ್ಷಯ್‌ ಕುಮಾರ್‌. ‘ಹನಿಮೂನ್‌ ಟ್ರಾವೆಲ್ಸ್‌ ಪ್ರೈವೇಟ್‌ ಲಿಮಿಟೆಡ್‌’, ‘ತಲಾಶ್‌’ ಹಿಂದಿ ಸಿನಿಮಾಗಳ ನಿರ್ದೇಶಕಿ ರೀಮಾ ಕಾಟ್ಗಿ ನಿರ್ದೇಶನದ ‘ಗೋಲ್ಡ್‌’, ಇಂಗ್ಲೆಂಡ್ ಮತ್ತು ಭಾರತದಲ್ಲಿ ಚಿತ್ರೀಕರಣಗೊಂಡಿದೆ. 1948ರ ಒಲಿಂಪಿಕ್ಸ್‌ನಲ್ಲಿ ಭಾರತದ ಹಾಕಿ ತಂಡ ಮೊದಲ ಸ್ವರ್ಣ ಗೆದ್ದಿತ್ತು. ಈ ಸಂಭ್ರಮಾಚರಣೆಯ ನೆಪವಾಗಿ ಆಗಸ್ಟ್‌ 15ರಂದು ಸಿನಿಮಾ ತೆರೆಕಾಣಲಿದೆ. ಅಕ್ಷಯ್‌ ಈ ಹಿಂದೆ ರಾಷ್ಟ್ರಪ್ರೇಮ ಸಾರುವ ಮೂರು ಸಿನಿಮಾಗಳಲ್ಲಿ ನಟಿಸಿದ್ದರು.

ಹಾಲಿಡೇ (2014): ತಮಿಳಿನ ಸೂಪರ್ ಹಿಟ್ ಸಿನಿಮಾ ‘ತುಪಾಕಿ’ಯ ಹಿಂದಿ ಅವತರಣಿಕೆ 'ಹಾಲಿಡೇ.' ಚಿತ್ರದಲ್ಲಿ ನಟ ಅಕ್ಷಯ್ ಕುಮಾರ್ ಸೈನ್ಯದ ಅಧಿಕಾರಿ ವಿರಾಟ್ ಭಕ್ಷಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ‘ತುಪಾಕಿ’ ಚಿತ್ರ ನಿರ್ದೇಶಿಸಿದ್ದ ಎ ಆರ್ ಮುರುಗದಾಸ್ ‘ಹಾಲಿಡೇ’ ನಿರ್ದೇಶನದ ಹೊಣೆ ಹೊತ್ತಿದ್ದರು. ಉಗ್ರರೆಡೆಗಿನ ಹೋರಾಟ ಕಥಾವಸ್ತು. ಶಿಸ್ತಿನ ಅಧಿಕಾರಿ ವಿರಾಟ್‌, ಜೀವರಕ್ಷಣೆಗಾಗಿ ನಿಯಮಗಳನ್ನೂ ಮೀರುವ ವ್ಯಕ್ತಿ. ಸೋನಾಕ್ಷಿ ಸಿನ್ಹಾ ಹಾಗೂ ಅಕ್ಷಯ್ ಜೋಡಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿತ್ತು.

ಏರ್ ಲಿಫ್ಟ್ (2016): 1990ರ ಇರಾಕ್ ಹಾಗೂ ಕುವೈತ್ ಯುದ್ಧದ ಸಂದರ್ಭಗಳನ್ನು ಆಧರಿಸಿದ ಸಿನಿಮಾ ‘ಏರ್ ಲಿಫ್ಟ್.’ ಇರಾಕಿ ಪಡೆಗಳ ಅಟ್ಟಹಾಸ ಮತ್ತು ಭಾರತೀಯ ಆಡಳಿತದ ಆರಂಭಿಕ ನಿರಾಸಕ್ತಿಯ ಚಿತ್ರಣ ಇಲ್ಲಿದೆ. ಯುದ್ಧಗ್ರಸ್ತ ಕುವೈತ್‌ನಲ್ಲಿ ಬೀದಿಪಾಲಾಗಿದ್ದ 1,700 ಮಂದಿ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿ ಕರೆತರುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ ಭಾರತೀಯ ಮೂಲದ ಉದ್ಯಮಿಯ ಪಾತ್ರದಲ್ಲಿ ಅಕ್ಷಯ್ ಕುಮಾರ್ ಮನೋಜ್ಞವಾಗಿ ಅಭಿನಯಿಸಿದ್ದರು. ರಾಜಾ ಕೃಷ್ಣ ಮೆನನ್ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆ ನಿಮ್ರತ್ ಕೌರ್, ಕನ್ನಡಿಗ ಪ್ರಕಾಶ್ ಬೆಳವಾಡಿ ಮುಂತಾದವರು ನಟಿಸಿದ್ದರು.

ಬೇಬಿ (2015): ಭಯೋತ್ಪಾದನೆಯ ಕರಾಳ, ಕ್ರೌರ್ಯ ಮುಖವನ್ನು ತೋರಿಸುವ ನೀರಜ್ ಪಾಂಡೆ ನಿರೂಪಣೆ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿತ್ತು. ‘ಬೇಬಿ’ ಎಂಬುದು ಭಯೋತ್ಪಾದನಾ ನಿಗ್ರಹದಳದ ಹೆಸರು. ಭಯೋತ್ಪಾದಕರಿಂದಾಗುವ ದಾಳಿಗಳನ್ನು ತಡೆಯುವ ಹಾಗೂ ಉಗ್ರರ ದಮನಕ್ಕಾಗಿ ಜೀವ ಕೊಡಲೂ ಹಿಂಜರಿಯದ ಗುಪ್ತ ಕಾರ್ಯಚರಣಾ ದಳದ ಕಾರ್ಯದಕ್ಷತೆಯನ್ನು ಇಲ್ಲಿ ಕಾಣಬಹುದು. ಚಿತ್ರದಲ್ಲಿ ಅಕ್ಷಯ್ ಕುಮಾರ್ ಭಯೋತ್ಪಾದನಾ ನಿಗ್ರಹ ದಳದ ಮುಖ್ಯ ಅಧಿಕಾರಿ ಪಾತ್ರ ನಿರ್ವಹಿಸಿದ್ದರು. ಚಿತ್ರದಲ್ಲಿ ತಾಪ್ಸಿ ಪನ್ನು, ರಾಣಾ ದಗ್ಗುಬಾಟಿ, ಸುಶಾಂತ್ ಸಿಂಗ್ ಸೇರಿದಂತೆ ಪ್ರಮುಖ ನಟ-ನಟಿಯರು ಅಭಿನಯಿಸಿದ್ದರು.

ಇದನ್ನೂ ಓದಿ : ಜನುಮದಿನ | ಗಾಯಕಿ ಸುನಿಧಿ ಚೌವ್ಹಾಣ್‌ ಸಿನಿಮಾ ವಿಡಿಯೋ ಹಾಡುಗಳು

‘ಗೋಲ್ಡ್‌’ ಟ್ರೈಲರ್‌

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More