ರಾಷ್ಟ್ರಪ್ರೇಮದ ಕಥಾಹಂದರ ಹೊಂದಿರುವ ಕನ್ನಡದ ಪ್ರಮುಖ ಸಿನಿಮಾಗಳು

ಜನರಲ್ಲಿ ರಾಷ್ಟ್ರಾಭಿಮಾನದ ಕಿಚ್ಚು ಹೊತ್ತಿಸುವಲ್ಲಿ ಬೆಳ್ಳಿತೆರೆಯ ಪಾಲೂ ಇದೆ. ಆಗಿಂದಾಗ್ಗೆ ಇಲ್ಲಿ ದೇಶಭಕ್ತಿ ಸಾರುವ, ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯ ಕತೆಗಳನ್ನು ವಸ್ತುವಾಗುಳ್ಳ ಸಿನಿಮಾಗಳು ತಯಾರಾಗಿವೆ. ರಾಷ್ಟ್ರೀಯತೆ ಸಾರುವ ಪ್ರಮುಖ ಕನ್ನಡ ಸಿನಿಮಾಗಳ ಕುರಿತ ಚುರುಕುನೋಟ ಇಲ್ಲಿದೆ

ಕಿತ್ತೂರು ರಾಣಿ ಚೆನ್ನಮ್ಮ

ರಾಷ್ಟ್ರೀಯತೆ ಸಾರುವ ಹತ್ತಾರು ಶ್ರೇಷ್ಠ ಚಿತ್ರಗಳು ಕನ್ನಡದಲ್ಲಿ ತಯಾರಾಗಿವೆ. ಪ್ರಾದೇಶಿಕ ಸ್ವಾತಂತ್ರ್ಯ ಹೋರಾಟಗಾರರನ್ನು ಕುರಿತ ದೇಶಭಕ್ತಿ ಚಿತ್ರಗಳು ದೊಡ್ಡ ಯಶಸ್ಸು ಕಂಡಿವೆ. ಬಿ ಆರ್ ಪಂತುಲು ನಿರ್ದೇಶನದ ‘ಕಿತ್ತೂರು ರಾಣಿ ಚೆನ್ನಮ್ಮ’ (1962) ಈ ಹಾದಿಯಲ್ಲಿ ಪ್ರಮುಖ ಚಿತ್ರ. ಬ್ರಿಟಿಷರ ವಿರುದ್ಧ ಹೋರಾಡುವ ರಾಣಿ ಚೆನ್ನಮ್ಮಳಾಗಿ ನಟಿ ಬಿ ಸರೋಜಾದೇವಿ ನಟಿಸಿದ್ದರು. ಹತ್ತಾರು ಪುರಸ್ಕಾರಗಳಿಗೆ ಭಾಜನವಾದ ಚಿತ್ರ ಶತದಿನೋತ್ಸವ ಆಚರಿಸಿಕೊಂಡಿತ್ತು.

ಸರ್ವಮಂಗಳ

ರಾಜಕುಮಾರ್‌, ಕಲ್ಪನಾ, ಅಶ್ವಥ್‌ ಅಭಿನಯದ ‘ಸರ್ವಮಂಗಳ’ (1968) ಚಿತ್ರದಲ್ಲಿ ಸ್ವಾತಂತ್ರ್ಯ ಹೋರಾಟದ ಪ್ರಸ್ತಾಪವಿತ್ತು. ಇದು ಕಾದಂಬರಿಕಾರ ಚದುರಂಗರ ಪ್ರಮುಖ ಕೃತಿ. ಚಿತ್ರದ ನಿರ್ದೇಶಕರು ಕೂಡ ಅವರೇ ಎನ್ನುವುದು ವಿಶೇಷ. ಲೇಖಕ ಬಸವರಾಜ ಕಟ್ಟೀಮನಿ ಕೃತಿಯನ್ನು ಆಧರಿಸಿದ ‘ಮಾಡಿ ಮಡಿದವರು’ (1974) ಸ್ವಾತಂತ್ರ್ಯ ಹೋರಾಟದ ಚಿತ್ರಣದ ಸಿನಿಮಾ. ಕೆ ಎಂ ಶಂಕರಪ್ಪ ನಿರ್ದೇಶನದ ಚಿತ್ರದಲ್ಲಿ ಶಿವಾನಂದ್, ಮಾನು, ಗಿರಿಜಾ ಲೋಕೇಶ್ ನಟಿಸಿದ್ದರು.

ಇದನ್ನೂ ಓದಿ : ಸೆಟ್‌ ವಿಸಿಟ್‌ ವಿಡಿಯೋ | ನಿಖಿಲ್‌-ರಚಿತಾ ಅಭಿನಯದ ‘ಸೀತಾರಾಮ ಕಲ್ಯಾಣ’

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ

ರಂಗಕಲಾವಿದರೇ ನಟಿಸಿದ್ದ ‘ಸಂಗೊಳ್ಳಿ ರಾಯಣ್ಣ’ ಸಿನಿಮಾ 1967ರಲ್ಲಿ ತೆರೆಕಂಡಿತ್ತು. ಅನಂತ್ ಹಿರೇಗೌಡರ್ ಚಿತ್ರದ ನಿರ್ದೇಶಕ. ಹಿಂದಿ ಸಿನಿಮಾರಂಗದ ಮೇರು ಗಾಯಕಿ ಲತಾ ಮಂಗೇಶ್ಕರ್ ಈ ಚಿತ್ರದ ‘ಬೆಳ್ಳಾನೆ ಬೆಳಗಾಯಿತು...’ ಗೀತೆಗೆ ದನಿಯಾಗಿದ್ದರು. ಇದೇ ಸಂದರ್ಭದಲ್ಲಿ ರಂಗಕಲಾವಿದರೇ ಅಭಿನಯಿಸಿದ್ದ ‘ಸ್ವಾತಂತ್ರ್ಯವೀರ ಸಿಂಧೂರ ಲಕ್ಷ್ಮಣ’ ಚಿತ್ರ ತೆರೆಗೆ ಬಂದಿತ್ತು.

ನಾಗಣ್ಣ ನಿರ್ದೇಶನದಲ್ಲಿ ದರ್ಶನ್ ಅಭಿನಯದ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ (2012) ದೊಡ್ಡ ಬಜೆಟ್‌ನಲ್ಲಿ ತಯಾರಾಗಿತ್ತು. ಮೇಕಿಂಗ್‌ನಲ್ಲಿ ಅದ್ಧೂರಿತನವಿದ್ದ ಸಿನಿಮಾದಲ್ಲಿ ದರ್ಶನ್‌ ಸ್ಟಾರ್ ಇಮೇಜಿನ ಎದುರು ರಾಯಣ್ಣನ ಘನತೆ ಮಸುಕಾಗಿದ್ದು ವಿಪರ್ಯಾಸ.

ಮುತ್ತಿನ ಹಾರ

ದೇಶದ ಗಡಿಯ ಯುದ್ಧದ ಚಿತ್ರಣವಿದ್ದ ‘ಮುತ್ತಿನ ಹಾರ’ (1990) ಕನ್ನಡದ ಪ್ರಮುಖ ರಾಷ್ಟ್ರಪ್ರೇಮದ ಚಿತ್ರಗಳಲ್ಲೊಂದು. ಎಸ್ ವಿ ರಾಜೇಂದ್ರಸಿಂಗ್ ಬಾಬು ನಿರ್ದೇಶನದಲ್ಲಿ ವಿಷ್ಣುವರ್ಧನ್, ಸುಹಾಸಿನಿ, ಅಶ್ವಥ್‌ ಅಮೋಘ ಅಭಿನಯ ನೀಡಿದ್ದರು.

ಟಿ ಎಸ್ ನಾಗಾಭರಣ ನಿರ್ದೇಶನದ ‘ಮೈಸೂರು ಮಲ್ಲಿಗೆ’ (1991) ಕನ್ನಡದ ಮತ್ತೊಂದು ಪ್ರಮುಖ ಸಿನಿಮಾ. ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ಪ್ರೇಮಕತೆಯ ಸುಂದರ ನಿರೂಪಣೆ ಇತ್ತು. ಪ್ರಶಸ್ತಿ, ಪುರಸ್ಕಾರಗಳೊಂದಿಗೆ ಜನಮನ್ನಣೆಯನ್ನೂ ಗಳಿಸಿದ ಚಿತ್ರವಿದು.

ವೀರಪ್ಪ ನಾಯ್ಕ

ವಿಷ್ಣುವರ್ಧನ್ ಅಭಿಯನದ ‘ವೀರಪ್ಪನಾಯ್ಕ’ (1999) ಚಿತ್ರದಲ್ಲಿ ಗಾಂಧಿವಾದ ಮತ್ತು ನಕ್ಸಲಿಸಂ ಸಂಘರ್ಷದ ಚಿತ್ರಣವಿತ್ತು. ಎಸ್ ನಾರಾಯಣ್ ಚಿತ್ರದ ನಿರ್ದೇಶಕ.

ಇನ್ನು, ಶಿವ ರಾಜಕುಮಾರ್‌ ಅಭಿನಯದ ‘ಸಾರ್ವಭೌಮ’, ಯೋಗೀಶ್ವರ್ ಅವರ ‘ಸೈನಿಕ’ ಚಿತ್ರಗಳಲ್ಲಿ ಯೋಧರ ಕತೆಗಳಿದ್ದವು. ‘ಜೈಹಿಂದ್’, ‘ಎಕೆ 47’ ‘ವಂದೇ ಮಾತರಂ’, ‘ಇಂಡಿಪೆಂಡೆನ್ಸ್ ಡೇ’ ಸೇರಿದಂತೆ ಹಲವು ಕಮರ್ಷಿಯಲ್ ಚಿತ್ರಗಳು ರಾಷ್ಟ್ರಪ್ರೇಮದ ಕಥಾಹಂದರ ಹೊಂದಿದ್ದವು.

ಎಕೆ 47

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More