ಶ್ವೇತಾ, ನವ್ಯಾ ಫೋಟೋ ಶೇರ್ ಮಾಡಿದ ಕರಣ್‌ ಜೋಹರ್‌; ಸ್ವಜನ ಪಕ್ಷಪಾತದ ಟೀಕೆ

ಬಾಲಿವುಡ್‌ ನಿರ್ದೇಶಕ ಕರಣ್ ಜೋಹರ್‌ ನಿನ್ನೆ ಇನ್‌ಸ್ಟಾಗ್ರಾಮ್‌ನಲ್ಲಿ ಶ್ವೇತಾ ಬಚ್ಚನ್‌ ಮತ್ತು ಅವರ ಪುತ್ರಿ ನವ್ಯಾ ನಂದಾ ಮಾಡೆಲಿಂಗ್‌ ಫೋಟೋ ಶೇರ್ ಮಾಡಿದ್ದರು. ಇದನ್ನು ಪ್ರಶ್ನಿಸಿರುವ ಬೆಂಬಲಿಗರು, ಅವರನ್ನು ಸ್ವಜನಪಕ್ಷಪಾತಿ ಎಂದು ದೂರಿದ್ದು, ಪ್ರತಿಭಾವಂತರಿಗೆ ಅವಕಾಶ ನೀಡಲು ಸೂಚಿಸಿದ್ದಾರೆ

ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್‌ ಪುತ್ರಿ ಶ್ವೇತಾ ನಂದಾ ಅವರು ಮೊನಿಷಾ ಜೈಸಿಂಗ್‌ ಅವರೊಡಗೂಡಿ ನೂತನ ವಸ್ತ್ರವಿನ್ಯಾಸದ ಬ್ರ್ಯಾಂಡ್ ಆರಂಭಿಸಿದ್ದಾರೆ. ಹೊಸ ವಿನ್ಯಾಸಗಳಿಗಾಗಿ ಪುತ್ರಿ ನವ್ಯಾ ನವೇಲಿ ಜೊತೆ ಶ್ವೇತಾ ಮಾಡೆಲ್ ಆಗಿದ್ದರು. ಬಾಲಿವುಡ್‌ ನಿರ್ದೇಶಕ ಕರಣ್ ಜೋಹರ್‌ ಈ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ಶೇರ್ ಮಾಡಿ, “ಯಶಸ್ವಿ ವಿನ್ಯಾಸಗಾರ್ತಿ ಮತ್ತು ಫ್ಯಾಷನಬಲ್‌ ಚತುರೆ ಇಬ್ಬರೂ ಸೇರಿ ರೂಪಿಸಿರುವ ವಿನ್ಯಾಸಗಳು ಎಲ್ಲರನ್ನೂ ಮೆಚ್ಚಿಸಲಿವೆ. ಟೀನೇಜ್ ಮಾಡೆಲ್‌ ನವ್ಯಾ ನಂದಾ ಪ್ರಮುಖ ಆಕರ್ಷಣೆ,” ಎಂದು ಬರೆದಿದ್ದರು.

ಇನ್‌ಸ್ಟಾಗ್ರಾಮ್‌ನಲ್ಲಿನ ಅವರ ಪೋಸ್ಟ್‌ಗೆ ಹಲವರು ಪರ-ವಿರೋಧದ ಸಂದೇಶಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಕೆಲವರು ಕರಣ್‌ರನ್ನು ಸ್ವಜನಪಕ್ಷಪಾತಿ ಎಂದು ದೂರಿ ತೀಕ್ಷ್ಣ ಸಂದೇಶಗಳನ್ನು ಹಾಕಿದ್ದಾರೆ. “ಖಂಡಿತವಾಗಿ ನೀವು ನವ್ಯಾ ನಂದಾರನ್ನು ನಿಮ್ಮ ಮುಂದಿನ ಸಿನಿಮಾದಲ್ಲಿ ಪರಿಚಯಿಸಲಿದ್ದೀರಿ. ಸ್ವಜನ ಪಕ್ಷಪಾತಿಯಾದ ನಿಮಗೆ ನಿಮ್ಮ ಸುತ್ತಲಿನ ಇತರ ಪ್ರತಿಭಾವಂತ ನಟ-ನಟಿಯರು ಕಾಣಿಸುವುದಿಲ್ಲ,” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. “ಕರಣ್‌ ಒಂದು ರೀತಿ ಶ್ರೀಮಂತ ಜನರ ಸಾಂತಾ ಕ್ಲಾಸ್ ಇದ್ದಂತೆ! ದೊಡ್ಡವರ ಫೋಟೋಗಳನ್ನೇ ಹಾಕುವ ಬದಲು ಪ್ರತಿಭಾವಂತರ ಫೋಟೋಗಳನ್ನೂ ಪೋಸ್ಟ್‌ ಮಾಡಿ,” ಎನ್ನುವುದು ಮತ್ತೊಂದು ಪ್ರತಿಕ್ರಿಯೆ. ‌

ವೃತ್ತಿಬದುಕಿನಲ್ಲಿ ಉನ್ನತಿಗಾಗಿ ಹಪಹಪಿಸುತ್ತಿರುವ ಅನುಭವಿ ವಿನ್ಯಾಸಕಾರರೊಬ್ಬರು, “ನಾನು ಹನ್ನೆರೆಡು ವರ್ಷಗಳಿಂದ ಫ್ಯಾಷನ್ ಉದ್ಯಮದಲ್ಲಿದ್ದೇನೆ. ದೊಡ್ಡ ಬ್ರ್ಯಾಂಡ್‌ಗಳಿಗೆ ಕೆಲಸ ಮಾಡಿದ್ದೇನೆ. ಹೀಗಿದ್ದರೂ ಕಳೆದ ಎಂಟು ತಿಂಗಳಿನಿಂದ ಕೆಲಸವಿಲ್ಲದೆ ಕುಳಿತುಕೊಳ್ಳುವಂತಾಗಿದೆ. ನನ್ನ ಹೆಸರಿನ ಹಿಂದೆ ದೊಡ್ಡವರ ಸರ್‌ನೇಮ್ ಇದ್ದಿದ್ದರೆ ನನಗೆ ಇತಂಹ ಕೆಟ್ಟ ಪರಿಸ್ಥಿತಿ ಬರುತ್ತಿರಲಿಲ್ಲ,” ಎಂದು ಖಾರವಾದ ಸಂದೇಶ ಬರೆದಿದ್ದಾರೆ. ಕರಣ್‌ರನ್ನು ದೂರುವ ಹತ್ತಾರು ಸಂದೇಶಗಳ ಮಧ್ಯೆ ಶ್ವೇತಾ ಮತ್ತು ನವ್ಯಾಗೆ ಶುಭ ಹಾರೈಸಿರುವ ಹಲವಾರು ಪ್ರತಿಕ್ರಿಯೆಗಳೂ ಇವೆ.

ಇದನ್ನೂ ಓದಿ : ಜನುಮದಿನ | ಗಾಯಕಿ ಸುನಿಧಿ ಚೌವ್ಹಾಣ್‌ ಸಿನಿಮಾ ವಿಡಿಯೋ ಹಾಡುಗಳು

ಬಚ್ಚನ್‌ ಹೆಮ್ಮೆ: ಹಿರಿಯ ನಟ ಅಮಿತಾಭ್ ಬಚ್ಚನ್‌ ಆಗಿಂದಾಗ್ಗೆ ತಮ್ಮ ಪುತ್ರಿ ಶ್ವೇತಾ ಬಗ್ಗೆ ಟ್ವಿಟರ್, ಬ್ಲಾಗ್‌ನಲ್ಲಿ ಬರೆದುಕೊಳ್ಳುತ್ತಿರುತ್ತಾರೆ. ಈ ಬಾರಿ ತಮ್ಮ ಪುತ್ರಿ ಶ್ವೇತಾ ಬಗ್ಗೆ ಹೆಮ್ಮೆಪಡಲು ಅವರಿಗೆ ಮತ್ತೊಂದು ಕಾರಣ ಸಿಕ್ಕಿದೆ. ಶ್ವೇತಾ ನಂದಾ ಮತ್ತು ಅವರ ಪುತ್ರಿ ನವ್ಯಾ ನವೇಲಿ ನಂದಾ ವಸ್ತ್ರವಿನ್ಯಾಸದ ಬ್ರ್ಯಾಂಡ್‌ಗೆ ‌ ಮಾಡೆಲ್‌ಗಳಾಗಿದ್ದಾರೆ. ಅವರ ಮಾಡೆಲಿಂಗ್ ಫೋಟೋಗಳನ್ನು ಶೇರ್ ಮಾಡಿರುವ ಸೀನಿಯರ್‌ ಬಚ್ಚನ್‌ ಈ ಕುರಿತು ಪ್ರೀತಿಯಿಂದ ಬರೆದುಕೊಂಡಿದ್ದಾರೆ. “ಅವರು ಎಂದಿಗೂ ಅತ್ಯುತ್ತಮ. ಅವರಿಗೆ ನನ್ನ ಅಪರಿಮಿತ ಪ್ರೀತಿ, ಹಾರೈಕೆಗಳಿರುತ್ತವೆ. ಪುತ್ರಿಯರು ಎಂದಿಗೂ ಶ್ರೇಷ್ಠ,” ಎಂದು ಶುಭ ಹಾರೈಸಿದ್ದಾರೆ ಅಮಿತಾಭ್‌.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More