ವಿಡಿಯೋ | ‘ನಾನೀಗ ಖಾಲಿ ಹಾಳೆ’ ಎಂದ ರಾಘವೇಂದ್ರ ರಾಜಕುಮಾರ್‌

ರಾಘವೇಂದ್ರ ರಾಜಕುಮಾರ್‌‌ 14 ವರ್ಷದ ನಂತರ ಬೆಳ್ಳಿತೆರೆಗೆ ಮರಳುತ್ತಿರುವ ‘ಅಮ್ಮನ ಮನೆ’ ಸಿನಿಮಾ ಸೆಟ್ಟೇರಿದೆ. ರಾಘವೇಂದ್ರ ಈ ಚಿತ್ರದಲ್ಲಿ ಪಿಟಿ ಮಾಸ್ಟರ್ ಪಾತ್ರ ನಿರ್ವಹಿಸುತ್ತಿದ್ದಾರೆ. ಅಮ್ಮ-ಮಗನ ಕತೆ ಹೇಳುತ್ತಿದ್ದು, ಒಂದೊಳ್ಳೆಯ ಸಂದೇಶವಿರುತ್ತದೆ ಎನ್ನುತ್ತಾರೆ ನಿರ್ದೇಶಕ ನಿಖಿಲ್ ಮಂಜು

‘ಪಕ್ಕದಮನೆ ಹುಡುಗಿ’ ಚಿತ್ರದ ನಂತರ ನಟ ರಾಘವೇಂದ್ರ ರಾಜಕುಮಾರ್ ನಟನೆಯಿಂದ ದೂರ ಉಳಿದಿದ್ದರು. ಈ ಚಿತ್ರ ತೆರೆಕಂಡು ಹದಿನಾಲ್ಕು ವರ್ಷಗಳ ಬಳಿಕ ಅವರೀಗ ‘ಅಮ್ಮನ ಮನೆ’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಮರಳುತ್ತಿದ್ದಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿಖಿಲ್‌ ಮಂಜು ನಿರ್ದೇಶನದ ಚಿತ್ರದ ಮುಹೂರ್ತಕ್ಕೆ ರಾಜ್‌ ಕುಟುಂಬದ ಜೊತೆ ಚಿತ್ರರಂಗದ ಗಣ್ಯರನೇಕರು ಆಗಮಿಸಿ ಶುಭ ಹಾರೈಸಿದ್ದು ವಿಶೇ‍ಷ. ಶಿವ ರಾಜಕುಮಾರ್ ಕ್ಯಾಮೆರಾ ಸ್ವಿಚ್ ಆನ್ ಮಾಡಿದರೆ, ಪುನೀತ್‌ ರಾಜಕುಮಾರ್ ಕ್ಲ್ಯಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.

ನಿರ್ದೇಶಕ ನಿಖಿಲ್ ಮಂಜು ‘ಅಮ್ಮನ ಮನೆ’ ಚಿತ್ರದ ಬಗ್ಗೆ ಮಾತನಾಡಿ, “ಚಿತ್ರದಲ್ಲಿ ರಾಘಣ್ಣ ಪಿ.ಟಿ ಮಾಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದೈಹಿಕ ನ್ಯೂನತೆಯಿಂದ ಬಳಲುವ ಮಗುವೊಂದನ್ನು ಬೆಳೆಸಲು ತಾಯಿಯೊಬ್ಬಳು ಪಡುವ ಹರಸಾಹಸ, ಅದೇ ಮಗು ಬೆಳೆದು ದೊಡ್ಡವನಾದ ನಂತರ ತನ್ನ ಹೆತ್ತವರನ್ನು ನೋಡುವ ರೀತಿ ಚಿತ್ರದ ಕಥಾವಸ್ತು. ಯೌವ್ವನದಲ್ಲಿರುವಾಗ ವೃದ್ಯಾಪ್ಯದಲ್ಲಿರುವ ತಂದೆ-ತಾಯಿಯರನ್ನು ಕಡೆಗಣಿಸುವ ಮಕ್ಕಳಿಗೆ ತಮಗೂ ಮುಂದೊಂದು ದಿನ ವಯಸ್ಸಾಗುತ್ತದೆಂಬ ಅರಿವೇ ಇರುವುದಿಲ್ಲ. ಅಂತಹ ಮನಸ್ಸುಗಳಿಗೆ ಪುಟ್ಟ ಸಂದೇಶ ರವಾನಿಸುವ ಪ್ರಯತ್ನವೇ ‘ಅಮ್ಮನ ಮನೆ,” ಎಂದರು.

ಮಾತಿನ ಮೊದಲೇ ಮನವಿ ಮಾಡಿಕೊಂಡ ನಟ ರಾಘವೇಂದ್ರ ರಾಜಕುಮಾರ್, “ಅಮ್ಮನೆ ಮನೆ ರಾಘಣ್ಣನ ಸಿನಿಮಾ ಅಲ್ಲ. ಒಂದೊಳ್ಳೆ ಸಿನಿಮಾದಲ್ಲಿ ರಾಘಣ್ಣ ನಟಿಸುತ್ತಿದ್ದಾರೆ ಅಷ್ಟೆ. ನಾನು ನಟನೆಗೆ ಮರಳುತ್ತಿರುವುದು ದೊಡ್ಡ ವಿಷಯವೇನಲ್ಲ. ‘ಅಮ್ಮನ ಮನೆ’ಯಂತಹ ಉತ್ತಮ ಚಿತ್ರದಲ್ಲಿ ನಾನು ಕೆಲಸ ಮಾಡುತ್ತಿದ್ದೇನಷ್ಟೇ. 1988ರಲ್ಲಿ ಮೊದಲ ಚಿತ್ರಕ್ಕೆ ಬಣ್ಣ ಹಚ್ಚಿ ನಿಂತಾಗ ಅಪ್ಪ, ಅಮ್ಮ ನನ್ನ ಜೊತೆಗಿದ್ದರು. ಇಂದಿಗೆ ಮೂವತ್ತು ವರ್ಷಗಳು ಉರುಳಿವೆ. ಹದಿನಾಲ್ಕು ವರ್ಷಗಳ ನಂತರ ನಟನೆಗೆ ಮರಳಿದ್ದೇನೆ. ನನ್ನೊಂದಿಗೆ ಈಗ ಅಪ್ಪಾಜಿ, ಅಮ್ಮ ಇಲ್ಲ. ಆದರೆ ಈ ಕತೆಯಲ್ಲಿ, ಚಿತ್ರತಂಡದಲ್ಲಿ ನನಗೆ ಅಪ್ಪಾಜಿ, ಅಮ್ಮ ಕಾಣುತ್ತಿದ್ದಾರೆ,” ಎಂದರು.

ಇದನ್ನೂ ಓದಿ : ಟ್ರೈಲರ್‌ | ಕನ್ನಡ ಶಾಲೆಗಳ ಸ್ಥಿತಿ ಬಗ್ಗೆ ಮಾತಾಡುವ ‘ಸಹಿಪ್ರಾ ಶಾಲೆ ಕಾಸರಗೋಡು’

ತಮಗೆ ಸ್ಟ್ರೋಕ್‌ ಆದಾಗ ವೈದ್ಯರು ಹೇಳಿದ್ದ ಮಾತುಗಳನ್ನು ರಾಘವೇಂದ್ರ ರಾಜ್ ನೆನಪು ಮಾಡಿಕೊಂಡರು. “ನಿಮಗೆಲ್ಲ ತಿಳಿದಿರುವ ಹಾಗೆ ಆರು ವರ್ಷಗಳ ಹಿಂದೆ ನನಗೆ ಸ್ಟ್ರೋಕ್ ಆಗಿತ್ತು. ನಾನು ಮತ್ತೆ ನಟಿಸಬಹುದೇ ಎಂದು ಕೇಳಿದಾಗ ವೈದ್ಯರು, ‘ಮೊದಲು ಬದುಕಿ ಮನೆಗೆ ಬರುವುದರ ಬಗ್ಗೆ ಯೋಚಿಸಿ. ನಂತರ ನಟನೆ ಬಗ್ಗೆ ಆಲೋಚಿಸುವಿರಂತೆ’ ಎಂದಿದ್ದರು. ಎಲ್ಲರ ಊಹೆ ಮೀರಿ ಇಂದು ಬಣ್ಣ ಹಚ್ಚಿ ನಿಂತಿರುವೆ. ಇದೆಲ್ಲ ಹೇಗೆ ಸಾಧ್ಯವಾಯಿತು? ನಾನಂತೂ ಅರಿಯೆ. ನಟನೆ ನನ್ನನ್ನು ಅರಸಿ ಬಂದಿರುವ ಪ್ರಸಾದವೆಂದೇ ತಿಳಿದಿದ್ದೇನೆ. ಭಕ್ತಿಯಿಂದ ಕಣ್ಣಿಗೊತ್ತಿಕೊಂಡು ನಟಿಸುತ್ತೇನೆ,” ಎನ್ನುತ್ತಾರೆ ರಾಘವೇಂದ್ರ ರಾಜಕುಮಾರ್.

ಅಮ್ಮನ ನೆನಪು: ಮುಹೂರ್ತ ಸಮಾರಂಭದಲ್ಲಿ ರಾಘವೇಂದ್ರ, ಅಮ್ಮ ಪಾರ್ವತಮ್ಮ ರಾಜಕುಮಾರ್‌ ಅವರನ್ನು ನೆನಪು ಮಾಡಿಕೊಂಡು ಭಾವುಕರಾದರು. “ಕೊನೆಯ ದಿನಗಳಲ್ಲಿ ಅಮ್ಮ, ‘ನಿನ್ನ ಪಾಡಿಗೆ ನೀನು ನಟನೆ ಮಾಡಿಕೊಂಡಿದ್ದೆ. ನಿನ್ನನ್ನು ಕರೆದು ಆಫೀಸು, ಮನೆ, ಜವಾಬ್ದಾರಿ ಹೊರೆಗಳನ್ನು ಹೇರಿ ನಿನ್ನ ಭವಿಷ್ಯವನ್ನು ನಾನೇ ಹಾಳು ಮಾಡಿದೆ’ ಎಂದು ನೊಂದುಕೊಳ್ಳುತ್ತಿದ್ದರು. ಅಮ್ಮ, ನೀನು ನೊಂದುಕೊಳ್ಳಬೇಡ. ನಿನ್ನ ಆತ್ಮಕ್ಕೆ ಕಷ್ಟವಾಗುತ್ತದೆ. ನಾನು ಖಂಡಿತವಾಗಿಯೂ ನಟಿಸುತ್ತೇನೆ ಎಂದಿದ್ದೆ. ಅಮ್ಮನ ಅಗಲಿಕೆಯ ನಂತರ ದಿನ ಕಳೆಯುವುದು ಕಷ್ಟವಾಯಿತು. ಆ ಮಾತುಗಳು ನನ್ನ ಕಿವಿಯಲ್ಲಿ ಪ್ರತಿಧ್ವನಿಸುವ ಹೊತ್ತಿಗೆ ಮಂಜೂ ನನ್ನಲ್ಲಿಗೆ ಬಂದು ಕತೆ ಹೇಳಿದರು. ಕತೆ ಇಷ್ಟವಾಯಿತಾದರೂ ಅಮ್ಮ ತೀರಿಕೊಂಡು ವರ್ಷವಾಗುವವರೆಗೂ ನಾನು ಸಿನಿಮಾ ಮಾಡುವುದಿಲ್ಲ ಎಂದು ಸುಮ್ಮನಾಗಿದ್ದೆ. ಆದರೆ, ನಿರ್ದೇಶಕರು ತಾಳ್ಮೆಯಿಂದ ಕಾದರು. ಅಂದುಕೊಂಡಂತೆ ಸಿನಿಮಾ ಶುರುವಾಗಿದೆ. ಸದ್ಯಕ್ಕೆ ನಾನು ಖಾಲಿ ಹಾಳೆಯಾಗಿ ನಿರ್ದೇಶಕರ ಮುಂದೆ ನಿಂತಿರುವೆ. ಅವರಿಗೆ ಬೇಕಾದಂತೆ ಅವರು ಗೀಚಿಕೊಳ್ಳಲಿ. ನಿರ್ದೇಶಕರನ್ನು ಮೆಚ್ಚಿಸಲು ನಾನು ಬದ್ಧನಾಗಿದ್ದೇನೆ. ಜನರನ್ನು ಮೆಚ್ಚಿಸುವುದು ಅವರಿಗೆ ಬಿಟ್ಟದ್ದು,” ಎಂದರು ರಾಘವೇಂದ್ರ ರಾಜಕುಮಾರ್.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More