ವಿಡಿಯೋ | ಸೆಟ್ಟೇರಿದ ‘ಒಡೆಯ’, ಮತ್ತೆ ರಿಮೇಕ್‌ ಮೊರೆಹೋದ ದರ್ಶನ್‌

ಸಂದೇಶ್ ನಾಗರಾಜ್‌ ನಿರ್ಮಾಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ನಟಿಸುತ್ತಿರುವ ‘ಒಡೆಯ’ ಸಿನಿಮಾದ ಮುಹೂರ್ತ ನೆರವೇರಿದೆ. ಎಂ ಡಿ ಶ್ರೀಧರ್ ನಿರ್ದೇಶನದ ಈ ಸಿನಿಮಾ, ಅಜಿತ್ ಅಭಿನಯದ ತಮಿಳಿನ ಯಶಸ್ವಿ ಸಿನಿಮಾ ‘ವೀರಂ’ ರಿಮೇಕ್‌. ಸೆ.10ರಿಂದ ಚಿತ್ರೀಕರಣ ಆರಂಭವಾಗಲಿದೆ

ಪ್ರಕಾಶ್ ನಿರ್ದೇಶನದ ‘ತಾರಕ್‌’ ಸಿನಿಮಾದಲ್ಲಿ ನಟ ದರ್ಶನ್‌ ಬದಲಾಗುವ ಸೂಚನೆ ನೀಡಿದ್ದರು. ಇದು ಸಿದ್ಧಸೂತ್ರದ ದರ್ಶನ್ ಮಾದರಿ ಸಿನಿಮಾ ಆಗಿರಲಿಲ್ಲ. ಬಹಳ ದಿನಗಳ ನಂತರ ಅವರ ಸಿನಿಮಾಗಳಲ್ಲಿ ನಾಯಕಿಯರ ಪಾತ್ರಗಳಿಗೂ ಅಭಿನಯಕ್ಕೆ ಸ್ಕೋಪ್‌ ಇತ್ತು. ಅಭಿಮಾನಿಗಳನ್ನು ಮೆಚ್ಚಿಸುವ ಮಾಸ್ ಸಿನಿಮಾಗಳನ್ನೇ ನೆಚ್ಚಿಕೊಂಡಿದ್ದ ದರ್ಶನ್‌, ‘ತಾರಕ್‌’ನಲ್ಲಿ ಭಿನ್ನವಾಗಿ ಕಾಣಿಸಿಕೊಂಡಿದ್ದರು. ಇದಾದ ನಂತರ ಸೆಟ್ಟೇರಿದ ಅವರ ‘ಯಜಮಾನ’ ಕೂಡ ಸ್ವಮೇಕ್‌. ಈಗ ‘ಒಡೆಯ’ ಆರಂಭವಾಗಿದ್ದು, ಇದು ತಮಿಳಿನ ‘ವೀರಂ’ ಸಿನಿಮಾ ರಿಮೇಕ್‌. ಮುಂದಿನ ತಿಂಗಳ ಎರಡನೇ ವಾರದಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಮೈಸೂರಿನ ಸುತ್ತಮುತ್ತ ಚಿತ್ರಿಸುವ ಯೋಜನೆ ನಿರ್ದೇಶಕರದ್ದು. ಚಿತ್ರದ ನಾಯಕಿಯ ಆಯ್ಕೆ ಇನ್ನೂ ಆಗಿಲ್ಲ.

ನಾಲ್ಕು ವರ್ಷಗಳ ಹಿಂದೆ ತೆರೆಕಂಡ ‘ವೀರಂ’ ಚಿತ್ರದ ತೆಲುಗು, ಹಿಂದಿ ಅವತರಣಿಕೆಗಳು ತೆರೆಕಂಡಿವೆ. ಈಗ ದರ್ಶನ್‌ ಕನ್ನಡದ ಅವತರಣಿಕೆಯ ಹೀರೋ. “ಇದೊಂದು ಫ್ಯಾಮಿಲಿ ಎಂಟರ್‌ಟೇನರ್‌. ಮಾಸ್‌ ಮತ್ತು ಕ್ಲಾಸ್ ಎರಡೂ ಪ್ರೇಕ್ಷಕ ವರ್ಗ ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡುತ್ತಿದ್ದೇವೆ. ತುಂಬಾ ದಿನಗಳ ನಂತರ ಇಂಥದ್ದೊಂದು ಕತೆ ಸಿಕ್ಕಿದೆ,” ಎನ್ನುತ್ತಾರೆ ದರ್ಶನ್‌. ಐವತ್ತು ಸಿನಿಮಾಗಳನ್ನು ಪೂರೈಸಿರುವ ದರ್ಶನ್‌, ರಿಮೇಕ್‌ ಸಿನಿಮಾಗಳಿಂದ ಇನ್ನಾದರೂ ದೂರ ಉಳಿಯಬೇಕಿತ್ತು ಎನ್ನುವ ಮಾತು ಗಾಂಧಿನಗರದಲ್ಲಿ ಕೇಳಿಬರುತ್ತಿದೆ. ಉತ್ತಮ ಕತೆ ಇರುವ ಚಿತ್ರವಾದರೆ ರಿಮೇಕ್‌ನಿಂದ ತೊಂದರೆ ಏನಿಲ್ಲ ಎನ್ನುವುದು ಅವರ ಅಭಿಮಾನಿಗಳ ವಾದ. ‘ಪೊರ್ಕಿ’ ಮತ್ತು ‘ಬುಲ್‌ ಬುಲ್‌’ ನಂತರ ನಿರ್ದೇಶಕ ಎಂ ಡಿ ಶ್ರೀಧರ್‌ ‘ಒಡೆಯ’ ಚಿತ್ರದಲ್ಲಿ ಮತ್ತೊಮ್ಮೆ ದರ್ಶನ್‌ಗೆ ಜೊತೆಯಾಗುತ್ತಿದ್ದಾರೆ.

ಇದನ್ನೂ ಓದಿ : ಟ್ರೈಲರ್‌ | ಕನ್ನಡ ಶಾಲೆಗಳ ಸ್ಥಿತಿ ಬಗ್ಗೆ ಮಾತಾಡುವ ‘ಸಹಿಪ್ರಾ ಶಾಲೆ ಕಾಸರಗೋಡು’

ವಿವಾದ ಅನಗತ್ಯ: ಸಿನಿಮಾದ ಶೀರ್ಷಿಕೆ ವಿಚಾರವಾಗಿ ವಿವಾದ ಸೃಷ್ಟಿಯಾಗಿತ್ತು. ಇದೊಂದು ಅನಗತ್ಯ ವಿವಾದ ಎನ್ನುವುದು ಚಿತ್ರತಂಡದ ವಾದ. “ನಾವು ಚಿತ್ರದ ಶೀರ್ಷಿಕೆಯನ್ನು ‘ಒಡೆಯ’ ಎಂದೇ ರಿಜಿಸ್ಟರ್ ಮಾಡಿಸಿದ್ದೆವು. ವಿವಾದ ಹೇಗೆ ಸೃಷ್ಟಿಯಾಯ್ತು ಎನ್ನುವುದೇ ಆಶ್ಚರ್ಯ” ಎನ್ನುತ್ತಾರೆ ನಟ ದರ್ಶನ್‌. ಚಿತ್ರದ ಶೀರ್ಷಿಕೆ ‘ಒಡೆಯರ್’ ಎಂದಾದರೆ ತಮ್ಮದೇನೂ ಆಕ್ಷೇಪಣೆ ಇಲ್ಲ ಎಂದು ಮೈಸೂರು ರಾಜಮನೆತನದ ಪ್ರಮೋದಾದೇವಿ ಅವರು ಹೇಳಿಕೆ ಕೊಟ್ಟಿದ್ದರು. “ಒಡೆಯರ್’ ಶೀರ್ಷಿಕೆಯ ಪ್ರಸ್ತಾಪದ ಅಗತ್ಯವೇ ಇಲ್ಲ. ನಮ್ಮ ಸಿನಿಮಾ ‘ಒಡೆಯ’ ಎಂದೇ ಇರುತ್ತದೆ. ಹಿಂದೆ ವಿವಾದದ ಸಂದರ್ಭದಲ್ಲಿ ನಮಗೆ ಸಮಜಾಯಿಷಿ ನೀಡಲು ಸಂದರ್ಭ ಒದಗಿಬಂದಿರಲಿಲ್ಲ. ಈಗ ಸ್ಪಷ್ಟಪಡಿಸುತ್ತಿದ್ದೇವೆ,” ಎಂದು ದರ್ಶನ್ ವಿವಾದಕ್ಕೆ ತೆರೆ ಎಳೆಯುತ್ತಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More