ಟ್ರೈಲರ್‌ | ಕನ್ನಡ ಶಾಲೆಗಳ ಸ್ಥಿತಿ ಬಗ್ಗೆ ಮಾತಾಡುವ ‘ಸಹಿಪ್ರಾ ಶಾಲೆ ಕಾಸರಗೋಡು’

ರಿಷಬ್ ಶೆಟ್ಟಿ ನಿರ್ದೇಶನದ ‘ಸ ಹಿ ಪ್ರಾ ಶಾಲೆ ಕಾಸರಗೋಡು’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ದಟ್ಟ ನೇಟಿವಿಟಿ ಮತ್ತು ವಿಶಿಷ್ಟ ಕಥಾವಸ್ತು ಈ ವಿಡಿಯೋದ ಹೈಲೈಟ್‌. ಮುಂದಿನ ವಾರ ಸಿನಿಮಾ ತೆರೆಕಾಣಲಿದ್ದು, ಜನರು ಚಿತ್ರವನ್ನು ಮೆಚ್ಚಿಕೊಳ್ಳಲಿದ್ದಾರೆ ಎನ್ನುವ ವಿಶ್ವಾಸ ಚಿತ್ರತಂಡದ್ದು

’ಕಿರಿಕ್ ಪಾರ್ಟಿ’ ಸಿನಿಮಾದ ದೊಡ್ಡ ಗೆಲುವಿನ ನಂತರ ರಿಷಬ್ ನಿರ್ದೇಶಿಸಿರುವ ‘ಸ ಹಿ ಪ್ರಾ ಶಾಲೆ ಕಾಸರಗೋಡು’ ತೆರೆಗೆ ಸಿದ್ಧವಾಗಿದೆ. ಈ ಹಿಂದೆ ತೆರೆಕಂಡಿದ್ದ ಚಿತ್ರದ ಹಾಡುಗಳು ಸಾಹಿತ್ಯ, ಸಂಗೀತ ಮತ್ತು ಮೇಕಿಂಗ್‌ನಿಂದ ಗಮನ ಸೆಳೆದಿದ್ದವು. ಇದೀಗ ಟ್ರೈಲರ್ ಬಿಡುಗಡೆಯಾಗಿದ್ದು, ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಹಾಡುಗಳಲ್ಲಿ ಚಿತ್ರದ ಕತೆಯ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿರಲಿಲ್ಲ. ಟ್ರೈಲರ್‌ನಲ್ಲಿ ಸರ್ಕಾರಿ ಕನ್ನಡ ಶಾಲೆ ಸಮಸ್ಯೆಗಳ ಹೊರತಾಗಿ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಗಡಿಗೆ ಸಂಬಂಧಿಸಿದ ವಿವಾದದ ಮೇಲೂ ಬೆಳಕು ಚೆಲ್ಲಿದಂತಿದೆ.

“ಚಿತ್ರದಲ್ಲಿ ನಾವು ಪ್ರಮುಖವಾಗಿ ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚಲು ಹೊರಟಿರುವ ನಿಲುವನ್ನು ವಿರೋಧಿಸುವ ಕತೆ ನಿರೂಪಿಸುತ್ತಿದ್ದೇವೆ. ಕಾಸರಗೋಡಿನ ಹಿನ್ನೆಲೆಯಲ್ಲಿ ಈ ಕತೆ ಹೇಳಲಾಗುತ್ತಿದೆ. ಕರ್ನಾಟಕ, ಕೇರಳ ಗಡಿ ವಿವಾದ, ಹೋರಾಟಕ್ಕೆ ಇಲ್ಲಿ ಹೆಚ್ಚು ಪ್ರಸ್ತಾಪವಾಗುವುದಿಲ್ಲ. ಆದರೆ, ಕನ್ನಡ ಶಾಲೆ ಕುರಿತ ಸರ್ಕಾರದ ಧೋರಣೆಗಳಿಂದಾಗಿ ಎರಡೂ ರಾಜ್ಯಗಳ ಗಡಿಯಲ್ಲಿರುವ ಊರಿನಲ್ಲಿ ಏನೆಲ್ಲ ತೊಂದರೆಗಳಾಗುತ್ತವೆ ಎನ್ನುವುದನ್ನು ನೋಡಬಹುದು,” ಎನ್ನುತ್ತಾರೆ ರಿಷಬ್‌.

“ಕತೆ ನಿರ್ದಿಷ್ಟವಾಗಿ ಒಂದು ಪಾತ್ರದ ಮೂಲಕ ನಿರೂಪಣೆಗೊಂಡಿಲ್ಲ. ಹಲವು ಪಾತ್ರಗಳು ಕತೆಯಲ್ಲಿ ಭಾಗಿಯಾಗುತ್ತವೆ,” ಎನ್ನುತ್ತಾರೆ ನಿರ್ದೇಶಕ ರಿಷಬ್‌. ಅನಂತ ನಾಗ್ ಪಾತ್ರವನ್ನು ಅವರು ವಿಶೇಷವಾಗಿ ಪ್ರಸ್ತಾಪ ಮಾಡುತ್ತಾರೆ. ಪ್ರಕಾಸ್ ತೂಮಿನಾಡು, ಪ್ರಮೋದ್ ಇತರ ಪ್ರಮುಖ ಪಾತ್ರಗಳಲ್ಲಿದ್ದಾರೆ. ಕಾಸರಗೋಡಿನ ನೇಟಿವಿಟಿ ಹೊರತಾಗಿ ನೋಡಿದರೆ ಇದು ರಾಜ್ಯದ ಯಾವುದೇ ಪ್ರದೇಶದಲ್ಲಿ ನಡೆಯಬಹುದಾದ ಕತೆ ಎನ್ನುತ್ತಾರೆ ರಿಷಬ್‌.

ಇದನ್ನೂ ಓದಿ : ವಿಡಿಯೋ | ಪಾರಿವಾಳ ಬೆಟ್ಟಿಂಗ್‌ ಮಾಫಿಯಾದ ಕತೆ ಹೇಳುವ ‘ಬಜಾರ್’

ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ‘ಕ್ರಾಪು ಕೂದಲು ಕೂಲಿಂಗ್ ಗ್ಲಾಸು ಹಳೆಯ ನಿಕ್ಕರು’ ಹಾಡು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಪ್ರತಿಕ್ರಿಯೆ ಪಡೆದಿತ್ತು. ಸರಿಗಮಪ ಲಿಟ್ಲ್ ಚಾಂಪ್ಸ್‌ 14ನೇ ಸೀಸನ್‌ನಲ್ಲಿ ರನ್ನರ್ ಅಪ್‌ ಆಗಿದ್ದ ಜ್ಞಾನೇಶ್ವರ್ ಈ ಹಾಡಿಗೆ ದನಿಯಾಗಿದ್ದ. “ಚಿತ್ರದಲ್ಲಿನ ‘ದಡ್ಡ ದಡ್ಡ’ ಹಾಡಿನಂತೆ ಜ್ಞಾನೇಶ್ವರ್ ಹಾಡಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನರಿಗೆ ಸಿನಿಮಾ ಬಗ್ಗೆ ಕುತೂಹಲ ಮೂಡಿದೆ. ಒಂದೊಳ್ಳೆಯ ಇಶ್ಯೂ ಇಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುವ ನಿರೀಕ್ಷೆ ಇದೆ,” ಎನ್ನುತ್ತಾರೆ ನಿರ್ದೇಶಕ ರಿಷಬ್‌.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More