ಟ್ರೈಲರ್‌ | ಮಾನವ ಕಳ್ಳಸಾಗಾಣಿಕೆ, ವೇಶ್ಯಾವಾಟಿಕೆ ಕುರಿತ ‘ಲವ್ ಸೋನಿಯಾ’

ವೇಶ್ಯಾವಾಟಿಕೆಯ ಕೂಪದಲ್ಲಿರುವ ಸಹೋದರಿಯನ್ನು ರಕ್ಷಿಸುವ ಸೋನಿಯಾಳ ಕತೆ ‘ಲವ್‌ ಸೋನಿಯಾ.’ ಹಾಲಿವುಡ್‌ನ ಡೇವಿಡ್‌ ವೂಮಾರ್ಕ್‌ ನಿರ್ಮಾಣದ ಚಿತ್ರಕ್ಕೆ ತಬ್ರೀಜ್ ನೂರಾನಿ ನಿರ್ದೇಶಕ. ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ಸಿದ್ಧವಾಗಿರುವ ಈ ಸಿನಿಮಾ ಸೆಪ್ಟೆಂಬರ್‌ 14ರಂದು ತೆರೆಕಾಣಲಿದೆ

ತಬ್ರೀಜ್‌ ನೂರಾನಿ ನಿರ್ದೇಶನದ ‘ಲವ್ ಸೋನಿಯಾ’ ಹಿಂದಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಎರಡು ನಿಮಿಷಗಳ ಟ್ರೈಲರ್, ವೇಶ್ಯಾವಾಟಿಕೆಯ ಕರಾಳ ದಂಧೆ ಹಾಗೂ ಚಿತ್ರದ ಕತೆಯ ಬಗ್ಗೆ ವೀಕ್ಷಕರಲ್ಲಿ ಒಂದು ಕಲ್ಪನೆ ಕಟ್ಟಿಕೊಡುವುದರಲ್ಲಿ ಗೆದ್ದಿದೆ. ತಂದೆಯ ದುರಾಸೆಯಿಂದ ವಿಧಿಯಿಲ್ಲದೆ ಹದಿಹರೆಯದ ಪ್ರೀತಿ ವೇಶ್ಯಾವಾಟಿಕೆ ಪಾಲಾಗುತ್ತಾಳೆ. ತನ್ನ ಸಹೋದರಿಯನ್ನು ರಕ್ಷಿಸಲು ಹೊರಡುವ 17 ವರ್ಷದ ಸೋನಿಯಾ ಕೂಡ ವೇಶ್ಯಾವಾಟಿಕೆ ಜಾಲದಲ್ಲಿ ಸಿಲಕುತ್ತಾಳೆ. ಆಕಸ್ಮಿಕವಾಗಿ ಪರಿಚಯವಾಗುವ ಕಥಾನಾಯಕ ಸೋನಿಯಾಳನ್ನು ರಕ್ಷಿಸಿ, ಆಕೆಯ ಸಹೋದರಿಯ ಪತ್ತೆಗಾಗಿ ಜೊತೆಯಾಗುತ್ತಾನೆ.

ನೈಜ ಘಟನೆಗಳನ್ನು ಆಧರಿಸಿದ ಈ ಸಿನಿಮಾ ಸೆಟ್ಟೇರಿದಾಗಿನಿಂದಲೂ ಕುತೂಹಲ ಮೂಡಿಸಿತ್ತು. ‘ಲೈಫ್ ಆಫ್ ಪೈ’, ‘ಝೀರೋ ಡಾರ್ಕ್ ಥರ್ಟಿ’, ‘ಸ್ಲಂಡಾಗ್ ಮಿಲಿಯನೇರ್’ ಚಿತ್ರಗಳಿಗೆ ಸಹಾಯಕರಾಗಿ ಕೆಲಸ ಮಾಡಿರುವ ನೂರಾನಿ, “ನಾನು ಹುಟ್ಟಿ ಬೆಳೆದ ನೆಲದಲ್ಲಿ ನನ್ನ ನಿರ್ದೇಶನದ ಚಿತ್ರವನ್ನು ಬಿಡುಗಡೆ ಮಾಡುತ್ತಿರುವುದು ತೃಪ್ತಿ ತಂದಿದೆ. ಪ್ರತಿಭಾನ್ವಿತ ಕಲಾವಿದೆ ಮೃಣಾಲ್ ಠಾಕೂರ್‌ ಈ ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಪರಿಚಯವಾಗುತ್ತಿದ್ದಾರೆ,” ಎಂದಿದ್ದಾರೆ. ಇದೇ ವರ್ಷ ಲಂಡನ್‌ನಲ್ಲಿ ನಡೆದ ಭಾರತೀಯ ಚಿತ್ರೋತ್ಸವದಲ್ಲಿ ‘ಲವ್‌ ಸೋನಿಯಾ’ ಪ್ರದರ್ಶನಗೊಂಡಿತ್ತು.

ಇದನ್ನೂ ಓದಿ : ಬಹುನಿರೀಕ್ಷಿತ ‘2.0’ ಸಿನಿಮಾದ ಲೀಕ್‌ ವಿಡಿಯೋದಲ್ಲಿ ರಜನೀಕಾಂತ್‌-ಏಮಿ

ರಿಛಾ ಚಡ್ಡಾ, ಫ್ರೀಡಾ ಪಿಂಟೊ, ಡೆಮಿ ಮೂರ್, ಅನುಪಮ್ ಖೇರ್, ಮನೋಜ್ ಬಾಜಪಾಯ್‌, ರಾಜ್‌ಕುಮಾರ್ ರಾವ್, ಆದಿಲ್ ಹುಸೇನ್, ಸಾಯಿ ತಮ್ಹಂಕರ್ ಮತ್ತಿತರ ಪ್ರತಿಭಾವಂತ ಕಲಾವಿದರು ಚಿತ್ರದ ಪ್ರಮುಖ ಆಕರ್ಷಣೆ. ಚಿತ್ರಕತೆ ಕುರಿತು ಮಾತನಾಡುವ ‘ಸ್ಲಂಡಾಗ್ ಮಿಲಿಯನೇರ್’ ಖ್ಯಾತಿಯ ನಟಿ ಫ್ರೀಡಾ ಪಿಂಟೋ, "ವೇಶ್ಯಾವಾಟಿಕೆ ಹಲವು ವರ್ಷಗಳಿಂದ ಪಿಡುಗಾಗಿ ಹಬ್ಬಿದೆ. ಅಂತಹ ಕರಾಳ ದಂಧೆಯಲ್ಲಿ ಆಕಸ್ಮಿಕವಾಗಿ ಸಿಲುಕುವ ಅಮಾಯಕ ಯುವತಿಯರ ಬದುಕಿನ ಕತೆ ಈ ಚಿತ್ರದೊಂದಿಗೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯಲಿದೆ,” ಎಂದಿದ್ದಾರೆ. ಹಿಂದಿ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ತಯಾರಾಗಿರುವ ಈ ಸಿನಿಮಾ, ಸೆಪ್ಟೆಂಬರ್‌ 14ರಂದು ತೆರೆಕಾಣಲಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More