ಗಾಂಜಾ ಕುರಿತ ಹಾಡು; ಚಂದನ್ ಶೆಟ್ಟಿಗೆ ನೋಟಿಸ್‌ ನೀಡಿದ್ದರ ಬಗ್ಗೆ ಬಿಸಿ ಚರ್ಚೆ

ಮಾದಕದ್ರವ್ಯ ಗಾಂಜಾ ಕುರಿತು ಪ್ರಸ್ತಾಪವಾಗುವ ಹಾಡಿಗೆ ದನಿಯಾಗಿದ್ದಾರೆ ಎಂದು ಗಾಯಕ ಚಂದನ್ ಶೆಟ್ಟಿಗೆ ನೋಟಿಸ್ ಜಾರಿಯಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಬಗೆಗಿನ ಚರ್ಚೆ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ಜೊತೆಗೆ ಸಿನಿಮಾ ಮಾಡುವವರಿಗೆ ಸಾಮಾಜಿಕ ಜವಾಬ್ದಾರಿ ಇರಬೇಕು ಎನ್ನುವ ವಾದವೂ ಇದೆ

ಕನ್ನಡ ಜನಪ್ರಿಯ ರ‍್ಯಾಪ್ ಗಾಯಕ ಚಂದನ್ ಶೆಟ್ಟಿ ಅವರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಮಾದಕವಸ್ತು ಗಾಂಜಾ ಕುರಿತ ಪ್ರಚೋದನಕಾರಿ ಹಾಡು ಹಾಡಿದ್ದಾರೆ ಎನ್ನುವುದು ಇದಕ್ಕೆ ಕಾರಣ. “ನಾನು ಹಾಡಿರುವುದೇನೋ ಹೌದು. ಆದರೆ, ಹಾಡಿನ ಸಾಹಿತ್ಯ ನನ್ನದಲ್ಲ. ಮನರಂಜನಾ ದೃಷ್ಟಿಯಿಂದ ಹಾಡಿದ್ದೇನೆಯೇ ಹೊರತು, ಇದರ ಹಿಂದೆ ಮತ್ತಾವ ಉದ್ದೇಶವೂ ಇಲ್ಲ,” ಎಂದಿರುವ ಗಾಯಕ ಚಂದನ್ ಶೆಟ್ಟಿ, ಸಂಬಂಧಪಟ್ಟವರನ್ನು ಭೇಟಿ ಮಾಡಿ ವಿವರಣೆ ನೀಡುವುದಾಗಿ ಹೇಳುತ್ತಾರೆ.

ಚಂದನ್ ಶೆಟ್ಟಿ ಹಾಡಿರುವ ‘ಗಾಂಜಾ ಸಾಂಗ್‌’

‘ಗಾಂಜಾ ಸಾಂಗ್‌’ ಎಂದೇ ಹೆಸರಾಗಿರುವ ಈ ಹಾಡು ‘ಅಂತ್ಯ’ (2015) ಕನ್ನಡ ಚಿತ್ರದ್ದು. ನಿರ್ದೇಶಕ ಮುತ್ತು ಅವರೇ ಚಿತ್ರದ ಹಾಡುಗಳನ್ನು ರಚಿಸಿದ್ದಾರೆ. ಮೂರು ವರ್ಷಗಳ ಹಿಂದೆ ಬಿಡುಗಡೆಯಾದ ಈ ವಿಡಿಯೋ ಹಾಡನ್ನು ಒಂಬತ್ತೂವರೆ ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಮೂರು ವರ್ಷಗಳ ಹಿಂದೆ ಬಿಡುಗಡೆಯಾದ ಹಾಡಿಗೆ ಪೊಲೀಸರು ಈಗ ನೋಟೀಸ್ ಕಳುಹಿಸಿದ್ದು ಹೇಗೆ ಎನ್ನುವುದಕ್ಕೆ ಉತ್ತರ ಸಿಗುವುದಿಲ್ಲ. ಒಟ್ಟಿನಲ್ಲಿ ಚಂದನ್‌ ಶೆಟ್ಟಿ ವಿವರಣೆ ನೀಡಬೇಕಾದ ಅಗತ್ಯ ಎದುರಾಗಿದೆ.

ಇದನ್ನೂ ಓದಿ : ವಿಡಿಯೋ | ರಾಯರ ಪಾತ್ರದಲ್ಲಿ ಗಮನ ಸೆಳೆದಿದ್ದರು ಡಾ.ರಾಜ್‌, ರಜನೀಕಾಂತ್

ಚಂದನ್ ಶೆಟ್ಟಿ ಸಂಗೀತ ಸಂಯೋಜನೆ ಮಾಡಿ ಹಾಡಿರುವ ಈ ಗೀತೆಯಲ್ಲಿ ಆಕ್ಷೇಪಾರ್ಹ ಸಾಲುಗಳಿವೆ ಎನ್ನುವುದು ವಾದ. ಹಾಗಾಗಿ ಸಿಸಿಬಿ ಮಾದಕದ್ರವ್ಯ ನಿಗ್ರಹ ದಳದಿಂದ ಗಾಯಕನಿಗೆ ನೋಟಿಸ್‌ ಹೋಗಿದೆ. ಈ ಹಾಡಿನಲ್ಲಿ ಯುವಕರನ್ನು ಮಾದಕದ್ರವ್ಯದೆಡೆ ಪ್ರಚೋದಿಸುವ ಸಾಹಿತ್ಯವಿದೆ ಎನ್ನುವ ಸಾರ್ವಜನಿಕ ದೂರಿನ ಅನ್ವಯ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಚಲನಚಿತ್ರ ಹಿನ್ನೆಲೆ ಗಾಯಕಿ ಮಂಜುಳಾ ಗುರುರಾಜ್‌ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸುತ್ತ, “ಪೊಲೀಸರ ಕ್ರಮ ಸರಿಯಾಗಿದೆ. ಪ್ರಭಾವಶಾಲಿ ಸಿನಿಮಾ ಮಾಧ್ಯಮದಲ್ಲಿ ಕೆಲಸ ಮಾಡುವ ಎಲ್ಲರಿಗೂ ಸಾಮಾಜಿಕ ಜವಾಬ್ದಾರಿ ಇರಬೇಕಾಗುತ್ತದೆ. ಹಾಡುವ ಮುನ್ನ ಸಾಹಿತ್ಯ ಗಮನಿಸುವುದು ಮುಖ್ಯ,” ಎನ್ನುತ್ತಾರೆ.

ಹಳೆಯ ಹಾಡಿನ ಬಗ್ಗೆ ಈಗೇಕೆ ಪ್ರಸ್ತಾಪವಾಗುತ್ತಿದೆ ಎನ್ನುವ ಬಗ್ಗೆ ಚಿತ್ರಸಾಹಿತಿ ಕವಿರಾಜ್ ಕೂಡ ಅಚ್ಚರಿ ವ್ಯಕ್ತಪಡಿಸುತ್ತಾರೆ. ಪ್ರಚೋದನಕಾರಿ ಸಾಹಿತ್ಯದ ಹಾಡುಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವ ಅವರು, ಚಿತ್ರದ ಸೆನ್ಸಾರ್ ಹಂತದಲ್ಲೇ ಇದಕ್ಕೆ ಕಡಿವಾಣ ಹಾಕಬೇಕೆನ್ನುತ್ತಾರೆ. “ಇಂತಹ ಹಾಡುಗಳನ್ನು ಬೆಂಬಲಿಸಕೂಡದು. ಸದ್ಯ ಚಂದನ್ ಶೆಟ್ಟಿಗೆ ನೋಟಿಸ್ ಹೋಗಿದೆ. ಆದರೆ ಅವರನ್ನು ಬಂಧಿಸುವ ಪ್ರಕ್ರಿಯೆಗಳು ನಡೆಯಕೂಡದು. ಬೇರೊಬ್ಬರ ರಚನೆಯ ಹಾಡನ್ನು ಕಲಾವಿದನಾಗಿ ಅವರು ಹಾಡಿದ್ದಾರಷ್ಟೆ. ಮುಖ್ಯವಾಗಿ, ಸೆನ್ಸಾರ್ ಹಂತದಲ್ಲೇ ಇದೆಲ್ಲ ಬಗೆಹರಿಯಬೇಕು,” ಎನ್ನುವುದು ಅವರ ಅಭಿಪ್ರಾಯ.

ಚಂದನ್ ಶೆಟ್ಟಿ ‘ಟಕಿಲ’ ಸಾಂಗ್‌

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More