ವಿಡಿಯೋ ಸ್ಟೋರಿ | ಶಕೀಲಾ ಜೊತೆ ಮಾತನಾಡಿದ ನಂತರವೇ ಪಾತ್ರ ಒಪ್ಪಿದ್ದ ರಿಚಾ

ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ನಟಿ ಶಕೀಲಾ ಬಯೋಪಿಕ್  ಹಿಂದಿ ಸಿನಿಮಾದ ಶೇಕಡ 70ರಷ್ಟು ಚಿತ್ರೀಕರಣ ಮುಗಿದಿದೆ. ಬಾಲಿವುಡ್ ನಟಿ ರಿಚಾ ಚಡ್ಡಾ ಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದು, ಕರ್ನಾಟಕದ ಮಲೆನಾಡಿನಲ್ಲಿ ನಡೆದ ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡಿದ್ದಾರೆ

ಸ್ಯಾಂಡಲ್‌ವುಡ್‌ ನಿರ್ದೇಶಕ ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ದಕ್ಷಿಣ ಭಾರತದ ನಟಿ ಶಕೀಲಾ ಕುರಿತ ಹಿಂದಿ ಬಯೋಪಿಕ್‌ ಸಿದ್ಧವಾಗುತ್ತಿದೆ. ತೀರ್ಥಹಳ್ಳಿ, ಹೊಸನಗರ ಸುತ್ತಮುತ್ತ ಚಿತ್ರೀಕರಣ ನಡೆದು, ‘ಶಕೀಲಾ’ ಚಿತ್ರದ ಶೇ.70ರಷ್ಟು ಶೂಟಿಂಗ್ ಪೂರ್ಣಗೊಂಡಿದೆ. ನಟಿ ಶಕೀಲಾ ಸಿನಿಬದುಕಿನ ಆರಂಭದ ದಿನಗಳಿಂದ ಹಿಡಿದು ಸಿನಿರಂಗದಲ್ಲಿನ ಅವರ ಏಳು-ಬೀಳು, ಬೇಡಿಕೆಯ ನಟಿಯಾಗಿ ಜನಪ್ರಿಯತೆ ಗಳಿಸಿದ ಪ್ರತಿ ಹಂತವನ್ನೂ ತೆರೆಗೆ ಅಳವಡಿಸುವುದಾಗಿ ನಿರ್ದೇಶಕ ಇಂದ್ರಜಿತ್ ಹೇಳುತ್ತಾರೆ.

ಶೀರ್ಷಿಕೆ ಪಾತ್ರದಲ್ಲಿ ಬಾಲಿವುಡ್‌ನ ಪ್ರತಿಭಾವಂತ ನಟಿ ರಿಚಾ ಚಡ್ಡಾ ನಟಿಸುತ್ತಿದ್ದಾರೆ. ಮೊದಲು ಸಿನಿಮಾದಲ್ಲಿ ನಟಿಸುವ ಕುರಿತು ಅವರಿಗೆ ಗೊಂದಲವಿತ್ತಂತೆ. “ಕತೆ ಕೇಳಿದಾಗ ಪಾತ್ರ ನಿರ್ವಹಣೆ ಬಗ್ಗೆ ಆತಂಕಪಟ್ಟಿದ್ದೆ. ನಂತರ ನಟಿ ಶಕೀಲಾ ಅವರನ್ನು ಭೇಟಿ ಮಾಡಿ ಅವರೊಟ್ಟಿಗೆ ಕಾಲ ಕಳೆದೆ. ಅವರ ಬದುಕಿನ ಅನುಭವಗಳನ್ನು ಅವರಿಂದಲೇ ಕೇಳಿ ಅರಿಯುವ ಪ್ರಯತ್ನ ಮಾಡಿದ ನಂತರ ಸಿನಿಮಾ ಮಾಡಬಹುದೆನ್ನುವ ವಿಶ್ವಾಸ ಮೂಡಿತು. ಅವರೊಂದಿಗಿನ ಸಂವಾದದಿಂದಾಗಿ ಪಾತ್ರನಿರ್ವಹಣೆಯೂ ಸುಲಭವಾಯ್ತು,” ಎನ್ನುತ್ತಾರೆ ನಟಿ ರಿಚಾ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಸುತ್ತಮುತ್ತಲಿನ ಮಲೆನಾಡಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರೀಕರಣದ ಅವಧಿಯಲ್ಲಿ ಮಳೆಯಿಂದಾಗಿ ತಾಪತ್ರಯ ಪಡುವಂತಾಯಿತು ಎನ್ನುತ್ತಾರೆ ನಿರ್ದೇಶಕರು. “ಮಲೆನಾಡಿನ ವಿವಿಧೆಡೆ ಸುಮಾರು ಇಪ್ಪತ್ತು ದಿನಗಳ ಕಾಲ ಚಿತ್ರೀಕರಣ ನಡೆಸಿದೆವು. ಎಡಬಿಡದೆ ಸುರಿಯುವ ಮಳೆ, ಗಾಳಿಯಿಂದಾಗಿ ಚಿತ್ರೀಕರಣ ಮಾಡುವುದೇ ನಮ್ಮ ಪಾಲಿಗೆ ಸಾಹಸವಾಗಿತ್ತು. ಹದಿನೈದು ನಿಮಿಷಗಳ ಕಾಲ ಮಳೆ ನಿಂತರೂ ಶೂಟ್ ಮಾಡುತ್ತಿದ್ದೆವು. ಮಳೆ ನಿಂತ ಮೇಲೆ ಆವರಿಸಿಕೊಳ್ಳುತ್ತಿದ್ದ ಮಂಜಿನಿಂದಾಗಿ ರಮಣೀಯ ಸನ್ನಿವೇಶಗಳಿಗೆ ನೆರವಾಯ್ತು. ಇಪ್ಪತ್ತು ದಿನಗಳ ಕಾಲ 100ಕ್ಕೂ ಹೆಚ್ಚು ತಂತ್ರಜ್ಞರು ನಮ್ಮ ಜೊತೆ ಕೆಲಸ ಮಾಡಿದ್ದಾರೆ,” ಎನ್ನುತ್ತಾರೆ ಇಂದ್ರಜಿತ್‌.

ಇದನ್ನೂ ಓದಿ : ತೀರ್ಥಹಳ್ಳಿಯಲ್ಲಿ ‘ಶಕೀಲಾ’ ಶೂಟಿಂಗ್‌; ಫಸ್ಟ್‌ಲುಕ್ ಶೇರ್ ಮಾಡಿದ ರಿಚಾ ಛಡ್ಡಾ

ಬೋಲ್ಡ್‌ ಹಾಗೂ ಸವಾಲಿನ ಪಾತ್ರಗಳ ಮೂಲಕ ಬಾಲಿವುಡ್‌ನಲ್ಲಿ ಗುರುತಿಸಿಕೊಂಡಿರುವ ರಿಚಾ ನಟಿಸುತ್ತಿರುವ ಶಕೀಲಾ ಬಯೋಪಿಕ್‌ ಬಗ್ಗೆ ಬಾಲಿವುಡ್‌ ವಲಯದಲ್ಲಿ ಕುತೂಹಲವಿದೆ. ಇತ್ತೀಚೆಗಷ್ಟೇ ರಿಚಾ ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರದ ಲುಕ್‌ಗಳನ್ನು ಶೇರ್ ಮಾಡಿದ್ದರು. ಮಲಯಾಳಂ ನಟ ರಾಜೀವ್ ಪಿಳ್ಳೈ ಶಕೀಲಾರ ಪ್ರಿಯತಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪಂಕಜ್ ತ್ರಿಪಾಠಿ ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

‘ಶಕೀಲಾ’ ಚಿತ್ರದಲ್ಲಿನ ರಿಚಾ ಚಡ್ಡಾ ಫಸ್ಟ್‌ ಲುಕ್‌ ಫೋಟೋಗಳು

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More