‘ಕಮಾಂಡೋ’ ಸಿನಿಮಾ ತೆರೆಗೆ; ಮತ್ತೆ ಚಾಲ್ತಿಗೆ ಬಂದ ಡಬ್ಬಿಂಗ್‌ ಚರ್ಚೆ

ತಮಿಳು ಸಿನಿಮಾ ‘ವಿವೇಕಂ’ ಡಬ್ಬಿಂಗ್ ಕನ್ನಡ ಅವತರಣಿಕೆ ‘ಕಮಾಂಡೋ’ ನಾಳೆ ಬಿಡುಗಡೆಯಾಗುತ್ತಿದೆ. ಈ ಹಿಂದೆ ತೆರೆಕಂಡಿದ್ದ ಡಬ್ಬಿಂಗ್ ಸಿನಿಮಾಗಳಿಗೆ ಗೆಲುವು ಸಿಕ್ಕಿರಲಿಲ್ಲ. ಆದರೆ ಈಗ ಹರಿವು ಕ್ರಿಯೇಷನ್ಸ್‌ ‘ಕಮಾಂಡೋ’ ಚಿತ್ರವನ್ನು 70ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡುತ್ತಿದೆ

ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್‌ ವಿರೋಧಿ ಹೋರಾಟಕ್ಕೆ ದಶಕಗಳ ಇತಿಹಾಸವಿದೆ. ಇತ್ತೀಚಿನ ವರ್ಷಗಳವರೆಗೂ ಡಬ್ಬಿಂಗ್ ಬೇಡ ಎನ್ನುವ ಅಘೋಷಿತ ನಿಯಮ ಚಾಲ್ತಿಯಲ್ಲಿತ್ತು. ಕಳೆದ ಐದಾರು ವರ್ಷಗಳಿಂದೀಚೆಗೆ ಡಬ್ಬಿಂಗ್‌ ಬೇಕು, ಬೇಡ ಎನ್ನುವ ಚರ್ಚೆ ತಾರ್ಕಿಕ ಅಂತ್ಯಕ್ಕೆ ಹೋಗಿದ್ದು ಸರಿಯಷ್ಟೆ. ಈ ಹಿನ್ನೆಲೆಯ ಹೋರಾಟದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡಿದ್ದೂ ಆಗಿದೆ. ವಾಣಿಜ್ಯ ಮಂಡಳಿಗೆ ಡಬ್ಬಿಂಗ್‌ ಸಿನಿಮಾಗಳನ್ನು ತಡೆಯುವ ಹಕ್ಕಿಲ್ಲ ಎಂದಿತ್ತು ನ್ಯಾಯಾಲಯ.

ಕನ್ನಡ ಹೋರಾಟಗಾರರ ಪರ-ವಿರೋಧದ ಮಧ್ಯೆ ಈ ಹಿಂದೆ ತೆರೆಕಂಡಿದ್ದ ಮೂರ್ನಾಲ್ಕು ಡಬ್ಬಿಂಗ್ ಚಿತ್ರಗಳು ಗಮನ ಸೆಳೆದಿರಲಿಲ್ಲ. ನಾಳೆ (ಆ.30) ‘ಕಮಾಂಡೋ’ ಡಬ್ಬಿಂಗ್ ಸಿನಿಮಾ ತೆರೆಕಾಣುತ್ತಿದೆ. 2017ರ ‘ವಿವೇಕಂ’ ತಮಿಳು ಚಿತ್ರದ ಡಬ್‌ ಇದು. ಹರಿವು ಕ್ರಿಯೇಷನ್ಸ್‌ ಡಬ್ಬಿಂಗ್ ಕನ್ನಡ ಅವತರಣಿಕೆಯನ್ನು ಸಿದ್ಧಪಡಿಸಿದೆ. “ವೃತ್ತಿಪರ ತಂಡದಿಂದ ಸಿದ್ಧವಾಗಿರುವ ಸಿನಿಮಾ ರಾಜ್ಯದ 70ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿದೆ. ತಮಗೆ ಕನ್ನಡ ಸಂಘಟನೆಗಳು ಮತ್ತು ಉದ್ಯಮದದವರ ಸಹಕಾರವಿದೆ,” ಎನ್ನುತ್ತಾರೆ ಹರಿವು ಕ್ರಿಯೇಷನ್ಸ್‌ನ ಜೋಷಿ.

‘ಕಮಾಂಡೋ’ ಟ್ರೈಲರ್

“ನಾವು ಸಮಾನಾಸಕ್ತ ಎಂಟು ಯುವಕರು ಹರಿವು ಕ್ರಿಯೇಷನ್ಸ್‌ ಮಾಡಿಕೊಂಡಿದ್ದೇವೆ. ‘ಕಮಾಂಡೋ’ ನಮ್ಮ ಸಂಸ್ಥೆಯ ಮೊದಲ ಪ್ರಯತ್ನ. ಚಿತ್ರಕ್ಕೆ ವೃತ್ತಿಪರ ಡಬ್ಬಿಂಗ್‌ ಕಲಾವಿದರು ಕೆಲಸ ಮಾಡಿದ್ದಾರೆ. ಇತ್ತೀಚೆಗೆ ನಾವು ಬಿಡುಗಡೆ ಮಾಡಿದ ಚಿತ್ರದ ಟ್ರೈಲರ್‌ ಮತ್ತು ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವು ಕನ್ನಡ ಸಂಘಟನೆಗಳು ನಮ್ಮನ್ನು ಬೆಂಬಲಿಸಿದ್ದು, ಇಲ್ಲಿವರೆಗೆ ಯಾರಿಂದಲೂ ವಿರೋಧ ವ್ಯಕ್ತವಾಗಿಲ್ಲ,” ಎನ್ನುತ್ತಾರೆ ಜೋಷಿ. ಡಬ್ಬಿಂಗ್‌ಗೆ ‘ವಿವೇಕಂ’ ತಮಿಳು ಚಿತ್ರವನ್ನು ಆಯ್ಕೆ ಮಾಡಿರುವುದಕ್ಕೂ ಅವರಲ್ಲಿ ಸಕಾರಣಗಳಿವೆ. “ಈ ಚಿತ್ರದ ಸಂಪೂರ್ಣ ಚಿತ್ರೀಕರಣ ವಿದೇಶದಲ್ಲಿ ನಡೆದಿದೆ. ಹಾಗಾಗಿ ನೇಟಿವಿಟಿಯ ಸಮಸ್ಯೆ ಹೆಚ್ಚಾಗಿ ಕಾಡದು. 80 ಕೋಟಿ ಬಜೆಟ್‌ನಲ್ಲಿ ಉತ್ಕೃಷ್ಟ ತಾಂತ್ರಿಕ ಶ್ರೀಮಂತಿಕೆಯೊಂದಿಗೆ ತಯಾರಾಗಿರುವ ಚಿತ್ರವನ್ನು ಕನ್ನಡಿಗರು ಕನ್ನಡದಲ್ಲೇ ನೋಡುವಂತಾಗಲಿ ಎನ್ನುವುದು ನಮ್ಮ ಉದ್ದೇಶ,” ಎನ್ನುತ್ತಾರವರು.

ಡಬ್ಬಿಂಗ್ ಪರವಾಗಿ ಆರಂಭದಿಂದಲೂ ಹೋರಾಟ ನಡೆಸಿಕೊಂಡು ಬಂದಿರುವ ಕನ್ನಡ ಗ್ರಾಹಕರ ಕೂಟದವರು ಈ ಬೆಳವಣಿಗೆಯನ್ನು ಸ್ವಾಗತಿಸಿದ್ದಾರೆ. ಗ್ರಾಹಕರ ಕೂಟದ ಆನಂದ್ ಮಾತನಾಡಿ, “ಇದು ಸ್ವಾಗತಾರ್ಹ ಬೆಳವಣಿಗೆ. ಜಗತ್ತಿನ ವಿವಿಧ ಭಾಷೆಗಳ ಉತ್ತಮ ಪ್ರಯೋಗಗಳು ಕನ್ನಡ ಭಾಷೆಯಲ್ಲೇ ಕನ್ನಡಿಗರಿಗೆ ಸಿಗಬೇಕೆನ್ನುವುದು ನಮ್ಮ ಆಶಯ. ಡಬ್ಬಿಂಗ್ ವಿರೋಧಿಸಿದವರು ನ್ಯಾಯಾಲಯದ ಛೀಮಾರಿಗೆ ಒಳಗಾಗಿದ್ದಾರೆ. ಡಬ್ಬಿಂಗ್‌ ತಡೆಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಕೂಡ ಅನುಮೋದಿಸಿದೆ,” ಎನ್ನುತ್ತಾರೆ.

ಇದನ್ನೂ ಓದಿ : ವಿಡಿಯೋ ಸ್ಟೋರಿ | ಶಕೀಲಾ ಜೊತೆ ಮಾತನಾಡಿದ ನಂತರವೇ ಪಾತ್ರ ಒಪ್ಪಿದ್ದ ರಿಚಾ

ನಟ, ನಿರ್ದೇಶಕ, ನಿರ್ಮಾಪಕ ಬಿ ಸುರೇಶ್‌ ಹಿಂದಿನಿಂದಲೂ ಡಬ್ಬಿಂಗ್ ವಿರೋಧಿಸಿದವರು. ಪ್ರೇಕ್ಷಕರ ಆಯ್ಕೆ ಸ್ವಾತಂತ್ರ್ಯದ ಬಗ್ಗೆ ಅವರಿಗೆ ಸಹಮತವಿದ್ದರೂ ಡಬ್ಬಿಂಗ್‌ನಿಂದ ಸಿನಿಮಾ ಕಲೆ ನಾಶವಾಗುತ್ತದೆ ಎನ್ನುತ್ತಾರೆ. “ವೈಯಕ್ತಿಕವಾಗಿ ಈ ಬೆಳವಣಿಗೆಯ ಬಗ್ಗೆ ನನಗೆ ಅಸಮಾಧಾನವಿದೆ. ಯಾರದೋ ದೇಹಕ್ಕೆ ಮತ್ಯಾರದ್ದೋ ಧ್ವನಿ, ಪ್ರಾದೇಶಿಕತೆಯ ಸೊಗಡಿಲ್ಲದ ಡಬ್ಬಿಂಗ್ ಸಿನಿಮಾಗಳು ಕಲೆಯನ್ನು ಕೊಲ್ಲುತ್ತವೆ,” ಎನ್ನುವ ಅವರಿಗೆ ಉದ್ಯಮದ ದೃಷ್ಟಿಯಿಂದಲೂ ಇದು ಅಪಾಯಕಾರಿ ಎನಿಸಿದೆ. “ಪ್ರಸ್ತುತ ವರ್ಷಕ್ಕೆ ಸುಮಾರು ಇನ್ನೂರಕ್ಕೂ ಹೆಚ್ಚು ಕನ್ನಡ ಸಿನಿಮಾಗಳು ತೆರೆಕಾಣುತ್ತಿವೆ. ನಮ್ಮ ಸಿನಿಮಾಗಳಿಗೆ ಸರಿಯಾಗಿ ಥಿಯೇಟರ್‌ಗಳು ಸಿಗುತ್ತಿಲ್ಲ. ಡಬ್ಬಿಂಗ್ ಸಿನಿಮಾಗಳಿಂದ ಈ ಸಮಸ್ಯೆ ಹೆಚ್ಚಲಿದೆ,” ಎನ್ನುತ್ತಾರೆ ಬಿ ಸುರೇಶ್‌.

ಹಿರಿಯ ಸಿನಿಮಾ ಪ್ರದರ್ಶಕ ಚಂದ್ರಶೇಖರ್ ಈ ಕುರಿತು ಮಾತನಾಡುತ್ತ, “ಡಬ್ಬಿಂಗ್ ವಿಚಾರ ಕರ್ನಾಟಕ ವಾಣಿಜ್ಯ ಮಂಡಳಿ ನಿಯಂತ್ರಣದಲ್ಲಿಲ್ಲ. ಸೆನ್ಸಾರ್ ಆಗಿ ಅಧಿಕೃತವಾಗಿ ಈ ಚಿತ್ರ ಬಿಡುಗಡೆಯಾಗುತ್ತಿದೆ,” ಎನ್ನುತ್ತಾರೆ. ಕಮಾಂಡೋ’ ಸಿನಿಮಾ ಸೂಕ್ತ ಸಿದ್ಧತೆಗಳೊಂದಿಗೆ ಬಿಡುಗಡೆಯಾಗುತ್ತಿದೆ. ಈ ಬಾರಿ ಹೆಚ್ಚಿನ ವಿರೋಧವೂ ವ್ಯಕ್ತವಾಗುತ್ತಿಲ್ಲ. ಸಿನಿಮಾಗೆ ಸಿಗುವ ಪ್ರತಿಕ್ರಿಯೆ ಡಬ್ಬಿಂಗ್‌ ಉದ್ಯಮಕ್ಕೆ ದಿಕ್ಸೂಚಿಯಾಗಲಿದೆ.

‘ವಿವೇಕಂ’ (2017) ತಮಿಳು ಚಿತ್ರದ ಟ್ರೈಲರ್‌

ಕಮಾಂಡೋ: ಶಿವಾ ನಿರ್ದೇಶನದಲ್ಲಿ ಅಜಿತ್‌ ಅಭಿನಯಿಸಿರುವ ‘ವಿವೇಕಂ’ ತಮಿಳು ಚಿತ್ರದ ಡಬ್ಬಿಂಗ್ ಕನ್ನಡ‌ ಅವತರಣಿಕೆ ‘ಕಮಾಂಡೋ.’ ಕಾಜಲ್ ಅಗರ್‌ವಾಲ್ ನಾಯಕಿಯಾಗಿ ನಟಿಸಿದ್ದು, ಖಳ ಪಾತ್ರದಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್‌ ಇದ್ದಾರೆ. ಅನಿರುದ್ಧ ರವಿಚಂದ್ರನ್‌ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಪ್ರಸನ್ನ ರಾಮಲತಾ ‘ಕಮಾಂಡೋ’ ಡಬ್ಬಿಂಗ್‌ ಅವತರಣಿಕೆ ನಿರ್ದೇಶಕ. ಪುನೀತ್‌, ಸ್ಪರ್ಷ, ಉಮಾ, ಶಿಲ್ಪಾ, ಅಜಿತ್ ವಿವೇಕ್‌, ಅನ್ವಿತಾ, ಲಕ್ಷ್ಮೀ ವಿಜಯ್‌, ಚಿಂತನ್ ವಿಕಾಸ್‌, ಸಚಿನ್‌ ಡಬ್ಬಿಂಗ್ ಕಲಾವಿದರು. ರಾಜು ಹೊಸಹಟ್ಟಿ, ನವೀನ್‌ ಪ್ರಮೋದ್ ಜೋಯಿಸ್‌ ಗೀತಸಾಹಿತ್ಯ ರಚಿಸಿದ್ದು; ಸ್ಪರ್ಶ, ಲಕ್ಷ್ಮೀ ವಿಜಯ್‌, ಸಂತೋಶ್ ಶೇಷಗಿರಿ, ಅಶ್ವಿನಿ, ಚಿಂತನ್ ವಿಕಾಸ್‌, ಅರುಂಧತಿ, ಮನೋಜ್ ವಸಿಷ್ಠ ಹಾಡಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More