‘ಮಿತ್ರೋ’ ಶೀರ್ಷಿಕೆಗೂ ಮೋದಿಗೂ ಸಂಬಂಧವಿಲ್ಲ ಎಂದ ನಿರ್ದೇಶಕ ನಿತಿನ್

ನಿತಿನ್ ಕಕ್ಕರ್ ನಿರ್ದೇಶನದ ಹಿಂದಿ ಸಿನಿಮಾ ‘ಮಿತ್ರೋ’ ಶೀರ್ಷಿಕೆಯ ಕಾರಣಕ್ಕೆ ವಿವಾದಕ್ಕೀಡಾಗಿದೆ. ತಮ್ಮ ಭಾಷಣಗಳಲ್ಲಿ ಪ್ರಧಾನಿ ಮೋದಿ ಅವರು ಹೆಚ್ಚು ಬಳಕೆ ಮಾಡುವ ಪದವಿದು. ಆದರೆ, ಚಿತ್ರದ ಶೀರ್ಷಿಕೆಗೂ, ಮೋದಿ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ

ನಿತಿನ್ ಕಕ್ಕರ್ ನಿರ್ದೇಶನದಲ್ಲಿ ಜಾಕಿ ಭಗ್ನಾನಿ ಮತ್ತು ಕೃತಿ ಕಮ್ರಾ ನಟಿಸಿರುವ ‘ಮಿತ್ರೋ’ ಹಿಂದಿ ಸಿನಿಮಾ ವಿವಾದಕ್ಕೀಡಾಗಿದೆ. ಚಿತ್ರದ ಶೀರ್ಷಿಕೆಯ ಕುರಿತಾಗಿ ಹಲವರು ತಕರಾರು ತೆಗೆದಿದ್ದಾರೆ. ಭಾಷಣಗಳಲ್ಲಿ ಪ್ರಧಾನಿ ಮೋದಿ ಉಚ್ಛರಿಸುವ ಜನಪ್ರಿಯ ಪದ ಇದು. ಈ ಶೀರ್ಷಿಕೆಯಡಿ ತಯಾರಾಗಿರುವ ಸಿನಿಮಾದಲ್ಲಿ ತಮ್ಮ ನೆಚ್ಚಿನ ನಾಯಕ ಮೋದಿ ಕುರಿತ ವಿಷಯ ಇರಬಹುದು ಎನ್ನುವ ಗುಮಾನಿ ಕೆಲವರದ್ದು. ನಿರ್ದೇಶಕ ನಿತಿನ್ ಇದಕ್ಕೆ ಸ್ಪಷ್ಟೀಕರಣ ನೀಡಿದ್ದಾರೆ. ತಮ್ಮ ಸಿನಿಮಾದ ಶೀರ್ಷಿಕೆಗೂ, ಪ್ರಧಾನಿ ಮೋದಿಯವರಿಗೂ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲ ಎಂದಿದ್ದಾರವರು.

“ಸ್ನೇಹಿತರ ಕತೆಯ ಸಿನಿಮಾ ಗುಜರಾತ್‌ನಲ್ಲಿ ನಡೆಯುತ್ತದೆ. ಹಾಗಾಗಿ ಕಾಸ್ಟ್ಯೂಮ್‌, ಸೆಟ್‌ಗಳು, ಸಂಭಾಷಣೆ ಎಲ್ಲವೂ ಆ ನೆಲಕ್ಕೆ ಹೊಂದಿಕೆಯಾಗುವಂತೆ ನೋಡಿಕೊಂಡಿದ್ದೇವೆ. ಅದೇ ರೀತಿ, ಸ್ನೇಹಿತರನ್ನು ಗುಜರಾತಿ ಭಾಷೆಯಲ್ಲಿ ಮಿತ್ರೋ ಎಂದು ಅನುಮೋದಿಸುತ್ತಾರೆ. ಅದೇ ಚಿತ್ರದ ಶೀರ್ಷಿಕೆಯಾಗಿದೆ. ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಸ್ತಾಪವಿಲ್ಲ. ಅವರ ಹೆಸರು ಬಳಕೆ ಮಾಡಿಕೊಂಡು ಪ್ರಚಾರ ಪಡೆಯುವ ಉದ್ದೇಶವೂ ನಮಗಿಲ್ಲ. ಮೋದಿ ಮತ್ತು ಅವರ ಸ್ಥಾನದ ಬಗ್ಗೆ ನಮಗೆ ಗೌರವವಿದೆ,” ಎನ್ನುತ್ತಾರೆ ನಿರ್ದೇಶಕ ನಿತಿನ್‌.

‘ಮಿತ್ರೋ’ ಟ್ರೈಲರ್‌

‘ಫಿಲ್ಮಿಸ್ತಾನ್‌’ ಸಿನಿಮಾ ಖ್ಯಾತಿಯ ನಿರ್ದೇಶಕ ನಿತಿನ್ ಕಕ್ಕರ್‌ ಅವರ ‘ಮಿತ್ರೋ’, ‘ಪೆಳ್ಳಿ ಚೂಪುಲು’ ತೆಲುಗು ಸಿನಿಮಾದ ರೀಮೇಕ್‌. ‘ಮಿತ್ರೋ’ ಚಿತ್ರದ ಕುರಿತು ವಿವಾದ ಅನಗತ್ಯ ಎಂದೇನೋ ನಿರ್ದೇಶಕರು ಹೇಳುತ್ತಾರೆ. ಆದರೆ, ಚಿತ್ರದ ಟ್ರೈಲರ್‌ನಲ್ಲಿನ ಸಂಭಾ‍ಷಣೆಯೊಂದರಲ್ಲಿ ಪ್ರಧಾನಿ ಮೋದಿ ಅವರ ಪ್ರಸ್ತಾಪವಾಗುತ್ತದೆ. ಹಾಗಾಗಿ, ಚಿತ್ರದ ಬಿಡುಗಡೆಯ ನಂತರವೇ ಸತ್ಯಾಂಶ ತಿಳಿಯಲಿದೆ. “ಒಂದು ಭಾಷೆಯಲ್ಲಿ ತೆರೆಕಂಡ ಚಿತ್ರವನ್ನು ರೀಮೇಕ್ ಮಾಡುವಾಗ ನೇಟಿವಿಟಿಯ ಸವಾಲು ಎದುರಾಗುತ್ತದೆ. ನಾನು ಮಾಡುವ ಸ್ಕ್ರಿಪ್ಟ್‌ ತಾಜಾ ಆಗಿರುತ್ತದೆ,” ಎನ್ನುವ ನಿತಿನ್‌ ಚಿತ್ರಕತೆ ಬದಲಾಯಿಸಿರುವ ಸೂಚನೆ ನೀಡುತ್ತಾರೆ.

ಇದನ್ನೂ ಓದಿ : ವಿಡಿಯೋ ಸಾಂಗ್‌ | ಶಾಹೀದ್, ಶ್ರದ್ಧಾ ಕಪೂರ್‌ ‘ಹಾರ್ಡ್‌ ಹಾರ್ಡ್‌’ ಡಾನ್ಸ್

ಸಾಮಾನ್ಯವಾಗಿ ವ್ಯಾವಹಾರಿಕ ದೃಷ್ಟಿಯಿಂದ ರಿಮೇಕ್ ಸಿನಿಮಾಗಳು ಸೇಫ್ ಎನ್ನುವ ಲೆಕ್ಕಾಚಾರವಿದೆ. ಆದರೆ, “ಸೇಫ್ ಸಿನಿಮಾ ಮಾಡುವ ಯಾವುದೇ ಫಾರ್ಮುಲಾ ಇಲ್ಲ,” ಎನ್ನುವುದು ನಿರ್ದೇಶಕ ನಿತಿನ್‌ರ ಅಭಿಪ್ರಾಯ. “ಸೇಫ್‌ ಕಂಟೆಂಟ್‌ ಎನ್ನುವುದೇ ಸುಳ್ಳು. ಚಿತ್ರಕತೆ ಸದೃಢವಾಗಿದ್ದರೆ ಮಾತ್ರ ಸಿನಿಮಾ ಮಾಡಬೇಕು. ಗೆಲುವಿನ ಗ್ಯಾರಂಟಿ ಎಂದಿಗೂ ಇರುವುದಿಲ್ಲ. ಕಠಿಣ ಪರಿಶ್ರಮ ಮುಖ್ಯ,” ಎನ್ನುತ್ತಾರವರು. ಜಾಕಿ ಭಗ್ನಾನಿ ಮತ್ತು ಕೃತಿಕಾ ಕಮ್ರಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ ಸೆಪ್ಟೆಂಬರ್‌ 14ರಂದು ತೆರೆಕಾಣಲಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More