ವಿಡಿಯೋ | ಎಸ್‌ ಜೆ ಸೂರ್ಯ ಜೊತೆ ಕಾಲಿವುಡ್‌ ಪ್ರವೇಶಿಸಿದ ಅಮಿತಾಭ್‌ ಬಚ್ಚನ್

ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ‘ಉಯರಾಂಧ ಮನಿಧನ್‌’ ಚಿತ್ರದೊಂದಿಗೆ ಕಾಲಿವುಡ್ ಪ್ರವೇಶಿಸುತ್ತಿದ್ದಾರೆ. ಈ ಚಿತ್ರದ ಪೋಸ್ಟರ್‌ ಅನ್ನು ತಮಿಳಿನ ಹಿರಿಯ ನಟ ರಜನೀಕಾಂತ್‌ ರಿಲೀಸ್ ಮಾಡಿದ್ದು, ನಟ ಎಸ್ ಜೆ ಸೂರ್ಯ ಟ್ವಿಟರ್‌ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ

‘ಉಯರಾಂಧ ಮನಿಧನ್‌’ ತಮಿಳು ಚಿತ್ರದೊಂದಿಗೆ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್‌ ಕಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ತಮಿಳು, ಹಿಂದಿ ಎರಡೂ ಭಾಷೆಗಳಲ್ಲಿ ತಯಾರಾಗಲಿರುವ ಈ ಚಿತ್ರದ ನಿರ್ದೇಶಕ ಥಾ ತಮಿಳ್‌ವಾನನ್‌. ತಮಿಳು ನಟ ಎಸ್ ಜೆ ಸೂರ್ಯ ಚಿತ್ರದಲ್ಲಿ ಅಮಿತಾಭ್‌ ಜೊತೆ ನಟಿಸುತ್ತಿದ್ದಾರೆ. ಹಿರಿಯ ನಟ ರಜನೀಕಾಂತ್ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.

ರಜನೀಕಾಂತ್‌ ಪೋಸ್ಟರ್ ಅನಾವರಣಗೊಳಿಸಿರುವ ವಿಡಿಯೋವನ್ನು ನಟ ಸೂರ್ಯ ತಮ್ಮ ಟ್ವಿಟರ್ ಖಾಲೆಯಲ್ಲಿ ಶೇರ್ ಮಾಡಿ, “ಅಮಿತಾಭ್ ಬಚ್ಚನ್‌ ಅವರೊಂದಿಗೆ ನಾನು ಬಾಲಿವುಡ್ ಪ್ರವೇಶಿಸಿರುವುದು ಹೆಮ್ಮೆ ತಂದಿದೆ. ಈ ಅವಕಾಶಕ್ಕೆ ಕಾರಣವಾಗಿರುವ ‘ಉಯರಾಂಧ ಮನಿಧನ್‌’ ಚಿತ್ರತಂಡಕ್ಕೆ ವಂದನೆ. ಪೋಸ್ಟರ್‌ ಬಿಡುಗಡೆ ಮಾಡಿದ ನಮ್ಮ ಸೂಪರ್‌ಸ್ಟಾರ್ ರಜನೀಕಾಂತ್‌ ಅವರಿಗೆ ಧನ್ಯವಾದ,” ಎಂದಿದ್ದಾರೆ.

ನಿರ್ದೇಶಕ ತಮಿಳ್‌ವಾನನ್ ಚಿತ್ರಕತೆ ರಚನೆಗೆ ಎರಡು ವರ್ಷ ವ್ಯಯಿಸಿದ್ದಾರೆ. ಉತ್ತಮ ಕತೆಯ ಕಾರಣಕ್ಕೆ ಅಮಿತಾಭ್ ಚಿತ್ರದಲ್ಲಿ ನಟಿಸಲು ಒಪ್ಪಿದ್ದಾರೆ ಎನ್ನಲಾಗಿದೆ. ‌ತಮಿಳು ಚಿತ್ರದಲ್ಲಿ ನಟಿಸುತ್ತಿರುವ ಬಚ್ಚನ್‌ರನ್ನು ರಜನೀಕಾಂತ್‌ ಕಾಲಿವುಡ್‌ಗೆ ಸ್ವಾಗತಿಸಿದ್ದು, “ನನ್ನ ಸ್ನೇಹಿತ ಅಮಿತಾಭ್ ಬಚ್ಚನ್ ತಮಿಳು ಚಿತ್ರದಲ್ಲಿ ನಟಿಸುತ್ತಿರುವುದು ತಮಿಳು ಚಿತ್ರರಂಗಕ್ಕೆ ಹೆಮ್ಮೆಯ ವಿಷಯ. ಚಿತ್ರದೊಂದಿಗೆ ಸೂರ್ಯ ಬಾಲಿವುಡ್‌ ಪ್ರವೇಶಿಸುತ್ತಿರುವುದು ಸಂತಸದ ವಿಷಯ. ಚಿತ್ರತಂಡಕ್ಕೆ ಒಳ್ಳೆಯದಾಗಲಿ,” ಎಂದು ಹಾರೈಸಿದ್ದಾರೆ.

ಇದನ್ನೂ ಓದಿ : ಟ್ರೈಲರ್‌ | ಪೃಥ್ವಿರಾಜ್‌ ನಟನೆಯ ಆಕ್ಷನ್ ಡ್ರಾಮಾ ಮಲಯಾಳಂ ಸಿನಿಮಾ ‘ರಣಂ’

‘ಉಯರಾಂಧ ಮನಿಧನ್‌’ ಎಂದರೆ, ‘ಎತ್ತರದ ಮನುಷ್ಯ’ ಎನ್ನುವ ಅರ್ಥವಿದೆ. ಬಹುಶಃ ಇದು ಅಮಿತಾಭ್ ಪಾತ್ರವನ್ನು ಗಮನದಲ್ಲಿ ಇಟ್ಟುಕೊಂಡು ಸೃಷ್ಟಿಸಿರುವ ಶೀರ್ಷಿಕೆ. ಉನ್ನತ ವ್ಯಕ್ತಿತ್ವದ ಮನುಷ್ಯ ಎನ್ನುವ ಅರ್ಥವನ್ನೂ ಇದು ಧ್ವನಿಸುತ್ತದೆ. ಎಸ್ ಜೆ ಸೂರ್ಯ ಅವರ ಚಿತ್ರಕ್ಕೆ ಕಾಲಿವುಡ್‌ನ ಪ್ರಮುಖರನೇಕರು ಟ್ವೀಟ್‌ಗಳೊಂದಿಗೆ ಶುಭ ಹಾರೈಸಿದ್ದಾರೆ. ಕಾಲಿವುಡ್‌ನ ಖ್ಯಾತ ನಿರ್ದೇಶಕರಾದ ಅಟ್ಲೀ, ಎ ಆರ್ ಮುರುಘದಾಸ್‌ ಮತ್ತಿತರರು ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More