ಸ್ಮರಣೆ | ‘ಚಿತ್ರಸಾಹಿತಿ ಗೋಟೂರಿ ಅವರ ದೇಹಕ್ಕೆ ವಯಸ್ಸಾಗಿತ್ತು, ಮನಸ್ಸಿಗಲ್ಲ’

ಚಿತ್ರಸಾಹಿತಿ ಗೋಟೂರಿ ನಿನ್ನೆ (ಆ.30) ಸಂಜೆ ಅಗಲಿದ್ದಾರೆ. ದಶಕಗಳ ಕಾಲ ಕಿರುತೆರೆ, ಸಿನಿಮಾಗೆ ಬರವಣಿಗೆ ಮಾಡಿದ್ದ ಗೋಟೂರಿ ರಚನೆಯ ಹಾಡುಗಳು ಜನಪ್ರಿಯವಾಗಿವೆ. ಆಪ್ತರೊಬ್ಬರನ್ನು ಕಳೆದುಕೊಂಡಿದ್ದೇನೆ ಎನ್ನುವ ಸಂಗೀತ ನಿರ್ದೇಶಕ ಗುರುಕಿರಣ್, ಗೋಟೂರಿ ಅವರನ್ನು ಸ್ಮರಿಸಿದ್ದಾರೆ

ತೊಂಬತ್ತರ ದಶಕದ ಆರಂಭದಲ್ಲಿ ಚಿತ್ರರಂಗಕ್ಕೆ ಕಾಲಿಟ್ಟಾಗ ನನಗಿಲ್ಲಿ ಹೆಚ್ಚಿನ ಸಂಪರ್ಕಗಳಿರಲಿಲ್ಲ. ಅವಕಾಶಗಳಿಗಾಗಿ ಹಂಬಲಿಸುತ್ತಿದ್ದಾಗ ಗೋಟೂರಿ ನೆರವಾಗಿದ್ದರು. ಆ ವೇಳೆಗೆ ಅವರು ಕಿರುತೆರೆ, ಸಿನಿಮಾರಂಗದಲ್ಲಿ ಬೇಡಿಕೆಯ ಬರಹಗಾರ. ತಮಗೆ ಗೊತ್ತಿರುವವರಿಗೆ ನನ್ನನ್ನು ಶಿಫಾರಸು ಮಾಡುತ್ತಿದ್ದರು. ನಿಧಾನವಾಗಿ ನನಗೆ ಅವಕಾಶಗಳು ಬರತೊಡಗಿದವು. ನನ್ನ ಬೆಳವಣಿಗೆಯ ಹಾದಿಯಲ್ಲಿ ಅವರ ನೆರವು ದೊಡ್ಡದು. ವಯಸ್ಸಿನಲ್ಲಿ ಹಿರಿಯರಾದರೂ ಆತ್ಮೀಯ ಸ್ನೇಹಿತರಂತಿದ್ದರು. ಅವರ ರಚನೆ ಮತ್ತು ನನ್ನ ಸಂಗೀತ ಸಂಯೋಜನೆಯ ಹಲವಾರು ಹಾಡುಗಳು ಜನಪ್ರಿಯತೆ ಗಳಿಸಿವೆ.

ನಾನು ನೋಡಿದಂತೆ ಅವರು ತುಂಬಾ ವೇಗವಾಗಿ ಬರೆಯುತ್ತಿದ್ದರು. ‌ಕನ್ನಡ ಕಿರುತೆರೆಯಲ್ಲಿ ಧಾರಾವಾಹಿಗಳ ಭರಾಟೆ ಆರಂಭವಾದಾಗ ಹೆಚ್ಚಿನ ಧಾರಾವಾಹಿಗಳಿಗೆ ಇವರೇ ಬರೆಯುತ್ತಿದ್ದರು. ಅವರಾಗ ಸ್ಟಾರ್ ರೈಟರ್‌. ತೊಂಬತ್ತರ ದಶಕದಲ್ಲಿ ಕೆಸೆಟ್‌ ಮಾರುಕಟ್ಟೆ ತುಂಬಾ ದೊಡ್ಡದಾಗಿತ್ತು. ಜನಪದಗೀತೆ, ಭಕ್ತಿಗೀತೆ ಕೆಸೆಟ್‌ಗಳಿಗೆ ಸಿಕ್ಕಾಪಟ್ಟೆ ಡಿಮಾಂಡ್‌. ಆಗ ಗೋಟೂರಿ ದಿನಕ್ಕೊಂದು ಕೆಸೆಟ್‌ಗೆ ಹಾಡು ಬರೆಯುತ್ತಿದ್ದರು. ದಿನವೊಂದರಲ್ಲಿ ಏಳೆಂಟು ಹಾಡುಗಳನ್ನು ಸಲೀಸಾಗಿ ಬರೆಯುತ್ತಿದ್ದರು. ಹೆಚ್ಚಿನ ಓದು, ಜೀವನಾನುಭವದಿಂದ ಮಾತ್ರ ಇದು ಸಾಧ್ಯವಾಗುವಂಥದ್ದು.

ಗೋಟೂರಿ ರಚನೆಯ ‘ಆಪ್ತಮಿತ್ರ’ ಚಿತ್ರದ ಜನಪ್ರಿಯ ‘ರಾ ರಾ’ ಹಾಡು

ನನ್ನ ಸಂಗೀತ ಸಂಯೋಜನೆಗೆ ಅವರು ಬರೆದ ‘ಆಪ್ತಮಿತ್ರ’ ಚಿತ್ರದ ‘ರಾ ರಾ’ ಹಾಡು ತುಂಬಾ ಜನಪ್ರಿಯ. ನಾನು ಮೊದಲು ಟ್ಯೂನ್ ಮಾಡಿದ್ದೆ. ತೆಲುಗು ಗೊತ್ತಿದ್ದ ಅವರು (ತೆಲುಗು ಅವರ ಮಾತೃಭಾಷೆ) ಕನ್ನಡ ಮತ್ತು ತೆಲುಗು ಎರಡೂ ಅವತರಣಿಕೆಗಳಿಗೆ ಹಾಡು ಬರೆದುಕೊಟ್ಟರು. ನನ್ನ ಸಂಯೋಜನೆಗೆ ಅವರು ಬರೆದ ‘ಜ್ವಾಪಾನ ರಾತ್ರಿಯಾಯ್ತು’ (ರಾಮ ಶಾಮ ಭಾಮ) ವೈಯಕ್ತಿಕವಾಗಿ ನನಗೆ ತುಂಬಾ ಇಷ್ಟವಾದ ಹಾಡು. ಅವರ ಹಾಡುಗಳಲ್ಲಿ ತಾಜಾತನವಿರುತ್ತಿತ್ತು. ದೇಹಕ್ಕೆ ವಯಸ್ಸಾಗಿದ್ದರೂ ಅವರ ಮನಸ್ಸಿನ್ನೂ ಹರೆಯದವರಂತೆ. ಯುವ ಪೀಳಿಗೆಯ ನಾಡಿಮಿಡಿತ ಅರಿತು ಬರೆಯುತ್ತಿದ್ದರು.

ಇದನ್ನೂ ಓದಿ : ವಿಡಿಯೋ ಸ್ಟೋರಿ | ಶಕೀಲಾ ಜೊತೆ ಮಾತನಾಡಿದ ನಂತರವೇ ಪಾತ್ರ ಒಪ್ಪಿದ್ದ ರಿಚಾ

ಅವರನ್ನು ಕನ್ನಡ ಚಿತ್ರರಂಗ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲಿಲ್ಲವೇನೋ ಎನಿಸುತ್ತದೆ. ಬರಹಗಾರರಾಗಿ ಮಾತ್ರವಲ್ಲದೆ ನಟನಾಗಿಯೂ ಅವರು ಜನರಿಗೆ ಪರಿಚಿತರಾಗಿದ್ದರು. ಉತ್ತಮ ವ್ಯಕ್ತಿಯಾಗಿ ಕೂಡ ಅವರು ಮಾದರಿ. ತೊಂದರೆಯಲ್ಲಿದ್ದವರಿಗೆ ಸಂತೈಸಿ ಕೈಲಾದ ನೆರವು ನೀಡುವ ಮನೋಭಾವ. ಸಿನಿಮಾ ಉದ್ಯಮದಲ್ಲಿ ಮೋಸ ಮಾಡುವ ಖಯಾಲಿ ಹೆಚ್ಚಿನವರಿಗಿದೆ; ಗೋಟೂರಿ ಕೂಡ ಹಲವರಿಂದ ಮೋಸಹೋಗಿದ್ದರು. ಅವರಿಂದ ಬರೆಸಿಕೊಂಡು ಸಂಭಾವನೆ ಕೊಡದ ಎಷ್ಟೋ ಉದಾಹರಣೆಗಳಿವೆ. ಆದರೆ, ಗೋಟೂರಿ ಎಂದೂ ಅಂತಹವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದನ್ನು ನಾನಂತೂ ನೋಡಿಲ್ಲ. ಮೋಸ ಮಾಡಿದವರನ್ನೂ, ಮೋಸಹೋದದ್ದನ್ನೂ ಮರೆತು ಸುಮ್ಮನಾಗುತ್ತಿದ್ದರು.

ಗೋಟೂರಿ ರಚನೆಯ ‘ಚೆಲ್ಲಾಟ’ ಚಿತ್ರದ ‘ಅಲೆಲೆ ತುಂಟ ಕಣ್ಣ ಸುಂದರಿ’ ಹಾಡು

ನಟ ಕೂಡ ಹೌದು: ಗೋಟೂರಿ ಎಂದೇ ಹೆಸರಾಗಿದ್ದ ಅವರ ಪೂರ್ತಿ ಹೆಸರು ಪಶುಪತಿ ಪ್ರಸಾದ್ ಗೋಟೂರಿ. ಮಾತೃಭಾಷೆ ತೆಲುಗು ಅದರೂ ಕನ್ನಡದ ಬಗೆಗಿನ ಅವರ ಪಾಂಡಿತ್ಯ ಅಗಾಧವಾಗಿತ್ತು. ಸಾಹಿತ್ಯವನ್ನು ಚೆನ್ನಾಗಿ ಓದಿಕೊಂಡಿದ್ದರು. ಚಿತ್ರಕತೆ, ಗೀತರಚನೆಯೊಂದಿಗೆ ನಟನಾಗಿಯೂ ಅವರು ಧಾರಾವಾಹಿ, ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಉಪೇಂದ್ರ ನಟಿಸಿ, ನಿರ್ದೇಶಿಸಿದ್ದ ‘ಶ್‌!’ ಸಿನಿಮಾದಲ್ಲಿ ನಾಯಕಿಯ ತಂದೆಯ ಪಾತ್ರದಲ್ಲಿ ಗಮನ ಸೆಳೆದಿದ್ದು. ‘ಮಠ’, ‘ಅಜಗಜಾಂತರ’ ಸೇರಿದಂತೆ ಹತ್ತಾರು ಸಿನಿಮಾಗಳಲ್ಲಿ ನಟಿಸಿದ್ದ ಅವರಿಗೆ ಸಿನಿಮಾ ನಿರ್ದೇಶಿಸುವ ಬಯಕೆ ಇತ್ತು. ಕತೆ ಮಾಡಿಕೊಂಡಿದ್ದರೂ ನಿರ್ಮಾಪಕರು ಸಿಗದೆ ಅವರ ನಿರ್ದೇಶನದ ಕನಸು ಕೈಗೂಡಲಿಲ್ಲ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More