‘ವಿಲನ್’ ಚಿತ್ರಕ್ಕೆ ಎ ಸರ್ಟಿಫಿಕೆಟ್; ಮಂಡಳಿ ವಿರುದ್ಧ ನಿರ್ದೇಶಕ ಪ್ರೇಮ್ ಗರಂ

ನಿರ್ದೇಶಕ ಪ್ರೇಮ್‌ ಸೆನ್ಸಾರ್ ಮಂಡಳಿ ವಿರುದ್ಧ ಕೋಪ ಮಾಡಿಕೊಂಡಿದ್ದಾರೆ. ತಮ್ಮ ‘ದಿ ವಿಲನ್‌’ ಚಿತ್ರಕ್ಕೆ ಮಂಡಳಿಯು ‘ಎ’ ಸರ್ಟಿಫಿಕೇಟ್‌ ಕೊಟ್ಟಿದೆ ಎನ್ನುವುದು ಇದಕ್ಕೆ ಕಾರಣ. ಜಿಎಸ್‌ಟಿಯಂತೆಯೇ ದೇಶವಿಡೀ ಏಕೆ ಒಂದೇ ಸೆನ್ಸಾರ್ ನೀತಿ ಇರಬಾರದು ಎಂದು ಅವರು ಪ್ರಶ್ನಿಸಿದ್ದಾರೆ

ಪ್ರೇಮ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ‘ದಿ ವಿಲನ್‌’ಗೆ ಸೆನ್ಸಾರ್‌ನಿಂದ ಸಂಕಷ್ಟ ಎದುರಾಗಿದೆ. ಚಿತ್ರ ವೀಕ್ಷಿಸಿರುವ ಸೆನ್ಸಾರ್ ಮಂಡಳಿ ಸದಸ್ಯರು, ‘ಎ’ ಸರ್ಟಿಫಿಕೇಟ್ ಕೊಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ನಿರ್ದೇಶಕ ಪ್ರೇಮ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ನಮ್ಮ ಚಿತ್ರದಲ್ಲಿ ಎ ಸರ್ಟಿಫೈ ಮಾಡುವಂಥ ಸನ್ನಿವೇಶಗಳೇನಿಲ್ಲ. ಅಶ್ಲೀಲ, ಕ್ರೈಂ ತೋರಿಸಿಲ್ಲ. ಚಿತ್ರಕತೆಗೆ ಪೂರಕವಾಗುವಂತಹ ಸನ್ನಿವೇಶಗಳಿಗೆ ಸೆನ್ಸಾರ್ ಪ್ರಶ್ನಿಸಿದೆ. ನಮಗೆ ಅವರ ನಿಲುವು ಸಮಂಜಸವೆನಿಸಿಲ್ಲ,” ಎನ್ನುತ್ತಾರೆ ಪ್ರೇಮ್‌.

ಚಿತ್ರಕ್ಕೆ ‘ಯು/ಎ’ ಸರ್ಟಿಫಿಕೆಟ್‌ ನೀಡಬೇಕೆಂದರೆ ಚಿತ್ರದ ಹತ್ತು ನಿಮಿಷಗಳಷ್ಟು ದೃಶ್ಯಗಳನ್ನು ತೆಗೆಯಬೇಕು ಎನ್ನುತ್ತದೆ ಮಂಡಳಿ. ಪ್ರೇಮ್‌ ಇದನ್ನು ಒಪ್ಪುತ್ತಿಲ್ಲ. ಚಿತ್ರಕತೆಯ ಅತ್ಯಂತ ಪ್ರಮುಖ ಸನ್ನಿವೇಶಗಳಿಗೆ ಕತ್ತರಿ ಹಾಕಿದರೆ ಸಿನಿಮಾದ ಓಘಕ್ಕೆ ಅಡ್ಡಿಯಾಗುತ್ತದೆ ಎನ್ನುವುದು ಅವರ ಅಳಲು. ಇನ್ನು, ‘ಎ’ ಸರ್ಟಿಫಿಕೆಟ್‌ ಸಿನಿಮಾಗೆ ಬಾಕ್ಸ್ ಆಫೀಸ್‌ನಲ್ಲೂ ತೊಂದರೆಗಳು ಎದುರಾಗುತ್ತವೆ. “ಎ ಸರ್ಟಿಫಿಕೆಟ್ ಕೊಡುವುದರಿಂದ ಮಲ್ಟಿಫ್ಲೆಕ್ಸ್‌ನಲ್ಲಿ ಚಿತ್ರದ ಪ್ರದರ್ಶನದ ಮೇಲೆ ಪರಿಣಾಮ ಬೀರಲಿದೆ. ಶೋ ಟೈಮಿಂಗ್‌ನಲ್ಲೂ ತೊಡಕಾಗುತ್ತದೆ. ಅಂತಿಮವಾಗಿ ಜನರನ್ನು ತಲುಪುವಲ್ಲಿ ಸಿನಿಮಾ ವಿಫಲವಾಗುತ್ತದೆ,” ಎನ್ನುತ್ತಾರವರು.

ಕರ್ನಾಟಕದಲ್ಲಿನ ಸೆನ್ಸಾರ್‌ ನೀತಿಯ ಬಗೆಗೂ ಅವರಿಗೆ ಅಸಮಾಧಾನವಿದೆ. ತಮ್ಮ ಚಿತ್ರವನ್ನು ಸಮರ್ಥಿಸಿಕೊಳ್ಳುವ ಅವರು, “ಚಿತ್ರದಲ್ಲಿ ಎರಡು ರಕ್ತಪಾತದ ಫೈಟ್ ಸನ್ನಿವೇಶಗಳಿವೆ. ರಕ್ತಪಾತವಿಲ್ಲದ ಫೈಟ್ ಅನ್ನು ಫೈಟ್ ಎನ್ನುವುದಾದರೂ ಹೇಗೆ? ಭಾರತ ಮತ್ತು ಇಂಗ್ಲೆಂಡ್ ದೇಶಗಳ ಸಂಬಂಧದ ಕೆಲವು ಸಂಭಾಷಣೆಗಳಿವೆ. ಪ್ರೇಕ್ಷಕರ ಮೇಲೆ ದುಷ್ಪರಿಣಾಮ ಬೀರುವ ಯಾವುದೇ ಧೃಶ್ಯಗಳು ಚಿತ್ರದಲ್ಲಿಲ್ಲ,” ಎಂದು ಹೇಳುತ್ತ, ಸೆನ್ಸಾರ್ ನಿಯಮಗಳು ಬದಲಾಗಬೇಕೆನ್ನುತ್ತಾರೆ. “ಪಕ್ಕದ ತಮಿಳು, ತೆಲುಗು ಸಿನಿಮಾಗಳಿಗೆ ಸೆನ್ಸಾರ್ ವಿಚಾರದಲ್ಲಿ ಇಂತಹ ಸಂಕಷ್ಟಗಳು ಎದುರಾಗುವುದಿಲ್ಲ. ನಮ್ಮಲ್ಲೇಕೆ ಇಂತಹ ತಾರತಮ್ಯ? ಜಿಎಸ್‌ಟಿಯಂತೆ ದೇಶವಿಡೀ ಒಂದೇ ರೀತಿಯ ಸೆನ್ಸಾರ್ ನೀತಿ ಏಕೆ ರೂಪಿಸಬಾರದು?” ಎಂದು ಪ್ರಶ್ನಿಸುತ್ತಾರವರು.

ಇದನ್ನೂ ಓದಿ : ಟೀಸರ್ | ಪ್ರೇಮ್‌- ಶಿವ ರಾಜಕುಮಾರ್‌‌‌‌- ಸುದೀಪ್‌ ಸಿನಿಮಾ ‘ದಿ ವಿಲನ್‌’‌

ಪ್ರೇಮ್‌ ನಿರ್ದೇಶನದಲ್ಲಿ ಮೊದಲ ಬಾರಿಗೆ ಶಿವ ರಾಜಕುಮಾರ್ ಮತ್ತು ಸುದೀಪ್ ಜೊತೆಯಾಗಿ ನಟಿಸಿರುವ ಸಿನಿಮಾ ‘ದಿ ವಿಲನ್‌.’ ಆಮಿ ಜಾಕ್ಸನ್‌ ಚಿತ್ರದ ನಾಯಕಿ. ಸುದೀರ್ಥ ಚಿತ್ರೀಕರಣದಿಂದ ಸುದ್ದಿಯಾಗಿರುವ ಸಿನಿಮಾ ಮೂಲಕ ವರ್ಷಗಳ ನಂತರ ಪ್ರೇಮ್‌ ನಿರ್ದೇಶನಕ್ಕೆ ಮರಳುತ್ತಿದ್ದಾರೆ. ಶಿವರಾಜ್‌, ಸುದೀಪ್‌ ಅವರ ಎರಡು ಪ್ರತ್ಯೇಕ ಟ್ರೈಲರ್‌, ಹಾಡುಗಳ ಮೂಲಕ ಸುದ್ದಿಯಾಗಿರುವ ಚಿತ್ರ ಉದ್ಯಮದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಸೆಪ್ಟೆಂಬರ್‌ ತಿಂಗಳಲ್ಲಿ ಗಣೇಶನ ಹಬ್ಬದಂದು ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಪ್ರೇಮ್ ಹೇಳಿದ್ದರು. ಆದರೆ, ಸೆನ್ಸಾರ್‌ ಸಂಕಷ್ಟದಿಂದಾಗಿ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗುವ ಸಾಧ್ಯತೆಗಳಿವೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More