ಟ್ರೈಲರ್ | ಆರ್‌ಜಿವಿ ನಿರ್ಮಾಣದಲ್ಲಿ ಧನಂಜಯ್‌ ನಟಿಸುತ್ತಿರುವ ‘ಭೈರವಗೀತ’

ರಾಮ್‌ಗೋಪಾಲ್ ವರ್ಮಾ ನಿರ್ದೇಶನದಲ್ಲಿ ಕನ್ನಡದ ನಟ ಧನಂಜಯ್ ನಟಿಸಿರುವ ‘ಭೈರವಗೀತ’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ವರ್ಮಾ ಶಿಷ್ಯ ಸಿದ್ಧಾರ್ಥ್‌ ನಿರ್ದೇಶನದ ಈ ಚಿತ್ರವು ಕನ್ನಡ, ತೆಲುಗು ಎರಡೂ ಭಾಷೆಗಳಲ್ಲಿ ತಯಾರಾಗುತ್ತಿದೆ. ಇರಾ ಈ ಸಿನಿಮಾದ ನಾಯಕಿ

ರಾಮ್‌ಗೋಪಾಲ್ ವರ್ಮಾ ನಿರ್ಮಾಣದಲ್ಲಿ ಕನ್ನಡದ ನಟ ಧನಂಜಯ್ ನಟಿಸಿರುವ ದ್ವಿಭಾಷಾ ಸಿನಿಮಾ ‘ಭೈರವಗೀತ’ ಟ್ರೈಲರ್ ಬಿಡುಗಡೆಯಾಗಿದೆ. ಸದ್ಯ ತೆಲುಗು ಅವತರಣಿಕೆಯ ಟ್ರೈಲರ್ ಬಿಡುಗಡೆಯಾಗಿದ್ದು, ರಕ್ತಸಿಕ್ತ ದೃಶ್ಯಗಳೇ ಹೆಚ್ಚಾಗಿವೆ. ರಾಯಲಸೀಮೆಯ ರಕ್ತಚರಿತ್ರೆಯ ಸಿನಿಮಾಗಳ ಮುಂದುವರಿಕೆಯಂತಿದೆ ‘ಭೈರವಗೀತ.’ ದ್ವೇಷ, ಸೇಡಿನ ಹಿನ್ನೆಲೆಯಲ್ಲಿ ಪ್ರೇಮಕತೆಯನ್ನು ನಿರೂಪಿಸಿದ್ದು, ಧನಂಜಯ್‌ಗೆ ರಗಡ್‌ ಲುಕ್‌ ಮತ್ತು ಮಾಸ್‌ ಅಪೀಲ್‌ ಇದೆ. ಸೂರಿ ನಿರ್ದೇಶನದ ‘ಟಗರು’ ಚಿತ್ರದಲ್ಲಿ ‘ಡಾಲಿ’ಯಾಗಿ ಕಾಣಿಸಿಕೊಂಡಿದ್ದ ಧನಂಜಯ್‌, ಈ ಚಿತ್ರದೊಂದಿಗೆ ತೆಲುಗು ಪ್ರೇಕ್ಷಕರಿಗೆ ಪರಿಚಯವಾಗುತ್ತಿದ್ದಾರೆ.

ನಿರ್ಮಾಪಕ ವರ್ಮಾ ಈ ಮೊದಲು ಚಿತ್ರದ ಪೋಸ್ಟರ್‌ಗಳನ್ನು ಶೇರ್ ಮಾಡಿ ಚಿತ್ರದ ಬಗ್ಗೆ ಬರೆದಿದ್ದರು. ಇದೊಂದು ರಕ್ತಸಿಕ್ತ ಸಿನಿಮಾ ಆಗಲಿದೆ ಎನ್ನುವುದನ್ನು ಪೋಸ್ಟರ್‌ಗಳೇ ಹೇಳಿದ್ದವು. ನಿರೀಕ್ಷೆಯಂತೆಯೇ ಧನಂಜಯ ಮಚ್ಚು ಹಿಡಿದು ಅಬ್ಬರಿಸಿದ್ದಾರೆ. ಚಿತ್ರದ ಕತೆಗೆ ನೈಜ ಘಟನೆಯೊಂದು ಸ್ಫೂರ್ತಿ ಎನ್ನಲಾಗಿದೆ. ಕನ್ನಡ ಅವತರಣಿಕೆಯ ಟ್ರೈಲರ್ ಅನ್ನು ಸದ್ಯದಲ್ಲೇ ನಟ ಶಿವ ರಾಜಕುಮಾರ್‌ ಬಿಡುಗಡೆ ಮಾಡಲಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ ವರ್ಮಾ, “ಪ್ರತಿಭಾವಂತ ಯುವಕ ಸಿದ್ಧಾರ್ಥ್‌ ಅವರನ್ನು ಹತ್ತು ವರ್ಷದಿಂದ ನೋಡುತ್ತಿದ್ದೇನೆ. ಅವರು ಚಿತ್ರ ನಿರ್ದೇಶಿಸುತ್ತಿದ್ದು, ಇದೊಂದು ಅಪರೂಪದ ಚಿತ್ರವಾಗಲಿದೆ,” ಎಂದಿದ್ದರು.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More