ಸ್ಮರಣೆ | ‘ಚೋಮ’ನಿಗಾಗಿ ಸತತ 48 ಗಂಟೆ ಚಿತ್ರೀಕರಣ ನಡೆಸಿದ್ದರು ಬಿ ವಿ ಕಾರಂತರು!

ಕನ್ನಡ ರಂಗಭೂಮಿ ದಿಗ್ಗಜ ಬಿ ವಿ ಕಾರಂತರು ಸಿನಿಮಾರಂಗದಲ್ಲೂ ಛಾಪು ಮೂಡಿಸಿದವರು. ಇಂದು (ಸೆ.1) ಅವರು ನಮ್ಮನ್ನು ಅಗಲಿದ ದಿನ. ಕಾರಂತರ ನಿರ್ದೇಶನದ ‘ಚೋಮನ ದುಡಿ’ ಚಿತ್ರದಲ್ಲಿ ಮೇಕಪ್‌ ಕಲಾವಿದರಾಗಿದ್ದ ಎನ್ ಕೆ ರಾಮಕೃಷ್ಣ ಅವರು ಚಿತ್ರೀಕರಣದ ಸಂದರ್ಭವೊಂದನ್ನು ನೆನೆದಿದ್ದಾರೆ

ಬೆಳ್ತಂಗಡಿ ಸಮೀಪದ ಗ್ರಾಮವೊಂದರಲ್ಲಿ ‘ಚೋಮನ ದುಡಿ’ (1975) ಸಿನಿಮಾ ಚಿತ್ರೀಕರಣ ನಡೆದಿತ್ತು. ಎಲ್ಲವೂ ಅಂದುಕೊಂಡಂತೆಯೇ ನಡೆದಿತ್ತಾದರೂ ಬಾಡಿಗೆಗೆ ತಂದಿದ್ದ ಕ್ಯಾಮೆರಾವನ್ನು ಹಿಂದಿರುಗಿಸಬೇಕಾದ ಒತ್ತಡವಿತ್ತು. ಎರಡು ದಿನದಲ್ಲಿ ಚಿತ್ರೀಕರಣ ಮುಗಿಸಲೇಬೇಕೆಂದು ಕಾರಂತರು ಎಲ್ಲರನ್ನೂ ಸಜ್ಜುಗೊಳಿಸಿದರು. ಆಗ ನಾವು ಸತತ ನಲವತ್ತೆಂಟು ಗಂಟೆಗಳ ಕಾಲ ಚಿತ್ರೀಕರಣ ನಡೆಸಿದ್ದೆವು. ಊಟ-ತಿಂಡಿಗೂ ಹೆಚ್ಚಿನ ಸಮಯ ಇರುತ್ತಿರಲಿಲ್ಲ. ಕಾರಂತರು ತುಂಬಾ ತಾಳ್ಮೆಯಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚಿತ್ರೀಕರಣ ನಡೆಸಿದರು.

ಸನ್ನಿವೇಶವೊಂದರಲ್ಲಿ ಚೋಮನ ಪಾತ್ರ ಮಾಡಿದ್ದ ನಟ ವಾಸುದೇವ ರಾವ್‌ ಅವರು ದುಡಿ ನುಡಿಸಬೇಕಿರುತ್ತದೆ. ಅದೊಂದು ಸುದೀರ್ಘ ಸನ್ನಿವೇಶ. ನಿರಂತರ ಚಿತ್ರೀಕರಣದಿಂದಾಗಿ ಎಲ್ಲರೂ ಬಳಲಿದ್ದರು. ವಾಸುದೇವ ರಾವ್‌ ಎಷ್ಟು ಬಾರಿ ದುಡಿ ನುಡಿಸಿದರೂ ಕಾರಂತರಿಗೆ ಸಮಾಧಾನ ಆಗಲಿಲ್ಲ. ಸ್ವತಃ ಅವರೇ ನುಡಿಸಿ ತೋರಿಸಿದರು. ಮತ್ತೆ-ಮತ್ತೆ ದುಡಿ ನುಡಿಸುವ ಪ್ರಯತ್ನದಲ್ಲಿ ವಿಫಲರಾದ ವಾಸುದೇವ ರಾವ್ ಕೋಪ ಮಾಡಿಕೊಂಡರು. ಆದರೆ, ಕಾರಂತರು ಮಾತ್ರ ತಾಳ್ಮೆಯಿಂದಲೇ ಇದ್ದರು.

ಚೋಮನ ದುಡಿ

ಸನ್ನಿವೇಶ ಓಕೆ ಆಗದಿದ್ದಾಗ ಕಾರಂತರು ಚಿತ್ರೀಕರಣದ ಸ್ಥಳದಿಂದ ನಿರ್ಗಮಿಸಿ, ಹತ್ತು ನಿಮಿಷಗಳ ನಂತರ ಮರಳಿದರು. ಬಂದವರೇ, “ಚೆನ್ನಾಗಿ ನುಡಿಸುತ್ತಿದ್ದೀರಿ, ಇನ್ನೊಮ್ಮೆ ಪ್ರಯತ್ನಿಸಿ. ಬೇಕಿದ್ದರೆ ಹತ್ತು ನಿಮಿಷ ವಿರಮಿಸಿ,” ಎಂದು ವಾಸುದೇವ ರಾವ್ ಅವರಿಗೆ ಸೂಚಿಸಿದರು. ವಿರಾಮ ಬೇಡವೆಂದ ವಾಸುದೇವ ರಾವ್‌ ಶಾಟ್‌ಗೆ ಸಜ್ಜಾದರು. ಈ ಬಾರಿ ಒಂದೇ ಟೇಕ್‌ಗೆ ಶಾಟ್‌ ಓಕೆ ಆಯ್ತು. ಹೀಗೆ, ಸತತ ನವಲತ್ತೆಂಟು ಗಂಟೆಗಳ ಚಿತ್ರೀಕರಣದಲ್ಲಿ ಹಲವು ಅನುಭವಗಳಾಗಿವೆ. ಮುಂದೆ ಮತ್ತಾವ ಚಿತ್ರಕ್ಕೂ ನಾನು ಹೀಗೆ ಸತತ ಚಿತ್ರೀಕರಣದಲ್ಲಿ ಪಾಲ್ಗೊಂಡ ಉದಾಹರಣೆ ಇಲ್ಲ.

ಕರಿಯ ಚೋಮ: ಸಾಹಿತಿ ಶಿವರಾಮ ಕಾರಂತರ ಕೃತಿಯನ್ನು ಆಧರಿಸಿದ ಸಿನಿಮಾ ‘ಚೋಮನ ದುಡಿ.’ ಮುಹೂರ್ತಕ್ಕೆ ಅವರು ಬಂದಾಗ ನಡೆದ ಸನ್ನಿವೇಶವೊಂದು ನೆನಪಾಗುತ್ತದೆ. ಮುಹೂರ್ತದ ಸಮಾರಂಭ ಮುಗಿದದ್ದೇ ಕಾರಂತರು ತಮ್ಮ ಛತ್ರಿ ಬಿಡಿಸಿಕೊಂಡು ಹೊರಟರು. ಅವರಲ್ಲಿಗೆ ಹೋದ ನಾನು, “ಸರ್, ನನ್ನ ಹೆಸರು ರಾಮಕೃಷ್ಣ. ನಾನು ಈ ಚಿತ್ರದ ಮೇಕಪ್ ಕಲಾವಿದ,” ಎಂದು ಹೆಮ್ಮೆಯಿಂದ ಹೇಳಿಕೊಂಡೆ. ನನ್ನನ್ನು ತೀಕ್ಷ್ಣವಾಗಿ ದಿಟ್ಟಿಸಿದ ಕಾರಂತರು, “ನನ್ನ ಚೋಮ ಬಿಳಿಯ ಚೋಮನಲ್ಲ, ಕರಿಯ ಚೋಮ,” ಎಂದರು!

ಅವರಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೆ ನನಗೆ ಭಯವಾಯ್ತು. ಆತಂಕದಿಂದಲೇ ನಿರ್ದೇಶಕ ಬಿ ವಿ ಕಾರಂತರಲ್ಲಿಗೆ ಧಾವಿಸಿ ವಿಷಯ ತಿಳಿಸಿದೆ. ಅಂದು ಮುಹೂರ್ತದ ದಿನ ‘ಚೋಮ’ನ ಪಾತ್ರಧಾರಿ ವಾಸುದೇವ ರಾವ್ ಮೈಬಣ್ಣ ಬಿಳಿ ಇತ್ತು. ಇದೇ ಶಿವರಾಮ ಕಾರಂತರ ಕೋಪಕ್ಕೆ ಕಾರಣವಾಗಿದ್ದು. ಚೋಮನನ್ನು ಕಪ್ಪು ಮಾಡಬೇಕೆಂದು ನಿಶ್ಚಯಿಸಿದೆವು. ತಮ್ಮ ಚೋಮ ಹೇಗಿರಬೇಕೆಂದು ಶಿವರಾಮ ಕಾರಂತರು ಬಿ ವಿ ಕಾರಂತರಿಗೆ ಸಲಹೆ ಕೊಟ್ಟರು.

ನಿರ್ದೇಶಕರ ಸಲಹೆಯಂತೆ ಅಂದು ಸಂಜೆಯೇ ಮಂಗಳೂರಿಗೆ ಹೋಗಿ ಚೋಮನನ್ನು ಕಪ್ಪು ಮಾಡಲು ಬೇಕಾದ ಪರಿಕರಗಳನ್ನು ಖರೀದಿಸಿ ತಂದೆ. ಕೊನೆಗೆ ಕಾರಂತರ ಆಶಯದ ಚೋಮ ಮೈದಾಳಿದ. ಮುಂದೆ ಬಿ ವಿ ಕಾರಂತರ ಶ್ರೇಷ್ಠ ನಿರ್ದೇಶನದಲ್ಲಿ ತಯಾರಾದ ಚಿತ್ರಕ್ಕೆ ಸ್ವರ್ಣ ಕಮಲ ಸಂದಿತು. ಉತ್ತಮ ಅಭಿನಯಕ್ಕಾಗಿ ನಟ ವಾಸುದೇವ ರಾವ್ ಅವರು ರಾಷ್ಟ್ರ ಪ್ರಶಸ್ತಿಯ ಗೌರವಕ್ಕೆ ಪಾತ್ರರಾದರು.

ಬಿ ವಿ ಕಾರಂತರ ಭಾಷಣವೊಂದರ ವಿಡಿಯೋ

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More