ಬೆಳ್ಳಿತೆರೆಯಲ್ಲಿ ‘ಶ್ರೀಕೃಷ್ಣ ಗಾರುಡಿ’, ಕಿರುತೆರೆಯಲ್ಲಿ ನಿತೀಶ್ ಭಾರದ್ವಾಜ್‌ ಸ್ಟಾರ್‌

ಬೆಳ್ಳಿತೆರೆ, ಕಿರುತೆರೆಯಲ್ಲಿ ಭಿನ್ನ ರೀತಿಯ ಕೃಷ್ಣಧಾರಿಗಳು ಕಾಣಿಸಿಕೊಂಡಿದ್ದಾರೆ. ಪೌರಾಣಿಕ ಚಿತ್ರಗಳಲ್ಲಿ ಕೃಷ್ಣನ ಜೀವನಕತೆ, ಭಕ್ತಿ-ಭಾವದ ಅಭಿವ್ಯಕ್ತಿ ಇದ್ದರೆ ಸಾಮಾಜಿಕ ಚಿತ್ರಗಳಲ್ಲಿ ಹೀರೋಗಳು ‘ಲವರ್ ಬಾಯ್’ ಕೃಷ್ಣನಾಗಿ ಮಿಂಚಿರುವುದಿದೆ. ಇದು ಶ್ರೀಕೃಷ್ಣ ಜನ್ಮಾಷ್ಠಮಿ (ಸೆಪ್ಟೆಂಬರ್‌ 2) ವಿಶೇಷ ಬರಹ

ಎಲ್ಲ ವಯೋಮಾನದವರಿಗೂ ಶ್ರೀಕೃಷ್ಣನೆಂದರೆ ಅಚ್ಚುಮೆಚ್ಚು. ಹಾಗಾಗಿ ಭಾರತೀಯ ಸಿನಿಮಾ, ಟಿವಿ ಪರದೆ ಮೇಲೆ ಹಲವು ಸಂದರ್ಭಗಳಲ್ಲಿ ಕೃಷ್ಣನ ಚಿತ್ರಣ ಸಿಗುತ್ತದೆ. ಹಾಗೆ ನೋಡಿದರೆ, ಶಿವನಂತೆ ಶ್ರೀಕೃಷ್ಣನ ಕುರಿತಾದ ಭಕ್ತಿಪ್ರಧಾನ ಸಿನಿಮಾಗಳು ಕನ್ನಡದಲ್ಲಿ ವಿರಳ. ಪೌರಾಣಿಕ ಕತೆಗಳನ್ನು ತೆರೆಗೆ ಅಳವಡಿಸಿದೆಯಾದರೂ ಸಾಮಾಜಿಕ ಸಿನಿಮಾಗಳಲ್ಲಿ ಕೃಷ್ಣನ ಆರಾಧನೆ ಹೆಚ್ಚಾಗಿ ಕಾಣಿಸದು.

ಹುಣಸೂರು ಕೃಷ್ಣಮೂರ್ತಿ ಸ್ವತಂತ್ರ ನಿರ್ದೇಶನದ ಚೊಚ್ಚಲ ಸಿನಿಮಾ ‘ಶ್ರೀಕೃಷ್ಣ ಗಾರುಡಿ’, ಕೆ ಎಸ್ ಎಲ್ ಸ್ವಾಮಿ ನಿರ್ದೇಶನದಲ್ಲಿ ತೆರೆಕಂಡ ‘ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮೆ’ ಕೃಷ್ಣನ ಕುರಿತಾದ ಎರಡು ಪ್ರಮುಖ ಸಿನಿಮಾಗಳು. ಈ ಚಿತ್ರಗಳಿಗೂ ಮುನ್ನ ‘ಕೃಷ್ಣಲೀಲೆ’, ‘ಕೃಷ್ಣ ಸುಧಾಮ’ ಚಿತ್ರಗಳು ತಯಾರಾಗಿದ್ದವು. ವೈ ಆರ್ ಸ್ವಾಮಿ ನಿರ್ದೇಶನದ ‘ಭಕ್ತ ಕನಕದಾಸ’ ಚಿತ್ರದಲ್ಲಿ ಕೃಷ್ಣನ ಆರಾಧಿಸುವ ಕನಕನ ಭಕ್ತಿಯ ಪರಾಕಾಷ್ಠೆಯನ್ನು ನೋಡಬಹುದು. ‘ಗಣೇಶ ಮಹಿಮೆ’, ‘ದೇವರ ದುಡ್ಡು’ ಸಾಮಾಜಿಕ ಚಿತ್ರಗಳಲ್ಲಿ ಕೃಷ್ಣನ ಓಲೈಕೆ, ಆರಾಧನೆ, ಕೃಷ್ಣನ ಕೃಪೆಯಿಂದ ಕೌಟುಂಬಿಕ ಸಮಸ್ಯೆಗಳಿಂದ ಮುಕ್ತಿ ಹೊಂದುವ ಕಥಾವಸ್ತು ಇದೆ.

ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮ

ಉಳಿದಂತೆ ಮಹಾಭಾರತದ ಕತೆ, ಉಪಕತೆಗಳನ್ನು ಆಧರಿಸಿದ ಸಿನಿಮಾಗಳಲ್ಲಿ ಶ್ರೀಕೃಷ್ಣನ ಪ್ರಸ್ತಾಪ ಕಾಣಸಿಗುತ್ತದೆ. ಹಲವು ಪೌರಾಣಿಕ ಪಾತ್ರಗಳಿಗೆ ಜೀವ ತುಂಬಿದ ರಾಜಕುಮಾರ್ ‘ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮೆ’ ಚಿತ್ರದಲ್ಲಿ ಕೃಷ್ಣನಾಗಿ ಕನ್ನಡಿಗರಿಗೆ ನೆನಪಾಗುತ್ತಾರೆ. ರಾಜ್ ದ್ವಿಪಾತ್ರಗಳಲ್ಲಿ ನಟಿಸಿರುವ ‘ಬಬ್ರುವಾಹನ’ ಚಿತ್ರದಲ್ಲಿ ರಾಮಕೃಷ್ಣ ಅವರು ಕೃಷ್ಣನಾಗಿ ರಂಜಿಸಿದ್ದರು. ಕೃಷ್ಣನ ಪಾತ್ರದಲ್ಲಿ ದೊಡ್ಡ ಯಶಸ್ಸು ಕಂಡ ಖ್ಯಾತಿ ತೆಲುಗು ನಟ ಎನ್‌ಟಿಆರ್‌ ಅವರಿಗೆ ಸಲ್ಲುತ್ತದೆ.

'ದೇವರ ದುಡ್ಡು’ ಚಿತ್ರದ ಕೃಷ್ಣನ ಸ್ಮರಣೆಯ ಜನಪ್ರಿಯ ಹಾಡು

ಲವರ್ ಬಾಯ್ ಕೃಷ್ಣ: ಹದಿನಾರು ಸಾವಿರ ಗೆಳತಿಯರನ್ನು ಹೊಂದಿದ್ದ ಎನ್ನಲಾದ ಕೃಷ್ಣನಿಗೆ ‘ಲವರ್ ಬಾಯ್’ ಇಮೇಜಿದೆ. ಇನ್ನು, ರಾಧಾ-ಕೃಷ್ಣ ಜೋಡಿಯ ಪ್ರೀತಿಗೆ ತನ್ನದೇ ಆದ ಐತಿಹ್ಯವಿದೆ. ಈ ಜೋಡಿಯ ಪ್ರೀತಿ ಹಲವು ಸಿನಿಮಾಗಳಿಗೆ ಸ್ಫೂರ್ತಿಯಾಗಿದೆಎಂದರೆ ಅತಿಶಯೋಕ್ತಿಯಾಗದು. ಹಿಂದಿ ಸೇರಿದಂತೆ ಭಾರತದ ಪ್ರಾದೇಷಿಕ ಭಾಷೆಗಳ ನೂರಾರು ಸಿನಿಮಾಗಳಲ್ಲಿ ಹೀರೋಗಳು ಕೃಷ್ಣನ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡ ಸಿನಿಮಾಗಳಲ್ಲಿಯೂ ಅಂತಹ ಹತ್ತಾರು ಪಾತ್ರಗಳು ನೆನಪಾಗುತ್ತವೆ. ತುಂಟನಗೆಯ ಅನಂತನಾಗ್ (ಗೋಲ್‌ಮಾಲ್‌ ರಾಧಾಕೃಷ್ಣ), ವಿಷ್ಣುವರ್ಧನ್ (ಮಲಯ ಮಾರುತ), ದರ್ಶನ್ (ಬೃಂದಾವನ), ಗಣೇಶ್ (ಕೃಷ್ಣ), ಅಜಯ್ ರಾವ್ (ಕೃಷ್ಣನ್ ಮ್ಯಾರೇಜ್‌ ಸ್ಟೋರಿ) ಸೇರಿದಂತೆ ಮತ್ತೆ ಕೆಲವರು ಹಾಡುಗಳು, ಪುಟ್ಟ ಸನ್ನಿವೇಶಗಳಲ್ಲಿ ಕೃಷ್ಣನಾಗಿ ಬಂದು ಹೋಗಿದ್ದಾರೆ.

‘ಮಹಾಭಾರತ’ದಲ್ಲಿ ಶ್ರೀಕೃಷ್ಣನಾಗಿ ನಿತೀಶ್ ಭಾರದ್ವಾಜ್‌

ಕಿರುತೆರೆಯಲ್ಲಿ: ಎಂಬತ್ತರದ ದಶಕದಲ್ಲಿ ದೂರದರ್ಶನದಲ್ಲಿ ಮೂಡಿಬಂದ ‘ಮಹಾಭಾರತ’ ಮತ್ತು ‘ರಾಮಾಯಣ’ ಸೀರಿಯಲ್‌ಗಳಲ್ಲಿನ ಪೌರಾಣಿಕ ಪಾತ್ರಗಳು ಜನರ ಮನಸ್ಸಿನಲ್ಲಿ ಹಾಸುಹೊಕ್ಕಾಗಿವೆ. ಈ ಸೀರಿಯಲ್‌ಗಳಲ್ಲಿ ರಾಮ, ಕೃಷ್ಣರಾಗಿ ಕಾಣಿಸಿಕೊಂಡ ನಟರ ಫೋಟೋಗಳನ್ನು ಜನರು ಪೂಜಿಸುತ್ತಿದ್ದರು.

ರವಿ ಚೋಪ್ರಾ ನಿರ್ದೇಶನದಲ್ಲಿ ಮೂಡಿಬಂದ ‘ಮಹಾಭಾರತ’ (1988) ಹಿಂದಿ ಸೀರಿಯಲ್‌ನಲ್ಲಿ ನಿತೀಶ್ ಭಾರದ್ವಾಜ್‌ ತಮ್ಮ ಮುಗುಳ್ನಗೆಯಿಂದಲೇ ಕೃಷ್ಣನ ಪಾತ್ರಕ್ಕೊಂದು ಮೆರುಗು ತಂದುಕೊಟ್ಟಿದ್ದರು. ಮುಂದೆ ರಮಾನಂದ ಸಾಗರ್ ನಿರ್ದೇಶನದಲ್ಲಿ ಮೂಡಿಬಂದ ‘ಕೃಷ್ಣ’ (1993) ಹಿಂದಿ ಸರಣಿಯಲ್ಲಿ ಸರ್ವದಮನ ಬ್ಯಾನರ್ಜಿ ಶೀರ್ಷಿಕೆ ಪಾತ್ರದಲ್ಲಿ ಮಿಂಚಿದ್ದರು. ಈ ಪಾತ್ರಗಳ ಜನಪ್ರಿಯತೆಯೊಂದಿಗೆ ವೃತ್ತಿ ಬದುಕಿನಲ್ಲಿ ಇವರು ಮುಂದೆ ದೊಡ್ಡ ಯಶಸ್ಸು ಕಂಡರು.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More