ಟ್ರೈಲರ್ | ತಾಯಿ-ಮಗನ ಸೆಂಟಿಮೆಂಟ್ ಸಿನಿಮಾ‌ ‘ತಾಯಿಗೆ ತಕ್ಕ ಮಗ’

ಸದಭಿರುಚಿಯ ಚಿತ್ರಗಳ ನಿರ್ದೇಶಕ ಎಂದೇ ಕರೆಸಿಕೊಳ್ಳುವ ಶಶಾಂಕ್‌ ನಿರ್ದೇಶನದ ‘ತಾಯಿಗೆ ತಕ್ಕ ಮಗ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಮೂರು ನಿಮಿಷಗಳ ಟ್ರೈಲರ್‌ನಲ್ಲಿ ಹೀರೋ ಅಜಯ್ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಅಕ್ಟೋಬರ್‌ನಲ್ಲಿ ತೆರೆಕಾಣಲಿದೆ

ನಟ ಅಜೇಯ್ ರಾವ್ ಅಭಿನಯದ ‘ತಾಯಿಗೆ ತಕ್ಕ ಮಗ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ನಟ ಅಜಯ್‌ ರಾವ್ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮೂರು ನಿಮಿಷಗಳ ಟ್ರೈಲರ್‌ನ ಆರಂಭದಲ್ಲಿ ನಟ ಸುದೀಪ್ ವಾಯ್ಸ್ಓವರ್ ಇದೆ. “ಒಳ್ಳೆ ಸಮಾಜ ಬೇಕು ಅಂದ್ರೆ ಯಾರಾದ್ರೂ ಕೋಪ ಮಾಡಿಕೊಳ್ಳಲೇಬೇಕು,” ಎನ್ನುವ ದನಿಯೊಂದಿಗೆ ಶುರುವಾಗುತ್ತದೆ ಟ್ರೈಲರ್‌. ಚಿತ್ರದ ಶೀರ್ಷಿಕೆಯೇ ಸೂಚಿಸುವಂತೆ ಅಜಯ್ ರಾವ್‌ ‘ತಾಯಿಗೆ ತಕ್ಕ ಮಗ’ನಾಗಿ ಕಾಣಿಸಿಕೊಂಡಿದ್ದಾರೆ.

ಅಮ್ಮನ ಕುರಿತು ಹೀರೋ ಹೇಳುವ, “‘ನಮ್ಮಮ್ಮ ಕಾನೂನು ಫಾಲೋ ಮಾಡ್ತಾರೆ. ನಾನು ನಮ್ಮಮ್ಮನ್ನ ಮಾತ್ರ ಫಾಲೋ ಮಾಡ್ತಿನಿ,” ಎನ್ನುವ ಸಂಭಾಷಣೆ ಇಡೀ ಚಿತ್ರದ ಕತೆಯನ್ನು ತಾಯಿ-ಮಗನ ಬಾಂಧವ್ಯದ ಸುತ್ತ ಹೆಣೆಯಲಾಗಿದೆ ಎನ್ನುವ ಕುತೂಹಲಗಳಿಗೆ ಇಂಬು ಕೊಡುವಂತಿದೆ. ತಾಯಿ-ಮಗನ ಪುಟ್ಟ ಪ್ರಪಂಚಕ್ಕೆ ನಾಯಕಿ ಆಕಸ್ಮಿಕವಾಗಿ ಪರಿಚಯವಾಗುತ್ತಾಳೆ. ಹೀಗೆ ಮುಂದುವರಿಯುವ ಕತೆಯ ಮಧ್ಯೆದಲ್ಲಿ ಹಾಸ್ಯ ಕಲಾವಿದ ಸಾಧು ಕೋಕಿಲ ಬಂದುಹೋಗುತ್ತಾರೆ. ಸಮಾಜದ ಕೆಡಕುಗಳ ವಿರುದ್ಧ ಹೊರಾಡುವ ವಕೀಲೆ ತಾಯಿಗೆ ಎದುರಾಗುವ ಸಂಕಷ್ಟ, ತಾಯಿಯ ಪ್ರತಿ ಹೆಜ್ಜೆಗೂ ರಕ್ಷಾ ಕವಚದಂತೆ ನಿಲ್ಲುವ ನಾಯಕ... ಹೀಗೆ ಕತೆ ಸಾಗುತ್ತದೆ.

‘ತಾಯಿಗೆ ತಕ್ಕ ಮಗ’ ಹಲವು ಕಾರಣಗಳಿಂದ ವಿಶೇಷತೆ ಹೊಂದಿದ್ದು. ನಟ ಅಜಯ್‌ ರಾವ್ ಸಿನಿಬದುಕಿನಲ್ಲಿ ಇದು 25ನೇ ಚಿತ್ರ. ‘ಎಕ್ಸ್‌ಕ್ಯೂಸ್‌ ಮಿ’ ಚಿತ್ರದಲ್ಲಿ ಹಿರಿಯ ನಟಿ ಸುಮಲತಾ ಹಾಗೂ ಅಜೇಯ್ ರಾವ್ ತಾಯಿ-ಮಗನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಈಗ ಮತ್ತೆ ಈ ತಾಯಿ-ಮಗನ ಅಪೂರ್ವ ಜೋಡಿ ತೆರೆಯ ಮೇಲೆ ಬರುತ್ತಿರುವುದು ಕುತೂಹಲ ಮೂಡಿಸಿದೆ.

ಈ ಹಿಂದೆ ಅಜಯ್ ರಾವ್ ನಟನೆಯ ‘ಕೃಷ್ಣನ್ ಲವ್ ಸ್ಟೋರಿ’, ‘ಕೃಷ್ಣಲೀಲಾ’ ಚಿತ್ರಗಳನ್ನು ನಿರ್ದೇಶಿಸಿದ್ದ ಶಶಾಂಕ್ ಮೊದಲ ಬಾರಿಗೆ ಈ ಚಿತ್ರದ ಮೂಲಕ ನಿರ್ಮಾಪಕರಾಗಿ ಭರ್ತಿ ಪಡೆದಿದ್ದಾರೆ. ಶಶಾಂಕ್‌-ಅಜಯ್‌ ಜೋಡಿಯ ಮೂರನೇ ಚಿತ್ರವಿದು. ನಾಯಕಿಯಾಗಿ ಆಶಿಕಾ ರಂಗನಾಥ್ ನಟಿಸಿದ್ದಾರೆ. ಚಿತ್ರೀಕರಣ ಪೂರ್ಣಗೊಂಡಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಚಾಲ್ತಿಯಲ್ಲಿವೆ. ಅಕ್ಟೋಬರ್ ತಿಂಗಳಿನಲ್ಲಿ ಚಿತ್ರ ತೆರೆಕಾಣಲಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More